ತೆರಿಗೆ ಕಳವು|ನಕಲಿ ಬಿಲ್ ಸೃಷ್ಟಿಕರ್ತರ ವಿರುದ್ಧ ಕ್ರಿಮಿನಲ್ ಪ್ರಕರಣ: ಸಿಎಂ ಸೂಚನೆ

ವಾಣಿಜ್ಯ ತೆರಿಗೆ ಮತ್ತು ಅಬಕಾರಿ ಇಲಾಖೆಗಳಿಗೆ ನಿಗದಿಪಡಿಸಿರುವ ತೆರಿಗೆ ಸಂಗ್ರಹದ ಗುರಿಯನ್ನು ಶೇ.100 ರಷ್ಟು ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Update: 2025-12-05 16:06 GMT

ರಾಜ್ಯ ಅಭಿವೃದ್ಧಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಅತ್ಯಗತ್ಯವಾಗಿದ್ದು, ವಾಣಿಜ್ಯ ತೆರಿಗೆ ಹಾಗೂ ಅಬಕಾರಿ ಇಲಾಖೆಗಳಿಗೆ ನಿಗದಿಪಡಿಸಿರುವ ತೆರಿಗೆ ಸಂಗ್ರಹದ ಗುರಿಯನ್ನು ಶೇ.100 ರಷ್ಟು ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ನಡೆದ ವಾಣಿಜ್ಯ ತೆರಿಗೆ ಮತ್ತು ಅಬಕಾರಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು, ತೆರಿಗೆ ಸೋರಿಕೆ ತಡೆಗಟ್ಟಲು ಮತ್ತು ವಂಚಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಪೂರ್ಣ ಅಧಿಕಾರ ನೀಡಿದರು.

ಪ್ರಸಕ್ತ ಆರ್ಥಿಕ ಸಾಲಿನಲ್ಲಿ (2025-26) ವಾಣಿಜ್ಯ ತೆರಿಗೆ ಇಲಾಖೆಗೆ ಒಟ್ಟು 1.20 ಲಕ್ಷ ಕೋಟಿ ರೂ. ಗುರಿಯನ್ನು ಸರ್ಕಾರ ನಿಗದಿಪಡಿಸಿದೆ. ನವೆಂಬರ್ ಅಂತ್ಯದವರೆಗೆ 80 ಸಾವಿರ ಕೋಟಿ ರೂ. ಸಂಗ್ರಹದ ಗುರಿ ಇದ್ದು, ಇದರಲ್ಲಿ 72,131 ಕೋಟಿ ರೂ. ಸಂಗ್ರಹಿಸುವ ಮೂಲಕ ಶೇ.90ರಷ್ಟು ಸಾಧನೆ ಮಾಡಲಾಗಿದೆ. ಇದರಲ್ಲಿ ಜಿಎಸ್‌ಟಿ 53,522 ಕೋಟಿ ರೂ., ಕೆಎಸ್‌ಟಿ 17,595 ಕೋಟಿ ರೂ, ಮತ್ತು ವೃತ್ತಿ ತೆರಿಗೆ 1,014 ಕೋಟಿ ರೂ. ಆಗಿದೆ ಎಂದು ಹೇಳಿದರು.

ಆರ್ಥಿಕ ವರ್ಷದ ಆರಂಭದ ಐದು ತಿಂಗಳಲ್ಲಿ (ಏಪ್ರಿಲ್-ಆಗಸ್ಟ್) ಶೇ.12ರಷ್ಟು ಬೆಳವಣಿಗೆ ದರವನ್ನು ದಾಖಲಿಸಲಾಗಿತ್ತು. ಆದರೆ, ಜಿಎಸ್‌ಟಿ ದರಗಳಲ್ಲಿನ ಬದಲಾವಣೆಯ ಕಾರಣದಿಂದಾಗಿ ಕಳೆದ ಮೂರು ತಿಂಗಳಲ್ಲಿ ತೆರಿಗೆ ಸಂಗ್ರಹದ ಬೆಳವಣಿಗೆ ದರ ಕೇವಲ ಶೇ.3ಕ್ಕೆ ಸೀಮಿತವಾಗಿದೆ. ಈ ಹಿನ್ನಡೆಯನ್ನು ಸರಿಪಡಿಸಿಕೊಂಡು ವರ್ಷದ ಅಂತ್ಯಕ್ಕೆ ನಿಗದಿತ ಗುರಿಯನ್ನು ಸಂಪೂರ್ಣವಾಗಿ ತಲುಪಲೇಬೇಕು ಎಂದು ತಾಕೀತು ಮಾಡಿದರು.

ತೆರಿಗೆ ವಂಚನೆಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಬೋಗಸ್ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್' ಪ್ರಕರಣಗಳ ಮೇಲೆ ಹದ್ದಿನ ಕಣ್ಣಿಡಲು ಸೂಚಿಸಿದರು. ಇಂತಹ ನಕಲಿ ಬಿಲ್ ಸೃಷ್ಟಿಕರ್ತರ ಪ್ರಕರಣಗಳಲ್ಲಿ ಕೇವಲ ದಂಡ ವಿಧಿಸದೆ, ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.

ತೆರಿಗೆ ಕಳ್ಳತನ ತಪ್ಪಿಸಲು ವಾಣಿಜ್ಯ ತೆರಿಗೆ ವಿಚಕ್ಷಣಾ ದಳವು ನಿರಂತರ ಮತ್ತು ಕಟ್ಟೆಚ್ಚರದ ತಪಾಸಣೆಗಳನ್ನು ಕೈಗೊಳ್ಳಬೇಕು. ತಂತ್ರಜ್ಞಾನ ಮತ್ತು ದತ್ತಾಂಶ ವಿಶ್ಲೇಷಣೆ ವಿಭಾಗವನ್ನು ಬಲಪಡಿಸಿಕೊಂಡು ಸೋರಿಕೆ ತಡೆಯಬೇಕು ಎಂದರು.

ಅಬಕಾರಿ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ 43,000 ಕೋಟಿ ರೂ. ಗುರಿ ನಿಗದಿಪಡಿಸಲಾಗಿದ್ದು, ನವೆಂಬರ್ ಅಂತ್ಯಕ್ಕೆ 26,215 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಬಕಾರಿ ಸಂಗ್ರಹದಲ್ಲಿ ಶೇ.10.46ರಷ್ಟು ಪ್ರಗತಿ ಕಂಡುಬಂದಿದೆ. ಬಾಕಿ ಉಳಿದ ಅವಧಿಯಲ್ಲಿ ನಿಗದಿತ ಗುರಿಯನ್ನು ಮುಟ್ಟಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು. ಈ ವೇಳೆ ನವೆಂಬರ್ ಅಂತ್ಯದವರೆಗೆ ಸುಮಾರು 13 ಸಾವಿರ ತಪಾಸಣೆಗಳನ್ನು ನಡೆಸಲಾಗಿದ್ದು, ಇದರಿಂದ 3,183 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Tags:    

Similar News