ಡಿ.ಕೆ. ಸಹೋದರರಿಗೆ ದೆಹಲಿ ಪೊಲೀಸ್‌ ನೋಟಿಸ್;‌ ರಾಹುಲ್‌ ಬೆಂಬಲಿಗರಿಗೆ ಕಿರುಕುಳ ಯತ್ನ- ಡಿಕೆಶಿ ಆರೋಪ

ನಾನು ಯಂಗ್ ಇಂಡಿಯನ್‌ ಸಂಸ್ಥೆಗೆ ದೇಣಿಗೆ ನೀಡಿರುವುದು ನಿಜ. ಅದೇ ರೀತಿ ನನ್ನ ಸಹೋದರ ಡಿ.ಕೆ. ಸುರೇಶ್ ಕೂಡ ಸಂಸದರಾಗಿದ್ದಾಗ ದೇಣಿಗೆ ಕೊಟ್ಟಿದ್ದರು. ನಮ್ಮಂತೆಯೇ ಎಲ್ಲ ಕಾಂಗ್ರೆಸ್ ನಾಯಕರು ಪಕ್ಷದ ಸಂಸ್ಥೆಗಳಿಗೆ ದೇಣಿಗೆ ಕೊಟ್ಟಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

Update: 2025-12-06 07:44 GMT

ಡಿಸಿಎಂ ಡಿ.ಕೆ. ಶಿವಕುಮಾರ್‌

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನೋಟಿಸ್ ನೀಡಿರುವುದು ಡಿ.ಕೆ. ಸಹೋದರರಿಗೆ ಹೊಸ ಸಂಕಷ್ಟ ತಂದೊಡ್ಡಿದೆ.

ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ದೋಷಾರೋಪ ಪಟ್ಟಿ ಸಲ್ಲಿಸಿದ ಬಳಿಕವೂ ದೆಹಲಿ ಪೊಲೀಸರು ಅ.3 ರಂದು ಪ್ರಕರಣ ದಾಖಲಿಸಿದ್ದು, ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರಿಗೆ ನೋಟಿಸ್ ನೀಡುವುದು ಚರ್ಚೆಗೆ ಗ್ರಾಸವಾಗಿದೆ. 

ದೆಹಲಿ ಪೊಲೀಸರ ನೋಟಿಸ್ ಕುರಿತು ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, "ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ನೀಡಿರುವುದು ಆಘಾತ ಉಂಟು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿಗೆ ಎಲ್ಲ ಮಾಹಿತಿ ನೀಡಿದ್ದೇವೆ. ಯಂಗ್ ಇಂಡಿಯನ್‌ ಹಾಗೂ ನ್ಯಾಷನಲ್ ಹೆರಾಲ್ಡ್ ಎರಡೂ ಕೂಡ ಕಾಂಗ್ರೆಸ್‌ ಸಂಸ್ಥೆಗಳು. ಕಾಂಗ್ರೆಸ್ಸಿಗರಾಗಿ ಸಂಸ್ಥೆಯನ್ನು ಬೆಂಬಲಿಸಿದ್ದೇವೆ. ಇದರಲ್ಲಿ ಮುಚ್ಚಿಡುವುದು ಏನೂ ಇಲ್ಲ. ಇದು ನಮ್ಮ ಹಣ, ಯಾರಿಗೆ ಬೇಕಾದರೂ ದಾನ ಮಾಡುತ್ತೇವೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಬೆಂಬಲಗರನ್ನು ಕಿರುಕುಳ ನೀಡಲು ಈ ನೋಟಿಸ್ ನೀಡಲಾಗಿದೆ. ಇದನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಹೇಳಿದ್ದಾರೆ.

ನಾನು ಯಂಗ್ ಇಂಡಿಯನ್‌ ಸಂಸ್ಥೆಗೆ ದೇಣಿಗೆ ನೀಡಿರುವುದು ನಿಜ. ಅದೇ ರೀತಿ ನನ್ನ ಸಹೋದರ ಡಿ.ಕೆ. ಸುರೇಶ್ ಕೂಡ ಸಂಸದರಾಗಿದ್ದಾಗ ದೇಣಿಗೆ ಕೊಟ್ಟಿದ್ದರು. ನಮ್ಮಂತೆಯೇ ಎಲ್ಲ ಕಾಂಗ್ರೆಸ್ ನಾಯಕರು ಪಕ್ಷದ ಸಂಸ್ಥೆಗಳಿಗೆ ದೇಣಿಗೆ ಕೊಟ್ಟಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸ್‌ ಇಲಾಖೆಯ ಆರ್ಥಿಕ ವಹಿವಾಟುಗಳ ವಿಭಾಗವು ನೋಟಿಸ್‌ ನೀಡಿದೆ. ಡಿ.19 ರೊಳಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿದ್ದಾರೆ. ಇದು ಕಿರುಕುಳ ನೀಡುವ ಪ್ರಯತ್ನ. ಕಾನೂನಾತ್ಮಕವಾಗಿಯೇ ಉತ್ತರ ನೀಡುತ್ತೇವೆ. ಜಾರಿ ನಿರ್ದೇಶನಾಲಯವು ಪಿಎಂಎಲ್ಎ ಕಾಯ್ದೆಯಡಿ ದೋಷಾರೋಪ ಪಟ್ಟಿ ಸಲ್ಲಿಸಿದ ಮೇಲೂ ದೆಹಲಿಯ ಪೊಲೀಸರು ಪ್ರಕರಣ ದಾಖಲಿಸಿ, ನೋಟಿಸ್‌ ನೀಡಿರುವುದು ಖಂಡಿನೀಯ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ನೋಟಿಸ್‌ನಲ್ಲಿ ಏನಿದೆ?

ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಅ.3ರಂದು ದಾಖಲಾಗಿದ್ದ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಡಿ.ಕೆ. ಶಿವಕುಮಾರ್ ಬಳಿ ಪ್ರಮುಖ ಮಾಹಿತಿ ಸಿಗಲಿದೆ ಎಂದು ಭಾವಿಸಿರುವುದಾಗಿ ಆರ್ಥಿಕ ಅಪರಾಧಗಳ ವಿಭಾಗ ನೋಟಿಸ್‌ನಲ್ಲಿ ಉಲ್ಲೇಖಿಸಿದೆ.

ಡಿ.ಕೆ. ಸಹೋದರರ ವೈಯಕ್ತಿಕ ಹಿನ್ನೆಲೆ, ಕಾಂಗ್ರೆಸ್ ಪಕ್ಷದೊಂದಿಗಿನ ಸಂಬಂಧ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ನೀಡಿದ ದೇಣಿಗೆ ಪ್ರಮಾಣ, ಯಾವ ರೀತಿಯಲ್ಲಿ ದೇಣಿಗೆ ನೀಡಲಾಗಿದೆ, ಅದು ಯಾವುದಕ್ಕೆ ಬಳಕೆಯಾಗಿದೆ ಮಾಹಿತಿ ಕೇಳಲಾಗಿದೆ. ಡಿ.19ರೊಳಗೆ ಖುದ್ದು ಹಾಜರಾಗಿ ಮಾಹಿತಿಯನ್ನು ಒದಗಿಸುವಂತೆ ಸೂಚಿಸಲಾಗಿದೆ.

ಡಿ.ಕೆ. ಶಿವಕುಮಾರ್ ಅವರು ಬ್ಯಾಂಕ್‌ನಿಂದ ಹಣ ವರ್ಗಾವಣೆ ಮಾಡಿರುವ ಉದ್ದೇಶ, ಹಣದ ಮೂಲ, ಯಂಗ್ ಇಂಡಿಯನ್ ಅಥವಾ ಎಐಸಿಸಿ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ನಡುವಿನ ಸಂವಹನದ ವಿವರಗಳು, ಯಾರ ಸೂಚನೆ ಮೇರೆಗೆ ದೇಣಿಗೆ ನೀಡಲಾಗಿದೆ ಎಂಬ ವಿವರಗಳನ್ನು ನೋಟಿಸ್ ನಲ್ಲಿ ಕೇಳಲಾಗಿದೆ.

ಡಿಕೆ ಸಹೋದರರು ನೀಡಿದ ದೇಣಿಗೆ ಎಷ್ಟು?

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವೈಯಕ್ತಿಕವಾಗಿ 25 ಲಕ್ಷ ರೂ. ದೇಣಿಗೆ ನೀಡಿದ್ದರು. ಅಲ್ಲದೇ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಮೂಲಕ 2 ಕೋಟಿ ನೀಡಿರುವುದನ್ನು ಜಾರಿ ನಿರ್ದೇಶನಾಲಯವು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.

ಡಿ.ಕೆ.ಶಿವಕುಮಾರ್ ಅವರು ಯಂಗ್ ಇಂಡಿಯನ್ ಮತ್ತು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಹೆಸರಿಗೆ ಈ ಮೊತ್ತ ಪಾವತಿಸಿದ್ದಾರೆ. ಡಿ.ಕೆ. ಸುರೇಶ್ ಅವರು ಯಂಗ್ ಇಂಡಿಯನ್ ಸಂಸ್ಥೆಗೆ 25 ಲಕ್ಷ ದೇಣಿಗೆ ನೀಡಿರುವುದು ದೋಷಾರೋಪ ಪಟ್ಟಿಯಲ್ಲಿದೆ.

ಪ್ರಕರಣದ ಹಿನ್ನಲೆ ಏನು?

ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು 2014ರ ಜೂನ್ 26ರಂದು ದಾಖಲಿಸಿದ್ದ ಖಾಸಗಿ ದೂರು ಆಧರಿಸಿ ಪಟಿಯಾಲಾ ಹೌಸ್ ನ್ಯಾಯಾಲಯದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನೀಡಿದ ಆದೇಶದ ಮೇರೆಗೆ 2021 ರಲ್ಲಿ ಇ.ಡಿ ತನಿಖೆ ಆರಂಭವಾಗಿತ್ತು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ತನಿಖೆ ನಡೆಸಿದ್ದ ಇಡಿ ಇತ್ತೀಚೆಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

Tags:    

Similar News