ಬೆಳಗಾವಿಯಲ್ಲಿ ಕೃಷ್ಣಮೃಗಗಳ ಸಾವು: ತಜ್ಞರ ತಂಡದಿಂದ ಪರಿಶೀಲನೆ
ಮೃಗಾಲಯದಲ್ಲಿ ಬ್ಯಾಕ್ಟೀರಿಯಾ ಸೋಂಕು (ಗಳಲೆ ಕಾಯಿಲೆ) ಆವರಿಸಿರುವುದರಿಂದ ಗುರುವಾರ ಎಂಟು ಕೃಷ್ಣಮೃಗಗಳು, ಶನಿವಾರ ಒಂದೇ ದಿನ 20 ಕೃಷ್ಣಮೃಗಗಳು ಮೃತಪಟ್ಟಿದ್ದವು.
ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಭಾನುವಾರ ತಜ್ಞರ ತಂಡ ಮೃಗಾಲಯಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದೆ.
ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಡಾ. ಚಂದ್ರಶೇಖರ್ ಎನ್., ಬನ್ನೇರುಘಟ್ಟ ಶಾಖೆಯ ತಜ್ಞ ಡಾ.ಮಂಜುನಾಥ ವಿ., ಕರ್ನಾಟಕ ಮೃಗಾಲಯಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ. ಸುನೀಲ್ ಪನ್ವಾರ್ ನೇತೃತ್ವದ ತಂಡವು ಮೃಗಾಲಯದಲ್ಲಿ ಪರಿಶೀಲನೆ ನಡೆಸಿತು.
ಮೃಗಾಲಯದಲ್ಲಿ ಬ್ಯಾಕ್ಟೀರಿಯಾ ಸೋಂಕು (ಗಳಲೆ ಕಾಯಿಲೆ) ಆವರಿಸಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಗುರುವಾರ ಎಂಟು ಕೃಷ್ಣಮೃಗಗಳು, ಶನಿವಾರ ಒಂದೇ ದಿನ 20 ಕೃಷ್ಣಮೃಗಗಳು ಮೃತಪಟ್ಟಿದ್ದವು. ಈ ಪೈಕಿ 25 ಕೃಷ್ಣಮೃಗಗಳ ಕಳೇಬರಗಳನ್ನು ಮರಣೋತ್ತರ ಪರೀಕ್ಷೆ ಪೂರ್ವದಲ್ಲೇ ಅಂತ್ಯಕ್ರಿಯೆ ಮಾಡಲಾಗಿತ್ತು. 3 ಕಳೇಬರಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಶನಿವಾರ ತಡರಾತ್ರಿ ಮೃತಪಟ್ಟ ಮತ್ತೊಂದು ಕೃಷ್ಣಮೃಗ ಸೇರಿ 4 ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆಯನ್ನು ತಜ್ಞರ ತಂಡ ನಡೆಸಿತು.
ತಜ್ಞರ ತಂಡವು ಸೋಂಕಿನ ಕಾರಣ, ಹರಡುವಿಕೆ, ಪರಿಸರದ ಪರಿಣಾಮ, ಆಹಾರ ಅಥವಾ ನೀರಿನ ಗುಣಮಟ್ಟದಲ್ಲಿ ಲೋಪ, ಬೇರೆ ಸಾಧ್ಯತೆಗಳ ಬಗ್ಗೆಯೂ ಪರಿಶೀಲನೆ ನಡೆಸಿದೆ. ಈ ಮಧ್ಯೆ, ಕೃಷ್ಣ ಮೃಗಗಳ ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಬ್ಯಾಕ್ಟೀರಿಯಾ ಸೋಂಕು ಇರುವುದು ಪತ್ತೆಯಾಗಿದೆ ಎಂದು ಹೇಳಲಾಗಿದೆ.