ಸಿದ್ದರಾಮಯ್ಯಗೆ ಎಚ್‌ಡಿಕೆ ತಿರುಗೇಟು: "ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ? ಮತಾಂತರ ಮಾಡಲು ಹೇಳಿಕೆ ನೀಡಿಲ್ಲ
ಇಂದಿನ ಸಮಾಜದ ಸ್ಥಿತಿಗತಿಯನ್ನು ಗಮನಿಸಿ ತಾವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿರುವುದಾಗಿ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಿಎಂ ಸಿದ್ದರಾಮಯ್ಯ
ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಸೇರಿಸುವಂತೆ ಕೇಂದ್ರಕ್ಕೆ ಪತ್ರ ಬರೆದ ವಿಚಾರವಾಗಿ ತಮ್ಮನ್ನು 'ಮನುವಾದಿ' ಎಂದು ಜರದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
"ನಾನೇನು ಮತಾಂತರ ಮಾಡಲಿಕ್ಕೆ ಈ ಹೇಳಿಕೆ ನೀಡಿಲ್ಲ. ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ? ಹಾಗಾದರೆ ಸಿದ್ದರಾಮಯ್ಯ ಅವರು ಮಕ್ಕಳಿಗೆ ಏನು ಬೋಧಿಸಲು ಹೇಳುತ್ತಾರೆ?" ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದಿನ ಸಮಾಜದ ಸ್ಥಿತಿಗತಿಯನ್ನು ಗಮನಿಸಿ ತಾವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿರುವುದಾಗಿ ಸ್ಪಷ್ಟಪಡಿಸಿದರು.
ಸಮಾಜ ಸುಧಾರಣೆಗೆ ಗೀತೆ ಅಗತ್ಯ
ಸಮಾಜದಲ್ಲಿ ತಂದೆ-ತಾಯಿ, ಅಣ್ಣ-ತಮ್ಮನನ್ನೇ ಕೊಲೆ ಮಾಡುವಂತಹ ಕೆಟ್ಟ ವಾತಾವರಣ ನಿರ್ಮಾಣವಾಗಿದೆ. ಹಾಸನದಲ್ಲಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಮಗನೂ ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ಉಲ್ಲೇಖಿಸಿದ ಅವರು, ಇಂದಿನ ಸಮಾಜದಲ್ಲಿ ಮನುಷ್ಯ ಸಂಬಂಧಗಳು ಹದಗೆಡುತ್ತಿವೆ. ಸಂಬಂಧಗಳನ್ನು ಬಲಪಡಿಸಲು ಮತ್ತು ಬದುಕಿನ ಮೌಲ್ಯಗಳನ್ನು ಕಲಿಸಲು ಭಗವದ್ಗೀತೆ ಬೋಧನೆ ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು.
ಅಹಿಂದ ಹೆಸರಿನಲ್ಲಿ ಮಜಾ ಮಾಡಿದ್ದಾರೆ
ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, "ಕಳೆದ 10 ವರ್ಷಗಳಿಂದ ಅಹಿಂದ ಹೆಸರಿನಲ್ಲಿ ಸಿದ್ದರಾಮಯ್ಯ ಅಧಿಕಾರ ಅನುಭವಿಸಿದ್ದಾರೆ. ಆದರೆ ಅಹಿಂದ ವರ್ಗದ ಚಿಕ್ಕ ಜಾತಿಗಳಿಗೆ ಅವರ ಕೊಡುಗೆ ಏನು? ಸಿದ್ದರಾಮಯ್ಯ ಅವರ ತಲೆಯಲ್ಲಿ ಇರುವುದು ಸಮಾಜದಲ್ಲಿ ಘರ್ಷಣೆ ಉಂಟುಮಾಡುವುದು ಮಾತ್ರ," ಎಂದು ಗಂಭೀರ ಆರೋಪ ಮಾಡಿದರು.
ಯತೀಂದ್ರಗೆ ಇತಿಹಾಸ ಗೊತ್ತಿಲ್ಲ
ಇದೇ ವೇಳೆ, ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಪಿತೂರಿ ನಡೆಯುತ್ತಿದೆ ಎಂಬ ಶಾಸಕ ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, "ಯತೀಂದ್ರ ನಿನ್ನೆ ಮೊನ್ನೆಯಷ್ಟೇ ಬಂದವರು, ಅವರಿಗೆ ಇತಿಹಾಸ ಗೊತ್ತಿಲ್ಲ. ಸಿದ್ದರಾಮಯ್ಯ ಈ ಮಟ್ಟಕ್ಕೆ ಬೆಳೆಯಲು ಯಾರು ಕಾರಣ ಮತ್ತು ಅವರ ಹಿನ್ನೆಲೆ ಏನು ಎಂಬುದನ್ನು ಅವರು ತಿಳಿದುಕೊಳ್ಳಬೇಕು," ಎಂದು ಟಾಂಗ್ ನೀಡಿದರು.