ಕೆಎಸ್‌ಡಿಎಲ್ ಸಂಸ್ಥೆಯಲ್ಲಿ ಭ್ರಷ್ಟಾಚಾರ ಆರೋಪ ನಿರಾಧರ: ಸಚಿವ ಎಂ.ಬಿ. ಪಾಟೀಲ್
ಕೆಎಸ್‌ಡಿಎಲ್ ಸಂಸ್ಥೆಯನ್ನು ಪುನಃ ಹಿಂದಿನಂತೆ ಹಳ್ಳ ಹಿಡಿಸುವ ಪ್ರಯತ್ನ ಇದಾಗಿದ್ದು, ಇದಕ್ಕೆ ಜಗ್ಗುವುದಿಲ್ಲ. ಶಾಸಕರು ತಮ್ಮ ಆರೋಪಗಳಿಗೆ ಪುರಾವೆ ಕೊಡಬೇಕು. ಇದಕ್ಕೆ ತಪ್ಪಿದರೆ ಅವರ ವಿರುದ್ಧ ಕ್ರಮ ನಿಶ್ಚಿತ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಸಚಿವ ಎಂ.ಬಿ. ಪಾಟೀಲ್
ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ಸಾಮಗ್ರಿ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಜೆಡಿಎಸ್ ಶಾಸಕ ಎಚ್.ಟಿ. ಮಂಜು ಆರೋಪಿಸಿದ್ದು, ಇದರಲ್ಲಿ ಹುರುಳಿದ್ದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಇಲ್ಲದಿದ್ದರೆ ಶಾಸಕ ಎ. ಮಂಜು ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ (ಡಿ.5) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಎಸ್‌ಡಿಎಲ್ ಸಂಸ್ಥೆಯನ್ನು ಪುನಃ ಹಿಂದಿನಂತೆ ಹಳ್ಳ ಹಿಡಿಸುವ ಪ್ರಯತ್ನ ಇದಾಗಿದ್ದು, ಇದಕ್ಕೆ ಜಗ್ಗುವುದಿಲ್ಲ. ಶಾಸಕರು ತಮ್ಮ ಆರೋಪಗಳಿಗೆ ಪುರಾವೆ ಕೊಡಬೇಕು. ಇದಕ್ಕೆ ತಪ್ಪಿದರೆ ಅವರ ವಿರುದ್ಧ ಕ್ರಮ ನಿಶ್ಚಿತ. ಸಂಸ್ಥೆಯು ಹಿಂದೆ ಹೇಗಿತ್ತು, ಈಗ ಹೇಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದರು.
ಆರೋಪ ಆಧಾರರಹಿತ: ಎಂ.ಡಿ. ಸ್ಪಷ್ಟನೆ
ಕೆಎಸ್‌ಡಿಎಲ್ ಸಂಸ್ಥೆಯು ಕಪ್ಪು ಪಟ್ಟಿಯಲ್ಲಿರುವ ಕರ್ನಾಟಕ ಅರೋಮಾಸ್ ಎನ್ನುವ ಸಂಸ್ಥೆಗೆ ಕಚ್ಚಾ ಸಾಮಗ್ರಿ ಖರೀದಿ ಟೆಂಡರ್ ನೀಡುವ ಮೂಲಕ ಅವ್ಯವಹಾರ ಎಸಗಿದೆ ಎಂದು ಕೆ.ಆರ್.ಪೇಟೆ ಶಾಸಕ ಎಚ್.ಟಿ. ಮಂಜು ಮಾಡಿರುವ ಆರೋಪ ನಿರಾಧಾರವಾದುದು. ಕಚ್ಚಾ ಸಾಮಗ್ರಿ ಖರೀದಿಗೆ ಸಂಬಂಧಿಸಿದಂತೆ ವಿಧಾನ ಮಂಡಲದ ಕಾಗದ ಪತ್ರಗಳ ಸಮಿತಿಗೆ ಏ.25, ಮೇ 25, ಸೆ. 26ರಂದು ಮತ್ತು ಸರ್ಕಾರಕ್ಕೆ ನ.27ರಂದು 1,500 ಪುಟಗಳಷ್ಟು ಮಾಹಿತಿ ನೀಡಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಕೆ.ಎಂ.ಪ್ರಶಾಂತ್ ಹೇಳಿದ್ದಾರೆ.
ಸಂಸ್ಥೆಗೆ 88 ಕೋಟಿ ರೂಪಾಯಿ ಉಳಿತಾಯ
ಕರ್ನಾಟಕ ಅರೋಮಾಸ್ ಸಂಸ್ಥೆಯು ಲೋಕಾಯುಕ್ತ ನ್ಯಾಯಾಲಯದಲ್ಲಿ ನಿರ್ದೋಷಿ ಎಂದು ಸಾಬೀತಾಗಿದೆ. ಈ ಸಂಬಂಧದ ದೂರನ್ನು ಅದು ವಜಾಗೊಳಿಸಿದೆ. ಹೀಗಾಗಿ ಈ ಸಂಸ್ಥೆಯು ಕಪ್ಪುಪಟ್ಟಿಯಲ್ಲೇನೂ ಇಲ್ಲ. ಕೆಟಿಟಿಪಿ ನಿಯಮಾವಳಿಗಳ ಪ್ರಕಾರ ಪಾರದರ್ಶಕವಾಗಿ ಈ ಸಂಸ್ಥೆಗೆ ಟೆಂಡರ್ ನೀಡಲಾಗಿದೆ. ಗಂಧದ ಎಣ್ಣೆ ಖರೀದಿಯಲ್ಲಿ 'ಎಲೆಕ್ಟ್ರಾನಿಕ್ ರಿವರ್ಸ್ ಹರಾಜು' ಪ್ರಕ್ರಿಯೆಗೆ ಅವಕಾಶವಿದೆ. ಇದರಿಂದಾಗಿ ಕೆಎಸ್‌ಡಿಎಲ್ ಸಂಸ್ಥೆಗೆ 88 ಕೋಟಿ ರೂಪಾಯಿ ಉಳಿತಾಯವಾಗಿದೆ. ಏತನ್ಮಧ್ಯೆ ಕೆಲವು ಬಿಡ್‌ದಾರರು ದುರುದ್ದೇಶದಿಂದ ಕೋರ್ಟ್ ಮೆಟ್ಟಿಲೇರಿದ್ದು, ಅಲ್ಲೂ ಸಹ ಅ.9ರಂದು ಸಂಸ್ಥೆಯ ಪರವಾಗಿಯೇ ಆದೇಶ ಬಂದಿದೆ. ಆಧಾರ ರಹಿತ ಆರೋಪದಿಂದ ಸಂಸ್ಥೆಯ ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನ ನಡೆದಿದೆ. ಈ ಆರೋಪಗಳನ್ನು ಸಂಸ್ಥೆಯು ಸಾರಾಸಗಟಾಗಿ ನಿರಾಕರಿಸುತ್ತದೆ ಎಂದರು.