ಬೆಂಗಳೂರಿನಲ್ಲಿ ಡೆಂಗ್ಯೂ ಸಾವು: ಬಿಬಿಎಂಪಿ ಡೆತ್ ಆಡಿಟ್‌ನಿಂದ ದೃಢ !

ಬೆಂಗಳೂರಿನಲ್ಲಿ ಡೆಂಗ್ಯೂವಿನಿಂದ ಯುವಕ ಮೃತಪಟ್ಟಿರುವುದು ದೃಢಪಟ್ಟಿದ್ದು, ಇದು ಬೆಂಗಳೂರಿನಲ್ಲಿ ಈ ವರ್ಷದ ಮೊದಲ ಡೆಂಗ್ಯೂ ಸಾವು ಪ್ರಕರಣ ಎನ್ನಲಾಗಿದೆ.

Update: 2024-06-29 12:44 GMT
ಡೆಂಗ್ಯೂ

ಬೆಂಗಳೂರಿನಲ್ಲಿ ಡೆಂಗ್ಯೂವಿನಿಂದ ಅಭಿಲಾಷ್ (24) ಎನ್ನುವ ಯುವಕ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಬಿಬಿಎಂಪಿಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಡೆಂಗ್ಯೂವಿನಿಂದ ಇಬ್ಬರು ಸಾವನ್ನಪ್ಪಿರುವ ಬಗ್ಗೆ ಶುಕ್ರವಾರ ಅನುಮಾನ ವ್ಯಕ್ತವಾಗಿತ್ತು. ಆದರೆ, ಡೆಂಗ್ಯೂ ಸೋಂಕಿನಿಂದಲೇ ಮೃತಪಟ್ಟಿದ್ದಾರೆಯೇ ಎನ್ನುವುದು ಖಚಿತವಾಗಿರಲಿಲ್ಲ. ಹೀಗಾಗಿ, ಈ ಸಂಬಂಧ ಬಿಬಿಎಂಪಿಯು ಡೆತ್ ಆಡಿಟ್ ನಡೆಸಿತ್ತು. ಇದೀಗ ಇಬ್ಬರಲ್ಲಿ ಒಬ್ಬರು ಡೆಂಗ್ಯೂವಿನಿಂದ ಸಾವನ್ನಪ್ಪಿರುವುದು ಖಚಿತವಾಗಿದೆ.

ಈ ಸಂಬಂಧ ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ಸೂರಳ್ಕರ್ ವಿಕಾಸ್ ಕಿಶೋರ್ ಅವರು, ʻಡೆಂಗ್ಯೂವಿನಿಂದ ಸಾವನ್ನಪ್ಪಿರುವ ಯುವಕನಿಗೂ ಆರೋಗ್ಯದ ಸಮಸ್ಯೆಗಳು ಇದ್ದವು. ಆದರೆ, ಡೆಂಗ್ಯೂ ಲಕ್ಷಣಗಳು ಕಾಣಿಸಿಕೊಂಡಿತ್ತು ಹಾಗೂ ಡೆಂಗ್ಯೂ ಸೋಂಕು ಇರುವುದು ಸಹ ದೃಢಪಟ್ಟಿದೆʼ ಎಂದರು.

ಇನ್ನು ನೀರಜಾ ದೇವಿ (80) ವರ್ಷದ ಮಹಿಳೆಯೊಬ್ಬರು ಶುಕ್ರವಾರ ಮೃತಪಟ್ಟಿದ್ದು, ಅವರು ಡೆಂಗ್ಯೂವಿನಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿತ್ತು. ಅವರಿಗೆ ಕ್ಯಾನ್ಸರ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಸಹ ಇದ್ದವು. ಹೀಗಾಗಿ, ಇದನ್ನು ಸಂಭವನೀಯ (Incidental dengue case) ಪ್ರಕರಣ ಎಂದು ಗುರುತಿಸಲಾಗಿದೆ. ಅವರಿಗೆ ಡೆಂಗ್ಯೂ ಸೋಂಕಿನ ಲಕ್ಷಣಗಳು ಸಹ ಇರಲಿಲ್ಲ. ಪ್ಲೇಟ್ಲೆಲೆಟ್‌ ಸಹ ನಿಯಂತ್ರಣ ಪ್ರಮಾಣದಲ್ಲಿತ್ತು. ಡೆಂಗ್ಯೂ ಪಾಸಿಟಿವ್ ಇತ್ತು. ಹೀಗಾಗಿ, ಇದನ್ನು ಸಂಭವನೀಯ ಡೆಂಗ್ಯೂ ಎಂದು ಗುರುತಿಸಲಾಗಿದೆ. ಅಂದರೆ ಸಾವಿಗೆ ಡೆಂಗ್ಯೂ ಮುಖ್ಯ ಕಾರಣವೆಂದು ಈ ಪ್ರಕರಣದಲ್ಲಿ ಪರಿಗಣಿಸಲು ಸಾಧ್ಯವಿಲ್ಲʼ ಎಂದು ಸೂರಳ್ಕರ್ ವಿಕಾಸ್ ಕಿಶೋರ್ ಹೇಳಿದರು.

ಬೆಂಗಳೂರಿನಲ್ಲಿ ಇಲ್ಲಿಯವರೆಗೆ 1,230 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಆದರೆ, ಇಲ್ಲಿಯವರೆಗೆ ಡೆಂಗ್ಯೂವಿನಿಂದ ಸಾವನ್ನಪ್ಪಿರುವುದು ವರದಿಯಾಗಿಲ್ಲ. ಜೂನ್‌  28ರ  ಪ್ರಕರಣದೊಂದಿಗೆ ಬೆಂಗಳೂರಿನಲ್ಲಿ ಅಧಿಕೃತವಾಗಿ ಡೆಂಗ್ಯೂ ಮೊದಲ ಸಾವು ಸಂಭವಿಸಿದೆ.

Tags:    

Similar News