ದತ್ತ ಜಯಂತಿ ಬ್ಯಾನರ್ ತೆರವು ವಿವಾದ| ಕಾಂಗ್ರೆಸ್ ಕಾರ್ಯಕರ್ತನ ಕೊಲೆ; ಬಜರಂಗ ದಳದ ಐವರು ಕಾರ್ಯಕರ್ತರ ಬಂಧನ
ಕೊಲೆಯಾದ ವ್ಯಕ್ತಿಯನ್ನು ಗ್ರಾ.ಪಂ. ಸದಸ್ಯ ಗಣೇಶ್ ಗೌಡ ಎಂದು ಗುರುತಿಸಲಾಗಿದೆ. ಪೊಲೀಸರು ಐವರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಗಲಾಟೆಯಲ್ಲಿ ಆರೋಪಿ ಸಂಜಯ್ ತಲೆಗೆ ಗಂಭೀರ ಗಾಯವಾಗಿದೆ.
ಕೊಲೆಯಾದ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಗೌಡ
ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣದಲ್ಲಿ ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಗ್ರಾ.ಪಂ.ಸದಸ್ಯರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶುಕ್ರವಾರ (ಡಿ.6) ರಾತ್ರಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಗಣೇಶ್ ಗೌಡ ಎಂದು ಗುರುತಿಸಲಾಗಿದೆ. ಈ ಸಂಬಂಧ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಘರ್ಷಣೆಯಲ್ಲಿ ಗಾಯಗೊಂಡಿರುವ ಇಬ್ಬರು ಆರೋಪಿಗಳಾದ ಸಂಜಯ್ ಹಾಗೂ ಮಿಥುನ್ ಎಂಬುವರನ್ನು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ನಲ್ಲಿ ಅಡ್ಡಗಟ್ಟಿ ಕೊಲೆ
ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಅವರು ಕಲ್ಮರಡಿ ಮಠದ ಕಿರಿದಾದ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಬೈಕ್ನಲ್ಲಿ ಅಡ್ಡಗಟ್ಟಿದ ಹಂತಕರ ತಂಡವು ಮಚ್ಚಿನಿಂದ ದಾಳಿ ಮಾಡಿದೆ. ನಂತರ ಮಚ್ಚನ್ನು ಅಲ್ಲಿಯೇ ಬಿಸಾಡಿ ಹಂತಕರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಸಖರಾಯಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್
ಬ್ಯಾನರ್ ತೆರವು ವಿಚಾರವಾಗಿ ನಡೆದ ಈ ಘಟನೆ ಬಳಿಕ ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಆಮ್ಟೆ ಮಾಹಿತಿ ನೀಡಿದ್ದಾರೆ.
ಬಜರಂಗ ದಳದ ಕಾರ್ಯಕರ್ತರ ಬಂಧನ
ಘಟನೆಯ ಸಂಬಂಧ ಈಗಾಗಲೇ ಬಜರಂಗದಳದ ಆರು ಮಂದಿ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆರೋಪಿಗಳಾದ ಸಂಜಯ್, ನಿತಿನ್, ನಾಗಭೂಷಣ್, ದರ್ಶನ್, ಅಜಯ್ ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸದ್ಯ ಸಂಜಯ್, ನಾಗಭೂಷಣ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಮಿಥುನ್ ಎಂಬಾತನನ್ನು ವಶಕ್ಕೆ ಪಡೆದು ಎಲ್ಲಾ ಆಯಾಮಗಳಲ್ಲೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ನಿರ್ಲಕ್ಷದಿಂದ ಕೊಲೆ: ಆರೋಪ
"ಬ್ಯಾನರ್ ತೆರವು ವಿಚಾರವಾಗಿ ಗಲಾಟೆ ನಡೆದಿದ್ದು, ನಂತರ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಅವರನ್ನು ಕರೆಸಿ ಕೊಲೆ ಮಾಡಿದ್ದಾರೆ. ಈ ಪ್ರಕರಣದಲ್ಲಿ 8 ಜನರು ಶಾಮೀಲಾಗಿರುವ ಶಂಕೆ ಇದೆ. ಕೆಲವು ದಿನಗಳಿಂದಲೇ ಎರಡು ಗುಂಪುಗಳ ನಡುವೆ ಉದ್ವಿಗ್ನತೆ ಇತ್ತು. ಪೊಲೀಸರು ಸಮಯಕ್ಕೆ ಕ್ರಮ ಕೈಗೊಂಡಿದ್ದರೆ ಈ ಘಟನೆ ತಪ್ಪಿಸಬಹುದಿತ್ತು " ಎಂದು ಕಡೂರು ಶಾಸಕ ಆನಂದ ಕೆ.ಎಸ್. ಅಸಮಾಧಾನ ವ್ಯಕ್ತಪಡಿಸಿದ್ದಾರೆ.