Internal Reservation| ಸಿಎಂ ತವರೂರಿಂದ ಒಳ ಮೀಸಲಾತಿ ಜಾಥಾ; ಹೋರಾಟಗಾರರ ಬಂಧನ

ಒಳ ಮೀಸಲಾತಿ ಹೋರಾಟಗಾರ ಶಿವರಾಯ ಅಕ್ಕರಕಿ ಅವರು ಪೊಲೀಸರು ಕೃತ್ಯವನ್ನು ಖಂಡಿಸಿದ್ದು, “ಹೋರಾಟಗಾರರ ಬಂಧನದ ಜತೆಗೆ 144ನೇ ಸೆಕ್ಷನ್ ಜಾರಿ ಮಾಡಲಾಗಿದೆ. ಹೋರಾಟ ತಡೆಯುವ ರಾಜಕೀಯ ಪಿತೂರಿ ಇದು” ಎಂದು ಖಂಡಿಸಿದ್ದಾರೆ.

Update: 2025-12-06 10:31 GMT

ಒಳ ಮೀಸಲಾತಿ ಹೋರಾಟಗಾರರನ್ನು ಬಂಧಿಸಿ ಕರೆದೊಯ್ಯುತ್ತಿರುವ ಪೊಲೀಸರು

Click the Play button to listen to article

ಪರಿಪೂರ್ಣವಾದ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಪರಿಶಿಷ್ಟ ಜಾತಿಯವರು ಶನಿವಾರ ಮೈಸೂರಿನ ಸಿದ್ದರಾಮನಹುಂಡಿಯಿಂದ ಆರಂಭಿಸಿದ್ದ ಕಾಲ್ನಡಿಗೆ ಜಾಥಾವನ್ನು ಪೊಲೀಸರು ತಡೆದಿದ್ದು, ಹೋರಾಟಗಾರರನ್ನು ವಶಕ್ಕೆ ಪಡೆದಿದ್ದಾರೆ.

ಡಿ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟೂರು ಸಿದ್ದರಾಮನಹುಂಡಿಯಿಂದ ಜಾಥಾ ನಡೆಸುವುದಾಗಿ ಮಾದಿಗ ಸಮುದಾಯಗಳ ಸ್ವಾಭಿಮಾನಿ ಒಕ್ಕೂಟದ ರಾಜ್ಯ ಸಂಚಾಲಕ ಕೇಶವ ಮೂರ್ತಿ ಹೇಳಿದ್ದರು. ಶನಿವಾರ ಬೆಳಿಗ್ಗೆ ಸಿದ್ದರಾಮನಹುಂಡಿಯಲ್ಲಿ ಹೋರಾಟಗಾರರು ಜಾಥಾ ನಡೆಸಲು ಮುಂದಾಗುತ್ತಿದ್ದಂತೆ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದಿದ್ದಾರೆ. ಹಿರಿಯ ಹೋರಾಟಗಾರರಾದ ಎಸ್. ಮಾರೆಪ್ಪ, ಶಿವರಾಯ ಅಕ್ಕರಕಿ, ಹೇಮರಾಜ್ ಹಸ್ಕಿಹಾಳ, ಕೇಶವಮೂರ್ತಿ ಸೇರಿ ಹಲವರನ್ನು ಬಂಧಿಸಿದ್ದಾರೆ.

ತಮ್ಮ ಬಂಧನ ಕುರಿತಂತೆ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿರುವ ಶಿವರಾಯ ಅಕ್ಕರಕಿ ಅವರು, “ಹೋರಾಟಗಾರರನ್ನು ಬಂಧಿಸಿರುವುದಲ್ಲದೆ 144ನೇ ಸೆಕ್ಷನ್ ಜಾರಿ ಮಾಡಲಾಗಿದೆ. ಹೋರಾಟ ತಡೆಯುವ ರಾಜಕೀಯ ಪಿತೂರಿ ಇದು” ಎಂದು ಖಂಡಿಸಿದ್ದಾರೆ. ಪಾದಯಾತ್ರೆ ಮುಂದುವರೆಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಒಳ ಮೀಸಲಾತಿ ಗೊಂದಲ ಮುಂದುವರಿಕೆ

ಪರಿಶಿಷ್ಟರ ಒಳ ಮೀಸಲಾತಿ ಜಾರಿ ವಿಚಾರವು ಗೊಂದಲ ಸೃಷ್ಟಿಸಿದೆ. ನ್ಯಾ.ಎಚ್.ಎನ್.ನಾಗಮೋಹನ ದಾಸ್ ಆಯೋಗವು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ, ಶಿಫಾರಸು ಮಾಡಿದರೂ ಸರ್ಕಾರ ವರದಿಯನ್ನು ಪರಿಷ್ಕರಿಸಿ ಜಾರಿ ಮಾಡಿತ್ತು. ಇದೇ ಈಗಿನ ಗೊಂದಲಗಳಿಗೆ ಕಾರಣ ಎಂಬುದು ಹೋರಾಟಗಾರರ ವಾದ.

ನ್ಯಾ. ನಾಗಮೋಹನ್‌ದಾಸ್‌ ವರದಿಯಲ್ಲಿ ಐದು ಪ್ರವರ್ಗಗಳನ್ನು ಸೃಷ್ಟಿಸಿ, ಮೀಸಲಾತಿ ಹಂಚಿಕೆ ಮಾಡಲಾಗಿತ್ತು. 'ಪ್ರವರ್ಗ-ಎ' ಗುಂಪಿನಲ್ಲಿ ಒಟ್ಟು 59 ಜಾತಿಗಳು ಬರಲಿದ್ದು, ಶೇ 1 ರಷ್ಟು ಮೀಸಲಾತಿ ನೀಡಲಾಗಿತ್ತು. 'ಪ್ರವರ್ಗ-ಬಿ' ಯಲ್ಲಿ 18 ಜಾತಿಗಳಿಗೆ ಶೇ 6 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿತ್ತು. 'ಪ್ರವರ್ಗ- ಸಿ' ಯಲ್ಲಿ 17ಜಾತಿಗಳಿದ್ದು, ಶೇ 5ರಷ್ಟು, 'ಪ್ರವರ್ಗ-ಡಿ' ನಲ್ಲಿ 4ಜಾತಿಗಳು ಬರಲಿದ್ದು, ಶೇ 4 ರಷ್ಟು, 'ಪ್ರವರ್ಗ-ಇ' ನಲ್ಲಿ(ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ) 3 ಜಾತಿಗಳು ಬರಲಿದ್ದು, ಶೇ 1 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿತ್ತು.

ಆದರೆ, ರಾಜ್ಯ ಸರ್ಕಾರ ಐದು ಗುಂಪುಗಳನ್ನು ಮೂರಕ್ಕೆ ಇಳಿಸಿ, ಪರಿಷ್ಕರಿಸಿತ್ತು. ಪ್ರವರ್ಗ ಎ ನಲ್ಲಿ ಮಾದಿಗ (ಎಡಗೈ) ಮತ್ತು ಸಂಬಂಧಿತ ಜಾತಿಗಳಿಗೆ ಶೇ 6, ಪ್ರವರ್ಗ ಬಿ ನಲ್ಲಿ ಹೊಲೆಯ (ಬಲಗೈ) ಮತ್ತು ಸಂಬಂಧಿತ ಜಾತಿಗಳಿಗೆ ಶೇ 6 ಹಾಗೂ ಬಲಾಡ್ಯ ಸ್ಪೃಶ್ಯ, ಅಲೆಮಾರಿ ಹಾಗೂ ಅತಿ ಸೂಕ್ಷ್ಮ ಸಮುದಾಯಗಳ ಜೊತೆಗೆ ಅಲೆಮಾರಿಗಳನಕ್ನು ಸೇರಿಸಿ ಶೇ 5 ರಷ್ಟು ಮೀಸಲಾತಿ ನೀಡಲಾಗಿತ್ತು.

ಹೈಕೋರ್ಟ್ ತಾತ್ಕಾಲಿಕ ತಡೆ

‘ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಕಾಯ್ದೆ 2022’ರಡಿ ಒಳಮೀಸಲಾತಿ ಹೆಚ್ಚಳಕ್ಕೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

ಕಾಯ್ದೆಯ ವಿವಿಧ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಮತ್ತು ನ್ಯಾಯಮೂರ್ತಿ ಸಿಎಂ ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿತ್ತು.

ಮೀಸಲಾತಿ ಹೆಚ್ಚಳದ ಆಧಾರದ ನೇಮಕಾತಿಗೆ ಹೊಸ ಅಧಿಸೂಚನೆ ನೀಡಬಾರದು, ಈಗಾಗಲೇ ಪ್ರಾರಂಭವಾದ ನೇಮಕಾತಿ ಪ್ರಕ್ರಿಯೆ ಮುಂದುವರಿಯಬಹುದು, ಆದರೆ ಅಂತಿಮ ತೀರ್ಪಿಗೆ ಒಳಪಟ್ಟಿರಬೇಕ ಎಂದು ಆದೇಶ ನೀಡಿತ್ತು.

ಮೀಸಲಾತಿ ಹೆಚ್ಚಳದ ಮೇಲೆ ರಾಜಕೀಯ ಕರಿನೆರಳು

ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ನ್ಯಾ. ನಾಗಮೋಹನ್‌ ದಾಸ್ ಅವರು ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ 15 ರಿಂದ 17ಕ್ಕೆ ಏರಿಸಿದ್ದರು. ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 3 ರಿಂದ ಶೇ 7ಕ್ಕೆ ಏರಿಸಲಾಗಿತ್ತು.

ಈ ಮೀಸಲಾತಿ ಹೆಚ್ಚಳಕ್ಕೆ ಕಾನೂನಾತ್ಮಕ ಅಡೆತಡೆಗಳು ಎದುರಾಗಿದ್ದು, ನ್ಯಾಯಾಲಯದ ಅಂಗಳದಲ್ಲಿದೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಕೂಡ ಈ ವಿಷಯವನ್ನು ಬಗೆಹರಿಸಲು ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂಬ ಟೀಕೆಗಳು ಎದುರಾಗಿದ್ದು, ಒಳ ಮೀಸಲಾತಿ ಜಾರಿಯ ಮೇಲೂ ಪರಿಣಾಮ ಬೀರಿದೆ.

ಅಸ್ಪೃಶ್ಯ ವಿರೋಧಿ ಸರ್ಕಾರ

ಸುಪ್ರೀಂಕೋರ್ಟ್‌ ಆದೇಶದಂತೆ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಜಾಥಾ ಮಾಡಲು ಮುಂದಾಗಿದ್ದ ಹೋರಾಟಗಾರರನ್ನು ಸರ್ಕಾರ ಪೊಲೀಸ್‌ ಬಲ ಪ್ರಯೋಗಿಸಿ  15ಕ್ಕೂ ಹೆಚ್ಚು ಹಿರಿಯ ಹೋರಾಟಗಾರರನ್ನು ಬಂಧಿಸಿ ನಜರಾಬಾದ್‌ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದೆ. ಇದು ಸಂವಿಧಾನ ವಿರೋಧಿ ನಡೆ. ಕಾಂಗ್ರೆಸ್‌ ಸರ್ಕಾರ ಅಸ್ಪೃಶ್ಯ ವಿರೋಧಿ ನೀತಿ ಅನುಸರಿಸುತ್ತಿದ್ದು, ಎಡಗೈ ಹಾಗೂ ಬಲಗೈ ಸಮುದಾಯದ ನಡುವೆ ಕಂದಕ ಸೃಷ್ಟಿಸಿ ಹೋರಾಟಗಾರರಲ್ಲಿ ಭಿನ್ನಮತ ಮೂಡಿಸುತ್ತಿದೆ ಎಂದು ಮಾದಿಗ ಸಮುದಾಯಗಳ ಸ್ವಾಭಿಮಾನಿ ಒಕ್ಕೂಟದ ರಾಜ್ಯ ಸಂಚಾಲಕ ಕೇಶವಮೂರ್ತಿ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.  

Tags:    

Similar News