KKRDBಯಿಂದಲೂ RSSಗೆ ದೇಣಿಗೆ; ಶೀಘ್ರ ದಾಖಲೆ ಬಹಿರಂಗ- ಪ್ರಿಯಾಂಕ್ ಖರ್ಗೆ
ಆರ್‌ಎಸ್‌ಎಸ್ ಪಥ ಸಂಚಲನಕ್ಕೆ 3 ಲಕ್ಷ ಜನ ಬರುತ್ತಾರೆ ಎಂದು ಬಿಜೆಪಿ ನಾಯಕರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಈಗ ಎಷ್ಟು ಜನ ಬಂದಿದ್ದಾರೆ, ಚಿತ್ತಾಪುರಕ್ಕೆ ಬರುತ್ತೇವೆಂದ ದೊಡ್ಡ ನಾಯಕರು ಎಲ್ಲಿಗೆ ಹೋಗಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಯಶಸ್ವಿಯಾಗಿ ಪಥ ಸಂಚಲನ ನಡೆಸಿದ ಆರ್‌ಎಸ್‌ಎಸ್ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗಂಭೀರ ಆರೋಪ ಮಾಡಿದ್ದಾರೆ.
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (KKRDB) ಹಣವನ್ನು ಆರ್‌ಎಸ್‌ಎಸ್‌ಗೆ ದೇಣಿಗೆ ನೀಡಿರುವ ಕುರಿತು ಶೀಘ್ರವೇ ದಾಖಲೆ ಬಹಿರಂಗಪಡಿಸುತ್ತೇನೆ. ಆಗ ಆರ್‌ಎಸ್‌ಎಸ್‌ನವರು ಎಷ್ಟು ಲೂಟಿ ಮಾಡಿದ್ದಾರೆ, ಇವರೆಂತಹ ದರೋಡೆಕೋರರು ಎಂಬುದು ತಿಳಿಯಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಚಿತ್ತಾಪುರದಲ್ಲಿ ಪಥ ಸಂಚಲನ ಮಾಡಿದೆವು ಎಂದು ಬೀಗಬೇಕಿಲ್ಲ, ಪಥ ಸಂಚಲನದಿಂದಲೇ ಆರಂಭವಾಗಿದೆ. ಆರ್‌ಎಸ್‌ಎಸ್ ಬಗ್ಗೆ ಹೇಳಲು ಇನ್ನೂ ಅನೇಕ ವಿಷಯಗಳಿವೆ. ಕೆಕೆಆರ್‌ಡಿಬಿಯ ಹಣವು ಆರ್‌ಎಸ್‌ಎಸ್‌ಗೆ ಹೋಗಿರುವ ಬಗ್ಗೆ ದಾಖಲೆಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸುವೆ. ಆಗ ಎಷ್ಟು ದೋಚಿದ್ದಾರೆ ಎಂಬುದು ಜನರಿಗೆ ಸ್ಪಷ್ಟವಾಗುತ್ತದೆ,” ಎಂದು ಹೇಳಿದ್ದಾರೆ.
“ಆರ್‌ಎಸ್‌ಎಸ್ ಪಥ ಸಂಚಲನಕ್ಕೆ 3 ಲಕ್ಷ ಜನ ಬರುತ್ತಾರೆ ಎಂದು ಬಿಜೆಪಿ ನಾಯಕರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಈಗ ಎಷ್ಟು ಜನ ಬಂದಿದ್ದಾರೆ, ಚಿತ್ತಾಪುರಕ್ಕೆ ಬರುತ್ತೇವೆಂದ ದೊಡ್ಡ ನಾಯಕರು ಎಲ್ಲಿಗೆ ಹೋಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಆದಾಯ ತೆರಿಗೆ ತಪ್ಪಿಸುವ ಉದ್ದೇಶ
“ದೇವಾಲಯಗಳ ಹುಂಡಿ ಹಣಕ್ಕೂ ಸರ್ಕಾರ ಲೆಕ್ಕ ಕೇಳುತ್ತದೆ. ಹಾಗಿದ್ದರೆ ಆರ್‌ಎಸ್‌ಎಸ್ ತಮ್ಮ ದೇಣಿಗೆ ಬಗ್ಗೆ ಲೆಕ್ಕ ಕೇಳಬಾರದೆ?, ಯಾರಿಂದ ದೇಣಿಗೆ ಬರುತ್ತದೆ?, ಇವರು ಹೇಗೆ ಆದಾಯ ತೆರಿಗೆ ವಂಚಿಸುತ್ತಿದ್ದಾರೆಂದು ದಾಖಲೆ ಸಮೇತ ಬಹಿರಂಗಪಡಿಸುವೆ. ಇವರಿಗೆ ಯಾರೆಲ್ಲ ದೇಣಿಗೆ ಕೊಡುತ್ತಾರೆ, ಲೆಕ್ಕ ಹೇಗೆ ಕೊಡ್ತಾರೆ ಎಂಬ ವಿಷಯಗಳು ಶೀಘ್ರ ಹೊರಬರಲಿವೆ ಎಂದು ಹೇಳಿದ್ದಾರೆ.
ರೈತರ ಸಮಸ್ಯೆ ಬಗ್ಗೆ ಮೌನ
ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ರಾಜ್ಯ ಸರ್ಕಾರ ಸಮಸ್ಯೆಗಳ ಬಗ್ಗೆ ಗಂಭೀರ ಆಲೋಚನೆಯಲ್ಲಿ ಮುಳುಗಿದ್ದರೆ, ಆರ್‌ಎಸ್‌ಎಸ್ ಮಾತ್ರ ಪಥ ಸಂಚಲನ ಇತ್ಯಾದಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಈ ನೂರು ವರ್ಷದಲ್ಲಿ ಆರ್‌ಎಸ್‌ಎಸ್ ಗಣವೇಷಧಾರಿಗಳು ಎಲ್ಲಿಯಾದರೂ ರೈತರ ಹೋರಾಟಗಳಲ್ಲಿ ಭಾಗವಹಿಸಿದೆಯೇ ಎಂದು ಪ್ರಶ್ನಿಸಿದ ಅವರು, ಕಬ್ಬಿಗೆ ಎಫ್ಆರ್‌ಪಿ ನಿಗದಿ ಮಾಡಿ ಎಂದು ಏಕೆ ಹೋರಾಟ ಮಾಡಲ್ಲ ಎಂದು ಕಿಡಿಕಾರಿದ್ದಾರೆ.
ಮೋಹನ್ ಭಾಗವತ್‌ಗೆ ಪ್ರಶ್ನೆ
ಇತ್ತೀಚೆಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಅವರು, ನಮ್ಮ ಸಂಸ್ಥೆ ಕಾರ್ಯಕರ್ತರ ದೇಣಿಗೆಯಿಂದಲೇ ಕಾರ್ಯನಿರ್ವಹಿಸುತ್ತಿದೆ ಎಂಬ ಹೇಳಿಕೆಯನ್ನೂ ಖರ್ಗೆ ಪ್ರಶ್ನಿಸಿದ್ದರು. ದೇಣಿಗೆ ನೀಡುವವರು ಯಾರು?, ಅವರು ಹೇಗೆ ಗುರುತಿಸಿಕೊಳ್ಳುತ್ತಾರೆ, ಲೆಕ್ಕಪತ್ರ ಎಲ್ಲಿದೆ? ಎಂಬುದಕ್ಕೆ ಉತ್ತರ ಕೊಡಿ ಎಂದು ಭಾಗವತ್ ಅವರನ್ನು ಒತ್ತಾಯಿಸಿದ್ದರು.