Sabarmati Ashram: ಸಬರಮತಿ ಆಶ್ರಮ ನವೀಕರಣ ಯೋಜನೆ ; ಗಾಂಧೀಜಿ ತತ್ವಗಳಿಗೆ ಬೆಲೆಯೆಲ್ಲಿದೆ?
2019ರಲ್ಲಿ ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ಅಂಗವಾಗಿ ಅಕ್ಟೋಬರ್ 2 ರಂದು ಪ್ರಧಾನಿಯಾಗಿ ಮೋದಿ ಆಶ್ರಮಕ್ಕೆ ಭೇಟಿ ನೀಡಿದ್ದಾಗ ಆಶ್ರಮವನ್ನು ಪುನರಾಭಿವೃದ್ಧಿ ಮಾಡುವ ಪ್ರಸ್ತಾಪ ಮತ್ತೆ ಬಂದಿತು
ಅಹ್ಮದಾಬಾದ್‌ನ ಮಹಾತ್ಮ ಗಾಂಧೀಜಿಯವರ ಸಬರಮತಿ ಆಶ್ರಮ ನವೀಕರಣಕ್ಕೆ ಗುಜರಾತ್ ಸರ್ಕಾರದ ಮುಂದಾಗಿದೆ. ಆದರೆ ಯೋಜನೆಯ ಆಡಂಬರ ನೋಡಿದ ಗಾಂಧಿವಾದಿಗಳು ದಿಗ್ಭ್ರಮೆಗೆ ಒಳಗಾಗಿದ್ದಾರೆ. ಯಾಕೆಂದರೆ ಅಭಿವೃದ್ಧಿ ಎಷ್ಟರ ಮಟ್ಟಿಗೆ ಇದೆ ಎಂದರೆ ಗಾಂಧಿಯವರು ಪ್ರತಿಪಾದಿಸಿದ ತತ್ವಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿದೆ. ಪ್ರವಾಸೋದ್ಯಮ ರೀತಿಯಲ್ಲಿ 1200 ಕೋಟಿ ರೂಪಾಯಿಯ ಬೃಹತ್ ಯೋಜನೆ.
ನವೀಕರಣ ಕೆಲಸ ಆರಂಭಗೊಂಡ ಬಳಿಕ ದಂಡಿ ಸೇತುವೆ ಮೂಲಕ ಪ್ರಮುಖ ಪ್ರವೇಶದ್ವಾರಕ್ಕೆ ಸಂಪರ್ಕಿಸುವ 800 ಮೀಟರ್ ರಸ್ತೆಯನ್ನು ಶಾಶ್ವತವಾಗಿ ಮುಚ್ಚಲಾಗುವುದು ಎಂದು ಅಹಮದಾಬಾದ್ ನಗರ ಪೊಲೀಸರು ಪ್ರಕಟಿಸಿದ್ದಾರೆ. ಯೋಜನೆಯ ಮೇಲ್ವಿಚಾರಣೆ ನಡೆಸುವ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ) ಅಡಿಯಲ್ಲಿ ರಚಿಸಿರುವ ಸಬರಮತಿ ಆಶ್ರಮ ಪುನಃಸ್ಥಾಪನೆ ಮತ್ತು ಪುನರಾಭಿವೃದ್ಧಿ ಯೋಜನಾ ಸಮಿತಿಯ ಮನವಿ ಮೇರೆಗೆ ಈ ನಿರ್ಧಾರವನ್ನು ಪೊಲೀಸರು ತೆಗೆದುಕೊಂಡಿದ್ದಾರೆ.
ಗಾಂಧಿವಾದಿಗಳ ಆಕ್ರೋಶವೇಕೆ?
ರಸ್ತೆ ಮುಚ್ಚಲು ಆದೇಶಿಸಿರುವ ಪೊಲೀಸ್ ಸೂಚನೆಯಲ್ಲಿ, ಯಾರಾದರೂ ಈ ಕೆಲಸಕ್ಕೆ ಅಡ್ಡಿಪಡಿಸಿದರೆ ಅವರನ್ನು ದಂಡನೆಗೆ ಒಳಪಡಿಸಲಾಗುವುದು ಎಂದಿದೆ. ಇದು ಬಲಪ್ರಯೋಗ ಎನ್ನುತ್ತಾರೆ ಗಾಂಧಿವಾದಿಗಳು. ಯಾಕೆಂದರೆ ಇದೊಂದು ಐತಿಹಾಸಿಕ ಬಂಧ ಹೊಂದಿರುವ ರಚನೆ. .
ಹಿರಿಯ ಗಾಂಧಿವಾದಿ ಮತ್ತು ಸರ್ವೋದಯ ಚಳವಳಿಯ ನಾಯಕ ದಿವಂಗತ ಚುನಿಭಾಯ್ ವೈದ್ಯ ಅವರ ಮೊಮ್ಮಗಳು ಮುದಿತಾ ವಿದ್ರೋಹಿ ಅವರು ರಸ್ತೆ ಮುಚ್ಚುವ ನಿರ್ಧಾರವನ್ನೇ ಗಾಂಧಿ ವಾದಕ್ಕೆ ಮಾಡುವ ಅಪಮಾನ ಎಂದು ಹೇಳಿದ್ದಾರೆ.
ಆಶ್ರಮದಿಂದ ಕೇವಲ 1 ಕಿ.ಮೀ ದೂರದಲ್ಲಿರುವ ದಂಡಿ ಸೇತುವೆ ಒಂದು ಅಪ್ರತಿಮ ರಚನೆ. ಮಹಾತ್ಮ ಗಾಂಧಿ ದಂಡಿ ಸತ್ಯಾಗ್ರಹ ಆರಂಭಿಸುವ ಮೊದಲು ಜತೆಗಿದ್ದ 75 ಸ್ವಯಂಸೇವಕರ ಜತೆ ಆಶ್ರಮ ಬಿಟ್ಟು ದಾಟಿ ಬಂದ ಮೊದಲ ಸೇತುವೆ ಇದು" ಎಂದು ವಿದ್ರೋಹಿ ʼದ ಫೆಡರಲ್ʼಗೆ ತಿಳಿಸಿದ್ದಾರೆ.
"ಇದೇ ಕಾರಣಕ್ಕೆ ನಾವು ಅಭಿವೃದ್ಧಿ ಯೋಜನೆ ಬಗ್ಗೆ ಭೀತಿಯಲ್ಲಿದ್ದೇವೆ. ಈ ಯೋಜನೆಯು ಈಗಷ್ಟೇ ಪ್ರಾರಂಭವಾಗಿದೆ. ಅದು ಈಗಾಗಲೇ ಗಾಂಧಿ ಮತ್ತು ಅವರ ಆಶ್ರಮದ ಇತಿಹಾಸ ಮತ್ತು ತತ್ವಗಳನ್ನು ಹಾಳುಮಾಡುತ್ತಿದೆ. ಆಶ್ರಮಕ್ಕೆ ದುರಸ್ತಿ ಮತ್ತು ಕಾಯಕಲ್ಪದ ಅಗತ್ಯವಿತ್ತು ಆದರೆ ಬಾಪು ಅವರ ಸರಳತೆಯ ಮಂತ್ರವನ್ನು ಮೀರುವ ವೆಚ್ಚದಲ್ಲಿ ಬೇಕಿರಲಿಲ್ಲ" ಎಂದು ಅವರು ಹೇಳಿದ್ದಾರೆ.
ಮೋದಿ ಬೇಡ ಅಂದಿದ್ದ ಯೋಜನೆ
ಆಶ್ರಮ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ನವೀಕರಿಸುವ ಯೋಜನೆಯನ್ನು ಮೊದಲು ಎಎಂಸಿ 2009ರಲ್ಲಿ ಪ್ರಸ್ತಾಪಿಸಿತ್ತು. ನವೀಕರಣದ ಅಂದಾಜು ವೆಚ್ಚವನ್ನು 400 ಕೋಟಿ ರೂಪಾಯಿಗೆ ನಿಗದಿಪಡಿಸಲಾಗಿತ್ತು. ಆಗ ಈ ಯೋಜನೆಯ ನೇತೃತ್ವವನ್ನು ದಿವಂಗತ ವಾಸ್ತುಶಿಲ್ಪಿ ಬಿ.ವಿ.ದೋಶಿ ವಹಿಸಬೇಕಿತ್ತು.
ಇದು ಎರಡು ಹಂತಗಳಿಂತ ಕೂಡಿತ್ತು. ಮೊದಲನೆಯದು ಆಶ್ರಮ ರಸ್ತೆಯ ಪ್ರಸ್ತಾವಿತ ಅಭಿವೃದ್ಧಿ ಮತ್ತು ಆಶ್ರಮವನ್ನು ಹೊಸ ರಾಜ್ಯ ಹೆದ್ದಾರಿಯೊಂದಿಗೆ ಸಂಪರ್ಕಿಸುವುದು.
ಎರಡನೇ ಹಂತದಲ್ಲಿ ದಂಡಿ ಸೇತುವೆಯ ಪುನರುಜ್ಜೀವನ. ಆಶ್ರಮದ ಆವರಣದ ಸುಧಾರಣೆ ಮತ್ತು ಆಶ್ರಮದ ಸುತ್ತಲಿನ ಕೊಳೆಗೇರಿ ಜನರ ಜೀವನ ಪರಿಸ್ಥಿತಿಗಳನ್ನು ಸುಧಾರಿಸುವುದಾಗಿತ್ತು. ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ಅಂದಿನ ಗುಜರಾತ್ ಸರ್ಕಾರ ಈ ಯೋಜನೆಯನ್ನು ತಿರಸ್ಕರಿಸಿತ್ತು.
"ಗಾಂಧಿ ತತ್ವದ ಸಮಾಜವಾದ ದೃಷ್ಟಿಯಲ್ಲಿ ನೋಡುವ ಕಾರಣ ಈ ಯೋಜನೆಯನ್ನು ವಾಣಿಜ್ಯ ದೃಷ್ಟಿಕೋನದಿಂದ ಪರಿಗಣಿಸಲಾಗುವುದಿಲ್ಲ,ʼʼ ಎಂದು ಸರ್ಕಾರ ಕಾರಣ ಕೊಟ್ಟಿತ್ತು ಎಂಬುದಾಗಿ ಆ ಯೋಜನೆಯ ಭಾಗವಾಗಿದ್ದ ವಾಸ್ತುಶಿಲ್ಪಿಯೊಬ್ಬರು ʼದ ಫೆಡರಲ್ʼಗೆ ಹೇಳಿದ್ದಾರೆ.
ಯೋಜನಾ ವೆಚ್ಚ 1,200 ಕೋಟಿ ರೂಪಾಯಿಗೆ ಏರಿಕೆ
2019ರಲ್ಲಿ ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ಅಂಗವಾಗಿ ಅಕ್ಟೋಬರ್ 2 ರಂದು ಪ್ರಧಾನಿಯಾಗಿ ಮೋದಿ ಆಶ್ರಮಕ್ಕೆ ಭೇಟಿ ನೀಡಿದ್ದಾಗ ಆಶ್ರಮವನ್ನು ಪುನರಾಭಿವೃದ್ಧಿ ಮಾಡುವ ಪ್ರಸ್ತಾಪ ಮತ್ತೆ ಬಂದಿತು. ಆಯ್ದ ಟ್ರಸ್ಟಿಗಳೊಂದಿಗಿನ ಸಭೆಯ ನಂತರ ಮೋದಿ 287 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಿದ್ದರು. ಅಹ್ಮದಾಬಾದ್ ಮೂಲದ ವಾಸ್ತುಶಿಲ್ಪಿ ಬಿಮಲ್ ಪಟೇಲ್ ಅವರ ಸಂಸ್ಥೆಗೆ ಈ ಯೋಜನೆಯನ್ನು ನೀಡಲಾಗಿತ್ತು.
2021ರಲ್ಲಿ ಪಟೇಲ್ ಅವರ ಸಂಸ್ಥೆಯು 1,200 ಕೋಟಿ ರೂ.ಗಳ ಪರಿಷ್ಕೃತ ಬಜೆಟ್‌ನೊಂದಿಗೆ ಪರಿಷ್ಕೃತ ಯೋಜನೆಯನ್ನು ಮೋದಿ ಸರ್ಕಾರಕ್ಕೆ ಸಲ್ಲಿಸಿತ್ತು.
ಕೊಳೆಗೇರಿ ನೆಲಸಮ, ಪುನರ್ವಸತಿ ಇಲ್ಲ
ಗಾಂಧಿ ಆಶ್ರಮ ಸ್ಮಾರಕ ಮತ್ತು ಆವರಣ ಅಭಿವೃದ್ಧಿ ಯೋಜನೆ ಎಂದು ಹೆಸರಿಸಲಾದ ಪರಿಷ್ಕೃತ ಯೋಜನೆಯಲ್ಲಿ ಆಶ್ರಮದ ಅಸ್ತಿತ್ವದಲ್ಲಿರುವ ಆವರಣಕ್ಕೆ 55 ಎಕರೆ ಭೂಮಿಯನ್ನು ಸೇರಿಸಲಾಗಿದೆ. ಇದಕ್ಕಾಗಿ ಕೊಳೆಗೇರಿ ಮತ್ತು ಸಂಕೀರ್ಣದ ಸುತ್ತಲಿನ ಕೆಲವು ಪಾರಂಪರಿಕ ಮತ್ತು ಖಾಸಗಿ ಕಟ್ಟಡಗಳನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ .
ಗಣ್ಯರಿಗೆ ಸುರಕ್ಷಿತ ಮನೆ, 4,000 ಮರಗಳ ಉದ್ಯಾನ, ಪ್ರತ್ಯೇಕ ಹುಲ್ಲುಹಾಸು, ಫುಡ್ ಪಾರ್ಕ್, ಕೆಫೆಟೇರಿಯಾ, 200 ಕಾರುಗಳ ಪಾರ್ಕಿಂಗ್, ಮಳೆ ನೀರು ಕೊಯ್ಲು ಕೊಳ, ಸ್ಮಾರಕಗಳ ಮಾರಾಟ ಅಂಗಡಿಗಳು, ಕಾರ್ಯಾಗಾರ ಸ್ಥಳ ಮತ್ತು ಹೊಸ ಭವ್ಯ ಪ್ರವೇಶದ್ವಾರ ನಿರ್ಮಿಸಲು ಪರಿಷ್ಕೃತ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ.
263 ಗಾಂಧಿ ಕುಟುಂಬಗಳ ಒಕ್ಕಲೆಬ್ಬಿಸುವಿಕೆ
ಆಶ್ರಮದಲ್ಲಿ ಫುಡ್ ಕೋರ್ಟ್ ಮತ್ತು ಪಾರ್ಕಿಂಗ್ ಜಾಗ ಎಲ್ಲವನ್ನೂ ನಿರ್ಮಿಸಲಾಗುತ್ತಿದೆ. ಎಲ್ಲದಕ್ಕೂ ಐಷಾರಾಮಿ ಸ್ಪರ್ಷ.ಗೆ ಸರಳತೆಗೆ ಇನ್ನೊಂದು ಹೆಸರಿನಂತಿದ್ದ ಮಹಾತ್ಮಾ ಗಾಂಧೀಜಿ ಅವರು ಪತ್ನಿ ಕಸ್ತೂರಿ ಬಾ ಅವರೊಂದಿಗೆ 12 ವರ್ಷಗಳ ಕಾಲ ಅಲ್ಲಿ ವಾಸಿಸಿದ್ದು ಈ ಕಾರಣಕ್ಕಾಗಿಯೇ ಎಂಬುದಾಗಿ ಶೈಲೇಶ್ ರಾಥೋಡ್ ಎಂಬುವರು ಪ್ರಶ್ನಿಸುತ್ತಾರೆ. ಅವರ ಪ್ರಕಾರ ಗಾಂಧೀಜಿ ಆಶ್ರಮ ಪುನರಾಭಿವೃದ್ಧಿಗೆ 1,200 ಕೋಟಿ ರೂಪಾಯಿ ಅನಗತ್ಯ.
1930ರಲ್ಲಿ ಗಾಂಧಿಯವರು ಆಶ್ರಮಕ್ಕೆ ಕರೆತಂದ ಅನೇಕರಲ್ಲಿ ರಾಥೋಡ್ ಅವರ ಅಜ್ಜ ಕೂಡ ಒಬ್ಬರು. ಅಂದಿನಿಂದ, ಸೆಪ್ಟೆಂಬರ್ 2023ರ ತನಕ ಅವರು ಆಶ್ರಮದ ಪರಿಸರದಲ್ಲಿದ್ದರು. ಈ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಲಾಗಿದೆ.
ಗಾಂಧೀಜಿಯ ನೀತಿಗಳನ್ನು ಉಳಿಸಿಕೊಳ್ಳಲು ಸರ್ಕಾರ ಬಯಸಿದ್ದರೆ, ನವೀಕರಣದ ನೆಪದಲ್ಲಿ 263 ಗಾಂಧಿವಾದಿ (ಮಹಾತ್ಮ ಗಾಂಧಿಯೇ ಕರೆದುಕೊಂಡು ಬಂದವರು) ಕುಟುಂಬಗಳನ್ನು, ಅದರೆಲ್ಲೂ ದಲಿತರನ್ನು ಅಲ್ಲಿಂದ ಒಕ್ಕಲೆಬ್ಬಿಸುತ್ತಿದ್ದರೇ ಎಂದು ರಾಥೋಡ್ ʼದ ಫೆಡರಲ್ʼ ಜತೆ ಮಾತನಾಡುತ್ತಾ ಹೇಳಿದ್ದಾರೆ.
ನಾವು ಪ್ರತಿರೋಧಿಸಿದೆವು, ಆದರೆ ಪೊಲೀಸ್ ಬಲ ಪ್ರಯೋಗದ ನಂತರ ಹೊರಟುಹೋದೆವು ಎನ್ನುತ್ತಾರೆ ರಾಥೋಡ್. ಆರಂಭದಲ್ಲಿ ಎಲ್ಲಾ ನಿವಾಸಿಗಳಿಗೆ ನಗರದ ಸರ್ದಾರ್ಪುರ ಪ್ರದೇಶದಲ್ಲಿ ಫ್ಲ್ಯಾಟ್ ಅಥವಾ 60 ಲಕ್ಷ ರೂಪಾಯಿ ಕೊಟ್ಟರು. ಎಪ್ಪತ್ತು ಕುಟುಂಬಗಳು ಒಪ್ಪಿದವು. ಉಳಿದವರು ತಮ್ಮ ಆಶ್ರಮದ ಮನೆಯನ್ನು ಖಾಲಿ ಮಾಡಲು ಬಯಸಲಿಲ್ಲ.
"ನಾವೆಲ್ಲರೂ ಆಶ್ರಮದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇವೆ. 2022ರಲ್ಲಿ, ಉಳಿದ ನಾವೆಲ್ಲರೂ ಹೈಕೋರ್ಟ್ ಮೆಟ್ಟಿಲೇರಿದೆವು. ನಮ್ಮ ಮನವಿ ತಿರಸ್ಕೃತಗೊಂಡಿತು,ʼʼ ಎಂದಿದ್ದಾರೆ ಅವರು. ಬಳಿಕ ಬೆದರಿಕೆಗಳು ಆರಂಭಗೊಂಡವವು. ಅಂತಿಮವಾಗಿ 2023ಕ್ಕೆ ನಮ್ಮೆಲ್ಲರವನ್ನೂ ಹೊರಕ್ಕೆ ದಬ್ಬಲಾಯಿತು ಎಂದು ರಾಥೋಡ್ ಹೇಳಿದ್ದಾರೆ.
ಪ್ರತಿಭಟನೆಯ ಕೂಗಿಗೆ ಬೆಲೆಯೇ ಇಲ್ಲ
2019ರಲ್ಲಿ ಯೋಜನೆಯ ವಿರುದ್ಧ ಗುಜರಾತ್‌ನಾದ್ಯಂತ ಪ್ರತಿಭಟನೆ ವ್ಯಕ್ತಗೊಂಡಿದ್ದವು. ಜನವರಿ 2020 ರಲ್ಲಿ, 263 ಆಶ್ರಮ ನಿವಾಸಿಗಳು ಮತ್ತು ಅಲ್ಲಿನ ಭೂಮಿಯ ರಕ್ಷಣೆ ಮಾಡುತ್ತಿದ್ದ ಐದು ಟ್ರಸ್ಟ್‌ಗಳ ಸದಸ್ಯರು ʼಗಾಂಧಿ ಆಶ್ರಮ ಬಚಾವೋʼ ಸಮಿತಿಯ ಅಡಿಯಲ್ಲಿ ಮಹಾತ್ಮ ಗಾಂಧಿಯವರ ವಸತಿಯಾಗಿದ್ದ ʼಹೃದಯ್ ಕುಂಜ್ʼನಲ್ಲಿ ಪ್ರತಿಭಟನೆ ಪ್ರಾರಂಭಿಸಿದ್ದರು.
ಆಶ್ರಮದ ನಿವಾಸಿಗಳಿಗೆ ಆವರಣವನ್ನು ಖಾಲಿ ಮಾಡುವಂತೆ ಸೂಚನೆ ನೀಡುವವರೆಗೂ ಪ್ರತಿಭಟನೆ ಸುಮಾರು ಒಂದು ವರ್ಷ ನಡೆಯಿತು.
ಕುಟುಂಬಗಳು ಸಹಿ ಮಾಡಿದ ಅಫಿಡವಿಟ್ ಅನ್ನು ಅರ್ಜಿಯಾಗಿ ಹೈಕೋರ್ಟ್‌ಗೆ ಸಲ್ಲಿಸಲಾಗಿತ್ತು. ಆದರೆ ಈ ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಲಿಲ್ಲ.
ಗಾಂಧಿ ಮೊಮ್ಮಗಿನಿಂದ ಪಿಐಎಲ್
ಅಕ್ಟೋಬರ್ 2021ರಲ್ಲಿ, ಮಹಾತ್ಮ ಗಾಂಧಿಯವರ ಮೊಮ್ಮಗ ತುಷಾರ್ ಗಾಂಧಿ ಗುಜರಾತ್ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು. ಅಭಿವೃದ್ಧಿ ಯೋಜನೆ ನೀಲನಕ್ಷೆ ಮಹಾತ್ಮ ಗಾಂಧಿಯವರ ವೈಯಕ್ತಿಕ ಇಚ್ಛೆಗೆ ವಿರುದ್ಧವಾಗಿದೆ. ಇದು ಆಶ್ರಮದ ರಚನೆಯನ್ನು ಸಹ ಬದಲಾಯಿಸುತ್ತದೆ ಎಂದು ಅವರು ವಾದಿಸಿದ್ದರು. ಆದರೆ ಸೆಪ್ಟೆಂಬರ್ 2022ರಲ್ಲಿ ನ್ಯಾಯಾಲಯವು ಸರ್ಕಾರದ ಯೋಜನೆ ನಿಲ್ಲಿಸಲು ನಿರಾಕರಿಸಿತು.
ಸೆಪ್ಟೆಂಬರ್ 2023ರಲ್ಲಿ, ದೇಶಾದ್ಯಂತದ 130 ಗಾಂಧಿವಾದಿಗಳು ಮತ್ತು ಕಾರ್ಯಕರ್ತರು ಯೋಜನೆಯ ವಿರುದ್ಧ ಅರ್ಜಿಗೆ ಸಹಿ ಹಾಕಿದರು. ನವೀಕರಣ ಯೋಜನೆಯನ್ನು ʼಗಾಂಧೀಜಿಯ ಮರು ಹತ್ಯೆʼ ಎಂದು ಕರೆದರು.
ಆಶ್ರಮ ಅಥವಾ ಥೀಮ್ ಪಾರ್ಕ್?
ಪ್ರಸ್ತುತ ಯೋಜನೆ ಗಾಂಧಿ ಆಶ್ರಮವನ್ನು ಗಾಂಧಿ ಥೀಮ್ ಪಾರ್ಕ್ ಆಗಿ ಮಾರ್ಪಡಿಸುತ್ತದೆ. ಗಾಂಧಿ ತತ್ವವನ್ನು ಅನುಸರಿಸುವವರಿಗೆ ಇದು ತೀರ್ಥಯಾತ್ರೆಯ ಸ್ಥಳವಾಗಿತ್ತು " ಎಂದು ಅರ್ಜಿಗೆ ಸಹಿ ಹಾಕಿದ ಗಾಂಧಿವಾದಿಗಳಲ್ಲಿ ಒಬ್ಬರಾದ ಗುಜರಾತ್ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ್ ಎನ್ ಶಾ ಹೇಳಿದರು.
ಸಬರಮತಿ ಆಶ್ರಮವು ಪ್ರಸ್ತುತ ಮಧ್ಯ ಅಹಮದಾಬಾದ್‌ನ ಸಬರಮತಿ ನದಿಯ ದಡದಲ್ಲಿ 100 ಎಕರೆ ಭೂಮಿಯಲ್ಲಿದೆ.
ಸ್ವಾತಂತ್ರ್ಯಾನಂತರ ಸಬರಮತಿ ಆಶ್ರಮ ಸಂರಕ್ಷಣೆ ಮತ್ತು ಸ್ಮಾರಕ ಟ್ರಸ್ಟ್, ಸಬರಮತಿ ಆಶ್ರಮ ಗೋಶಾಲಾ ಟ್ರಸ್ಟ್, ಹರಿಜನ ಸೇವಕ ಸಂಘ, ಖಾದಿ ಗ್ರಾಮೋದ್ಯೋಗ ಪ್ರಚಾರ ಸಮಿತಿ ಮತ್ತು ಹರಿಜನ ಆಶ್ರಮ ಟ್ರಸ್ಟ್ ಎಂಬ ಐದು ಟ್ರಸ್ಟ್‌ಗಳು ಆಶ್ರಮವನ್ನು ನೋಡಿಕೊಳ್ಳುತ್ತಿದ್ದವು.
ಇತಿಹಾಸ ಉಳಿಯುತ್ತದೆಯೇ?
ನಲವತ್ತೇಳು ಎಕರೆ ಆವರಣವನ್ನು 'ಸ್ಮಾರಕ' ಎಂದು ಕರೆಯಲಾಗುತ್ತದೆ. ಇಲ್ಲಿ ಗಾಂಧಿಯವರ ನಿವಾಸವಾಗಿದ್ದ ʼಹೃದಯ್ ಕುಂಜ್ʼ ಕೂಡ ಇದೆ. ಆಚಾರ್ಯ ವಿನೋಬಾ ಭಾವೆ ಅವರು ಸ್ವಲ್ಪ ಕಾಲ ತಂಗಿದ್ದ ವಿನೋಬಾ ಕುಟೀರ ಅಥವಾ ಮೀರಾ ಕುಟೀರ, ನಂತರ ಗಾಂಧಿಯವರ ಶಿಷ್ಯೆ ಮೀರಾಬೆನ್ ಅವರು ಸಾಯುವವರೆಗೂ ಇದ್ದರು; ಉಪಾಸನಾ ಮಂದಿರ. ಗಾಂಧೀಜಿಯವರು ಅನುಯಾಯಿಗಳಿಗಾಗಿ ಸೇರುತ್ತಿದ್ದ ತೆರೆದ ಪ್ರಾರ್ಥನಾ ಮೈದಾನ. ಗಾಂಧಿಯವರ ಸೋದರಸಂಬಂಧಿ ಮಗನ್ ಲಾಲ್ ಗಾಂಧಿಯವರ ಮನೆ ಮಗನ್ ನಿವಾಸ್ ಇಲ್ಲಿದೆ.
ಉಳಿದ 53 ಎಕರೆ ಪ್ರದೇಶವು ಪ್ರವಾಸಿಗರಿಗೆ ಸೀಮಿತವಾಗಿದ್ದವು. ಇಲ್ಲಿ ಪಾರಂಪರಿಕ ರಚನೆಗಳು ಮತ್ತು ಆವರಣದಲ್ಲಿ ವಾಸಿಸುತ್ತಿದ್ದ 263 ಕುಟುಂಬಗಳ ಮನೆಗಳನ್ನು ಇದ್ದವು.
ಈ ಯೋಜನೆ ಮುಂದುವರಿದರೆ ಇವೆಲ್ಲವನ್ನೂ ಹಣ ಮಾಡುವ ಸಂಕೀರ್ಣವಾಗಲಿದೆ. ಇದನ್ನು ತಮ್ಮ ಜೀವನದುದ್ದಕ್ಕೂ ವಿನಮ್ರ ಜೀವನ ಮತ್ತು ಸರಳತೆ ಅಳವಡಿಸಿಕೊಂಡಿದ್ದ ಮಹಾತ್ಮ ಗಾಂಧೀಜಿ ಎಂದಿಗೂ ಒಪ್ಪುತ್ತಿರಲಿಲ್ಲ.