ಅ.28ರಿಂದ 12 ರಾಜ್ಯಗಳಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ, ಕರ್ನಾಟಕದಲ್ಲಿ ಇದೆಯೇ?
ಪರಿಷ್ಕರಣೆ ನಡೆಯುವ 12 ರಾಜ್ಯಗಳಲ್ಲಿ ಇಂದು (ಸೋಮವಾರ) ಮಧ್ಯರಾತ್ರಿ 12 ಗಂಟೆಗೆ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯನ್ನು ಸ್ಥಗಿತಗೊಳಿಸಲಾಗುತ್ತದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' ಯಶಸ್ವಿಯಾಗಿ ಪೂರ್ಣಗೊಳಿಸಿರುವ ಚುನಾವಣಾ ಆಯೋಗವು ಇದೀಗ ಎರಡನೇ ಹಂತದ ಪ್ರಕ್ರಿಯೆಯನ್ನು ನಾಳೆಯಿಂದ (ಅ. 28) ಆರಂಭಿಸಲಿದೆ. 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರಂಭಿಸುವುದಾಗಿ ಆಯೋಗವು ಸೋಮವಾರ ಪ್ರಕಟಿಸಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಎರಡನೇ ಹಂತದಲ್ಲಿ ಗೋವಾ, ಛತ್ತೀಸ್‌ಗಢ, ಗುಜರಾತ್, ಕೇರಳ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಪುದುಚೇರಿ ಮತ್ತು ಲಕ್ಷದ್ವೀಪಗಳಲ್ಲಿ ಈ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಪರಿಷ್ಕರಣೆ ಪ್ರಕ್ರಿಯೆ ಹೇಗೆ ನಡೆಯಲಿದೆ?
ಈ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯು ಅತ್ಯಂತ ವ್ಯವಸ್ಥಿತವಾಗಿ ನಡೆಯಲಿದ್ದು, ಹಲವು ಹಂತಗಳನ್ನು ಒಳಗೊಂಡಿದೆ ಪರಿಷ್ಕರಣೆ ನಡೆಯುವ 12 ರಾಜ್ಯಗಳಲ್ಲಿ ಇಂದು (ಸೋಮವಾರ) ಮಧ್ಯರಾತ್ರಿ 12 ಗಂಟೆಗೆ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯನ್ನು ಸ್ಥಗಿತಗೊಳಿಸಲಾಗುತ್ತದೆ. ಪ್ರತಿ ಮತಗಟ್ಟೆಯ ವ್ಯಾಪ್ತಿಯಲ್ಲಿ, ಬೂತ್ ಮಟ್ಟದ ಅಧಿಕಾರಿಗಳು (BLO) ಪ್ರತಿ ಮನೆಗೂ ಕನಿಷ್ಠ ಮೂರು ಬಾರಿ ಭೇಟಿ ನೀಡಿ, ಮತದಾರರಿಗೆ 'ವಿಶಿಷ್ಟ ಗಣತಿ ನಮೂನೆ'ಗಳನ್ನು (Unique Enumeration Forms) ವಿತರಿಸಲಿದ್ದಾರೆ. ವಲಸೆ ಹೋದ ಅಥವಾ ಮನೆಯಲ್ಲಿ ಲಭ್ಯವಿಲ್ಲದ ಮತದಾರರು ತಮ್ಮ ಗಣತಿ ನಮೂನೆಗಳನ್ನು ಆನ್‌ಲೈನ್ ಮೂಲಕವೂ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
2003ರ ಮತದಾರರ ಪಟ್ಟಿಯಲ್ಲಿ ತಮ್ಮ ಅಥವಾ ತಮ್ಮ ಪೋಷಕರ ಹೆಸರು ಇರುವವರಿಗೆ ಯಾವುದೇ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ. ಇದಕ್ಕಾಗಿ 2002-2004ರ ಅವಧಿಯ ಮತದಾರರ ಪಟ್ಟಿಗಳನ್ನು ಸಾರ್ವಜನಿಕವಾಗಿ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.
ಪರಿಷ್ಕರಣೆ ಏಕೆ ಅಗತ್ಯ?
ವಲಸೆ, ಮರಣ ಹೊಂದಿದವರ ಹೆಸರುಗಳನ್ನು ತೆಗೆದುಹಾಕದಿರುವುದು, ಮತ್ತು ವಿದೇಶಿಯರ ಹೆಸರುಗಳು ತಪ್ಪಾಗಿ ಸೇರ್ಪಡೆಯಾಗುವಂತಹ ಸಮಸ್ಯೆಗಳಿಂದ ಮತದಾರರ ಪಟ್ಟಿಯ ನಿಖರತೆ ಕಡಿಮೆಯಾಗುತ್ತದೆ. ಇಂತಹ ದೋಷಗಳನ್ನು ಸರಿಪಡಿಸಲು ಈ ವಿಶೇಷ ತೀವ್ರ ಪರಿಷ್ಕರಣೆ ಅಗತ್ಯವಾಗಿದೆ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.
ರಾಜಕೀಯ ಪಕ್ಷಗಳು ಕೂಡ ಹಲವು ಬಾರಿ ಮತದಾರರ ಪಟ್ಟಿಯ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು. ಸ್ವಾತಂತ್ರ್ಯಾನಂತರ ಇದು 9ನೇ ವಿಶೇಷ ತೀವ್ರ ಪರಿಷ್ಕರಣೆಯಾಗಿದ್ದು, ಕೊನೆಯ ಬಾರಿಗೆ 21 ವರ್ಷಗಳ ಹಿಂದೆ (2002-2004) ಈ ಪ್ರಕ್ರಿಯೆ ನಡೆದಿತ್ತು.
ಬಿಹಾರದಲ್ಲಿ ಸುಮಾರು 7.5 ಕೋಟಿ ಮತದಾರರನ್ನು ಒಳಗೊಂಡ ಮೊದಲ ಹಂತದ ಪ್ರಕ್ರಿಯೆಯು ಯಾವುದೇ ಆಕ್ಷೇಪಣೆಗಳಿಲ್ಲದೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದು ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಆಯುಕ್ತರು ಶ್ಲಾಘಿಸಿದ್ದಾರೆ.