Wayanad Landslide| ರಕ್ಷಣಾ ತಂಡಗಳು ಸ್ಥಳವನ್ನು ತಲುಪಲು ಏಕೆ ಸಾಧ್ಯವಾಗುತ್ತಿಲ್ಲ?
ಮುಂಡಕ್ಕೈನಲ್ಲಿ ಸಂಭವಿಸಿದ ಭೂಕುಸಿತದಿಂದ ನೂರಾರು ಜನರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.ಸದ್ಯಕ್ಕೆ ಎನ್‌ಡಿಆರ್‌ಎಫ್‌ನ ತಂಡವೊಂದು ಹಗ್ಗದ ಮೂಲಕ ಮುಂಡಕ್ಕೈಗೆ ತಲುಪಿದ್ದು, ಗಂಭೀರವಾಗಿ ಗಾಯಗೊಂಡ ಜನರನ್ನು ಸ್ಥಳಾಂತರಿಸಲು ಪ್ರಾರಂಭಿಸಿದೆ.;
ಮಧ್ಯಾಹ್ನ12:30, ಜುಲೈ 30, 2024: ವಯನಾಡ್ ಜಿಲ್ಲೆಯ ಮುಂಡಕ್ಕೈನಲ್ಲಿ ಭೂಕುಸಿತ ಸಂಭವಿಸಿ ಸುಮಾರು 12 ಗಂಟೆಗಳಾಗಿದ್ದು, ನೂರಾರು ಜನರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.
ಎನ್‌ಡಿಆರ್‌ಎಫ್‌ನ ಒಂದು ತಂಡ ಮಾತ್ರ ಹಗ್ಗದ ಮೂಲಕ ಅಲ್ಲಿಗೆ ತಲುಪಿ, ಗಂಭೀರವಾಗಿ ಗಾಯಗೊಂಡವರನ್ನು ಸ್ಥಳಾಂತರಿಸಲು ಪ್ರಾರಂಭಿಸಿತು. ಚೂರಲ್ಮಲ ನದಿಗೆ ಇದ್ದ ಏಕೈಕ ಸೇತುವೆ ಕೊಚ್ಚಿ ಹೋಗಿರುವುದರಿಂದ, ರಕ್ಷಣಾ ತಂಡಗಳಿಗೆ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ.
ಇಡೀ ಪಟ್ಟಣ ಸಮಾಧಿ: ದೂರವಾಣಿ ಮೂಲಕ ಮಾತನ್ನಾಡಿದ ಬದುಕುಳಿದವರ ಪ್ರಕಾರ, ಇಡೀ ಮುಂಡಕ್ಕೈ ಪಟ್ಟಣ ಅವಶೇಷಗಳು, ಕಲ್ಲುಗಳು ಮತ್ತು ಮಣ್ಣಿನ ಅಡಿಯಲ್ಲಿ ಹೂತುಹೋಗಿದೆ. ಎರಡು ಗಂಟೆಗಳ ನಂತರ, ಎರಡನೇ ಭಾರಿ ಭೂಕುಸಿತ ಸಂಭವಿಸಿ ಚೂರಲ್ಮಲ ವನ್ನು ಅಪ್ಪಳಿಸಿತು. ಇದು ವ್ಯಾಪಕ ವಿನಾಶ ಉಂಟುಮಾಡಿತು ಮತ್ತು ಇದುವರೆಗೆ ಕನಿಷ್ಠ 47 ಸಾವಿಗೆ ಕಾರಣವಾಗಿದೆ. ಮಲಪ್ಪುರಂ ಜಿಲ್ಲೆಯ ಪೋತುಕಲ್ಲು ಬಳಿಯ ಚಲಿಯಾರ್ ನದಿಯಲ್ಲಿ 10 ಕ್ಕೂ ಹೆಚ್ಚು ಮೃತದೇಹಗಳು ಪತ್ತೆಯಾಗಿವೆ.
ಮುಂಡಕ್ಕೈನಲ್ಲಿ ಎಷ್ಟು ಜೀವಹಾನಿ ಆಗಿದೆ ಎಂದು ನಿರ್ಧರಿಸಲು ಸಾಧ್ಯವಾಗಿಲ್ಲ. ಎನ್‌ಡಿಆರ್‌ಎಫ್ ಮತ್ತು ಸೇನೆ ಸೇರಿದಂತೆ ರಕ್ಷಣಾ ತಂಡಗಳು ಕುಸಿದ ಪ್ರದೇಶವನ್ನು ತಲುಪಲು ತೀವ್ರ ಪ್ರಯತ್ನ ನಡೆಸುತ್ತಿವೆ.
ಗಾಯಗೊಂಡವರು ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ: ಮೆಪ್ಪಾಡಿಯ ಮುಂಡಕ್ಕೈಯ ಸೆಂಟಿನೆಲ್ ರಾಕ್ ಎಸ್ಟೇಟ್‌ನಲ್ಲಿರುವ ಟ್ರೀ ವ್ಯಾಲಿ ರೆಸಾರ್ಟ್‌ನಲ್ಲಿ ಸುಮಾರು 70- 100 ಜನರು ಆಶ್ರಯ ಪಡೆದಿದ್ದಾರೆ.
ʻನಾವು ಸಂತ್ರಸ್ತರಿಗೆ ಆಶ್ರಯ ನೀಡಿದ್ಧೇವೆ. ಮಹಿಳೆಯರು ಮತ್ತು ಮಕ್ಕಳಿದ್ದು, ಹಲವರು ಗಾಯಗೊಂಡಿದ್ದಾರೆ. ನಮ್ಮ ಬಳಿ ಪ್ಯಾರಾಸಿಟಮಾಲ್ ಮತ್ತು ಆಂಟಿಸೆಪ್ಟಿಕ್ ಪೌಡರ್‌ನಂತಹ ಅಗತ್ಯ ಔಷಧಗಳ ಸೀಮಿತ ಸ್ಟಾಕ್ ಇದೆ. ನಮ್ಮಿಂದ ಸಾಧ್ಯವಿರುವ ಚಿಕಿತ್ಸೆ ನೀಡಲು ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಆದರೆ, ಕೆಲವರ ಮೂಳೆಗಳು ಮುರಿದಿವೆ ಮತ್ತು ಭುಜ ಪಲ್ಲಟಗೊಂಡು, ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ’ ಎಂದು ರೆಸಾರ್ಟ್‌ನ ಉದ್ಯೋಗಿ ಯೂನಸ್ ದೂರವಾಣಿ ಮೂಲಕ ತಿಳಿಸಿದರು.
ʻಮುಂಡಕ್ಕೈ ಎಂಬ ಸಣ್ಣ ಪಟ್ಟಣ ಸಂಪೂರ್ಣವಾಗಿ ನಾಶವಾಗಿದೆ. ಸ್ಥಳೀಯ ಮಸೀದಿ ಸಂಪೂರ್ಣವಾಗಿ ಕೊಚ್ಚಿಹೋಗಿದೆ; ಅಲ್ಲಿ ವಾಸಿಸುತ್ತಿದ್ದ ಇಮಾಮ್ ಮತ್ತು ಇತರರು ಏನಾದರೋ ಗೊತ್ತಿಲ್ಲ,ʼ ಎಂದು ಯೂನಸ್ ಹೇಳಿದರು.
ಬೆಟ್ಟದ ಮೇಲಿನ ರೆಸಾರ್ಟಿನಲ್ಲಿ ನೆಲೆ: ಭೂಕುಸಿತದಿಂದ ಪಾರಾದ ಮುಂಡಕ್ಕೈ ನಿವಾಸಿ ಮಿನ್ನತ್, ನೂರು ಸ್ಥಳೀಯರೊಂದಿಗೆ ಬೆಟ್ಟದ ಮೇಲಿದ್ದಾರೆ.
ʻನಾನು ತಪ್ಪಿಸಿಕೊಂಡಿದ್ದೇನೆ. ಆದರೆ, ನನ್ನ ಕುಟುಂಬದ ಕೆಲವು ಸದಸ್ಯರು ಕಾಣೆಯಾಗಿದ್ದಾರೆ. ನಾವು ಬೆಟ್ಟದ ತುದಿಯಲ್ಲಿ ಆಶ್ರಯ ಪಡೆದಿದ್ದೇವೆ. ಇಲ್ಲಿ ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಒಬ್ಬ ವಯಸ್ಸಾದ ಮಹಿಳೆ ಮತ್ತು ಇನ್ನೊಬ್ಬರು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದಾರೆ ಮತ್ತು ನಮ್ಮನ್ನು ತಲುಪಲು ಯಾರಿಗೂ ಸಾಧ್ಯವಾಗಿಲ್ಲ,ʼ ಎಂದು ಮಿನ್ನತ್ ದ ಫೆಡರಲ್‌ಗೆ ಫೋನ್‌ನಲ್ಲಿ ತಿಳಿಸಿದರು.
ಹನ್ನೊಂದು ಶವ ಪತ್ತೆ: ಮಲಪ್ಪುರಂ ಜಿಲ್ಲೆಯ ನಿಲಂಬೂರಿನ ಶಾಸಕ ಪಿ.ವಿ. ಅನ್ವರ್ ಪ್ರಕಾರ, ವಯನಾಡಿನಿಂದ ಮುಂಡಕ್ಕೈ ಮತ್ತು ಚೂರ ಲ್ ಪಾರಾ ಮೂಲಕ ಹರಿಯುವ ಚಾಲಿಯಾರ್ ನದಿಯಿಂದ ಕನಿಷ್ಠ 11 ಶವಗಳನ್ನು ಹೊರತೆಗೆಯಲಾಗಿದೆ.
ʻ6 ಗಂಟೆಗೆ ಮೊದಲ ದೇಹವನ್ನು ಎತ್ತಿದೆವು. ಹೆಚ್ಚಿನ ದೇಹಗಳು ಬರುತ್ತಲೇ ಇದ್ದವು. ಈವರೆಗೆ 10 ದೇಹಗಳು ಸಿಕ್ಕಿವೆ. ಜೊತೆಗೆ, ಅಂಗಗಳು ಮತ್ತು ಮುಂಡಗಳು ಕೂಡ ಪತ್ತೆಯಾಗಿವೆ. ಮೃತದೇಹಗಳನ್ನು ನಿಲಂಬೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಗುರುತಿಸುವ ಪ್ರಯತ್ನ ನಡೆಯುತ್ತಿದೆ,ʼ ಎಂದು ಅನ್ವರ್ ತಿಳಿಸಿದ್ದಾರೆ.
ಬೆಳಗ್ಗೆ 8 ಗಂಟೆ ವೇಳೆಗೆ ಕುತ್ತಿಗೆವರೆಗೆ ಕೆಸರಿನಲ್ಲಿ ಮುಳುಗಿದ್ದ ವ್ಯಕ್ತಿಯೊಬ್ಬರು ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಅಗ್ನಿಶಾಮಕ ದಳದ ತಂಡವು ಮಧ್ಯಾಹ್ನ 12.10 ರ ಹೊತ್ತಿಗೆ ಅವರನ್ನು ಹೊರತೆಗೆಯಿತು. ಆದರೆ, ಅವರ ಪ್ರಸ್ತುತ ಆರೋಗ್ಯ ಸ್ಥಿತಿ ತಿಳಿದಿಲ್ಲ.
78 ಮಂದಿ ಆಸ್ಪತ್ರೆಗೆ: ʻಅವರು ಕೆಸರಿನಿಂದ ಹೊರಬರಲು ಹೆಣಗಾಡುತ್ತಿರುವುದನ್ನು ನೋಡುವುದು ಹೃದಯವಿದ್ರಾವಕ ದೃಶ್ಯವಾಗಿತ್ತು. ನಾವು ಸುಮಾರು 300 ಮೀಟರ್ ದೂರದಲ್ಲಿ ಅಸಹಾಯಕತೆಯಿಂದ ನೋಡುತ್ತಿದ್ದೆವು. ಅಧಿಕಾರಿಗಳು ಮತ್ತು ಟಿವಿ ಚಾನೆಲ್‌ಗಳನ್ನು ಸಂಪರ್ಕಿಸಿದ್ದು, ಫಲ ನೀಡಿತು. ಅವರನ್ನು ಹೊರತೆಗೆಯಲಾಯಿತು,ʼ' ಎಂದು ಸಾಮಾಜಿಕ ಕಾರ್ಯಕರ್ತ ರಾಘವನ್ ಹೇಳಿದರು.
ʻಮಧ್ಯಾಹ್ನ 12:30 ರ ಹೊತ್ತಿಗೆ 78 ಜನರನ್ನು ಮೆಪ್ಪಾಡಿಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದೇವೆ. ಈ ಪೈಕಿ 9 ಮಂದಿ ಐಸಿಯುನಲ್ಲಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ,ʼ ಎಂದು ಆಸ್ಪತ್ರೆಯ ಡಾ.ಶಾನವಾಸ್ ತಿಳಿಸಿದ್ದಾರೆ.
ವಿದ್ಯುತ್, ಮೊಬೈಲ್ ಸ್ಥಗಿತ: ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರಿಗೆ ಫೋನ್ ಕರೆಗಳು ಸುರಿಮಳೆ ಆಗುತ್ತಿದೆ. ಯಾವುದೇ ಮಾಹಿತಿಯಿಲ್ಲದೇ ಇರುವುದರಿಂದ, ಸಮಸ್ಯೆಗಳನ್ನು ಪ್ರಸಾರ ಮಾಡಲು ಒತ್ತಾಯಿಸಲಾಗುತ್ತಿದೆ. ಮುಂಡಕ್ಕೈ ಪ್ರದೇಶದಲ್ಲಿ ವಿದ್ಯುತ್ ಮತ್ತು ಮೊಬೈಲ್ ಸಂಪರ್ಕಗಳು ಸ್ಥಗಿತಗೊಂಡಿವೆ.
ʻಮುಂಡಕ್ಕೈ ಪ್ರದೇಶದಲ್ಲಿ ರಾತ್ರಿ ಬೇಗ ಆರಂಭವಾಗುವುದರಿಂದ, ಸಂಜೆ 5 ಗಂಟೆಗೆ ಮೊದಲು ಸಾಧ್ಯವಿರುವ ಎಲ್ಲವನ್ನೂ ಮಾಡಲು ಪ್ರಯತ್ನಿಸುತ್ತಿದ್ದೇವೆ,ʼ ಎಂದು ಕಲ್ಪೆಟ್ಟಾದ ಸ್ಥಳೀಯ ಶಾಸಕ ಟಿ. ಸಿದ್ದಿಕ್ ಹೇಳಿದರು.
ಪರಿಮಾಣ ಇನ್ನೂ ತಿಳಿದಿಲ್ಲ: ದುರಂತದ ಪ್ರಮಾಣ ಇನ್ನೂ ತಿಳಿದುಬಂದಿಲ್ಲ; ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ತಾತ್ಕಾಲಿಕ ಸೇತುವೆ ನಿರ್ಮಿಸಿದ ನಂತರ ರಕ್ಷಣಾ ತಂಡವು ಸ್ಥಳವನ್ನು ತಲುಪಿದಾಗ ಮಾತ್ರ ಸ್ಪಷ್ಟ ಚಿತ್ರಣ ಸಿಗಲಿದೆ.
ʻಪರಿಸ್ಥಿತಿಯ ಗಂಭೀರತೆ ಕಲ್ಪನೆಗೂ ಮೀರಿದೆ. ಪರಿಸ್ಥಿತಿಯನ್ನು ನಿರ್ಣಯಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಸ್ವಯಂಸೇವಕರು ಸ್ಥಳಕ್ಕೆ ಬರಬೇಡಿ. ತರಬೇತಿ ಪಡೆದ ರಕ್ಷಕರು ಮಾತ್ರ ಏನಾದರೂ ಮಾಡಬಹುದು,ʼ ಎಂದು ಎನ್ ಡಿಆರ್‌ಎಫ್ ಅಧಿಕಾರಿ ಹೇಳಿದರು.