ಮರಾಠಿಯಲ್ಲಿ ಮಾತನಾಡದಿದ್ದಕ್ಕೆ ರೈಲಿನಲ್ಲಿ ಹಲ್ಲೆ; ಮನನೊಂದ 19ರ ಹರೆಯದ ವಿದ್ಯಾರ್ಥಿ ನೇಣಿಗೆ ಶರಣು
ಮೃತರನ್ನು ಕಲ್ಯಾಣ್ ಪೂರ್ವದ ನಿವಾಸಿ, ಪ್ರಥಮ ವರ್ಷದ ವಿಜ್ಞಾನ ವಿದ್ಯಾರ್ಥಿ ಅರ್ನವ್ ಲಕ್ಷ್ಮಣ್ ಖೈರೆ (19) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ತಮ್ಮ ಮನೆಯಲ್ಲಿಯೇ ಅರ್ನವ್ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಮಹಾರಾಷ್ಟ್ರದ ಥಾಣೆಯಲ್ಲಿ ಭಾಷಾ ವಿವಾದಕ್ಕೆ ಸಂಬಂಧಿಸಿದಂತೆ ದುರಂತವೊಂದು ನಡೆದಿದೆ. ಲೋಕಲ್ ರೈಲಿನಲ್ಲಿ ಮರಾಠಿಯಲ್ಲಿ ಮಾತನಾಡದಿದ್ದಕ್ಕೆ ಸಹಪ್ರಯಾಣಿಕರ ಗುಂಪೊಂದು ಹಲ್ಲೆ ನಡೆಸಿದ ಬಳಿಕ, ಇದರಿಂದ ಮನನೊಂದ 19 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಕಲ್ಯಾಣ್ ಪೂರ್ವ ಭಾಗದಲ್ಲಿ ನಡೆದಿದೆ.
ಮೃತರನ್ನು ಕಲ್ಯಾಣ್ ಪೂರ್ವದ ನಿವಾಸಿ, ಪ್ರಥಮ ವರ್ಷದ ವಿಜ್ಞಾನ ವಿದ್ಯಾರ್ಥಿ ಅರ್ನವ್ ಲಕ್ಷ್ಮಣ್ ಖೈರೆ (19) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ತಮ್ಮ ಮನೆಯಲ್ಲಿಯೇ ಅರ್ನವ್ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅರ್ನವ್ ಮಂಗಳವಾರ ಬೆಳಿಗ್ಗೆ ಎಂದಿನಂತೆ ಮುಲುಂಡ್‌ನಲ್ಲಿರುವ ತಮ್ಮ ಕಾಲೇಜಿಗೆ ಹೋಗಲು ಲೋಕಲ್ ರೈಲು ಹತ್ತಿದ್ದರು. ಕಲ್ಯಾಣ್ ಮತ್ತು ಥಾಣೆ ನಿಲ್ದಾಣಗಳ ನಡುವೆ ರೈಲು ಚಲಿಸುತ್ತಿದ್ದಾಗ ಈ ಘಟನೆ ನಡೆದಿದೆ. ಕಿಕ್ಕಿರಿದಿದ್ದ ಬೋಗಿಯಲ್ಲಿ ಅರ್ನವ್ ಸಹಪ್ರಯಾಣಿಕನೊಬ್ಬನಿಗೆ ಸ್ವಲ್ಪ ಮುಂದೆ ಹೋಗುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ, ಅರ್ನವ್ ಮರಾಠಿಯಲ್ಲಿ ಮಾತನಾಡದಿದ್ದನ್ನು ಆಕ್ಷೇಪಿಸಿದ ಆ ಪ್ರಯಾಣಿಕ, ವಿದ್ಯಾರ್ಥಿಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.
ವಿದ್ಯಾರ್ಥಿಯ ಮೇಲೆ ಹಲ್ಲೆ
ವಿವಾದ ಉಲ್ಬಣಗೊಳ್ಳುತ್ತಿದ್ದಂತೆ, ಆ ಪ್ರಯಾಣಿಕ ಮತ್ತು ಆತನ ಐವರು ಸಂಗಡಿಗರು ಸೇರಿ ಅರ್ನವ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಗುಂಪಾಗಿ ಬಂದು ಮುಷ್ಟಿಯಿಂದ ಗುದ್ದಿದ್ದರಿಂದ ಅರ್ನವ್ ತೀವ್ರವಾಗಿ ಭಯಭೀತರಾಗಿದ್ದರು. ಏಟಿನ ರಭಸಕ್ಕೆ ಅವರಿಗೆ ವಾಕರಿಕೆ ಬಂದಂತಾಗಿ ತೀವ್ರ ಅಸ್ವಸ್ಥರಾಗಿದ್ದರು. ಭಯದಿಂದ ಕಂಗಾಲಾದ ಅರ್ನವ್, ಥಾಣೆ ನಿಲ್ದಾಣದಲ್ಲಿ ಇಳಿದು, ನಂತರದ ರೈಲಿನಲ್ಲಿ ಮುಲುಂಡ್‌ಗೆ ತೆರಳಿದ್ದಾರೆ ಎಂದು ಕಲ್ಯಾಣ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕಲ್ಯಾಣಜಿ ಗೆಟೆ ತಿಳಿಸಿದ್ದಾರೆ.
ದುರಂತ ಅಂತ್ಯ
ಹಲ್ಲೆಯಿಂದ ತೀವ್ರವಾಗಿ ನೊಂದಿದ್ದ ಮತ್ತು ಅವಮಾನಕ್ಕೊಳಗಾಗಿದ್ದ ಅರ್ನವ್, ಕಾಲೇಜಿನಲ್ಲಿ ಪೂರ್ಣ ತರಗತಿಗಳಿಗೆ ಹಾಜರಾಗದೆ ಮಧ್ಯಾಹ್ನವೇ ಮನೆಗೆ ಮರಳಿದ್ದಾರೆ. ಈ ನಡುವೆ ತಂದೆಗೆ ಫೋನ್ ಮಾಡಿ ರೈಲಿನಲ್ಲಿ ನಡೆದ ಹಲ್ಲೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಮಗನ ದನಿಯಲ್ಲಿನ ನಡುಕ ಮತ್ತು ಭಯವನ್ನು ತಂದೆ ಗ್ರಹಿಸಿದ್ದರು. ಸಂಜೆ ಕೆಲಸ ಮುಗಿಸಿ ತಂದೆ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ನೆರೆಹೊರೆಯವರ ಸಹಾಯದಿಂದ ಬಾಗಿಲು ಮುರಿದು ನೋಡಿದಾಗ, ಮಗ ಕಂಬಳಿಯಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ರೈಲಿನಲ್ಲಿ ನಡೆದ ಹಲ್ಲೆಯಿಂದ ಉಂಟಾದ ಮಾನಸಿಕ ಆಘಾತ ಮತ್ತು ಒತ್ತಡವೇ ಮಗನ ಆತ್ಮಹತ್ಯೆಗೆ ಕಾರಣ ಎಂದು ತಂದೆ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸರು ಸದ್ಯಕ್ಕೆ ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಹಲ್ಲೆ ನಡೆಸಿದವರ ಪತ್ತೆಗೆ ಹಾಗೂ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)