ತಾರಕಕ್ಕೇರಿದ ವಾಚ್ ಸಮರ| ಲೋಕಾಯುಕ್ತಕ್ಕೆ ಅಫಿಡವಿಟ್ ಸಲ್ಲಿಸಿದ್ದೇನೆ: ಡಿಸಿಎಂ ಸ್ಪಷ್ಟನೆ
ನಾನು ಪಾರದರ್ಶಕ ವ್ಯಕ್ತಿ. ಏನನ್ನೂ ಮುಚ್ಚಿಟ್ಟುಕೊಳ್ಳಬಾರದು ಅಂತಲೇ ನಿಜ ಹೇಳಿದ್ದೇನೆ. ನನಗೆ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ನಮಗೆ ಇಷ್ಟವಾದ ವಾಚ್ ಕಟ್ಟಿಕೊಳ್ಳುವ ಯೋಗ್ಯತೆ, ಹಕ್ಕು ಇಲ್ಲವೇ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್
ರಾಜ್ಯ ರಾಜಕೀಯದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವೆ ವಾಚ್ ಸಮರ ತಾರಕಕ್ಕೇರಿದ್ದು, ತಾನು ಧರಿಸಿದ್ದ 'ಕಾರ್ಟಿಯರ್' ವಾಚ್ ಬಗ್ಗೆ ಲೋಕಾಯುಕ್ತಕ್ಕೆ ಅಫಿಡವಿಟ್ ಸಲ್ಲಿಸಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿದ್ದಾರೆ.
ಈ ಕುರಿತು ಶುಕ್ರವಾರ(ಡಿ.5) ತಮ್ಮ ಸಾಮಾಜಿಕ ಜಾಲತಾಣ (ಎಕ್ಸ್)ನಲ್ಲಿ ಪ್ರತಿಕ್ರಿಯಿಸಿರುವ ಅವರು, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರನ್ನು ಉದ್ದೇಶಿಸಿ "ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ನಿಮ್ಮ ಬಾಯಿಗೆ, ಮನಸ್ಸಿಗೆ ಬಂದಂತೆ ಸುಳ್ಳು ಹೇಳಬಾರದು. ಇದು ನಿಮಗೆ ಘನತೆ ತರುವುದಿಲ್ಲ" ಎಂದಿದ್ದಾರೆ.
"ನಾನು ಪಾರದರ್ಶಕ ವ್ಯಕ್ತಿ. ಏನನ್ನೂ ಮುಚ್ಚಿಟ್ಟುಕೊಳ್ಳಬಾರದು ಅಂತಲೇ ನಿಜ ಹೇಳಿದ್ದೇನೆ. ನನಗೆ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ನಮಗೆ ಇಷ್ಟವಾದ ವಾಚ್ ಕಟ್ಟಿಕೊಳ್ಳುವ ಯೋಗ್ಯತೆ ಇಲ್ಲವೇ? ಹಕ್ಕು ಇಲ್ಲವೇ..? ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ. ನಿಮಗಿರೋ ಸಾಂವಿಧಾನಿಕ ಅಧಿಕಾರ, ಜವಾಬ್ದಾರಿಯನ್ನು ವಿವೇಕದಿಂದ ನಿರ್ವಹಿಸಿ. ಅವಿವೇಕಿಯಂತೆ ಆಡಬೇಡಿ..!" ಎಂದು ವಾಗ್ದಾಳಿ ನಡೆಸಿದ್ದು, ಬೇಕಾದರೆ ಲೋಕಾಯುಕ್ತ ಕಚೇರಿಗೆ ಹೋಗಿ ನನ್ನ ಅಫಿಡವಿಟ್ ಚೆಕ್ ಮಾಡಿಕೊಳ್ಳಿ."ಎಂದು ವಾಗ್ದಾಳಿ ನಡೆಸಿದ್ದಾರೆ.
ಏನಿದು ವಿವಾದ ?
ಗುರುವಾರ(ಡಿ.5) ಬಿಜೆಪಿಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಡಿ.ಕೆ. ಶಿವಕುಮಾರ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಪ್ರತಿಯನ್ನು ಪ್ರದರ್ಶಿಸಿದ್ದರು. "ಡಿ.ಕೆ. ಶಿವಕುಮಾರ್ ಅವರು ಸಾರ್ವಜನಿಕವಾಗಿ ಸುಳ್ಳು ಹೇಳಿದ್ದಾರೆ. ಅವರು ಆಸ್ಟ್ರೇಲಿಯಾದಲ್ಲಿ ಖರೀದಿಸಿದೆ ಎಂದು ಹೇಳುತ್ತಿರುವ 'ಸ್ಯಾಂಟೋಸ್ ಕಾರ್ಟಿಯರ್' ವಾಚ್‌ಗೂ, ಅವರು ಅಫಿಡವಿಟ್‌ನಲ್ಲಿ ಘೋಷಿಸಿರುವುದಕ್ಕೂ ತಾಳೆಯಾಗುತ್ತಿಲ್ಲ," ಎಂದು ಗಂಭೀರ ಆರೋಪ ಮಾಡಿದ್ದರು.
"ಅಫಿಡವಿಟ್‌ನಲ್ಲಿ ರೋಲೆಕ್ಸ್ ಸೇರಿದಂತೆ ಬೇರೆ ವಾಚ್‌ಗಳ ಉಲ್ಲೇಖವಿದೆಯೇ ಹೊರತು, ಈ ನಿರ್ದಿಷ್ಟ ಸ್ಯಾಂಟೋಸ್ ಕಾರ್ಟಿಯರ್ ವಾಚ್ ಎಲ್ಲೂ ಕಾಣಿಸುತ್ತಿಲ್ಲ. ಹಾಗಾದರೆ ಇದು ಎಲ್ಲಿಂದ ಬಂತು? ಅಫಿಡವಿಟ್‌ನಲ್ಲಿ ಇಲ್ಲದ ಆಸ್ತಿ ನಿಮ್ಮ ಕೈಗೆ ಹೇಗೆ ಬಂತು? ಇದು ಕದ್ದ ಮಾಲಾ (ಕಳ್ಳತನದ ಸರಕು) ಅಥವಾ ಗಿಫ್ಟ್ ಬಂದಿದ್ದಾ? ಎಂಬುದನ್ನು ಡಿ.ಕೆ. ಶಿವಕುಮಾರ್ ಅವರೇ ಸ್ಪಷ್ಟಪಡಿಸಬೇಕು," ಎಂದು ಆಗ್ರಹಿಸಿದ್ದರು.
"ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ವಿವರ ಮುಚ್ಚಿಡುವುದು ಅಪರಾಧವಾಗುತ್ತದೆ. ಅಷ್ಟು ಧೈರ್ಯವಾಗಿ ಅಫಿಡವಿಟ್‌ನಲ್ಲಿದೆ ಎಂದು ಹೇಳಿದ್ದವರು, ಈಗ ಜನತೆಗೆ ಉತ್ತರ ಕೊಡಬೇಕು. ರಾಜ್ಯದ ಉಪಮುಖ್ಯಮಂತ್ರಿಯಾದವರು ಜನರಿಗೆ ತಪ್ಪು ಮಾಹಿತಿ ನೀಡುವುದು ಸರಿಯೇ?" ಎಂದು ಅವರು ಪ್ರಶ್ನಿಸಿದ್ದರು.