ರೈತರ ನೆರವಿಗೆ ಸಹಾಯವಾಣಿಗೆ ಆರಂಭಿಸಿದ ಬಮೂಲ್​, ಮೊದಲ ಕರೆ ಸ್ವೀಕರಿಸಿ ಭರವಸೆ ನೀಡಿದ ಡಿ.ಕೆ. ಸುರೇಶ್

ಸಹಾಯವಾಣಿಯನ್ನು ಉದ್ಘಾಟಿಸಿದ ನಂತರ, ಡಿ.ಕೆ. ಸುರೇಶ್ ಅವರು ವಿತರಕರೊಬ್ಬರ ಕರೆಯನ್ನು ಸ್ವೀಕರಿಸಿ ಅವರ ಅಹವಾಲನ್ನು ಆಲಿಸಿದರು.;

Update: 2025-08-15 14:04 GMT

ಹಾಲು ಉತ್ಪಾದಕ ರೈತರು ಮತ್ತು ನಂದಿನಿ ಉತ್ಪನ್ನಗಳ ವಿತರಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವ ಉದ್ದೇಶದಿಂದ ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ನೂತನ ಸಹಾಯವಾಣಿಯನ್ನು ಆರಂಭಿಸಿದೆ. ಬಮೂಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ಸ್ವತಃ ಮೊದಲ ಕರೆ ಸ್ವೀಕರಿಸುವ ಮೂಲಕ ಈ ಜನಸ್ನೇಹಿ ಸೇವೆಗೆ ಶುಕ್ರವಾರ ಚಾಲನೆ ನೀಡಿದರು.

ನಗರದ ಡೈರಿ ವೃತ್ತದಲ್ಲಿರುವ ಬಮೂಲ್ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಹಾಯವಾಣಿಯನ್ನು ಉದ್ಘಾಟಿಸಿದ ನಂತರ, ಡಿ.ಕೆ. ಸುರೇಶ್ ಅವರು ವಿತರಕರೊಬ್ಬರ ಕರೆಯನ್ನು ಸ್ವೀಕರಿಸಿ ಅವರ ಅಹವಾಲನ್ನು ಆಲಿಸಿದರು.

ಹಾಲು ಪೂರೈಕೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ವಿತರಕರು ದೂರಿದಾಗ, ಅದಕ್ಕೆ ತಕ್ಷಣವೇ ಸ್ಪಂದಿಸಿದ ಸುರೇಶ್ ಅವರು, "ಇನ್ನು 5 ಗಂಟೆಯೊಳಗೆ ನಿಮಗೆ ಹಾಲು ಪೂರೈಸಲು ಅಗತ್ಯ ವ್ಯವಸ್ಥೆ ಮಾಡಲಾಗುವುದು. ಮುಂದಿನ ಒಂದು ತಿಂಗಳ ಒಳಗಾಗಿ ನಿಮಗೆ ಪ್ರತಿದಿನ ಸರಿಯಾದ ಸಮಯಕ್ಕೆ ಹಾಲು ತಲುಪಲಿದೆ, ಇದು ನನ್ನ ಭರವಸೆ" ಎಂದು ಹೇಳಿದರು.

"ನೀವು ಈಗ ದಿನಕ್ಕೆ 10 ಲೀಟರ್ ಹಾಲು ಮಾರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಮಾರಾಟ ಮಾಡಲು ಪ್ರಯತ್ನಿಸಿ. ನಿಮಗೆ ಬೇಕಾದಷ್ಟು ಹಾಲು ಮತ್ತು ಇತರ ಉತ್ಪನ್ನಗಳನ್ನು ನಾವು ಪೂರೈಸುತ್ತೇವೆ. ಕೇವಲ ಹಾಲಿನ ಮೇಲೆ ಗಮನ ಕೊಡದೆ, ನಂದಿನಿ ತುಪ್ಪ, ಸಿಹಿ ತಿನಿಸುಗಳಂತಹ ಇತರ ಉತ್ಪನ್ನಗಳ ಮಾರಾಟದತ್ತಲೂ ಹೆಚ್ಚು ಗಮನಹರಿಸಿ" ಎಂದು ಸಲಹೆ ನೀಡಿ, ಅವರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.

Tags:    

Similar News