'ಮೋಂಥಾ' ಚಂಡಮಾರುತ: ಒಡಿಶಾ, ಬಂಗಾಳ, ತಮಿಳುನಾಡು, ಆಂಧ್ರದಲ್ಲಿ ಭಾರೀ ಮಳೆ ಸಾಧ್ಯತೆ
ಒಡಿಶಾ ಸರ್ಕಾರ ಕೂಡ ಚಂಡಮಾರುತವನ್ನು ಎದುರಿಸಲು ಸನ್ನದ್ಧವಾಗಿದ್ದು, ರಾಜ್ಯದ 30 ಜಿಲ್ಲೆಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಆಂಧ್ರಪ್ರದೇಶ ಮತ್ತು ಒಡಿಶಾದ ಕರಾವಳಿ ತೀರದಲ್ಲಿ 'ರೆಡ್ ಅಲರ್ಟ್' ಘೋಷಿಸಲಾಗಿದೆ.
ಈ ಋತುವಿನ ಮೊದಲ ಚಂಡಮಾರುತವಾದ 'ಮೋಂಥಾ' (Cyclone Montha), ಬಂಗಾಳಕೊಲ್ಲಿಯಲ್ಲಿ ತೀವ್ರಗೊಳ್ಳುತ್ತಿದ್ದು, ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಭಾರೀ ಮಳೆಯನ್ನು ಉಂಟುಮಾಡುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.
ಪ್ರಸ್ತುತ ಬಂಗಾಳಕೊಲ್ಲಿಯಲ್ಲಿ ಈ ವಾಯುಭಾರ ಕುಸಿತ ಮತ್ತಷ್ಟು ತೀವ್ರಗೊಂಡು ತೀವ್ರ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ. ನಾಳೆ (ಮಂಗಳವಾರ, ಅ. 28) ರಾತ್ರಿ ಆಂಧ್ರಪ್ರದೇಶದ ಕಾಕಿನಾಡ ಬಳಿ, ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವೆ ಮಾಡುವ ನಿರೀಕ್ಷೆಯಿದೆ ಎಂದು ಐಎಂಡಿ ತನ್ನ ವಿಶೇಷ ಬುಲೆಟಿನ್‌ನಲ್ಲಿ ತಿಳಿಸಿದೆ. ಈ ಸಂದರ್ಭದಲ್ಲಿ, ಗಂಟೆಗೆ 90-100 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಕೆಲವೊಮ್ಮೆ 110 ಕಿ.ಮೀ. ವೇಗವನ್ನು ತಲುಪುವ ಸಾಧ್ಯತೆಯಿದೆ.
ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಕಟ್ಟೆಚ್ಚರ
'ಮೋಂಥಾ' ಚಂಡಮಾರುತದ ಪ್ರಭಾವದಿಂದಾಗಿ ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳಲ್ಲಿ ಮಂಗಳವಾರದಿಂದ ಶುಕ್ರವಾರದವರೆಗೆ (ಅ. 28-31) ಭಾರೀ ಮಳೆಯಾಗಲಿದೆ. ಉತ್ತರ ಬಂಗಾಳದ ಗುಡ್ಡಗಾಡು ಪ್ರದೇಶಗಳಾದ ಡಾರ್ಜಿಲಿಂಗ್ ಮತ್ತು ಕಾಲಿಂಪಾಂಗ್‌ನಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಯ ಬಗ್ಗೆಯೂ ಹವಾಮಾನ ಇಲಾಖೆ ಎಚ್ಚರಿಸಿದೆ. ದಕ್ಷಿಣ ಬಂಗಾಳದ ತಗ್ಗು ಪ್ರದೇಶಗಳಲ್ಲಿ ಜಲಾವೃತವಾಗುವ ಸಂಭವವಿದೆ.
ಒಡಿಶಾ ಸರ್ಕಾರ ಕೂಡ ಚಂಡಮಾರುತವನ್ನು ಎದುರಿಸಲು ಸನ್ನದ್ಧವಾಗಿದ್ದು, ರಾಜ್ಯದ 30 ಜಿಲ್ಲೆಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಆಂಧ್ರಪ್ರದೇಶ ಮತ್ತು ಒಡಿಶಾದ ಕರಾವಳಿ ತೀರದಲ್ಲಿ 'ರೆಡ್ ಅಲರ್ಟ್' ಘೋಷಿಸಲಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.
ಮೀನುಗಾರರಿಗೆ ಎಚ್ಚರಿಕೆ, ರೈಲು ಸಂಚಾರ ರದ್ದು
ಚಂಡಮಾರುತದ ಹಿನ್ನೆಲೆಯಲ್ಲಿ, ಗುರುವಾರದವರೆಗೆ (ಅ. 30) ಸಮುದ್ರಕ್ಕೆ ಇಳಿಯದಂತೆ ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಮೀನುಗಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ, ದಕ್ಷಿಣ ಮಧ್ಯ ರೈಲ್ವೇಯು ವಿಶಾಖಪಟ್ಟಣಂ-ಚೆನ್ನೈ ನಡುವಿನ ಕೆಲವು ರೈಲು ಸೇವೆಗಳನ್ನು ರದ್ದುಗೊಳಿಸಿದೆ.
ಈ ಚಂಡಮಾರುತಕ್ಕೆ 'ಮೋಂಥಾ' ಎಂದು ಮ್ಯಾನ್ಮಾರ್ ದೇಶವು ಹೆಸರಿಟ್ಟಿದೆ. ಇದರರ್ಥ 'ವಿಜಯ' ಅಥವಾ 'ಗೆಲುವು'.[