ಮಡಿಕೇರಿ ರಿಯಾಸ್‌ ಮೌಲವಿ ಹತ್ಯೆ ಪ್ರಕರಣ | ಮೂವರು ಆರ್‌ಎಸ್‌ಎಸ್ ಕಾರ್ಯಕರ್ತರು ಖುಲಾಸೆ

ದಕ್ಷಿಣಕನ್ನಡದ ನೆರೆ ಜಿಲ್ಲೆಯಾದ ಕಾಸರಗೋಡಿನಲ್ಲಿ ನಡೆದ ಈ ಕೊಲೆ ಪ್ರಕರಣವು ಕರಾವಳಿ ಜಿಲ್ಲೆಗಳಲ್ಲೂ ಸದ್ದು ಮಾಡಿತ್ತು.

Update: 2024-03-30 10:15 GMT
ಕೊಲೆಯಾದ ರಿಯಾಸ್‌ ಮೌಲವಿ

ಕರಾವಳಿ ಕರ್ನಾಟಕ ಮತ್ತು ಕೇರಳದ ಕಾಸರಗೋಡು ಭಾಗದಲ್ಲಿ ಉದ್ವಿಗ್ನತೆಗೆ ಕಾರಣವಾಗಿದ್ದ ಮದ್ರಸಾ ಅಧ್ಯಾಪಕ ಮಹಮ್ಮದ್ ರಿಯಾಸ್ ಮೌಲವಿ ಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ಕಾಸರಗೋಡು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ಶನಿವಾರ ಖುಲಾಸೆಗೊಳಿಸಿದೆ.

ಮೂಲತಃ ಕರ್ನಾಟಕದ ಕೊಡಗಿನ ಮಡಿಕೇರಿಯವರಾಗಿದ್ದ ಮಹಮ್ಮದ್ ರಿಯಾಸ್ ಮೌಲವಿ ಅವರು ಕಾಸರಗೋಡಿನ ಚೂರಿ ಎಂಬಲ್ಲಿ ಮದ್ರಸಾ ಅಧ್ಯಾಪಕರಾಗಿದ್ದರು. ಅವರನ್ನು ಮಾರ್ಚ್ 20, 2017 ರಂದು ಮುಂಜಾನೆ ದುಷ್ಕರ್ಮಿಗಳ ತಂಡವು ಮಾರಕಾಯುಧಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿತ್ತು.

ಹತ್ಯೆಯ ನಂತರ ಕಾಸರಗೋಡು ಜಿಲ್ಲೆಯ ಹಲವೆಡೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕಾಸರಗೋಡು ದಕ್ಷಿಣಕನ್ನಡದ ನೆರೆಯ ಜಿಲ್ಲೆಯಾದ್ದರಿಂದ ಹಾಗೂ ಮೃತ ಅಧ್ಯಾಪಕ ಮಡಿಕೇರಿ ಮೂಲದವರಾಗಿದ್ದರಿಂದ ಕೊಲೆ ಪ್ರಕರಣವು ಈ ಜಿಲ್ಲೆಗಳಲ್ಲೂ ಸದ್ದು ಮಾಡಿತ್ತು. 

ಕಾಸರಗೋಡಿನಲ್ಲಿ ಕೋಮುಗಲಭೆ ಸೃಷ್ಟಿಸಲು ಯೋಜಿಸಿ ಈ ಕೊಲೆ ಮಾಡಲಾಗಿದೆ ಎಂದು ಹೇಳಿದ್ದ ವಿಶೇಷ ತನಿಖಾ ತಂಡವು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡಿನ ಕೇಲುಗುಡ್ಡೆಯ ಆರ್‌ ಎಸ್ಎಸ್ ಕಾರ್ಯಕರ್ತರಾದ ಅಜೇಶ್ ಅಲಿಯಾಸ್ ಅಪ್ಪು, ನಿತಿನ್ ಕುಮಾರ್ ಮತ್ತು ಅಖಿಲೇಶ್ ಅಲಿಯಾಸ್ ಅಖಿಲ್ ಅವರನ್ನು ಬಂಧಿಸಿತ್ತು. ಕಳೆದ ಏಳು ವರ್ಷಗಳಿಂದ ಬಂಧನದಲ್ಲಿದ್ದ ಆರೋಪಿಗಳನ್ನು ನ್ಯಾಯಾಲಯವು ಇಂದು (ಮಾ. 30) ಖುಲಾಸೆಗೊಳಿಸಿದೆ.

90 ದಿನಗಳಲ್ಲಿ ಪ್ರಕರಣದ ಚಾರ್ಜ್‌ ಶೀಟ್ ಸಲ್ಲಿಸಲಾಗಿದ್ದರಿಂದ ಆರೋಪಿಗಳು ಜಾಮೀನು ಪಡೆದಿರಲಿಲ್ಲ. 2017 ರಿಂದ, ಮೂವರು ಆರೋಪಿಗಳು ಯಾವುದೇ ಜಾಮೀನು ಇಲ್ಲದೆ ಜೈಲಿನಲ್ಲಿದ್ದರು.

ಪ್ರಕರಣಕ್ಕೆ ಸಂಬಂಧಪಟ್ಟoತೆ 137 ಮಂದಿಯನ್ನು ವಿಚಾರಣೆ ನಡೆಸಲಾಗಿತ್ತು. ಅದರಲ್ಲಿ 100 ಮಂದಿಯನ್ನು ಸಾಕ್ಷಿಯಾಗಿ ಗುರುತಿಸಲಾಗಿತ್ತು. ಒಂದು ಸಾವಿರ ಪುಟದ ಚಾರ್ಜ್ ಶೀಟ್ ಸಲ್ಲಿಸಿದ್ದ ತನಿಖಾ ತಂಡವು, 45 ದಾಖಲೆ , 50 ವಸ್ತ್ರ , ಮಾರಕಾಯುಧಗಳನ್ನು ಆರೋಪ ಪಟ್ಟಿಯಲ್ಲಿ ಸೇರಿಸಿತ್ತು.

Tags:    

Similar News