ರಾಷ್ಟ್ರಪತಿ, ರಾಜ್ಯಪಾಲರಿಗೆ ಕಾಲಮಿತಿ ನಿಗದಿ ಸೂಕ್ತವಲ್ಲ; ಮಸೂದೆ ವಿಲೇವಾರಿಗೆ ದೀರ್ಘ ವಿಳಂಬವೂ ಒಪ್ಪುವುದಲ್ಲ - ಸುಪ್ರೀಂಕೋರ್ಟ್
ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಂತಹ ಸಾಂವಿಧಾನಿಕ ಕಾರ್ಯಕಾರಿಗಳಿಗೆ ಕಠಿಣ ಕಾಲಮಿತಿಗಳನ್ನು ನಿಗದಿಪಡಿಸುವುದು ಅಧಿಕಾರಗಳ ಪ್ರತ್ಯೇಕತೆಯ ಸಿದ್ಧಾಂತಕ್ಕೆ ಮತ್ತು ಸಂವಿಧಾನವು ಒದಗಿಸಿದ ಸ್ಥಿತಿಸ್ಥಾಪಕತ್ವಕ್ಕೆ ವಿರುದ್ಧವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಸುಪ್ರೀಂ ಕೋರ್ಟ್
ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಮಸೂದೆಗಳಿಗೆ ಅಂಕಿತ ಹಾಕಲು ಕಾಲಮಿತಿ ನಿಗದಿಪಡಿಸುವುದು ಸೂಕ್ತವಲ್ಲ. ಆದರೆ, ಮಸೂದೆ ವಿಲೇವಾರಿಯಲ್ಲಿನ ದೀರ್ಘ ವಿಳಂಬವು ನ್ಯಾಯಾಂಗದ ಪರಿಶೀಲನೆಗೆ ಕಾರಣವಾಗಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ರಾಷ್ಟ್ರಪತಿ, ರಾಜ್ಯಪಾಲರು ಮಸೂದೆಗಳಿಗೆ ಅಂಕಿತ ಹಾಕಲು ಕಾಲಮಿತಿ ನಿಗದಿಪಡಿಸುವ ಅಧಿಕಾರ ಸುಪ್ರೀಂಕೋರ್ಟ್‌ಗೆ ಇದೆಯೇ ಎಂದು 143ನೇ ವಿಧಿಯಡಿ ರಾಷ್ಟ್ರಪತಿಗಳು ಕೇಳಿದ್ದ ಪ್ರಶ್ನೆಗೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ರಾಜ್ಯಪಾಲರಿಗೆ ಸಮಯದ ಮಿತಿ ನಿಗದಿಪಡಿಸಲು ಸಾಧ್ಯವಿಲ್ಲ. ಒಂದು ವೇಳೆ ಸಮಯ ನಿಗದಿಪಡಿಸುವಂತಾದರೆ ಸಾಂವಿಧಾನಿಕ ಮುಖ್ಯಸ್ಥರ ಅಧಿಕಾರದ ಸ್ವಾಯತ್ತತೆಗೆ ಧಕ್ಕೆ ತಂದಂತಾಗುತ್ತದೆ. ಹಾಗಂತ ಅನಿರ್ದಿಷ್ಟವಾಗಿ ಅಂಕಿತ ಹಾಕದೆಯೂ ಇರುವಂತಿಲ್ಲ. ಏಕೆಂದರೆ ಮಸೂದೆಗಳನ್ನು ಏಕಪಕ್ಷೀಯವಾಗಿ ತಡೆಹಿಡಿದರೆ ಒಕ್ಕೂಟ ವ್ಯವಸ್ಥೆ ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳಿದೆ.
ನ್ಯಾಯಾಂಗ ಪರಿಶೀಲನೆಗೆ ಅವಕಾಶ
ರಾಜ್ಯ ಶಾಸಕಾಂಗಗಳು ಅಂಗೀಕರಿಸಿದ ಮಸೂದೆಗಳಿಗೆ ಅಡ್ಡಿಪಡಿಸಿದರೆ, ವಿವರಣೆ ನೀಡದಿದ್ದರೆ ಹಾಗೂ ಅಂಕಿತ ಹಾಕಲು ದೀರ್ಘ ವಿಳಂಬ ಮಾಡಿದರೆ ಅದನ್ನು ನ್ಯಾಯಾಂಗವು ಪರಿಶೀಲಿಸುವ ಅಧಿಕಾರ ಹೊಂದಿರಲಿದೆ. ಮಸೂದೆಯ ಅರ್ಹತೆಗಳ ಬಗ್ಗೆ ಯಾವುದೇ ಪ್ರತಿಕ್ರಿತೆ ನೀಡದೇ, ನಿರ್ದಿಷ್ಟ ಕಾಲಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಸಾಂವಿಧಾನಿಕ ಮುಖ್ಯಸ್ಥರಿಗೆ ನಿರ್ದೇಶನ ನೀಡಲು ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಪೀಠ ಹೇಳಿದೆ.
ಏನಿದು ಪ್ರಕರಣ?
2025 ಏಪ್ರಿಲ್ ತಿಂಗಳಲ್ಲಿ ತಮಿಳುನಾಡು ರಾಜ್ಯ vs ರಾಜ್ಯಪಾಲರ' ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠವು 142ನೇ ವಿಧಿಯಡಿ ಮಸೂದೆಗಳಿಗೆ ಒಪ್ಪಿಗೆ ನೀಡಲು ನಿರ್ದಿಷ್ಟ ಕಾಲಮಿತಿ ನಿಗದಿಪಡಿಸಿ, ಬಾಕಿ ಉಳಿದಿದ್ದ 10 ಮಸೂದೆಗಳಿಗೆ ಒಪ್ಪಿಗೆ ನೀಡಿತ್ತು. ಇದನ್ನು ಪ್ರಶ್ನಿಸಿ ರಾಷ್ಟ್ರಪತಿಗಳು 143ನೇ ವಿಧಿಯಡಿ ಹಲವು ಪ್ರಶ್ನೆಗಳನ್ನು ಸುಪ್ರೀಂಕೋರ್ಟ್‌ಗೆ ಕೇಳಿದ್ದರು.
ರಾಜ್ಯಪಾಲರಿಗೆ ಸಂವಿಧಾನ ಮೂರು ರೀತಿಯ ಅಧಿಕಾರಗಳನ್ನು ನೀಡಿದೆ. ಮಸೂದೆಗೆ ಒಪ್ಪಿಗೆ ನೀಡುವುದು, ಮಸೂದೆ ತಡೆಹಿಡಿಯುವುದು, ಇಲ್ಲವೇ ಸೂಕ್ತ ಸ್ಪಷ್ಟನೆಗಳೊಂದಿಗೆ ಶಾಸಕಾಂಗದ ಪುನರ್ ಪರಿಶೀಲನೆಗೆ ಮಸೂದೆಯನ್ನು ಹಿಂತಿರುಗಿಸಬಹುದಾಗಿದೆ. ಹಾಗಾಗಿ ಮಸೂದೆಗಳಿಗೆ ಅಂಕಿತ ಹಾಕುವಲ್ಲಿ ಅನಗತ್ಯ ವಿಳಂಬ ಮಾಡಬಾರದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿ
ರಾಜ್ಯಪಾಲರು ಸಂವಿಧಾನದ 361ನೇ ವಿಧಿಯಡಿ ವಿವೇಚನಾಧಿಕಾರ ಹೊಂದಿದ್ದರೂ 200ನೇ ವಿಧಿಯಡಿ ಅವರು ಚಲಾಯಿಸುವ ಅಧಿಕಾರ ಮತ್ತು ಕ್ರಮಗಳು ನ್ಯಾಯಾಂಗ ಪರಿಶೀಲನೆಗೆ ಒಳಪಡಲಿವೆ ಎಂದು ನ್ಯಾಯಾಲಯ ಹೇಳಿದೆ.
ಇದೇ ವೇಳೆ ʼಪರಿಗಣಿತ ಒಪ್ಪಿಗೆʼ ಎಂದು ಪರಿಗಣಿಸಬೇಕು ಎನ್ನುವ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ಪರಿಗಣಿತ ಒಪ್ಪಿಗೆ ಸಂಬಂಧ ನೀಡುವ ತೀರ್ಪು ಸಾಂವಿಧಾನಿಕ ಕಾರ್ಯದ ಸ್ವಾಧೀನಕ್ಕೆ ಸಮನಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದೆ.