ಕರ್ನಾಟಕಕ್ಕೆ ತೈವಾನ್‌ನಿಂದ 1,000 ಕೋಟಿ ರೂಪಾಯಿ ಹೂಡಿಕೆ; 'ಐಟಿಐಪಿ' ಸ್ಥಾಪನೆಗೆ ಒಪ್ಪಂದ
ಐಟಿಐಪಿಯು ತೈವಾನಿನ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಕಂಪನಿಗಳಿಗೆ ಮೀಸಲಾದ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಅತ್ಯಾಧುನಿಕ ತಯಾರಿಕೆ, ಸಂಶೋಧನೆ ಹಾಗೂ ಅಭಿವೃದ್ಧಿ ಮತ್ತು ನಾವೀನ್ಯತೆಗೆ ಉತ್ತೇಜನ ನೀಡಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸಾಂದರ್ಭಿಕ ಚಿತ್ರ
ರಾಜ್ಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ವಲಯಕ್ಕೆ ಮಹತ್ವದ ಬಲ ತುಂಬುವ ನಿಟ್ಟಿನಲ್ಲಿ, ತೈವಾನ್ ಮೂಲದ 'ಅಲಿಜನ್ಸ್ ಇಂಟರ್‌ನ್ಯಾಷನಲ್ ಕಂಪನಿ ಲಿಮಿಟೆಡ್' ಜೊತೆಗೆ ಕೈಗಾರಿಕಾ ತಂತ್ರಜ್ಞಾನ ನಾವೀನ್ಯತಾ ಪಾರ್ಕ್ (ಐಟಿಐಪಿ) ಸ್ಥಾಪಿಸಲು ಕರ್ನಾಟಕ ಸರ್ಕಾರ ಒಪ್ಪಂದಕ್ಕೆ (MOU) ಸಹಿ ಹಾಕಿದೆ.
ಶುಕ್ರವಾರ (ಡಿ.5) ವಿಧಾನಸೌಧದಲ್ಲಿ ನಡೆದ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಷಯವನ್ನು ಪ್ರಕಟಿಸಿದರು. ಈ ಯೋಜನೆಯಡಿ ಅಲಿಜನ್ಸ್ ಗ್ರೂಪ್ ರಾಜ್ಯದಲ್ಲಿ ಸುಮಾರು 1,000 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಈ ಪಾರ್ಕ್‌ನಲ್ಲಿ ಕಾರ್ಯನಿರ್ವಹಿಸುವ ಕಂಪನಿಗಳ ಮೂಲಕ ಸುಮಾರು 800 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅವರು ಮಾಹಿತಿ ನೀಡಿದರು.
ಈ ನೂತನ 'ಐಟಿಐಪಿ' ಪಾರ್ಕ್, ಪ್ರಮುಖವಾಗಿ ತೈವಾನಿನ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಕಂಪನಿಗಳಿಗೆ ಮೀಸಲಾದ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಇದು ಅತ್ಯಾಧುನಿಕ ತಯಾರಿಕೆ, ಸಂಶೋಧನೆ ಹಾಗೂ ಅಭಿವೃದ್ಧಿ (R&D) ಮತ್ತು ನಾವೀನ್ಯತೆಗೆ ವೇದಿಕೆಯಾಗಲಿದೆ. ಈ ಒಪ್ಪಂದವು ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ತಯಾರಿಕಾ (ESDM) ವಲಯದಲ್ಲಿ ಭಾರತದ ಪ್ರಮುಖ ತಾಣವಾಗಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಲಿದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, "ಕರ್ನಾಟಕವು ಈಗಾಗಲೇ ಭಾರತದ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸುತ್ತಿದೆ. ಈ ಹೊಸ ಪಾಲುದಾರಿಕೆಯು ಸದೃಢವಾದ ಎಲೆಕ್ಟ್ರಾನಿಕ್ಸ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ವೇಗ ನೀಡಲಿದ್ದು, ಜಾಗತಿಕ ಹೂಡಿಕೆದಾರರಿಗೆ ಕರ್ನಾಟಕವನ್ನು ಆದ್ಯತೆಯ ತಾಣವನ್ನಾಗಿ ಉಳಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ," ಎಂದು ಹೇಳಿದರು.
ಈ ಮಹತ್ವದ ಒಪ್ಪಂದದ ಅನ್ವಯ, ರಾಜ್ಯದಲ್ಲಿ ಬಿಡಿಭಾಗಗಳು, ಪಿಸಿಬಿ (PCB) ಮತ್ತು ಚಿಪ್ ಡಿಸೈನ್‌ಗಾಗಿ ಸದೃಢವಾದ ಪೂರೈಕೆ ಸರಪಳಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು. ಇದರ ಜೊತೆಗೆ, ಸ್ಥಳೀಯ ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉನ್ನತ ಮೌಲ್ಯದ ಉದ್ಯೋಗಗಳನ್ನು ಸೃಷ್ಟಿಸಲಾಗುವುದು. ತಂತ್ರಜ್ಞಾನ ವರ್ಗಾವಣೆ ಮತ್ತು ಜಾಗತಿಕ ಮಟ್ಟದ ಅತ್ಯುತ್ತಮ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಎಲೆಕ್ಟ್ರಾನಿಕ್ಸ್ ತಯಾರಿಕಾ ವಲಯದಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಈ ಪಾಲುದಾರಿಕೆಯ ಮತ್ತೊಂದು ಪ್ರಮುಖ ಗುರಿಯಾಗಿದೆ.
ಅಲಿಜನ್ಸ್ ಗ್ರೂಪ್‌ನ ಉಪಾಧ್ಯಕ್ಷ ಲಾರೆನ್ಸ್ ಚೆನ್ ಮಾತನಾಡಿ, "ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮನ್ನಣೆ ಪಡೆದ ಕರ್ನಾಟಕದೊಂದಿಗೆ ಕೈಜೋಡಿಸಲು ನಾವು ಉತ್ಸುಕರಾಗಿದ್ದೇವೆ. ತೈವಾನ್ ಕಂಪನಿಗಳು ಭಾರತದಲ್ಲಿ ವಿಸ್ತರಣೆಯಾಗಲು ಈ ಪಾರ್ಕ್ ವೇಗವರ್ಧಕವಾಗಿ ಕೆಲಸ ಮಾಡಲಿದೆ," ಎಂದು ಹರ್ಷ ವ್ಯಕ್ತಪಡಿಸಿದರು.