ಸಂಸತ್ತಿನಲ್ಲಿ ಕಬ್ಬು, ಮೆಕ್ಕೆಜೋಳ ರೈತರ ಧ್ವನಿಯಾಗಿ: ಖರ್ಗೆಗೆ ಸಚಿವ ಶಿವಾನಂದ ಪಾಟೀಲ್ ಮನವಿ

ಸರ್ಕಾರ ಮತ್ತು ಕಾರ್ಖಾನೆಗಳ ಮಾಲೀಕರು ಪ್ರತಿ ಟನ್‌ಗೆ ತಲಾ 50 ರೂ. ನೀಡಬೇಕು ಎಂಬ ನಿರ್ಧಾರ ಮಾಡಲಾಗಿದೆ. ಸರ್ಕಾರದ ಈ ಕ್ರಮದಿಂದ ಪ್ರತಿ ಟನ್‌ ಕಬ್ಬಿಗೆ 3,300 ರೂ. ಸಿಗಲಿದೆ ಎಂದು ಸಚಿವ ಶಿವಾನಂದ ಪಾಟೀಲ್‌ ತಿಳಿಸಿದರು.

Update: 2025-12-05 13:47 GMT

ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಚಿವ ಶಿವಾನಂದ ಪಾಟೀಲ್‌ ಮನವಿ ಪತ್ರ ಸಲ್ಲಿಸಿದರು. 

Click the Play button to listen to article

ರಾಜ್ಯದ ಕಬ್ಬು ಮತ್ತು ಮೆಕ್ಕೆಜೋಳ ಬೆಳೆಗಾರರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳು ಇದೀಗ ದೆಹಲಿ ಅಂಗಳ ತಲುಪಿವೆ. ಸಂಸತ್ ಅಧಿವೇಶನದಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಿ, ಕೇಂದ್ರ ಸರ್ಕಾರದ ಗಮನ ಸೆಳೆಯುವ ಮೂಲಕ ರಾಜ್ಯದ ರೈತರಿಗೆ ನೆರವಾಗಬೇಕೆಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ. ಶುಕ್ರವಾರ (ಡಿ.5) ಬೆಂಗಳೂರಿನ ಸದಾಶಿವನಗರದಲ್ಲಿರುವ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿದ ಸಚಿವರು, ರಾಜ್ಯದ ರೈತರ ಪ್ರಸ್ತುತ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ದರ ನಿಗದಿ ಮತ್ತು ಕೇಂದ್ರದ ನೀತಿ

ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಬೆಳೆಗಾರರು ಪ್ರತಿ ಟನ್‌ಗೆ 3,500 ರೂ. ನೀಡಬೇಕೆಂದು ಆಗ್ರಹಿಸಿ ತೀವ್ರ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ, ಕಾರ್ಖಾನೆ ಮಾಲೀಕರಿಂದ 3,200 ರೂ., ಸರ್ಕಾರದಿಂದ 50 ರೂ. ಹಾಗೂ ಕಾರ್ಖಾನೆಗಳಿಂದ ಹೆಚ್ಚುವರಿ 50 ರೂ. ಸೇರಿದಂತೆ ಒಟ್ಟು 3,300 ರೂ. ನಿಗದಿಪಡಿಸಿದೆ ಎಂದು ಸಚಿವರು ಖರ್ಗೆ ಅವರಿಗೆ ವಿವರಿಸಿದರು. ಆದರೆ, ಸಕ್ಕರೆ ಉದ್ಯಮ ಉಳಿಯಬೇಕಾದರೆ ಕೇಂದ್ರದ ನೀತಿ ಬದಲಾಗಬೇಕಿದೆ. ಕಬ್ಬಿಗೆ ಎಫ್‌ಆರ್‌ಪಿ (FRP) ಹೆಚ್ಚಿಸಿದಂತೆ ಸಕ್ಕರೆಯ ಎಂಎಸ್‌ಪಿ (MSP) ದರವನ್ನೂ ಹೆಚ್ಚಿಸಬೇಕು. ಎಥನಾಲ್ ಉತ್ಪಾದನೆ ಕಡಿತ ಮತ್ತು ರಫ್ತು ನಿಷೇಧದಂತಹ ಕೇಂದ್ರದ ನಿರ್ಧಾರಗಳು ಕಾರ್ಖಾನೆಗಳನ್ನು ಸಂಕಷ್ಟಕ್ಕೆ ತಳ್ಳಿದ್ದು, ಇದರಿಂದಾಗಿ ರೈತರಿಗೆ ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಆತಂಕವನ್ನು ಸಚಿವರು ವ್ಯಕ್ತಪಡಿಸಿದರು.

ಮಹಾರಾಷ್ಟ್ರದ ಪೈಪೋಟಿ ಮತ್ತು ರೈತರ ವಲಸೆ

ಇದೇ ವೇಳೆ, ಕಬ್ಬು ಬೆಳೆಗಾರರು ನೆರೆಯ ಮಹಾರಾಷ್ಟ್ರದತ್ತ ಮುಖ ಮಾಡುತ್ತಿರುವ ಗಂಭೀರ ವಿಚಾರವೂ ಚರ್ಚೆಗೆ ಬಂತು. ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಕರ್ನಾಟಕಕ್ಕಿಂತ ಪ್ರತಿ ಟನ್‌ಗೆ 200 ರಿಂದ 300 ರೂ. ಹೆಚ್ಚಿನ ದರ ನೀಡುತ್ತಿವೆ. ಅಲ್ಲಿನ ಕಾರ್ಖಾನೆಗಳು 3,500 ರಿಂದ 3,618 ರೂ.ವರೆಗೂ ದರ ನೀಡುತ್ತಿರುವುದು ಮತ್ತು ಸಕಾಲದಲ್ಲಿ ಹಣ ಪಾವತಿಸುತ್ತಿರುವುದು ಗಡಿಭಾಗದ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ರೈತರನ್ನು ಆಕರ್ಷಿಸುತ್ತಿದೆ. ಮಹಾರಾಷ್ಟ್ರದಲ್ಲಿ ಸಕ್ಕರೆ ಉತ್ಪಾದನೆಯಾದ ತಕ್ಷಣ ಮಾರಾಟಕ್ಕೆ ಅವಕಾಶವಿದ್ದು, ಹಣದ ಹರಿವು ಸುಗಮವಾಗಿದೆ. ಆದರೆ ರಾಜ್ಯದಲ್ಲಿ ಕಠಿಣ ನಿಯಮಗಳಿರುವುದರಿಂದ ರೈತರಿಗೆ ಪಾವತಿ ವಿಳಂಬವಾಗುತ್ತಿದೆ. ಈ ವ್ಯವಸ್ಥಿತ ವ್ಯತ್ಯಾಸಗಳಿಂದಾಗಿ ರಾಜ್ಯದ ಕಬ್ಬು ನೆರೆರಾಜ್ಯದ ಪಾಲಾಗುತ್ತಿದ್ದು, ಸ್ಥಳೀಯ ಕಾರ್ಖಾನೆಗಳು ಕಬ್ಬಿನ ಕೊರತೆ ಎದುರಿಸುವಂತಾಗಿದೆ ಎಂಬ ವಾಸ್ತವವನ್ನು ಸಚಿವರು ವಿವರಿಸಿದರು.

ಮೆಕ್ಕೆಜೋಳ ಬೆಳೆಗಾರರ ಗೋಳು

ಕಬ್ಬಿನ ಜೊತೆಗೆ ಮೆಕ್ಕೆಜೋಳ ಬೆಳೆಗಾರರ ಸಂಕಷ್ಟವನ್ನೂ ಸಚಿವರು ಪ್ರಸ್ತಾಪಿಸಿದರು. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಕ್ವಿಂಟಾಲ್‌ಗೆ 2,400 ರೂ. ನಿಗದಿಪಡಿಸಿದ್ದರೂ, ಮಾರುಕಟ್ಟೆಯಲ್ಲಿ ರೈತರಿಗೆ ಸಿಗುತ್ತಿರುವುದು ಕೇವಲ 1,600 ರಿಂದ 1,800 ರೂ. ಮಾತ್ರ. ಪಡಿತರ ವಿತರಣೆಗೆ ಮಾತ್ರ ಬೆಂಬಲ ಬೆಲೆಯಲ್ಲಿ ಖರೀದಿಸುವುದಾಗಿ ಕೇಂದ್ರ ಹೇಳುತ್ತಿದೆ. ಬೆಲೆ ವ್ಯತ್ಯಾಸ ಯೋಜನೆ (PDPS) ಅಡಿಯಲ್ಲಿ ಖರೀದಿಸಲು ರಾಜ್ಯ ಸರ್ಕಾರ ಕೋರಿದ್ದರೂ ಕೇಂದ್ರದಿಂದ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಈ ಎಲ್ಲ ವಿಚಾರಗಳಲ್ಲಿ ರಾಜ್ಯದ ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರುವ ಬದಲು, ರೈತರ ಹೋರಾಟವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಶಿವಾನಂದ ಪಾಟೀಲ್ ಆರೋಪಿಸಿದರು. 

Tags:    

Similar News