ತಮಿಳುನಾಡಿನಲ್ಲಿ ಭೂ ಹಗರಣ ಬೇಧಿಸಿದ ಇಡಿ: 18.10 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ ಜಪ್ತಿ

ಈ ದಾಳಿಯ ವೇಳೆ 1.56 ಕೋಟಿ ರೂಪಾಯಿ ನಗದು ಹಾಗೂ 74 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Update: 2025-11-21 04:09 GMT

ಈ ದಾಳಿಯ ವೇಳೆ 1.56 ಕೋಟಿ ರೂಪಾಯಿ ನಗದು ಹಾಗೂ 74 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 

Click the Play button to listen to article

ತಮಿಳುನಾಡಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ಸಿಪ್‌ಕಾಟ್ (SIPCOT) ಯೋಜನೆಗಳಿಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಬೃಹತ್ ಭೂ ಪರಿಹಾರ ಹಗರಣ ಮತ್ತು ನಕಲಿ ದಾಖಲೆ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಕಾರ್ಯಾಚರಣೆ ನಡೆಸಿದೆ. ಚೆನ್ನೈ ವಲಯದ ಇಡಿ ಅಧಿಕಾರಿಗಳು ಬುಧವಾರ ಏಕಕಾಲದಲ್ಲಿ ಚೆನ್ನೈ, ಕಾಂಚಿಪುರಂ ಮತ್ತು ಚೆಂಗಲ್ಪಟ್ಟು ವ್ಯಾಪ್ತಿಯ ಒಟ್ಟು 15 ಕಡೆಗಳಲ್ಲಿ ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಿದ್ದಾರೆ.

ಈ ದಾಳಿಯ ವೇಳೆ 1.56 ಕೋಟಿ ರೂಪಾಯಿ ನಗದು ಹಾಗೂ 74 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸುಮಾರು 8.4 ಕೋಟಿ ರೂಪಾಯಿ ಮೊತ್ತದ ಬ್ಯಾಂಕ್ ಠೇವಣಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, 7.4 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆಯಾಗಿ ಈ ಹಗರಣಕ್ಕೆ ಸಂಬಂಧಿಸಿದಂತೆ ಸುಮಾರು 18.10 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.

ನಕಲಿ ದಾಖಲೆ ಮತ್ತು ಪರಿಹಾರದ ಆಟ

ಜಾರಿ ನಿರ್ದೇಶನಾಲಯದ ಮಾಹಿತಿಯ ಪ್ರಕಾರ, ಈ ಹಗರಣದ ಮೂಲವು 1991ರಷ್ಟು ಹಳೆಯದಾಗಿದೆ. ವಿಜಿಪಿ ಸಮೂಹಕ್ಕೆ ಸೇರಿದ ಸಂಸ್ಥೆಗಳು ರಸ್ತೆ ಮತ್ತು ಉದ್ಯಾನವನಗಳಂತಹ ಸಾರ್ವಜನಿಕ ಬಳಕೆಯ ಉದ್ದೇಶಕ್ಕಾಗಿ ಸರ್ಕಾರಕ್ಕೆ ಭೂಮಿಯನ್ನು ಹಸ್ತಾಂತರಿಸಿದ್ದವು. ಆದರೆ, ವಿಜಿಎಸ್ ರಾಜೇಶ್ ಮತ್ತು ಅವರ ಸಹಚರರು ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಈ ಸಾರ್ವಜನಿಕ ಭೂಮಿಯನ್ನು ಮತ್ತೆ ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆಗಾಗಿ ಎನ್‌ಎಚ್‌ಎಐ ಮತ್ತು ಕೈಗಾರಿಕಾ ವಿಸ್ತರಣೆಗಾಗಿ ಸಿಪ್‌ಕಾಟ್ ಸಂಸ್ಥೆಗಳು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುವ ಮುನ್ನವೇ, ಆರೋಪಿಗಳು ಈ ಜಮೀನುಗಳನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಿದ್ದ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ.

ವಂಚನೆಯ ಜಾಲ ಹೆಣೆದಿದ್ದು ಹೇಗೆ?

ಈ ಹಗರಣದಲ್ಲಿ ಆರೋಪಿಗಳು ಅತ್ಯಂತ ಯೋಜಿತ ರೀತಿಯಲ್ಲಿ ವಂಚನೆಯ ಜಾಲವನ್ನು ಹೆಣೆದಿದ್ದಾರೆ. ಮೊದಲಿಗೆ, ಸಾರ್ವಜನಿಕ ಪ್ರಾಧಿಕಾರಗಳ ಹೆಸರಲ್ಲಿದ್ದ ಮೂಲ ಒಪ್ಪಂದಗಳನ್ನು ಅಕ್ರಮವಾಗಿ ರದ್ದುಗೊಳಿಸಲಾಗಿದೆ. ಬಳಿಕ, ಈ 'ಸಾರ್ವಜನಿಕ ಭೂಮಿಯನ್ನು ತಮ್ಮದೇ ನಿಯಂತ್ರಣದಲ್ಲಿರುವ ನಕಲಿ (ಡಮ್ಮಿ) ವ್ಯಕ್ತಿಗಳಿಗೆ ಮಾರಾಟ ಮಾಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯ ಸಂದರ್ಭದಲ್ಲಿ ಎನ್‌ಎಚ್‌ಎಐ ಮತ್ತು ಸಿಪ್‌ಕಾಟ್‌ನಿಂದ ಹೆಚ್ಚಿನ ಪರಿಹಾರ ಪಡೆಯುವ ದುರುದ್ದೇಶದಿಂದಲೇ ನೋಂದಣಿ ದಾಖಲೆಗಳಲ್ಲಿ ಭೂಮಿಯ ಮೌಲ್ಯವನ್ನು ಕೃತಕವಾಗಿ ಹೆಚ್ಚಿಸಿ ತೋರಿಸಲಾಗಿದೆ.

ಹೀಗೆ ಅಕ್ರಮವಾಗಿ ಪಡೆದ ಪರಿಹಾರದ ಹಣವನ್ನು ಮರೆಮಾಚಲು ಆರೋಪಿಗಳು ಹಲವು ಮಾರ್ಗಗಳನ್ನು ಕಂಡುಕೊಂಡಿದ್ದರು. ಹಣದ ಮೂಲವನ್ನು ಮರೆಮಾಚಲು (Money Laundering) ಸಹಚರರು, ಸಂಬಂಧಿಕರು ಮತ್ತು ಶೆಲ್ ಕಂಪನಿಗಳ ಹೆಸರಿನಲ್ಲಿದ್ದ ನೂರಾರು ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗಿದೆ. ಹಣ ವರ್ಗಾವಣೆಯಾದ ತಕ್ಷಣವೇ ದೊಡ್ಡ ಮೊತ್ತದ ನಗದು ಹಣವನ್ನು ಹಿಂಪಡೆಯುವ ಮೂಲಕ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿರುವುದು ತನಿಖೆಯಲ್ಲಿ ಬಯಲಾಗಿದೆ.

ಎಫ್‌ಐಆರ್ ದಾಖಲು

ಶ್ರೀಪೆರಂಬದೂರು ಮತ್ತು ಕಾಂಚಿಪುರಂ ಪೊಲೀಸರು 2021 ಮತ್ತು 2022ರಲ್ಲಿ ದಾಖಲಿಸಿದ್ದ ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ಈ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ನಕಲಿ ದಾಖಲೆ ಸೃಷ್ಟಿ, ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ಸರ್ಕಾರಿ ಪರಿಹಾರವನ್ನು ಅಕ್ರಮವಾಗಿ ಪಡೆದ ಆರೋಪಗಳಡಿ ಪ್ರಕರಣ ದಾಖಲಾಗಿತ್ತು. ಮದ್ರಾಸ್ ಹೈಕೋರ್ಟ್ ಕೂಡ ಈ ಹಿಂದೆ ಇಂತಹ ನಕಲಿ ಮಾಲೀಕತ್ವದ ಹಕ್ಕುಗಳಿಂದ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.

Tags:    

Similar News