ರೈತ ಮಹಿಳೆ ಬಗ್ಗೆ ಮಾಡಿದ್ದ ಟ್ವೀಟ್‌ಗೆ ಕ್ಷಮೆಯಾಚಿಸಿದ ನಟಿ, ಸಂಸದೆ ಕಂಗನಾ ರಣಾವತ್‌

ಕಂಗನಾ ವಿರುದ್ಧ ಮಹಿಂದರ್ ಕೌರ್ ಅವರು 2021 ರಲ್ಲಿ ಸಲ್ಲಿಸಿದ ಮಾನನಷ್ಟ ಪ್ರಕರಣದಲ್ಲಿ ರಣಾವತ್‌ಗೆ ಸೋಮವಾರ ನ್ಯಾಯಾಲಯವು ಜಾಮೀನು ನೀಡಿತ್ತು. ಮಂಡಿಯ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು 50,000 ರೂ.ಮೊತ್ತದ ಜಾಮೀನು ಬಾಂಡ್ ನೀಡಿದ ನಂತರ ಜಾಮೀನು ದೊರೆತಿದೆ.

Update: 2025-10-28 11:18 GMT

ಕಂಗನಾ ರಣಾವತ್

Click the Play button to listen to article

ದೆಹಲಿ ರೈತ ಚಳವಳಿಯ ಸಂದರ್ಭದಲ್ಲಿ, 100 ರೂಪಾಯಿಗೆ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ ಎಂದು ಅವಹೇಳನಕಾರಿ ಪೋಸ್ಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು 81 ವರ್ಷದ ರೈತ ಕಾರ್ಯಕರ್ತೆ ಮಹಿಂದರ್ ಕೌರ್ ಅವರಲ್ಲಿ ಕ್ಷಮೆಯಾಚಿಸಿದ್ದಾರೆ. ಆದರೆ, ಕಂಗನಾ ಅವರ ಕ್ಷಮೆಯನ್ನು ಸ್ವೀಕರಿಸಲು ವೃದ್ಧೆ ನಿರಾಕರಿಸಿದ್ದು, ತಮ್ಮ ಕಾನೂನು ಹೋರಾಟವನ್ನು ಮುಂದುವರೆಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಜಾಮೀನು ಪಡೆದು ಕ್ಷಮೆಯಾಚನೆ

ಮಹಿಂದರ್ ಕೌರ್ ಅವರು 2021ರಲ್ಲಿ ದಾಖಲಿಸಿದ್ದ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಂಗನಾ ರಣಾವತ್ ಅವರು ಸೋಮವಾರ (ಅ.27) ಬಟಿಂಡಾ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ನ್ಯಾಯಾಲಯವು ಅವರಿಗೆ 50,000 ರೂಪಾಯಿ ಮೌಲ್ಯದ ಜಾಮೀನು ಬಾಂಡ್ ಮೇಲೆ ಜಾಮೀನು ಮಂಜೂರು ಮಾಡಿತು. ಜಾಮೀನು ಪಡೆದ ನಂತರ ಮಾತನಾಡಿದ ಕಂಗನಾ, ತಮ್ಮ ಟ್ವೀಟ್‌ನಿಂದ ತಪ್ಪು ತಿಳುವಳಿಕೆ ಉಂಟಾಗಿದ್ದು, ಅದಕ್ಕಾಗಿ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದರು.

 ಆರೋಗ್ಯದ ಕಾರಣದಿಂದ ಮಹಿಂದರ್ ಕೌರ್ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅವರ ಪತಿ ಲಾಭ್ ಸಿಂಗ್ ಅವರು ಪತ್ನಿಯ ಪರವಾಗಿ ಹಾಜರಿದ್ದರು. "ನಾನು ಎಲ್ಲಾ ತಾಯಂದಿರನ್ನು ಗೌರವಿಸುತ್ತೇನೆ, ಅದು ಪಂಜಾಬ್ ಅಥವಾ ಹಿಮಾಚಲದವರಾಗಿರಲಿ. ಮಹಿಂದರ್ ಜೀ ಅವರ ಕುಟುಂಬದೊಂದಿಗೆ ಉಂಟಾದ ತಪ್ಪು ತಿಳುವಳಿಕೆ ಬಗ್ಗೆ ಅವರ ಪತಿಯ ಮೂಲಕ ವಿವರಿಸಿದ್ದೇನೆ," ಎಂದು ಕಂಗನಾ ತಿಳಿಸಿದರು.

ನಾನು ಆಕೆಯನ್ನು ಕ್ಷಮಿಸುವುದಿಲ್ಲ: ಮಹಿಂದರ್ ಕೌರ್

ಕಂಗನಾ ಕ್ಷಮೆಯಾಚನೆಯನ್ನು ತಿರಸ್ಕರಿಸಿದ ಮಹಿಂದರ್ ಕೌರ್, "ಆಕೆ ನನ್ನನ್ನು ಎಂದಿಗೂ ಭೇಟಿಯಾಗಿಲ್ಲ. ನಾನು ಅವಳನ್ನು ಕ್ಷಮಿಸುವುದಿಲ್ಲ. ಅವಳು ದೊಡ್ಡ ನಟಿ ಮತ್ತು ರಾಜಕಾರಣಿ ಇರಬಹುದು, ನಾನು ಸಣ್ಣ ರೈತೆ. ಆದರೂ, ಈ ಇಳಿ ವಯಸ್ಸಿನಲ್ಲಿ ಆಕೆ ನನ್ನನ್ನು ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ್ದಾಳೆ. ನನ್ನ ಕಾನೂನು ಹೋರಾಟ ಮುಂದುವರಿಯಲಿದೆ," ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ವಿವಾದದ ಹಿನ್ನೆಲೆ

ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ 2020-21ರಲ್ಲಿ ನಡೆದ ದೆಹಲಿ ರೈತ ಚಳವಳಿಯಲ್ಲಿ ಮಹಿಂದರ್ ಕೌರ್ ಭಾಗವಹಿಸಿದ್ದರು. ಆಗ ಕೌರ್ ಅವರ ಫೋಟೋವನ್ನು ಶಹೀನ್ ಬಾಗ್ ಪ್ರತಿಭಟನೆಯ 'ಬಿಲ್ಕಿಸ್ ಬಾನೊ' ಎಂದು ತಪ್ಪಾಗಿ ಭಾವಿಸಿದ್ದ ಕಂಗನಾ, “ಇಂತಹ ಮಹಿಳೆಯರು 100 ರೂಪಾಯಿಗೆ ಪ್ರತಿಭಟನೆಗೆ ಲಭ್ಯರಿದ್ದಾರೆ” ಎಂದು 'ಎಕ್ಸ್‌' (ಹಿಂದಿನ ಟ್ವಿಟರ್) ನಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದರು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ, ಮಹಿಂದರ್ ಕೌರ್ ಅವರು 2021ರ ಜನವರಿ 4ರಂದು ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. 

Tags:    

Similar News