ಸ್ಯಾಂಡಲ್‌ವುಡ್ ನಟಿಗೆ ಲೈಂಗಿಕ ಕಿರುಕುಳ: ಆರೋಪಿ ಉದ್ಯಮಿ ಅರವಿಂದ್ ರೆಡ್ಡಿಗೆ ಜಾಮೀನು
ನಟಿಯ ದೂರಿನ ಅನ್ವಯ, ವಿದೇಶದಿಂದ ಹಿಂದಿರುಗುತ್ತಿದ್ದ ಅರವಿಂದ್ ರೆಡ್ಡಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ವೇಳೆ ಅರವಿಂದ್ ರೆಡ್ಡಿ, ನಟಿ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸ್ಯಾಂಡಲ್‌ವುಡ್ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ, ಬೆದರಿಕೆ ಮತ್ತು ಮಾನಸಿಕ ಹಿಂಸೆ ನೀಡಿದ ಆರೋಪದ ಮೇಲೆ ಬಂಧಿತರಾಗಿದ್ದ ಎವಿಆರ್ ಗ್ರೂಪ್ ಸ್ಥಾಪಕ, ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿಗೆ ಬೆಂಗಳೂರಿನ 46ನೇ ಎಸಿಎಂಎಂ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣವು ಸ್ಯಾಂಡಲ್‌ವುಡ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ನಟಿ ನೀಡಿದ ದೂರಿನ ಪ್ರಕಾರ, 2021ರಲ್ಲಿ ಶ್ರೀಲಂಕಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮಗೆ ಅರವಿಂದ್ ರೆಡ್ಡಿ ಪರಿಚಯವಾಗಿದ್ದರು. ಆರಂಭದಲ್ಲಿ ಸೌಹಾರ್ದಯುತವಾಗಿದ್ದ ಸಂಬಂಧ, ನಂತರದ ದಿನಗಳಲ್ಲಿ ಹದಗೆಟ್ಟಿತ್ತು. ಅರವಿಂದ್ ರೆಡ್ಡಿ ತಮ್ಮನ್ನು ಹಿಂಬಾಲಿಸುವುದು, ನಿರಂತರವಾಗಿ ಕರೆ ಮಾಡಿ ಬೆದರಿಸುವುದು, ಫೋಟೋಗಳನ್ನು ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು ಎಂದು ನಟಿ ಆರೋಪಿಸಿದ್ದರು. ಈ ಮಾನಸಿಕ ಹಿಂಸೆ ತಾಳಲಾರದೆ 2024ರ ಏಪ್ರಿಲ್‌ನಲ್ಲಿ ತಾವು ಆತ್ಮಹತ್ಯೆಗೂ ಯತ್ನಿಸಿದ್ದಾಗಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ಮೊದಲು ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಂತರ ಪ್ರಕರಣವನ್ನು ಗೋವಿಂದರಾಜನಗರ ಠಾಣೆಗೆ ವರ್ಗಾಯಿಸಲಾಗಿತ್ತು.
ಪೊಲೀಸರ ವಿಚಾರಣೆ ಮತ್ತು ಆರೋಪಿಯ ಹೇಳಿಕೆ
ನಟಿಯ ದೂರಿನ ಅನ್ವಯ, ವಿದೇಶದಿಂದ ಹಿಂದಿರುಗುತ್ತಿದ್ದ ಅರವಿಂದ್ ರೆಡ್ಡಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ವೇಳೆ ಅರವಿಂದ್ ರೆಡ್ಡಿ, ನಟಿ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಾವು ನಟಿಗಾಗಿ ಸುಮಾರು 3 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಸೈಟ್, ಮನೆ ಹಾಗೂ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ನಟಿ ತಮ್ಮನ್ನು ಬಿಟ್ಟು ಬೇರೆ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದರು, ತಮಗೆ ಮೋಸ ಮಾಡಿದ್ದಾರೆ ಅವರು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಜಾಮೀನು ಮಂಜೂರು
ವಾದ-ಪ್ರತಿವಾದಗಳನ್ನು ಆಲಿಸಿದ 46ನೇ ಎಸಿಎಂಎಂ ನ್ಯಾಯಾಲಯ, ಅಂತಿಮವಾಗಿ ಅರವಿಂದ್ ವೆಂಕಟೇಶ್ ರೆಡ್ಡಿಗೆ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣವು ಸದ್ಯ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಸತ್ಯಾಸತ್ಯತೆ ಹೊರಬರಬೇಕಿದೆ.