ಬೆಂಗಳೂರಿಗೆ 40 ಕಿ.ಮೀ ಡಬಲ್ ಡೆಕ್ಕರ್ ರಸ್ತೆ; ಉದ್ಯಮಿಗಳಿಗೆ ಬಿಎಂಆರ್‌ಸಿಎಲ್ ಕಾರ್ಯವೈಖರಿಯದ್ದೇ ಆತಂಕ
ಬೃಹತ್ ಯೋಜನೆಗೆ ಸುಮಾರು 9,000 ಕೋಟಿ ರೂ. ವೆಚ್ಚವಾಗಲಿದ್ದು, ಇದು ಬೆಂಗಳೂರಿನ ಮೂಲಸೌಕರ್ಯಕ್ಕೆ ಹೊಸ ರೂಪ ನೀಡುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಬಿಗಡಾಯಿಸುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವಾಕಾಂಕ್ಷೆಯ ಯೋಜನೆ ಘೋಷಿಸಿದೆ.
ಜೆಪಿ ನಗರದಿಂದ ಹೆಬ್ಬಾಳದವರೆಗೆ ಹೊಸ ಮೆಟ್ರೋ ಮಾರ್ಗದ ಜೊತೆಗೆ 40 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ರಸ್ತೆ ನಿರ್ಮಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ.
ಈ ಬೃಹತ್ ಯೋಜನೆಗೆ ಸುಮಾರು 9,000 ಕೋಟಿ ರೂ. ವೆಚ್ಚವಾಗಲಿದ್ದು, ಇದು ಬೆಂಗಳೂರಿನ ಮೂಲಸೌಕರ್ಯಕ್ಕೆ ಹೊಸ ರೂಪ ನೀಡುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
40 ವರ್ಷಗಳ ದೂರದೃಷ್ಟಿ
ನಗರದ ಕ್ಷಿಪ್ರ ಬೆಳವಣಿಗೆಯಿಂದಾಗಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ಪ್ರಯಾಣಿಕರು ಪ್ರತಿದಿನ ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಈ ಸಮಸ್ಯೆ ಗಮನದಲ್ಲಿಟ್ಟುಕೊಂಡು, ಮುಂದಿನ 30-40 ವರ್ಷಗಳ ಕಾಲ ನಗರದ ಸಂಚಾರಕ್ಕೆ ಅನುಕೂಲವಾಗುವಂತೆ ಈ ಡಬಲ್ ಡೆಕ್ಕರ್ ರಸ್ತೆ ವಿನ್ಯಾಸಗೊಳಿಸಲಾಗಿದೆ.
2025ರಲ್ಲಿ ಪ್ರಸ್ತಾಪಿಸಿದ್ದ ಎಲಿವೇಟೆಡ್ ಕಾರಿಡಾರ್ ಮತ್ತು ಸುರಂಗ ರಸ್ತೆ ಒಳಗೊಂಡ 1 ಲಕ್ಷ ಕೋಟಿ ರೂ.ಬೃಹತ್ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಭಾಗವಾಗಿಯೇ ಈ ಹೊಸ ಯೋಜನೆ ರೂಪುಗೊಂಡಿದೆ.
BMRCL ನಿರ್ವಹಣೆ ಬಗ್ಗೆ ತಜ್ಞರ ಕಳವಳ
ರಾಜ್ಯ ಸರ್ಕಾರದ ಈ ಯೋಜನೆಗೆ ಉದ್ಯಮಿ, ಶಿಕ್ಷಣ ತಜ್ಞ ಮೋಹನ್‌ದಾಸ್ ಪೈ ಬೆಂಬಲ ವ್ಯಕ್ತಪಡಿಸಿದ್ದರೂ ಯೋಜನೆಯ ಅನುಷ್ಠಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ಈ ಹಿಂದಿನ ಕಳಪೆ ಕಾರ್ಯನಿರ್ವಹಣೆ ಮತ್ತು ಯೋಜನೆಗಳ ವಿಳಂಬದ ಇತಿಹಾಸ ಉಲ್ಲೇಖಿಸಿರುವ ಅವರು, ಈ ಯೋಜನೆಯೂ ವಿಳಂಬವಾದರೆ ವೆಚ್ಚವು ದುಬಾರಿಯಾಗುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.
‘ನಮ್ಮ ಮೆಟ್ರೋ’ ಮೊದಲ ಹಂತವು ನಿಗದಿತ ಗಡುವು ಮೀರಿದ್ದರಿಂದ ವೆಚ್ಚವು ಹಲವು ಬಾರಿ ಪರಿಷ್ಕರಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಯೋಜನೆಗೆ ನುರಿತ ಸಿಇಒ ನೇಮಕ ಮತ್ತು ಖಾಸಗಿ ವಲಯದ ಪಾಲ್ಗೊಳ್ಳುವಿಕೆಯ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.
ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ
ರಾಜ್ಯ ಸರ್ಕಾರದ ಈ ಯೋಜನೆಗೆ ಸಾರ್ವಜನಿಕ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಸರ್ಕಾರದ ಈ ದೀರ್ಘಕಾಲೀನ ದೃಷ್ಟಿಕೋನವನ್ನು ಸ್ವಾಗತಿಸಿದ್ದು, ಇದು ಬೆಂಗಳೂರಿನ ಭವಿಷ್ಯಕ್ಕೆ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಮತ್ತೆ ಕೆಲವರು, ಈಗಾಗಲೇ ಬಿಬಿಎಂಪಿ ಕೈಗೆತ್ತಿಕೊಂಡಿರುವ ಹಲವು ಫ್ಲೈಓವರ್ ಕಾಮಗಾರಿಗಳು ವರ್ಷಗಳಿಂದ ಬಾಕಿ ಉಳಿದಿವೆ. ಹೀಗಿರುವಾಗ ತುರ್ತಾಗಿ ಆಗಬೇಕಿರುವ ಸಣ್ಣಪುಟ್ಟ ಕಾಮಗಾರಿಗಳಿಗೆ ಆದ್ಯತೆ ನೀಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ.