ಕರ್ನೂಲ್ ಬಸ್ ದುರಂತ: ಬೈಕ್ ಸವಾರರು ಕುಡಿದಿದ್ದರು; ಅವಘಡದ ಚಿತ್ರಣ ವಿವರಿಸಿದ ಪೊಲೀಸರು

ಅಪಘಾತಕ್ಕೆ ಕಾರಣರಾದ ಬೈಕ್ ಸವಾರರಾದ ಶಿವಶಂಕರ್ ಮತ್ತು ಎರ್ರಿಸ್ವಾಮಿ ಇಬ್ಬರೂ ಮದ್ಯಪಾನ ಮಾಡಿದ್ದರು ಎಂದು ಕರ್ನೂಲ್ ವಲಯದ ಡಿಐಜಿ ಕೋಯಾ ಪ್ರವೀಣ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

Update: 2025-10-26 11:04 GMT

ಅಪಘಾತದಲ್ಲಿ ಬೆಂಕಿಗೆ ಆಹುತಿಯಾದ ಬಸ್‌

ಆಂಧ್ರಪ್ರದೇಶದ ಕರ್ನೂಲ್ ಬಳಿ ಶುಕ್ರವಾರ (ಅಕ್ಟೋಬರ್ 24) ಮುಂಜಾನೆ 19 ಪ್ರಯಾಣಿಕರನ್ನು ಬಲಿ ಪಡೆದ ಭೀಕರ ಬಸ್ ಅಗ್ನಿ ದುರಂತದ ತನಿಖೆ ಚುರುಕುಗೊಂಡಿದ್ದು, ಪೊಲೀಸರು ಘಟನೆಯ ಸಂಪೂರ್ಣ ಚಿತ್ರಣವನ್ನು ಬಿಚ್ಚಿಟ್ಟಿದ್ದಾರೆ. ಬಸ್‌ಗೆ ಸಿಲುಕಿದ್ದ ಬೈಕ್‌ನಲ್ಲಿದ್ದ ಇಬ್ಬರು ಯುವಕರು ಮದ್ಯಪಾನ ಮಾಡಿದ್ದರು ಎಂಬುದನ್ನು ವಿಧಿವಿಜ್ಞಾನ ವರದಿಯು ದೃಢಪಡಿಸಿದೆ ಎಂದು ಪೊಲೀಸರು ಭಾನುವಾರ (ಅಕ್ಟೋಬರ್ 26) ಖಚಿತಪಡಿಸಿದ್ದಾರೆ.

ಅಪಘಾತಕ್ಕೆ ಕಾರಣರಾದ ಬೈಕ್ ಸವಾರರಾದ ಶಿವಶಂಕರ್ ಮತ್ತು ಎರ್ರಿಸ್ವಾಮಿ ಇಬ್ಬರೂ ಮದ್ಯಪಾನ ಮಾಡಿದ್ದರು ಎಂದು ಕರ್ನೂಲ್ ವಲಯದ ಡಿಐಜಿ ಕೋಯಾ ಪ್ರವೀಣ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. "ಅವರು ಕುಡಿದಿರುವ ಬಗ್ಗೆ ನಮಗೆ ಮೊದಲೇ ಅನುಮಾನವಿತ್ತು. ಇದೀಗ ವಿಧಿವಿಜ್ಞಾನ ವರದಿಯಿಂದ ಅದು ದೃಢಪಟ್ಟಿದೆ" ಎಂದು ಅವರು ಹೇಳಿದ್ದಾರೆ. ಇಬ್ಬರೂ ಧಾಬಾದಲ್ಲಿ ಊಟ ಮಾಡಿದ್ದು, ಎರ್ರಿಸ್ವಾಮಿ ತಾನು ಮದ್ಯ ಸೇವಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಘಟನೆಗೂ ಮುನ್ನ, ಈ ಇಬ್ಬರೂ ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ದೃಶ್ಯಾವಳಿಯ ವೀಡಿಯೊ ವೈರಲ್ ಆಗಿದ್ದು, ಅದರಲ್ಲಿ ಶಿವಶಂಕರ್ ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಬೈಕ್ ಚಲಾಯಿಸುತ್ತಿರುವುದು ಕಂಡುಬಂದಿದೆ.

ಅವಘಡದ ಸರಣಿ ಹೇಗೆ ನಡೆಯಿತು?

ಪೊಲೀಸರ ಪ್ರಕಾರ, ಅಕ್ಟೋಬರ್ 24 ರಂದು ಮುಂಜಾನೆ 2 ಗಂಟೆ ಸುಮಾರಿಗೆ ಲಕ್ಷ್ಮೀಪುರಂ ಗ್ರಾಮದಿಂದ ಹೊರಟ ಶಿವಶಂಕರ್ ಮತ್ತು ಎರ್ರಿಸ್ವಾಮಿ, ಎರ್ರಿಸ್ವಾಮಿಯನ್ನು ತುಗ್ಗಲಿ ಗ್ರಾಮಕ್ಕೆ ಬಿಡಲು ಹೊರಟಿದ್ದರು. ಕರ್ನೂಲ್ ಜಿಲ್ಲೆಯ ಚಿನ್ನ ಟೇಕೂರು ಗ್ರಾಮದ ಬಳಿ, ಮಳೆಯಿಂದಾಗಿ ರಸ್ತೆ ಒದ್ದೆಯಾಗಿ ಮತ್ತು ಕೆಸರಾಗಿದ್ದರಿಂದ ಬೈಕ್ ಸ್ಕಿಡ್ ಆಗಿದೆ.

ಬೈಕ್ ಸ್ಕಿಡ್ ಆದ ರಭಸಕ್ಕೆ ರಸ್ತೆ ವಿಭಜಕಕ್ಕೆ ಡಿಕ್ಕು ಹೊಡೆದಿದ್ದು, ತಲೆ ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಎರ್ರಿಸ್ವಾಮಿ ಕೂಡ ಗಾಯಗೊಂಡಿದ್ದ ಹಾಗೂ ಎದ್ದು ನಿಂತು ಶಿವಶಂಕರ್ ದೇಹವನ್ನು ಪರೀಕ್ಷಿಸಿದಾಗ, ಆತ ಈಗಾಗಲೇ ಪ್ರಾಣ ಬಿಟ್ಟಿದ್ದ.

ಎರ್ರಿಸ್ವಾಮಿ ರಸ್ತೆಯಲ್ಲಿದ್ದ ಬೈಕನ್ನು ಪಕ್ಕಕ್ಕೆ ಸರಿಸುವಷ್ಟರಲ್ಲಿ, ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಸ್ಲೀಪರ್ ಬಸ್ ವೇಗವಾಗಿ ಬಂದು ಬೈಕನ್ನು ಅಪ್ಪಳಿಸಿದೆ. ಕಪ್ಪು ಬಣ್ಣದ ಬೈಕ್ ತನಗೆ ದೂರದಿಂದ ಬೈಕ್ ಕಾಣಿಸಲಿಲ್ಲ ಎಂದು ಬಸ್ ಚಾಲಕ ಮಿರಿಯಾಲ ಲಕ್ಷ್ಮಯ್ಯ ಪೊಲೀಸರಿಗೆ ತಿಳಿಸಿದ್ದಾರೆ.

ಬೆಂಕಿ ಹೊತ್ತಿಕೊಂಡಿದ್ದು ಹೇಗೆ?

ಬಸ್‌ನಡಿಗೆ ಸಿಲುಕಿದ ಬೈಕ್, ಕೆಲವು ಮೀಟರ್‌ಗಳವರೆಗೆ ಎಳೆದುಕೊಂಡು ಹೋಗಿದೆ. ಈ ವೇಳೆ ಬೈಕ್‌ನ ಇಂಧನ ಟ್ಯಾಂಕ್ ಒಡೆದು, ಸೋರಿಕೆಯಾದ ಪೆಟ್ರೋಲ್‌ನಿಂದ ಕಿಡಿ ಹೊತ್ತಿಕೊಂಡು ಬೆಂಕಿ ಕಾಣಿಸಿಕೊಂಡಿದೆ. ಅಲ್ಲದೆ, ಬಸ್‌ನ ಲಗೇಜ್ ಕ್ಯಾಬಿನ್‌ನಲ್ಲಿದ್ದ 234 ಸ್ಮಾರ್ಟ್‌ಫೋನ್‌ಗಳಿದ್ದ ಪಾರ್ಸೆಲ್ ಕೂಡ ಬೆಂಕಿಯ ತೀವ್ರತೆಗೆ ಸ್ಫೋಟಗೊಂಡಿದೆ. ಫೋನ್‌ಗಳಲ್ಲಿದ್ದ ಲಿಥಿಯಂ-ಐಯಾನ್ ಬ್ಯಾಟರಿಗಳು, ಬಸ್‌ನ ಸ್ವಂತ ಬ್ಯಾಟರಿಗಳು ಮತ್ತು ಇತರ ಸುಲಭವಾಗಿ ಹೊತ್ತಿಕೊಳ್ಳುವ ವಸ್ತುಗಳು ಬೆಂಕಿಯ ಕೆನ್ನಾಲಿಗೆಯನ್ನು ಇನ್ನಷ್ಟು ಹೆಚ್ಚಿಸಿವೆ ಎಂದು ಹೇಳಲಾಗಿದೆ.

ತನ್ನ ಕಣ್ಣೆದುರೇ ನಡೆದ ಸರಣಿ ಅಪಘಾತ ಮತ್ತು ಬಸ್ ಹೊತ್ತಿ ಉರಿಯುವುದನ್ನು ಕಂಡು ಭಯಭೀತನಾದ ಎರ್ರಿಸ್ವಾಮಿ, ಸ್ಥಳದಿಂದ ತನ್ನ ಗ್ರಾಮವಾದ ತುಗ್ಗಲಿಗೆ ಪರಾರಿಯಾಗಿದ್ದ. ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಎಲ್ಲಾ ಆಘಾತಕಾರಿ ವಿವರಗಳು ಬೆಳಕಿಗೆ ಬಂದಿವೆ. ಬಸ್‌ನಲ್ಲಿದ್ದ 44 ಪ್ರಯಾಣಿಕರಲ್ಲಿ, 19 ಮಂದಿ ದುರಂತದಲ್ಲಿ ಸಾವನ್ನಪ್ಪಿದರೆ, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  

Tags:    

Similar News