ನ್ಯಾಯಾಧೀಶರ ಮನೆಗೆ ನುಗ್ಗಿ ಕೊಲೆ ಬೆದರಿಕೆ ಹಾಕಿದ ದುಷ್ಕರ್ಮಿಗಳು
ನ್ಯಾಯಾಧೀಶರು ಇತ್ತೀಚೆಗೆ ನೀಡಿದ ತೀರ್ಪು ಅಥವಾ ಜಾಮೀನು ನಿರಾಕರಿಸಿದ ಪ್ರಕರಣಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರಬಹುದೇ ಎಂಬ ಕೋನದಲ್ಲಿ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮತಿ-ಉರ್-ರೆಹಮಾನ್ ತಿಳಿಸಿದ್ದಾರೆ.
ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯಲ್ಲಿ ನ್ಯಾಯಾಧೀಶರೊಬ್ಬರ ನಿವಾಸದ ಮೇಲೆ ಗುಂಪೊಂದು ದಾಳಿ ನಡೆಸಿ, ಕೊಲೆ ಬೆದರಿಕೆ ಹಾಕಿ, ಕಲ್ಲು ತೂರಾಟ ನಡೆಸಿದ ಆತಂಕಕಾರಿ ಘಟನೆ ವರದಿಯಾಗಿದೆ.
ಜಿಲ್ಲಾ ಕೇಂದ್ರದಿಂದ 35 ಕಿ.ಮೀ. ದೂರದಲ್ಲಿರುವ ಭಾಲುಮಾಡ ಎಂಬಲ್ಲಿ ಶುಕ್ರವಾರ ಮಧ್ಯರಾತ್ರಿ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಸಂಬಂಧ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಮನ್‌ದೀಪ್ ಸಿಂಗ್ ಛಾಬ್ರಾ ಅವರು ಭಾಲುಮಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಮ್ಮ ಅಧಿಕೃತ ನಿವಾಸದಲ್ಲಿ ಮಲಗಿದ್ದಾಗ, ದುಷ್ಕರ್ಮಿಗಳ ಗುಂಪು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದೆ. ಅಲ್ಲದೆ, ಮನೆಯ ಗೇಟ್‌ನಲ್ಲಿದ್ದ ದೀಪ ಮತ್ತು ಕಬ್ಬಿಣದ ಸರಳುಗಳನ್ನು ಜಖಂಗೊಳಿಸಿ, ಮನೆಯ ಮೇಲೆ ಕಲ್ಲು ತೂರಿದ್ದಾರೆ. ತಾವು ಮನೆಯಿಂದ ಹೊರಬರುತ್ತಿದ್ದಂತೆ ಗುಂಪು ಪರಾರಿಯಾಗಿದೆ ಎಂದು ಛಾಬ್ರಾ ದೂರಿನಲ್ಲಿ ವಿವರಿಸಿದ್ದಾರೆ.
ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನ್ಯಾಯಾಧೀಶರು ಇತ್ತೀಚೆಗೆ ನೀಡಿದ ತೀರ್ಪು ಅಥವಾ ಜಾಮೀನು ನಿರಾಕರಿಸಿದ ಪ್ರಕರಣಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರಬಹುದೇ ಎಂಬ ಕೋನದಲ್ಲಿ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮತಿ-ಉರ್-ರೆಹಮಾನ್ ತಿಳಿಸಿದ್ದಾರೆ.