ರೇಣುಕಾಸ್ವಾಮಿ ಕೊಲೆ ಕೇಸ್‌: ಪೋಷಕರಿಗೆ ಕೋರ್ಟ್‌ ಸಮನ್ಸ್‌

ತನಿಖಾಧಿಕಾರಿಗಳ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದ್ದು, ಪ್ರಕರಣದ ಒಟ್ಟು 272 ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಹಾಯಕ ಪ್ರಾಸಿಕ್ಯೂಟರ್ ಸಚಿನ್ ಅವರು ಸಲ್ಲಿಸಿದರು.

Update: 2025-12-05 10:25 GMT

ರೇಣುಕಾಸ್ವಾಮಿ ಕೊಲೆ 

Click the Play button to listen to article

ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ರೇಣುಕಾಸ್ವಾಮಿ ಅವರ ತಂದೆ ಮತ್ತು ತಾಯಿಗೆ (ಸಾಕ್ಷಿ ಸಂಖ್ಯೆ 7 ಮತ್ತು 8) ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಬೆಂಗಳೂರಿನ 57ನೇ ಎಸಿಎಂಎಂ ನ್ಯಾಯಾಲಯವು ಡಿಸೆಂಬರ್ 17 ರಂದು ನಡೆಯಲಿರುವ ವಿಚಾರಣೆಗೆ ಖುದ್ದು ಹಾಜರಾಗಲು ಸೂಚನೆ ನೀಡಿದೆ.

ಪ್ರಕರಣದ ವಿಚಾರಣೆ ವೇಳೆ ಸಹಾಯಕ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಸಚಿನ್ ಅವರು ಒಟ್ಟು 272 ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ತನಿಖಾಧಿಕಾರಿಗಳ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಪ್ರಮುಖ ಸಾಕ್ಷಿಗಳಾಗಿರುವ ಮೃತನ ಪೋಷಕರನ್ನು ಪಾಟಿ ಸವಾಲಿಗೆ ಒಳಪಡಿಸಲು ಅನುಮತಿ ನೀಡಿತು.

ಪವಿತ್ರಾ ಗೌಡ, ನಟ ದರ್ಶನ್ ಮತ್ತು ಇತರೆ ಆರೋಪಿಗಳ ಪರ ವಕೀಲರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಹಂತದಲ್ಲಿ ಸಾಕ್ಷಿಗಳ ವಿಚಾರಣೆ ಅವಶ್ಯಕತೆಯಿಲ್ಲ ಎಂದು ದರ್ಶನ್ ಪರ ವಕೀಲ ಸುನಿಲ್ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಆರೋಪಿ ಪ್ರದೋಷ್‌ಗೆ ಮಧ್ಯಂತರ ಜಾಮೀನು

ಪ್ರಕರಣದ 14ನೇ ಆರೋಪಿಯಾಗಿರುವ ಪ್ರದೋಷ್ ಅವರಿಗೆ ನ್ಯಾಯಾಲಯವು ನಾಲ್ಕು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಪ್ರದೋಷ್ ಅವರ ತಂದೆ ಸುಬ್ಬರಾವ್ ಇತ್ತೀಚೆಗೆ ನಿಧನರಾಗಿದ್ದು, ಅವರ ತಿಂಗಳ ತಿಥಿ ಕಾರ್ಯಗಳನ್ನು ನೆರವೇರಿಸಲು ಅನುಕೂಲವಾಗುವಂತೆ ಡಿಸೆಂಬರ್ 4 ರಿಂದ ಡಿಸೆಂಬರ್ 7 ರವರೆಗೆ ಜಾಮೀನು ನೀಡಲಾಗಿದೆ. ಇದಕ್ಕೂ ಮುನ್ನ, ಅಂತ್ಯಸಂಸ್ಕಾರ ನೆರವೇರಿಸಲು ಪ್ರದೋಷ್ 20 ದಿನಗಳ ಜಾಮೀನು ಪಡೆದಿದ್ದರು.

ದರ್ಶನ್ ಬ್ಯಾರಕ್‌ಗೆ ಟಿವಿ ಭಾಗ್ಯ

ಇದೇ ವೇಳೆ, ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರು ತಮಗಿರುವ ಬ್ಯಾರಕ್‌ನಲ್ಲಿ ಟಿವಿ ಸೌಲಭ್ಯವಿಲ್ಲ ಎಂದು ನ್ಯಾಯಾಲಯದ ಗಮನ ಸೆಳೆದಿದ್ದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ದರ್ಶನ್ ಇರುವ ಬ್ಯಾರಕ್‌ಗೆ ಟಿವಿ ಅಳವಡಿಸಲು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಆದರೆ, ಟಿವಿ ಅಳವಡಿಸುವ ಸ್ಥಳದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆಯೂ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. 

Tags:    

Similar News