ಶಿಕ್ಷಣ ಇಲಾಖೆ ಕಚೇರಿಯಲ್ಲೇ 'ಬಾರ್', ಫೋನ್ ಪೇ ಮೂಲಕ ಲಕ್ಷಾಂತರ ರೂ. ಡಿಟಿಜಲ್ ಲಂಚ..!
ಇತ್ತೀಚೆಗಷ್ಟೆ ಶಿಕ್ಷಣ ಇಲಾಖೆಯ 12 ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದಾಗ ಕೋಟ್ಯಂತರ ರೂ. ಹಗರಣ, ಅಕ್ರಮ ವರ್ಗಾವಣೆ ದಂಧೆ ಸೇರಿದಂತೆ ಇತರೆ ಸ್ಫೋಟಕ ಮಾಹಿತಿಗಳು ಬಹಿರಂಗಗೊಂಡಿವೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿರುವುದು ಇತ್ತೀಚೆಗೆ ಲೋಕಾಯುಕ್ತ ಸಂಸ್ಥೆಯ ಪೊಲೀಸರು, ನ್ಯಾಯಾಂಗ ಅಧಿಕಾರಿಗಳು ದಾಳಿ ನಡೆಸಿದಾಗ ಬಹಿರಂಗಗೊಂಡಿದೆ. ಲೋಕಾಯುಕ್ತ ಸಂಸ್ಥೆಯು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಇತ್ತೀಚೆಗಷ್ಟೆ ಬೆಂಗಳೂರಿನ 12 ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಯಿತು. ಈ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಖರೀದಿಯಲ್ಲಿನ ಕೋಟ್ಯಂತರ ರೂ. ಹಗರಣ, ಅಕ್ರಮ ವರ್ಗಾವಣೆ ದಂಧೆ ಹಾಗೂ ಸಿಬ್ಬಂದಿಯ ಖಾತೆಗಳಿಗೆ ಹರಿದು ಬಂದಿರುವ 'ಡಿಜಿಟಲ್ ಲಂಚ'ದ ಸ್ಫೋಟಕ ಮಾಹಿತಿಗಳು ಬಹಿರಂಗಗೊಂಡಿವೆ.
ಬಿಇಒ ಕಚೇರಿಯಲ್ಲಿ 'ಡಿಜಿಟಲ್ ಲಂಚ'ದ ದರ್ಬಾರ್!
ಬೆಂಗಳೂರು ದಕ್ಷಿಣ-4ರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ತಪಾಸಣೆ ಅಕ್ಷರಶಃ ಬೆಚ್ಚಿಬೀಳಿಸುವಂತಿದೆ. ಸಿಬ್ಬಂದಿಯ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಪರಿಶೀಲಿಸಿದಾಗ, ಯುಪಿಐ ಮೂಲಕ ಲಂಚದ ಹಣ ಹರಿದುಬಂದಿರುವುದು ಪತ್ತೆಯಾಗಿದೆ.
ದ್ವಿತೀಯ ದರ್ಜೆ ಸಹಾಯಕಿ ಸೌಭಾಗ್ಯ ಎಂಬುವವರ ಖಾತೆಗೆ ಕಳೆದ ಒಂದೇ ತಿಂಗಳಲ್ಲಿ 50,000 ಮತ್ತು 60,000 ರೂ. ಜಮೆಯಾಗಿದೆ. ಕಚೇರಿ ಅಧೀಕ್ಷಕ ಶಿವಾನಂದ ಕುಮಾರ್ ಎಂಬುವವರ ಖಾತೆಗೆ ಒಂದೇ ತಿಂಗಳಲ್ಲಿ 1.40 ಲಕ್ಷ ರೂ. ಗೂ ಅಧಿಕ ಹಣ ಜಮೆಯಾಗಿದೆ.
ಸ್ವತಃ ಬಿಇಒ ಗೋವಿಂದಪ್ಪ ಅವರ ಖಾತೆಗೂ 5 ರಿಂದ 10 ಸಾವಿರ ರೂ.ಗಳ ಅಕ್ರಮ ವರ್ಗಾವಣೆಗಳು ಕಂಡುಬಂದಿವೆ. ಈ ಹಣದ ಬಗ್ಗೆ ವಿಚಾರಣೆ ನಡೆಸಿದಾಗ ಯಾರ ಬಳಿಯೂ ಸಮರ್ಪಕವಾದ ಉತ್ತರ ಬಂದಿಲ್ಲ. ಹೀಗಾಗಿ ಇದು ಸ್ಪಷ್ಟವಾಗಿ ಲಂಚದ ಹಣವಾಗಿದೆ ಎಂದು ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ, ಸಾರ್ವಜನಿಕರ ಕೆಲಸ ಮಾಡಿಕೊಡದೆ ಸತಾಯಿಸುತ್ತಿರುವುದು ಮತ್ತು ಪೋಷಕರನ್ನು ಅಲೆದಾಡಿಸುತ್ತಿರುವುದು ಕಂಡುಬಂದಿದೆ ಎಂದು ಸಹ ತಿಳಿಸಿದ್ದಾರೆ.
ಕಚೇರಿ ಆವರಣದಲ್ಲೇ ಎಣ್ಣೆ ಪಾರ್ಟಿ?
ಇದೇ ಬಿಇಒ ಕಚೇರಿಯ ಆವರಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ನರ್ಸರಿ ಶಾಲೆಗಳಿವೆ. ಆದರೆ, ಕೇವಲ 50 ಮೀಟರ್ ಅಂತರದಲ್ಲಿ "ಕಿರಣ್ ಬಾರ್ ಮತ್ತು ರೆಸ್ಟೋರೆಂಟ್" ರಾಜಾರೋಷವಾಗಿ ನಡೆಯುತ್ತಿದೆ. ಶಿಕ್ಷಣ ಇಲಾಖೆಯ ಆವರಣದಲ್ಲೇ ಮದ್ಯದಂಗಡಿ ಇದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದಿದ್ದಾರೆ.
ಸ್ಮಾರ್ಟ್ ಬೋರ್ಡ್, ಲ್ಯಾಪ್‌ಟಾಪ್ ಹೆಸರಲ್ಲಿ ಲೂಟಿ
ಬೆಂಗಳೂರು ಉತ್ತರ ವಿಭಾಗದ ಉಪ ನಿರ್ದೇಶಕರ ಕಚೇರಿಯಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಸರ್ಕಾರಿ ಶಾಲೆಗಳಿಗೆ ಸ್ಯಾಮ್‌ಸಂಗ್ ಸ್ಮಾರ್ಟ್ ಬೋರ್ಡ್, ಲೆನೊವೊ ಲ್ಯಾಪ್‌ಟಾಪ್ ಮತ್ತು ಯುಪಿಎಸ್ ಪೂರೈಸುವಲ್ಲಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವುಂಟುಮಾಡಲಾಗಿದೆ.
ಪ್ರತಿ ಕಂಪ್ಯೂಟರ್‌ಗೆ ಮಾರುಕಟ್ಟೆ ದರಕ್ಕಿಂತ 10 ಸಾವಿರ ರೂ. ಹೆಚ್ಚುವರಿ ಪಾವತಿಯಾಗಿದೆ. ಪ್ರತಿ ಯುಪಿಎಸ್‌ಗೆ 30 ಸಾವಿರ ರೂ.ನಿಂದ 40 ಸಾವಿರ ರೂ. ಹೆಚ್ಚು ಬಿಲ್ ಮಾಡಲಾಗಿದೆ. ಖರೀದಿಸಿದ ವಸ್ತುಗಳು ಕಳಪೆ ಗುಣಮಟ್ಟದ್ದಾಗಿದ್ದು, ಜಾಲಹಳ್ಳಿ ಶಾಲೆಯಲ್ಲಿ ಪರಿಶೀಲಿಸಿದಾಗ ಲ್ಯಾಪ್‌ಟಾಪ್‌ಗಳೇ ನಾಪತ್ತೆಯಾಗಿರುವುದು ಶೋಧ ಕಾರ್ಯದಲ್ಲಿ ಗೊತ್ತಾಗಿದೆ. ಪ್ರತಿ ಎಲ್‌ಇಡಿ ಸ್ಮಾರ್ಟ್ ಟಿವಿಗೂ 15 ಸಾವಿರ ರೂ. ಅಧಿಕ ಪಾವತಿ ಮಾಡಿರುವುದು ಗೊತ್ತಾಗಿದೆ.
ಶಾಲೆಗಳಲ್ಲಿ ಈ ಉಪಕರಣಗಳನ್ನು ಅಳವಡಿಸಿದ ಬಗ್ಗೆ ಯಾವುದೇ ವರದಿಗಳಿಲ್ಲ. ಮುಖ್ಯ ಶಿಕ್ಷಕರಿಂದ ಯಾವುದೇ ಸ್ವೀಕೃತಿ ಪತ್ರ ಪಡೆದಿಲ್ಲ. ನಿಯಮದ ಪ್ರಕಾರ ಇರಬೇಕಾದ 3 ವರ್ಷಗಳ ವಾರಂಟಿಯನ್ನೂ ನಮೂದಿಸಿಲ್ಲ. ಜಾಲಹಳ್ಳಿ ಶಾಲೆಯ ಮುಖ್ಯಶಿಕ್ಷಕಿಯೊಡನೆ ವಿಡಿಯೋ ಕರೆ ಮಾಡಿ ಪರಿಶೀಲಿಸಿದಾಗ, ಲ್ಯಾಪ್‌ಟಾಪ್‌ಗಳು ಕಾಣೆಯಾಗಿರುವುದು ಕಂಡುಬಂದಿದೆ. ಒಟ್ಟಾರೆಯಾಗಿ 1,483 ಶಾಲೆಗಳಲ್ಲಿ ಪ್ರತಿ ಶಾಲೆಗೆ ಅಂದಾಜು 20 ಸಾವಿರ ರೂ.ನಿಂದ 30 ಸಾವಿರ ರೂ.ಗಳಷ್ಟು ಅವ್ಯವಹಾರ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
530 ಶಿಕ್ಷಕರ ಅಕ್ರಮ ವರ್ಗಾವಣೆ
ಕರ್ನಾಟಕ ರಾಜ್ಯ ನಾಗರಿಕ ಸೇವಾ ಕಾಯ್ದೆ 2020ರ ಪ್ರಕಾರ, ಶಿಕ್ಷಕರ ಸಾಮಾನ್ಯ ವರ್ಗಾವಣೆಯು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಬೇಕು ಮತ್ತು ಅದು ಶೇ.15 ರಷ್ಟು ಮೀರಬಾರದು. ಆದರೆ, ಜಂಟಿ ನಿರ್ದೇಶಕ ಕೆ.ಬಿ. ನಿಂಗರಾಜಪ್ಪ ನ.17 ರಿಂದ ನ.26ರ ನಡುವೆ (ವರ್ಗಾವಣೆ ಅವಧಿ ಅಲ್ಲದಿದ್ದರೂ) 2,457 ಅರ್ಜಿಗಳನ್ನು ಸ್ವೀಕರಿಸಿ, ಸರ್ಕಾರದ ಆದೇಶವಿಲ್ಲದಿದ್ದರೂ 530 ಶಿಕ್ಷಕರನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಇದು ಅಧಿಕಾರ ದುರುಪಯೋಗದ ಸ್ಪಷ್ಟ ಪ್ರಕರಣವಾಗಿದೆ.
ಶೌಚಾಲಯವಿಲ್ಲದೆ ಅಧಿಕಾರಿಗಳ ಪರದಾಟ!
ಒಂದೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದ್ದರೆ, ಮತ್ತೊಂದೆಡೆ ಕಚೇರಿಗಳ ಸ್ಥಿತಿ ದಯನೀಯವಾಗಿದೆ. ಕೆಂಪೇಗೌಡ ರಸ್ತೆಯಲ್ಲಿರುವ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಶೌಚಾಲಯವೇ ಇಲ್ಲವಾಗಿದೆ..! ಸ್ವತಃ ಡಿಡಿಪಿಐ ಹಂತದ ಅಧಿಕಾರಿಗಳೇ ಕಚೇರಿ ಆವರಣದ ಬಯಲಿನಲ್ಲಿ ಶೌಚಕ್ಕೆ ಹೋಗುವ ಹೀನಾಯ ಸ್ಥಿತಿ ಇದೆ. ಈ ಬಗ್ಗೆ ಆಯುಕ್ತರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ. ಜಂಟಿ ನಿರ್ದೇಶಕರು ನ.18 ರಿಂದ 15 ದಿನಗಳ ಕಾಲ ಹಾಜರಾತಿ ಪುಸ್ತಕಕ್ಕೆ ಸಹಿಯನ್ನೇ ಹಾಕಿಲ್ಲ. ಸಾರ್ವಜನಿಕರು ಮತ್ತು ಶಿಕ್ಷಕರು ನೀಡಿದ 50 ಕ್ಕೂ ಹೆಚ್ಚು ಗಂಭೀರ ಭ್ರಷ್ಟಾಚಾರದ ದೂರುಗಳನ್ನು ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ಹೇಳಿದ್ದಾರೆ.
ದೈಹಿಕ ಶಿಕ್ಷಕರ ನೇಮಕ ಇಲ್ಲ
ಬೆಂಗಳೂರು ದಕ್ಷಿಣ ವಿಭಾಗದ ಉಪ ನಿರ್ದೇಶಕರ ಕಚೇರಿಯಲ್ಲಿ ಪರಿಶೀಲನೆ ನಡೆಸಿದಾಗ ಕಚೇರಿ ತುಂಬಾ ಅವ್ಯವಸ್ಥೆಯ ಆಗರವಾಗಿತ್ತು. ಮಳೆ ನೀರು ಸೋರುತ್ತಿದೆ. ಹಳೆಯ ಕಡತಗಳನ್ನು ವಿಲೇವಾರಿ ಮಾಡಿಲ್ಲ. ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ. ಕಳೆದ 10 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯೇ ನಡೆದಿಲ್ಲ. ಪ್ರಾಥಮಿಕ ಶಾಲೆಗಳಲ್ಲಿ 200ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಬಿದ್ದಿವೆ. 128 ಅತಿಥಿ ಶಿಕ್ಷಕರಿಗೆ ಗೌರವ ಧನ ಪಾವತಿಯಾಗುತ್ತಿದೆ ಎಂದು ದಾಖಲೆಗಳಲ್ಲಿ ಉಲ್ಲೇಖವಾಗಿವೆ. ಹೀಗೆ ಹಲವು ಭ್ರಷ್ಟಚಾರ, ಅಕ್ರಮಗಳು ಪರಿಶೀಲನೆ ವೇಳೆ ಕಂಡುಬಂದಿವೆ ಎಂದು ತಿಳಿಸಿದ್ದಾರೆ.