ಆಧಾರ್ ಕಾರ್ಡ್‌ನಲ್ಲಿ ಇನ್ಮುಂದೆ ಹೆಸರು, ವಿಳಾಸ ಇರಲ್ಲ; ಕೇವಲ ಫೋಟೊ, ಕ್ಯೂಆರ್ ಕೋಡ್ ಮಾತ್ರ

ವೈಯಕ್ತಿಕ ಡೇಟಾ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಮತ್ತು ಹೋಟೆಲ್‌ಗಳು, ಸಮಾರಂಭಗಳು ಸೇರಿದಂತೆ ವಿವಿಧೆಡೆ ನಡೆಯುವ ಅಕ್ರಮ ಆಫ್‌ಲೈನ್ ಪರಿಶೀಲನೆಗೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.

Update: 2025-11-20 03:30 GMT

 ದೇಶದ ಪ್ರತಿಯೊಬ್ಬ ನಾಗರಿಕರ ಪ್ರಮುಖ ಗುರುತಿನ ಚೀಟಿಯಾಗಿರುವ ಆಧಾರ್ ಕಾರ್ಡ್‌ನ ಸ್ವರೂಪದಲ್ಲಿ ಮಹತ್ತರ ಬದಲಾವಣೆ ಮಾಡಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಚಿಂತನೆ ನಡೆಸಿದೆ. ಉದ್ದೇಶಿತ ಹೊಸ ವಿನ್ಯಾಸದ ಪ್ರಕಾರ, ಆಧಾರ್ ಕಾರ್ಡ್‌ಗಳ ಮೇಲೆ ಇನ್ನು ಮುಂದೆ ಹೆಸರು, ವಿಳಾಸ ಅಥವಾ 12 ಅಂಕಿಯ ಆಧಾರ್ ಸಂಖ್ಯೆ ಮುದ್ರಿತವಾಗಿರುವುದಿಲ್ಲ. ಬದಲಿಗೆ, ಕೇವಲ ವ್ಯಕ್ತಿಯ ಫೋಟೊ ಮತ್ತು ಕ್ಯೂಆರ್ (QR) ಕೋಡ್ ಮಾತ್ರ ಇರಲಿದೆ ಎಂದು ಮೂಲಗಳು ತಿಳಿಸಿವೆ.

ವೈಯಕ್ತಿಕ ಡೇಟಾ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಮತ್ತು ಹೋಟೆಲ್‌ಗಳು, ಸಮಾರಂಭಗಳು ಸೇರಿದಂತೆ ವಿವಿಧೆಡೆ ನಡೆಯುವ ಅಕ್ರಮ ಆಫ್‌ಲೈನ್ ಪರಿಶೀಲನೆಗೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಡಿಸೆಂಬರ್ 2025ರಿಂದ ಜಾರಿಗೆ ಬರುವಂತೆ ಹೊಸ ನಿಯಮಗಳನ್ನು ರೂಪಿಸಲು ಪ್ರಾಧಿಕಾರ ಸಿದ್ಧತೆ ನಡೆಸಿದೆ ಎಂದು UIDAI ಸಿಇಒ ಭುವನೇಶ್ವರ್ ಕುಮಾರ್ ಆನ್‌ಲೈನ್ ಸಮಾವೇಶವೊಂದರಲ್ಲಿ ತಿಳಿಸಿದ್ದಾರೆ.

ಮುದ್ರಿತ ವಿವರಗಳನ್ನು ತೆಗೆದುಹಾಕುತ್ತಿರುವುದೇಕೆ?

ಈ ಬದಲಾವಣೆಯ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿದ ಭುವನೇಶ್ವರ್ ಕುಮಾರ್, "ಕಾರ್ಡ್ ಮೇಲೆ ಯಾವುದೇ ವಿವರಗಳು ಏಕೆ ಇರಬೇಕು ಎಂಬ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ನಮ್ಮ ಪ್ರಕಾರ ಅಲ್ಲಿ ಕೇವಲ ಫೋಟೊ ಮತ್ತು ಕ್ಯೂಆರ್ ಕೋಡ್ ಇದ್ದರೆ ಸಾಕು. ನಾವು ವಿವರಗಳನ್ನು ಮುದ್ರಿಸುತ್ತಾ ಹೋದರೆ, ಜನರು ಅದನ್ನೇ ನಂಬಿ ಸ್ವೀಕರಿಸುತ್ತಾರೆ. ಇದನ್ನು ದುರ್ಬಳಕೆ ಮಾಡಿಕೊಳ್ಳುವವರು ಅದನ್ನು ಮುಂದುವರಿಸುತ್ತಾರೆ," ಎಂದು ಹೇಳಿದ್ದಾರೆ.

ಆಧಾರ್ ಕಾಯ್ದೆಯ ಪ್ರಕಾರ, ಆಫ್‌ಲೈನ್ ಪರಿಶೀಲನೆಯ ಸಮಯದಲ್ಲಿ ಆಧಾರ್ ಸಂಖ್ಯೆ ಅಥವಾ ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸುವುದು, ಬಳಸುವುದು ಅಥವಾ ಶೇಖರಿಸಿಡುವುದು ನಿಷಿದ್ಧ. ಆದಾಗ್ಯೂ, ಅನೇಕ ಸಂಸ್ಥೆಗಳು ನಿಯಮಬಾಹಿರವಾಗಿ ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿಗಳನ್ನು ಪಡೆಯುತ್ತಿವೆ. ಇದು ವಂಚನೆ ಮತ್ತು ಗುರುತು ಕಳ್ಳತನದಂತಹ (Identity Theft) ಅಪರಾಧಗಳಿಗೆ ದಾರಿಮಾಡಿಕೊಡುತ್ತಿದೆ. ಹೊಸ ವಿನ್ಯಾಸದಲ್ಲಿ ಎಲ್ಲಾ ಅಗತ್ಯ ಮಾಹಿತಿಯು ಕ್ಯೂಆರ್ ಕೋಡ್‌ನಲ್ಲಿ ಸುರಕ್ಷಿತವಾಗಿರುತ್ತದೆ. ಇದನ್ನು ಅಧಿಕೃತ ದೃಢೀಕರಣದ ಮೂಲಕ ಮಾತ್ರ ಓದಲು ಸಾಧ್ಯವಾಗಲಿದೆ.

ಡಿಸೆಂಬರ್ 1 ರಂದು ಮಹತ್ವದ ಸಭೆ

ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಈ ಪ್ರಸ್ತಾಪಿತ ನಿಯಮ ಬದಲಾವಣೆಯ ಕುರಿತು ಡಿಸೆಂಬರ್ 1, 2025 ರಂದು ನಡೆಯಲಿರುವ ಆಧಾರ್ ಪ್ರಾಧಿಕಾರದ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಹೊಸ 'ಆಧಾರ್ ಆ್ಯಪ್' ಬಿಡುಗಡೆಗೆ ಸಿದ್ಧತೆ

ಈ ಬದಲಾವಣೆಗೆ ಪೂರಕವಾಗಿ, ಪ್ರಸ್ತುತ ಬಳಕೆಯಲ್ಲಿರುವ 'ಎಂ-ಆಧಾರ್' (mAadhaar) ಅಪ್ಲಿಕೇಶನ್ ಬದಲಿಗೆ ಹೊಸ ಸುಧಾರಿತ ಆ್ಯಪ್ ಒಂದನ್ನು ಬಿಡುಗಡೆ ಮಾಡಲು UIDAI ಮುಂದಾಗಿದೆ.

ಹೊಸ ಆ್ಯಪ್ ಕ್ಯೂಆರ್ ಕೋಡ್ ಆಧಾರಿತ ಪರಿಶೀಲನೆಯ ಜೊತೆಗೆ ಫೇಶಿಯಲ್ ರೆಕಗ್ನಿಷನ್ (ಮುಖ ಚಹರೆ ಪತ್ತೆ) ತಂತ್ರಜ್ಞಾನವನ್ನೂ ಒಳಗೊಂಡಿರಲಿದೆ.ವಿಮಾನ ನಿಲ್ದಾಣಗಳಲ್ಲಿ ಬಳಸಲಾಗುವ 'ಡಿಜಿ ಯಾತ್ರಾ' ಮಾದರಿಯಲ್ಲಿಯೇ ಇದು ಕಾರ್ಯನಿರ್ವಹಿಸಲಿದೆ. ಹೋಟೆಲ್ ಚೆಕ್-ಇನ್, ವಯಸ್ಸಿನ ದೃಢೀಕರಣ ಮತ್ತು ಇತರೆ ಪ್ರವೇಶಾತಿ ಸಂದರ್ಭಗಳಲ್ಲಿ ಬಳಕೆದಾರರು ತಮ್ಮ ಸಂಪೂರ್ಣ ವಿವರಗಳನ್ನು ನೀಡದೆಯೇ, ಅಗತ್ಯವಿರುವ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ.

Tags:    

Similar News