ದೆಹಲಿ ಸ್ಫೋಟ: ಅಲ್ ಫಲಾಹ್ ವಿವಿ ಚಟುವಟಿಕೆಗಳ ತನಿಖೆಗೆ ಎಸ್​​ಐಟಿ ರಚನೆ; ಚಾಲಕ, ಮೌಲ್ವಿ ವಶಕ್ಕೆ

ಇಷ್ಟು ವರ್ಷಗಳ ಕಾಲ ಭಯೋತ್ಪಾದಕರು ವಿಶ್ವವಿದ್ಯಾಲಯವನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡಿದ್ದರೂ ಅದು ಹೇಗೆ ಯಾರ ಗಮನಕ್ಕೂ ಬರಲಿಲ್ಲ ಎಂಬುದು ಪೊಲೀಸರ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ.

Update: 2025-11-21 05:00 GMT

ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿನ ವ್ಯವಹಾರಗಳ ತನಿಖೆಗಾಗಿ ಎಸ್‌ಐಟಿ ರಚಿಸಲಾಗಿದೆ.

Click the Play button to listen to article

ದೆಹಲಿಯ ಕೆಂಪು ಕೋಟೆ ಬಳಿ ನವೆಂಬರ್ 10ರಂದು ನಡೆದ ಕಾರು ಬಾಂಬ್ ಸ್ಫೋಟ ಮತ್ತು ಇತ್ತೀಚೆಗೆ ಭೇದಿಸಲಾದ 'ವೈಟ್ ಕಾಲರ್' ಭಯೋತ್ಪಾದಕ ಜಾಲದ ತನಿಖೆ ಚುರುಕುಗೊಂಡಿದೆ. ಈ ಪ್ರಕರಣದಲ್ಲಿ ಅಲ್ ಫಲಾಹ್ ವಿಶ್ವವಿದ್ಯಾಲಯದ ವೈದ್ಯರು ಬಂಧಿತರಾದ ಬೆನ್ನಲ್ಲೇ, ಫರಿದಾಬಾದ್ ಪೊಲೀಸರು ವಿಶ್ವವಿದ್ಯಾಲಯದ ಚಟುವಟಿಕೆಗಳನ್ನು ಕೂಲಂಕಷವಾಗಿ ತನಿಖೆ ಮಾಡಲು ಪ್ರತ್ಯೇಕ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದಾರೆ.

ಈ ಎಸ್‌ಐಟಿಯಲ್ಲಿ ಇಬ್ಬರು ಎಸಿಪಿಗಳು (ಸಹಾಯಕ ಪೊಲೀಸ್ ಆಯುಕ್ತರು), ಒಬ್ಬ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಸಬ್-ಇನ್ಸ್‌ಪೆಕ್ಟರ್‌ಗಳು ಇದ್ದಾರೆ. "ಅಲ್ ಫಲಾಹ್ ವಿಶ್ವವಿದ್ಯಾಲಯವು ಭಯೋತ್ಪಾದನೆಯ ತಾಣವಾಗಿ ಮಾರ್ಪಟ್ಟಿದ್ದು ಹೇಗೆ, ಅಲ್ಲಿಗೆ ಹಣಕಾಸಿನ ನೆರವು ಎಲ್ಲಿಂದ ಬರುತ್ತಿತ್ತು ಮತ್ತು ಸ್ಫೋಟಕಗಳನ್ನು ಹೇಗೆ ಸಾಗಿಸಲಾಗುತ್ತಿತ್ತು ಎಂಬುದರ ಕುರಿತು ಸಮಗ್ರ ವರದಿ ನೀಡುವಂತೆ ಎಸ್‌ಐಟಿಗೆ ಸೂಚಿಸಲಾಗಿದೆ," ಎಂದು ಫರಿದಾಬಾದ್ ಪೊಲೀಸ್ ಆಯುಕ್ತ ಸತೇಂದರ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.

ಇಷ್ಟು ವರ್ಷಗಳ ಕಾಲ ಭಯೋತ್ಪಾದಕರು ವಿಶ್ವವಿದ್ಯಾಲಯವನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡಿದ್ದರೂ ಅದು ಹೇಗೆ ಯಾರ ಗಮನಕ್ಕೂ ಬರಲಿಲ್ಲ ಎಂಬುದು ಪೊಲೀಸರ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ.

ಕ್ಯಾಬ್ ಚಾಲಕ, ಮೌಲ್ವಿ ಮತ್ತು ಉರ್ದು ಶಿಕ್ಷಕ ವಶಕ್ಕೆ

ತನಿಖಾ ಸಂಸ್ಥೆಗಳು ಧೌಜ್ ಗ್ರಾಮದಿಂದ ಕ್ಯಾಬ್ ಚಾಲಕನೊಬ್ಬನನ್ನು ವಶಕ್ಕೆ ಪಡೆದಿವೆ. ಈತನ ಮನೆಯಿಂದ ರುಬ್ಬುವ ಯಂತ್ರ (ಗ್ರೈಂಡಿಂಗ್ ಮಷಿನ್) ಮತ್ತು ವಿದ್ಯುತ್ ಉಪಕರಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ವೈದ್ಯ ಮತ್ತು ಪ್ರಮುಖ ಆರೋಪಿ ಡಾ. ಮುಜಮ್ಮಿಲ್ ಗನೈ, ಈ ವಸ್ತುಗಳನ್ನು ಚಾಲಕನ ವಶದಲ್ಲಿ ಇರಿಸಿದ್ದ ಎಂದು ಮೂಲಗಳು ತಿಳಿಸಿವೆ. ಮಗನ ಸುಟ್ಟ ಗಾಯದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಚಾಲಕನಿಗೆ ಡಾ. ಗನೈ ಸಹಾಯ ಮಾಡಿದ್ದನು. ಬಳಿಕ ಆತನ ಮೂಲಕ ವಿದ್ಯಾರ್ಥಿಗಳಿಗೆ ಸಿಮ್ ಕಾರ್ಡ್‌ಗಳನ್ನು ಪೂರೈಸಲಾಗುತ್ತಿತ್ತು ಎಂದು ಹೇಳಲಾಗಿದೆ.

ಇದಲ್ಲದೆ, ನುಹ್ ಜಿಲ್ಲೆಯ ಘಸೇರಾ ಗ್ರಾಮದ ನಿವಾಸಿಗಳಾದ ಒಬ್ಬ ಮೌಲ್ವಿ ಮತ್ತು ಉರ್ದು ಶಿಕ್ಷಕನನ್ನು ಸೋಹ್ನಾ ಬಳಿಯ ಶಾಹಿ ಜಾಮಾ ಮಸೀದಿಯಿಂದ ವಶಕ್ಕೆ ಪಡೆಯಲಾಗಿದೆ. ದೆಹಲಿ ಸ್ಫೋಟದ ಆತ್ಮಾಹುತಿ ಬಾಂಬರ್ ಡಾ. ಉಮರ್ ನಬಿ ಆಗಾಗ್ಗೆ ಈ ಮಸೀದಿಗೆ ಪ್ರಾರ್ಥನೆಗೆ ಬರುತ್ತಿದ್ದ. ಈ ವೇಳೆ ಮಸೀದಿಯಲ್ಲಿ ಯಾವುದೇ ಗುಪ್ತ ಸಭೆಗಳು ನಡೆದಿದ್ದವೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Tags:    

Similar News