ನಾಯಿ ಕಡಿತಕ್ಕೆ ಚಿಕಿತ್ಸೆ: ಸುಪ್ರೀಂ ಕೋರ್ಟ್ ನಿರ್ದೇಶನ ಪಾಲಿಸಲು ಖಾಸಗಿ ಆಸ್ಪತ್ರೆಗಳಿಗೂ ಸಚಿವರ ಸೂಚನೆ
ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಎಲ್ಲಾ ಸಮಯದಲ್ಲೂ ಆ್ಯಂಟಿ-ರೇಬೀಸ್ ಲಸಿಕೆಗಳು ಮತ್ತು ಇಮ್ಯುನೊಗ್ಲೋಬ್ಯುಲಿನ್‌ಗಳನ್ನು ಕಡ್ಡಾಯವಾಗಿ ದಾಸ್ತಾನು ಇರಿಸಿಕೊಳ್ಳಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ನಾಯಿ, ಹಾವು ಮತ್ತು ಇತರ ಪ್ರಾಣಿಗಳ ಕಡಿತ ಪ್ರಕರಣಗಳಿಗೆ ಸಂಬಂಧಿಸಿದಂತೆ, ಚಿಕಿತ್ಸೆ ನೀಡುವಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದೆ. ಈ ನಿಯಮಗಳನ್ನು ಉಲ್ಲಂಘಿಸುವ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ನಿರ್ದೇಶನದ ಪ್ರಕಾರ, ಯಾವುದೇ ಖಾಸಗಿ ಆಸ್ಪತ್ರೆಯು ನಾಯಿ, ಹಾವು ಅಥವಾ ಇತರ ಪ್ರಾಣಿಗಳ ದಾಳಿಗೆ ಒಳಗಾದ ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ಮುಂಗಡ ಹಣಕ್ಕೆ ಒತ್ತಾಯಿಸುವಂತಿಲ್ಲ. ಸಂತ್ರಸ್ತರು ಬಂದ ತಕ್ಷಣ, ಅವರಿಗೆ ಉಚಿತವಾಗಿ ವೈದ್ಯಕೀಯ ಸ್ಕ್ರೀನಿಂಗ್ ಸೇವೆಗಳು ಮತ್ತು ಪ್ರಥಮ ಚಿಕಿತ್ಸೆಯನ್ನು ನೀಡಬೇಕು. ಇದು ಎಲ್ಲಾ ಆಸ್ಪತ್ರೆಗಳ ಆದ್ಯ ಕರ್ತವ್ಯವಾಗಿದೆ.
ಆ್ಯಂಟಿ-ರೇಬೀಸ್ ಲಸಿಕೆಗಳ ದಾಸ್ತಾನು ಕಡ್ಡಾಯ
2030ರ ವೇಳೆಗೆ ನಾಯಿ ಕಡಿತದಿಂದ ಉಂಟಾಗುವ ರೇಬೀಸ್ ಸಾವುಗಳನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಎಲ್ಲಾ ಸಮಯದಲ್ಲೂ ಆ್ಯಂಟಿ-ರೇಬೀಸ್ ಲಸಿಕೆಗಳು ಮತ್ತು ಇಮ್ಯುನೊಗ್ಲೋಬ್ಯುಲಿನ್‌ಗಳನ್ನು ಕಡ್ಡಾಯವಾಗಿ ದಾಸ್ತಾನು ಇರಿಸಿಕೊಳ್ಳಬೇಕು. ರೇಬೀಸ್ ಅನ್ನು ಈಗಾಗಲೇ ರಾಜ್ಯದಲ್ಲಿ ಅಧಿಸೂಚಿತ ರೋಗವೆಂದು ಘೋಷಿಸಲಾಗಿದ್ದು, ಇಂತಹ ಪ್ರಕರಣಗಳು ವರದಿಯಾದಾಗ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ.
ಚಿಕಿತ್ಸಾ ವೆಚ್ಚ ಮರುಪಾವತಿ ಮತ್ತು ನಿರ್ಲಕ್ಷ್ಯಕ್ಕೆ ಶಿಕ್ಷೆ
ಪ್ರಾಣಿ ಕಡಿತದ ಸಂತ್ರಸ್ತರಿಗೆ ನೀಡಿದ ಚಿಕಿತ್ಸೆಯ ಶುಲ್ಕವನ್ನು ಸರ್ಕಾರವು SAST ಯೋಜನೆಯಡಿಯಲ್ಲಿ ಮರುಪಾವತಿ ಮಾಡುತ್ತದೆ. ಒಂದು ವೇಳೆ, ನಿಗದಿತ ದರದಲ್ಲಿ ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ದೂರು ದಾಖಲಿಸಲಾಗುವುದು. ಅಷ್ಟೇ ಅಲ್ಲದೆ, ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದರೆ, ಸಂಬಂಧಪಟ್ಟ ವೈದ್ಯಾಧಿಕಾರಿ ಅಥವಾ ಸಂಸ್ಥೆಯ ಮುಖ್ಯಸ್ಥರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಅಥವಾ ಆಸ್ಪತ್ರೆಯ ಪರವಾನಗಿಯನ್ನೇ ರದ್ದುಗೊಳಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.