ಬಣಕಲ್ ಸರಣಿ ಅಪಘಾತ | ಒಂದೇ ಕುಟುಂಬದ ನಾಲ್ವರು ಬಲಿ!
ಲಾರಿಗೆ ಓಮ್ನಿ ಮತ್ತು ಆಲ್ಟೋ ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸದಸ್ಯರು ಸಾವನ್ನಪ್ಪಿದ್ದು, ಮೂರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.;
ಚಿಕ್ಕಮಗಳೂರು: ಓಮ್ನಿ ಮತ್ತು ಆಲ್ಟೋ ಕಾರು ಲಾರಿಗೆ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಸದಸ್ಯರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ನಡೆದಿದೆ.
ಮೃತರೆಲ್ಲರು ಚಿತ್ರದುರ್ಗ ಮತ್ತು ದಾವಣಗೆರೆ ಮೂಲದವರು ಎಂದು ಹೇಳಲಾಗುತ್ತಿದ್ದು, ಓಮ್ನಿ ಗಾಡಿಯಲ್ಲಿ ಇದ್ದವರು ಧರ್ಮಸ್ಥಳ ಯಾತ್ರೆ ಮುಗಿಸಿ ವಾಪಾಸ್ ಬರುತ್ತಿದ್ದರು ಎನ್ನಲಾಗಿದೆ. ವಾಹನವೊಂದನ್ನು ಓವರ್ ಟೇಕ್ ಮಾಡಿ ಸಾಗುವಾಗ ಎದುರಿನಿಂದ ಬರುತ್ತಿದ್ದ ಲಾರಿಗೆ ಓಮ್ನಿ ಕಾರು ಢಿಕ್ಕಿ ಹೊಡೆದಿದ್ದು, ಹಿಂದಿನಿಂದ ಬರುತ್ತಿದ್ದ ಅದೇ ಕುಟುಂಬದ ಆಲ್ಟೋ ಕಾರು ಕೂಡ ಓಮ್ಮಿಯ ಹಿಂಬದಿಗೆ ಢಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಓಮ್ನಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಓಮ್ನಿಯಲ್ಲಿದ್ದ ಮೂವರು ಪುರುಷರು, ಓರ್ವ ಮಹಿಳೆ ಸಾವನ್ನಪ್ಪಿದ್ದು, ಸಾವನ್ನಪ್ಪಿರುವವರ ಗುರುತು ಇನ್ನೂ ಪತ್ತೆಯಾಗಿಲ್ಲ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು ಮೂವರೂ ಸ್ಥಿತಿ ಕೂಡ ಗಂಭೀರವಾಗಿದೆ ಎನ್ನಲಾಗಿದೆ. ಅಪಘಾತದ ಲಾರಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. ಮೂಡಿಗೆರೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.