ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ತಲೆ ಎತ್ತುತ್ತಿದೆ 'ಕನ್ನಡ ಭವನ': 5 ಲಕ್ಷ ರೂ. ದೇಣಿಗೆ ಘೋಷಿಸಿದ ಶರವಣ

ನಮ್ಮ ನಾಡಿನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗೆ ಆಸ್ಟ್ರೇಲಿಯಾದಂತಹ ವಿದೇಶಿ ನೆಲದಲ್ಲಿ ಶಾಶ್ವತ ನೆಲೆ ಸಿಗುತ್ತಿರುವುದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ವಿಷಯ ಎಂದು ಟಿ.ಎ. ಶರವಣ ತಿಳಿಸಿದರು.

Update: 2025-12-06 13:26 GMT

ವಿಧಾನಪರಿಷತ್‌ ಸದಸ್ಯ ಟಿ.ಎ. ಶರವಣ ಪುಸ್ತಕ ಬಿಡುಗಡೆ ಮಾಡಿದರು.

Click the Play button to listen to article

ವಿದೇಶಿ ನೆಲದಲ್ಲಿ ಕನ್ನಡದ ಕಂಪನ್ನು ಪಸರಿಸುವ ಮತ್ತು ಕನ್ನಡಿಗರನ್ನು ಒಂದೇ ಸೂರಿನಡಿ ಬೆಸೆಯುವ ಮಹತ್ವಾಕಾಂಕ್ಷೆಯೊಂದಿಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ಬೃಹತ್ 'ಕನ್ನಡ ಭವನ' ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಅವರು ನಿರ್ಮಾಣ ಹಂತದಲ್ಲಿರುವ ಈ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಸ್ಟ್ರೇಲಿಯಾ ಕನ್ನಡ ಸಂಘದ ವತಿಯಿಂದ ನಿರ್ಮಿಸಲಾಗುತ್ತಿರುವ ಈ ಭವನಕ್ಕೆ ಭೇಟಿ ನೀಡಿದ ಶರವಣ ಅವರನ್ನು ಸಂಘದ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಭವನದ ನಿರ್ಮಾಣ ಪ್ರಗತಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಬಳಿಕ ಮಾತನಾಡಿದ ಶರವಣ, "ನಮ್ಮ ನಾಡಿನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗೆ ಆಸ್ಟ್ರೇಲಿಯಾದಂತಹ ವಿದೇಶಿ ನೆಲದಲ್ಲಿ ಶಾಶ್ವತ ನೆಲೆ ಸಿಗುತ್ತಿರುವುದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ವಿಷಯ. ಇದು ಕೇವಲ ಇಟ್ಟಿಗೆ ಮತ್ತು ಸಿಮೆಂಟ್‌ನ ಕಟ್ಟಡವಲ್ಲ; ಬದಲಿಗೆ ಸಮಸ್ತ ಕನ್ನಡಿಗರ ಭಾವನೆಗಳನ್ನು ಜೋಡಿಸುವ ಸೇತುವೆಯಾಗಿದೆ," ಎಂದು ಬಣ್ಣಿಸಿದರು.

ವೈಯಕ್ತಿಕವಾಗಿ 5 ಲಕ್ಷ ರೂ. ದೇಣಿಗೆ

ಸಪ್ತ ಸಾಗರದಾಚೆ ಕನ್ನಡಕ್ಕಾಗಿ ಶ್ರಮಿಸುತ್ತಿರುವ ಆಸ್ಟ್ರೇಲಿಯಾ ಕನ್ನಡ ಸಂಘದ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಶಾಸಕ ಶರವಣ, ಕನ್ನಡ ಭವನ ನಿರ್ಮಾಣ ಕಾರ್ಯಕ್ಕೆ ತಮ್ಮ ವೈಯಕ್ತಿಕ ನೆಲೆಯಲ್ಲಿ 5 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಸ್ಥಳದಲ್ಲೇ ಘೋಷಿಸಿದರು.

ಏನಿರಲಿದೆ ಈ ಭವನದಲ್ಲಿ?

ಈ ಭವನವು ಪೂರ್ಣಗೊಂಡರೆ ವಿದೇಶದಲ್ಲಿರುವ ಅತಿದೊಡ್ಡ ಭಾರತೀಯ ಭಾಷಾ ಮತ್ತು ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಲಿದೆ. ಮುಖ್ಯವಾಗಿ, ಇಲ್ಲಿ ವಾಸವಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸಲು, ಕನ್ನಡ ಪರ ಕಲೆ, ಸಾಹಿತ್ಯ, ನಾಟಕ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಇದು ಅತ್ಯುತ್ತಮ ವೇದಿಕೆಯಾಗಲಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಮತ್ತು ವಿಧಾನ ಪರಿಷತ್ ಸದಸ್ಯೆ ಆರತಿ ಕೃಷ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Tags:    

Similar News