ಹಾಡು, ಕುಣಿತದ ಮೂಲಕ ನಿಶ್ಚಿತಾರ್ಥ ಘೋಷಿಸಿದ ಸ್ಮೃತಿ ಮಂಧಾನ; ಮದುವೆ ಯಾವಾಗ ಗೊತ್ತೇ?
ತಮ್ಮ ಸಹ ಆಟಗಾರ್ತಿಯರ ಜೊತೆಗೂಡಿ ನೃತ್ಯ ಮಾಡುತ್ತಲೇ, ಕೊನೆಯಲ್ಲಿ ತಮ್ಮ ಎಂಗೇಜ್‌ಮೆಂಟ್ ಉಂಗುರವನ್ನು ಪ್ರದರ್ಶಿಸುವ ಮೂಲಕ ಸ್ಮೃತಿ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಭಾರತ ತಂಡದ ಉಪ ನಾಯಕಿ ಸ್ಮೃತಿ ಮಂದಾನ
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ, ಇತ್ತೀಚೆಗೆ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಮೃತಿ ಮಂಧಾನ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಬಹುಕಾಲದ ಗೆಳೆಯ ಹಾಗೂ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರೊಂದಿಗಿನ ತಮ್ಮ ನಿಶ್ಚಿತಾರ್ಥವನ್ನು ಸ್ಮೃತಿ ವಿಶಿಷ್ಟ ರೀತಿಯಲ್ಲಿ ಘೋಷಿಸಿದ್ದಾರೆ.
ತಮ್ಮ ಸಹ ಆಟಗಾರ್ತಿಯರ ಜೊತೆಗೂಡಿ ನೃತ್ಯ ಮಾಡುತ್ತಲೇ, ಕೊನೆಯಲ್ಲಿ ತಮ್ಮ ಎಂಗೇಜ್‌ಮೆಂಟ್ ಉಂಗುರವನ್ನು ಪ್ರದರ್ಶಿಸುವ ಮೂಲಕ ಸ್ಮೃತಿ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?
ಸ್ಮೃತಿ ಮಂಧಾನ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರೀಲ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಟೀಂ ಇಂಡಿಯಾದ ಆಟಗಾರ್ತಿಯರಾದ ಜೆಮಿಮಾ ರೋಡ್ರಿಗಸ್, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್ ಮತ್ತು ಅರುಂಧತಿ ರೆಡ್ಡಿ ಅವರೊಂದಿಗೆ ಸ್ಮೃತಿ ಹೆಜ್ಜೆ ಹಾಕಿದ್ದಾರೆ. "ಲಗೇ ರಹೋ ಮುನ್ನಾ ಭಾಯ್" ಚಿತ್ರದ "ಸಮ್ಜೋ ಹೋ ಹಿ ಗಯಾ" (ಆಗೇ ಹೋಯ್ತು ಅಂತ ತಿಳ್ಕೊಳ್ಳಿ) ಎಂಬ ಹಾಡಿಗೆ ಇವರೆಲ್ಲರೂ ನೃತ್ಯ ಮಾಡಿದ್ದಾರೆ. ಹಾಡಿನ ಸಾಹಿತ್ಯಕ್ಕೆ ತಕ್ಕಂತೆ ನೃತ್ಯದ ಕೊನೆಯಲ್ಲಿ ಸ್ಮೃತಿ ತಮ್ಮ ಎಡಗೈಯನ್ನು ಕ್ಯಾಮೆರಾ ಮುಂದೆ ಹಿಡಿದು, ಬೆರಳಲ್ಲಿದ್ದ ನಿಶ್ಚಿತಾರ್ಥದ ಉಂಗುರವನ್ನು ತೋರಿಸಿದ್ದಾರೆ. ಆ ಮೂಲಕ ತಮ್ಮ ಮತ್ತು ಪಲಾಶ್ ಮುಚ್ಚಲ್ ಅವರ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ.
ನವೆಂಬರ್ 23ಕ್ಕೆ ಮದುವೆ?
ವರದಿಗಳ ಪ್ರಕಾರ, ಇದೇ ನವೆಂಬರ್ 23 ರಂದು ಈ ಜೋಡಿ ಹಸೆಮಣೆ ಏರಲಿದೆ ಎನ್ನಲಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಪತ್ರದ ಮೂಲಕ ಜೋಡಿಗೆ ಶುಭ ಹಾರೈಸಿದ್ದು, ಪತ್ರದಲ್ಲಿ ನವೆಂಬರ್ 23, 2025 ರಂದು ವಿವಾಹ ನಡೆಯಲಿದೆ ಎಂದು ಉಲ್ಲೇಖಿಸಲಾಗಿದೆ. "ಇಂದೋರ್‌ನ ಸೊಸೆ"ಯಾಗಿ ಸ್ಮೃತಿ ಮನೆ ತುಂಬಿಸಿಕೊಳ್ಳಲಿದ್ದಾರೆ ಎಂದು ಕಳೆದ ತಿಂಗಳು ಪಲಾಶ್ ಮುಚ್ಚಲ್ ಪರೋಕ್ಷವಾಗಿ ಸುಳಿವು ನೀಡಿದ್ದರು.
ವಿಶ್ವಕಪ್ ವಿಜಯದ ಸಂಭ್ರಮ
ಇತ್ತೀಚೆಗಷ್ಟೇ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಚೊಚ್ಚಲ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಟೂರ್ನಿಯಲ್ಲಿ ಸ್ಮೃತಿ ಮಂಧಾನ 434 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ವೃತ್ತಿಜೀವನದ ಈ ಉತ್ತುಂಗದ ಕ್ಷಣದಲ್ಲೇ ಸ್ಮೃತಿ ತಮ್ಮ ವೈಯಕ್ತಿಕ ಬದುಕಿನ ಹೊಸ ಇನ್ನಿಂಗ್ಸ್ ಆರಂಭಿಸುತ್ತಿರುವುದು ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ.