ನೀರಿನ ಹಾಹಾಕಾರ | ಬೆಂಗಳೂರಿನ ಕೊಳವೆಬಾವಿ ನೀರು ಪೂರೈಕೆ ಟ್ಯಾಂಕರ್ ಸರ್ಕಾರದ ವಶಕ್ಕೆ: ಡಿಸಿಎಂ ಡಿ ಕೆ ಶಿವಕುಮಾರ್
ಬೆಂಗಳೂರಿನಲ್ಲಿ ತೀವ್ರಗೊಂಡಿರುವ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕೊಳವೆಬಾವಿ ನೀರು ಪೂರೈಸುವ ಟ್ಯಾಂಕರ್ ಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.;
By : The Federal
Update: 2024-03-02 09:29 GMT
ಬೆಂಗಳೂರು, ಮಾ. 02: "ಬೆಂಗಳೂರಿನ ನೀರಿನ ಅಭಾವ ನೀಗಿಸಲು ಕೊಳವೆಬಾವಿ ನೀರು ಪೂರೈಸುವ ಟ್ಯಾಂಕರ್ ಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲಾಗುವುದು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಸದಾಶಿವನಗರದ ಬಳಿ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಅವರು, "ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಆಹಾಕಾರ ಎದುರಾಗಿದೆ. ಪ್ರತಿನಿತ್ಯ ಬಿಡಬ್ಲ್ಯೂಎಸ್ಎಸ್ ಬಿ ಹಾಗೂ ಪಾಲಿಕೆ ಅಧಿಕಾರಿಗಳು ಸಭೆ ಮಾಡುತ್ತಿದ್ದಾರೆ.
ಕುಡಿಯುವ ನೀರಿನ ದಂಧೆ ತಡೆಯಲು ಕೊಳವೆಬಾವಿ ಹಾಗೂ ಅವುಗಳಿಂದ ನೀರು ಪೂರೈಕೆ ಮಾಡುವ ಟ್ಯಾಂಕರ್ ಗಳು ಮಾ.7 ರ ಒಳಗಾಗಿ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದೇವೆ.
ಕೊಳವೆ ಬಾವಿಗಳ ಮೂಲಕ ಬೆಂಗಳೂರಿನ ಕುಡಿಯುವ ನೀರಿನ ಅಭಾವ ನೀಗಿಸುತ್ತೇವೆ. ಈ ವಿಚಾರವಾಗಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ಕರೆಯಲಾಗಿದೆ. ಇನ್ನು ನನ್ನ ಇಲಾಖೆ ಅನುದಾನದಿಂದ ಬೆಂಗಳೂರಿನ ಎಲ್ಲಾ ಕ್ಷೇತ್ರಗಳ ಕುಡಿಯುವ ನೀರಿನ ಪೂರೈಕೆಗೆ ತಲಾ 10 ಕೋಟಿ ರೂ. ನೀಡಲಾಗಿದೆ ಎಂದರು.