ಕರ್ನೂಲ್ ಬಸ್ ದುರಂತಕ್ಕೆ ಮತ್ತೊಂದು ಟ್ವಿಸ್ಟ್: ಕುಡುಕ ಸ್ಕೂಟರ್ ಸವಾರ ಕಾರಣ?ವಿಡಿಯೊ ವೈರಲ್
ಅಪಘಾತ ಸಂಭವಿಸುವ ಕೆಲವೇ ನಿಮಿಷಗಳ ಮೊದಲು, ಅಂದರೆ ತಡರಾತ್ರಿ 2.23ರ ಸುಮಾರಿಗೆ, ಶಿವಶಂಕರ್ ತನ್ನ ಸ್ನೇಹಿತನೊಂದಿಗೆ ಪೆಟ್ರೋಲ್ ಬಂಕ್‌ಗೆ ಬಂದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಬಸ್ ಅಪಘಾತಕ್ಕೆ ಕಾರಣವಾದ ಬೈಕ್ ಸವಾರ
ಆಂಧ್ರಪ್ರದೇಶದ ಕರ್ನೂಲ್ ಬಳಿ 20 ಮಂದಿಯ ಸಾವಿಗೆ ಕಾರಣವಾದ ಭೀಕರ ಬಸ್ ದುರಂತಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಅಪಘಾತಕ್ಕೆ ಬೈಕ್ ಸವಾರನ ಅಜಾಗರೂಕತೆಯೇ ಕಾರಣ ಎಂಬ ಚರ್ಚೆ ನಡೆಯುತ್ತಿರುವಾಗಲೇ, ಮೃತ ಬೈಕ್ ಸವಾರ ಶಿವಶಂಕರ್ (22) ಅಪಘಾತಕ್ಕೂ ಮುನ್ನ ಮದ್ಯಪಾನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪೂರಕವೆಂಬಂತೆ, ಪೆಟ್ರೋಲ್ ಬಂಕ್ ಒಂದರ ಸಿಸಿಟಿವಿ ದೃಶ್ಯಾವಳಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಪಘಾತ ಸಂಭವಿಸುವ ಕೆಲವೇ ನಿಮಿಷಗಳ ಮೊದಲು, ಅಂದರೆ ತಡರಾತ್ರಿ 2.23ರ ಸುಮಾರಿಗೆ, ಶಿವಶಂಕರ್ ತನ್ನ ಸ್ನೇಹಿತನೊಂದಿಗೆ ಪೆಟ್ರೋಲ್ ಬಂಕ್‌ಗೆ ಬಂದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ, ಬಂಕ್‌ನಲ್ಲಿ ಯಾರೂ ಇಲ್ಲದ ಕಾರಣ, ಹಿಂಬದಿ ಸವಾರ ಬೈಕ್‌ನಿಂದ ಇಳಿದು ಹೊರನಡೆದಿದ್ದಾನೆ. ಅವನ ಹಿಂದೆಯೇ ಹೋದ ಶಂಕರ್, ನಂತರ ವಾಪಸ್ ಬಂದು ಒಂದೇ ಕೈಯಲ್ಲಿ ಬೈಕನ್ನು ತಿರುಗಿಸಿ, ಅಜಾಗರೂಕತೆಯಿಂದ ವೇಗವಾಗಿ ಚಲಾಯಿಸಿಕೊಂಡು ಹೋಗುವುದು ದೃಶ್ಯದಲ್ಲಿದೆ.
ಶಂಕರ್‌ನ ವರ್ತನೆಯನ್ನು ಗಮನಿಸಿರುವ ನೆಟ್ಟಿಗರು, ಆತ ಮದ್ಯದ ಅಮಲಿನಲ್ಲಿದ್ದ ಕಾರಣಕ್ಕಾಗಿಯೇ ಈ ದುರ್ಘಟನೆ ಸಂಭವಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಹಿಂಬದಿ ಸವಾರ ವಶಕ್ಕೆ
ಏತನ್ಮಧ್ಯೆ, ಶಂಕರ್ ಜೊತೆ ಬೈಕ್‌ನಲ್ಲಿದ್ದ ಹಿಂಬದಿ ಸವಾರನನ್ನು ಪತ್ತೆಹಚ್ಚಿರುವ ಪೊಲೀಸರು, ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆತ ನೀಡುವ ಮಾಹಿತಿಯು ತನಿಖೆಯ ದಿಕ್ಕನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗಲಿದೆ.
ಶುಕ್ರವಾರ ಮುಂಜಾನೆ, ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ವಿ. ಕಾವೇರಿ ಟ್ರಾವೆಲ್ಸ್‌ನ ಬಸ್, ಕರ್ನೂಲ್ ಜಿಲ್ಲೆಯ ಚಿನ್ನತೇಕೂರು ಗ್ರಾಮದ ಬಳಿ ಬೈಕ್‌ಗೆ ಡಿಕ್ಕಿ ಹೊಡೆದು, ಬೆಂಕಿಗಾಹುತಿಯಾಗಿತ್ತು. ಘಟನೆಯಲ್ಲಿ ಬೈಕ್ ಸವಾರ ಶಂಕರ್ ಸೇರಿದಂತೆ, ಬಸ್‌ನಲ್ಲಿದ್ದ 19 ಪ್ರಯಾಣಿಕರು ಸಜೀವ ದಹನವಾಗಿದ್ದರು. ಬಸ್‌ನಡಿ ಸಿಲುಕಿದ್ದ ಬೈಕ್‌ನ ಇಂಧನ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಬಸ್ ಚಾಲಕ ಮತ್ತು ಸಹ ಚಾಲಕನನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ.