Wayanad Landslide | ‌ರಾಜಕಾರಣಿಗಳು ಸೋತಲ್ಲಿ, ವಿಜ್ಞಾನವಷ್ಟೇ ಪರಿಹಾರ

ಈ ಪ್ರದೇಶವು ಪಶ್ಚಿಮ ಘಟ್ಟಗಳಲ್ಲಿನ ಅತ್ಯಂತ ದುರ್ಬಲವಾದ ಪರಿಸರ ವ್ಯವಸ್ಥೆಗಳಲ್ಲಿ ಒಂದು ಎಂದು ಗಾಡ್ಗೀಳ್‌ ವರದಿ ಹೇಳಿದೆ. ಆದರೆ, ರಾಜಕೀಯ ಪಕ್ಷಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವರದಿಗೆ ವಿರುದ್ಧವಾಗಿ ನಡೆದುಕೊಂಡಿದ್ದು, ಇದು ಬದುಕುಳಿಯುವಿಕೆ ವರ್ಸಸ್ ಜೀವನೋಪಾಯದ ಸಮಸ್ಯೆ ಎಂದು ಬಿಂಬಿಸಿದವು.;

Update: 2024-08-01 08:44 GMT
ಕೇರಳದ ವಯನಾಡ್ ಜಿಲ್ಲೆಯ ಚೂರಲ್ಮಲಾದಲ್ಲಿ ಭೂಕುಸಿತದ ನಂತರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸೇನಾ ಸಿಬ್ಬಂದಿ

ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರು ಸೃಷ್ಟಿಸಿದ ಕಾಲ್ಪನಿಕ ಪಾತ್ರ 'ಕಾಮನ್ ಮ್ಯಾನ್' ಛತ್ರಿಯಡಿ ನಿಂತು, ಮಳೆಯಲ್ಲಿ ನೆನೆದು ತೊಪ್ಪೆಯಾಗಿ ಬಸ್ ನಿಲ್ದಾಣದಲ್ಲಿ ನಿಂತ ವ್ಯಕ್ತಿಯನ್ನು ಪ್ರಶ್ನಾರ್ಥಕವಾಗಿ ನೋಡುತ್ತಾನೆ. ತಬ್ಬಿಬ್ಬಾದ ಆತ,  ʻನಾನು ಹವಾಮಾನ ಮುನ್ಸೂಚಕʼ ಎಂದು ಹಿಂಜರಿಯುತ್ತ ಹೇಳುತ್ತಾನೆ!

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಮಾಷೆ ವಿಷಯವಾಗಿದ್ದ ಕಾಲದಿಂದ ಬಹಳ ಮುಂದೆ ಬಂದಿದೆ. ಕಳೆದ ಎರಡು ದಶಕಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, ಆರಂಭಿಕ ಎಚ್ಚರಿಕೆ ವ್ಯವಸ್ಥೆ (ಇಡಬ್ಲ್ಯುಎಸ್) ಮತ್ತು ರಾಜ್ಯ ಸರ್ಕಾರಗಳ ಜಾಗರೂಕತೆಯಿಂದ ಚಂಡಮಾ ರುತ-ಸುನಾಮಿಗಳಿಂದ ಆಗುವ ಪ್ರಾಣ-ಆಸ್ತಿ ಹಾನಿ ಗಣನೀಯ ಪ್ರಮಾಣದಲ್ಲಿ ಇಳಿದಿದೆ. 

ಇಡಬ್ಲ್ಯುಎಸ್‌ ವ್ಯವಸ್ಥೆಯಿಂದ ಮೀನುಗಾರರು ಮತ್ತು ಕರಾವಳಿ ನಿವಾಸಿಗಳು ಎಚ್ಚರಿಕೆಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು, ಜೀವ ಮತ್ತು ಆಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಜನಸಾಮಾನ್ಯರನ್ನು ಸ್ಥಳದಿಂದ ಸ್ಥಳಾಂತರಿಸಲು ಮತ್ತು ತಾತ್ಕಾಲಿಕ ಶಿಬಿರಗಲ್ಲಿ ಆಹಾರ ಮತ್ತು ನೀರು ಒದಗಿಸಲು ಸಾಧ್ಯವಾಗಿದೆ. 

ನಿಖರ ವಿಜ್ಞಾನವಲ್ಲ: ಆದರೆ, ಹವಾಮಾನಶಾಸ್ತ್ರ ನಿಖರವಾದ ವಿಜ್ಞಾನವಲ್ಲ. ತಂತ್ರಜ್ಞಾನ ಮತ್ತು ಉನ್ನತ ದರ್ಜೆಯ ಕಂಪ್ಯೂಟರ್‌ ಗಳ ಹೊರತಾಗಿಯೂ, ಭೂಕಂಪ ಚಟುವಟಿಕೆ, ಭೂಕುಸಿತ ಇಲ್ಲವೇ ಕೆಟ್ಟ ಹವಾಮಾನಕ್ಕೆ ಕಾರಣಗಳನ್ನು ಊಹಿಸುವುದು ಒಗಟಾಗಿಯೇ ಉಳಿದಿದೆ. ಸಮುದ್ರ, ಹವಾಮಾನ ಮತ್ತು ಭೂಮಿ ನಡುವಿನ ಸಂಕೀರ್ಣ ಸಂಬಂಧವನ್ನು ನಿಖರವಾಗಿ ಊಹಿಸುವುದು ಸವಾಲಾಗಿ ಉಳಿದಿದೆ. 

ಈ ಮಿತಿಗಳ ಹೊರತಾಗಿಯೂ, ಹವಾಮಾನ ಇಲಾಖೆಯು ಕಳೆದ ಐದು ವರ್ಷಗಳಲ್ಲಿ ಮುನ್ಸೂಚನೆಯ ನಿಖರತೆಯಲ್ಲಿ ಶೇ.40ರಷ್ಟು ಸುಧಾರಣೆ, ಜೀವ ಮತ್ತು ಆಸ್ತಿ ಹಾನಿಯಲ್ಲಿ ಗಣನೀಯ ಇಳಿಕೆಯನ್ನು ವರದಿ ಮಾಡಿದೆ. ಐಎಂಡಿಯ 2017-21 ಮತ್ತು ಹಿಂದಿನ ಐದು ವರ್ಷಗಳ ತುಲನಾತ್ಮಕ ಅಧ್ಯಯನವು ಈ ಸುಧಾರಣೆಯನ್ನು ದೃಢಪಡಿಸುತ್ತದೆ. 

ಮಾತಿನ ಸಮರ: ಆದರೆ, ಭಾರಿ ವಿಪತ್ತುಗಳು ಸಂಭವಿಸಿದಾಗ, ರಾಜಕಾರಣಿಗಳು ಮತ್ತು ಅಧಿಕಾರಿಗಳು ಕೈಗಳನ್ನು ಹಿಸುಕಿಕೊಳ್ಳಬೇಕಾಗುತ್ತದೆ; ಉದಾಹರಣೆಗೆ, ಜುಲೈ 30 ರ ಮುಂಜಾನೆ ಸಂಭವಿಸಿದ ವಯನಾಡ್ ಭೂಕುಸಿತವು 200 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿದೆ, ನೂರಾರು ಮಂದಿ ಗಾಯಗೊಂಡಿದ್ದಾರೆ ಮತ್ತು ಸಾವಿರಾರು ಮಂದಿ ನಿರಾಶ್ರಿತರಾದರು. 

ದುರಂತಕ್ಕೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಎಡಪಕ್ಷಗಳ ಆಡಳಿತವಿರುವ ಕೇರಳ ಸರ್ಕಾರ ಈಗ ಮಾತಿನ ಯುದ್ಧದಲ್ಲಿ ತೊಡಗಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಅವರೊಂದಿಗೆ ಈ ಪ್ರದೇಶಕ್ಕೆ ಭೇಟಿ ನೀಡಿರುವುದು ರಾಜಕೀಯ ಬಿಸಿಯನ್ನು ಹೆಚ್ಚಿಸಲಿದೆ. 

2016ರಲ್ಲಿ ಆರಂಭಿಸಿದ ಇಡಬ್ಲ್ಯುಎಸ್‌ ದುರಂತಕ್ಕೆ ಸ್ಪಂದಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಹೇಳಿಕೊಂಡಿದ್ದಾರೆ. ಅವರ ಆದೇಶದ ಮೇರೆಗೆ, ವಿಪತ್ತು ಸಂಭವಿಸುವ ಒಂದು ವಾರ ಮೊದಲೇ, ಜುಲೈ 23 ರಂದು ಎನ್‌ ಡಿಆರ್‌ಎಫ್‌ ನ ಒಂಬತ್ತು ತಂಡಗಳನ್ನು ಕೇರಳಕ್ಕೆ ರವಾನಿಸಲಾಯಿತು. ದೇಶದ ಇಡಬ್ಲ್ಯುಎಸ್‌ ವಿಶ್ವ ದರ್ಜೆಯದು ಎಂದು ಅವರು ಪ್ರತಿಪಾದಿಸಿದರು. 

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದನ್ನು ಪ್ರಶ್ನಿಸಿದ್ದು, ದುರಂತ ನಡೆದ ಬೆಳಗ್ಗೆ ರೆಡ್ ಅಲರ್ಟ್ ಘೋಷಿಸಲಾಯಿತು ಎಂದಿ ದ್ದಾರೆ. ಐಎಂಡಿ ಒಂದು ದಿನದ ಹಿಂದೆ ಕೇವಲ 'ಆರೆಂಜ್' ಅಲರ್ಟ್‌ ನೀಡಿತ್ತು ಎಂದು ಹೇಳಿದ್ದಾರೆ.

ಘಟನೆಯನ್ನು ರಾಜಕೀಯಗೊಳಿಸುವುದಿಲ್ಲ ಎಂದು ಎರಡೂ ಪಕ್ಷಗಳು ಹೇಳಿಕೊಂಡರೂ, ಅವರು ತದ್ವಿರುದ್ಧವಾದುದನ್ನು ಮಾಡುತ್ತಿದ್ದಾರೆ.

ಪರಿಸರ ಕಾಳಜಿಗಳು: ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೇಖರ್ ಕುರಿಯಾಕೋಸ್, ಭೂಕುಸಿತಕ್ಕೆ ಕಾರಣಗಳು ಪರ್ವತಗಳ ಮೇಲಿನ ಅರಣ್ಯದ 6 ಕಿಮೀ ಒಳಗಿನ ದಟ್ಟವಾದ ʻನಿಷ್ಕಳಂಕ ಕಾಡುʼಗಳಲ್ಲಿವೆ ಎಂದು ಹೇಳುತ್ತಾರೆ. 

ಭೂಕುಸಿತ ಹೆಚ್ಚಿವ ಪ್ರದೇಶಕ್ಕೆ ವಿಸ್ತರಿಸಿತು ಮತ್ತು ಹತ್ತಿರದಲ್ಲಿ ಹರಿಯುವ ನದಿಯನ್ನು ಎರಡು ಭಾಗವಾಗಿ ವಿಭಜಿಸಿತು. ಕುರಿಯಾಕೋಸ್ ಇದನ್ನು 'ಅಭೂತಪೂರ್ವ' ಎಂದು ಕರೆಯುತ್ತಾರೆ. ಕೇರಳದಲ್ಲಿ 48 ಗಂಟೆಗಳಲ್ಲಿ 573 ಮಿಮೀ ಮಳೆ ಆಗಿದೆ; ಇದು ಇದೇ ಅವಧಿಯಲ್ಲಿ ಆಗುವ ಸರಾಸರಿ ಮಳೆಗಿಂತ ಶೇ.500 ರಷ್ಟು ಹೆಚ್ಚಳ. 

ಪರಿಸರ ತಜ್ಞ ಮಾಧವ್ ಗಾಡ್ಗೀಳ್ ಅವರು ಈ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿರುವುದು ಸೇರಿದಂತೆ ರಾಜಕೀಯ ನಿರ್ಧಾರಗಳು ವಯನಾಡಿನ ಪರಿಸರ ಅವನತಿಗೆ ಕಾರಣ ಎಂದು ವಾದಿಸುತ್ತಾರೆ. 

ಈ ಪ್ರದೇಶವು ಪಶ್ಚಿಮ ಘಟ್ಟಗಳಲ್ಲಿನ ಅತ್ಯಂತ ದುರ್ಬಲವಾದ ಪರಿಸರ ವ್ಯವಸ್ಥೆಗಳಲ್ಲಿ ಒಂದು ಎಂದು ಅವರ 2011ರ ವರದಿ ಗುರುತಿಸಿದೆ; ಈ ಪ್ರದೇಶದಲ್ಲಿ ಎಲ್ಲ ನಿರ್ಮಾಣ ಕಾಮಗಾರಿ ಮತ್ತು ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಲು ಶಿಫಾರಸು ಮಾಡಿದೆ. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಅವರ ಶಿಫಾರಸುಗಳನ್ನು ನಿರ್ಲಕ್ಷಿಸಿವೆ. 

ಪ್ರಕೃತಿ v/s ಜೀವನೋಪಾಯ ಸಂಘರ್ಷ: ರಾಜಕೀಯ ಪಕ್ಷಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗಾಡ್ಗೀಳ್ ಅವರ ವರದಿಗೆ ವಿರುದ್ಧವಾಗಿ ನಡೆದುಕೊಂಡಿದ್ದು, ಇದು ಬದುಕುಳಿಯುವಿಕೆ ವಿ/ಎಸ್‌ ಜೀವನೋಪಾಯದ ಸಮಸ್ಯೆ ಎಂದು ವಿಷಯವನ್ನು ಬುಡಮೇಲು ಮಾಡಿದವು. ಒಂದುವೇಳೆ ಇಡೀ ಪ್ರದೇಶವನ್ನು ಖಾಲಿ ಮಾಡಿದರೆ, ಅನೇಕರು ನಿರುದ್ಯೋಗಿಗಳಾಗುತ್ತಾರೆ ಮತ್ತು ಆದ್ದರಿಂದ, ಈ ಶಿಫಾರಸುಗಳು ಪ್ರಾಯೋಗಿಕವಲ್ಲ ಎಂದು ವಾದಿಸಲಾಯಿತು. 

ಗಾಡ್ಗೀಳ್‌ ಅವರ ವರದಿ ಬಳಿಕ, ಬಾಹ್ಯಾಕಾಶ ವಿಜ್ಞಾನಿ ಕೆ.ಕಸ್ತೂರಿರಂಗನ್ ನೇತೃತ್ವದ ಮತ್ತೊಂದು ಸಮಿತಿ ವರದಿ ನೀಡಿತು. ಶೇ.37ರಷ್ಟು ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಘೋಷಿಸಲು ಶಿಫಾರಸು ಮಾಡಿತು. ಆನಂತರ ಎಲ್ಲವೂ ಸ್ಥಗಿತಗೊಂಡಿತು. 

ಭೂಕುಸಿತಗಳು ಪರಿಸರ ನಾಶದಿಂದ ಸಂಭವಿಸಲು ಕಾಯುತ್ತಿರುವ ಮಾನವ ನಿರ್ಮಿತ ವಿಪತ್ತು ಎಂದು ಗಾಡ್ಗೀಳ್ ನಂಬುತ್ತಾರೆ. ಅವರ ಪ್ರಕಾರ, ರಾಜಕಾರಣಿಗಳು ಎತ್ತಿದ ಜೀವನೋಪಾಯದ ವಿಷಯ ನಕಲಿ ಆಗಿತ್ತು. ಇದರಿಂದ ಚಹಾ ತೋಟದ ಕಾರ್ಮಿಕರು ಮಾತ್ರ ಶೋಷಣೆಗೆ ಒಳಗಾದರೇ ಹೊರತು, ಶ್ರೀಮಂತರು ಮತ್ತು ಪ್ರಭಾವಿ ಭೂಮಾಲೀಕರು ಈ ಪ್ರದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಬರಿದಾಗಿಸುವ ಮೂಲಕ ಲಾಭ ಪಡೆದರು.

ಭೂಮಿ ಕುಸಿತದ ಮುನ್ಸೂಚನೆ: ಪಶ್ಚಿಮ ಘಟ್ಟಗಳು ಅವುಗಳ ಭೌಗೋಳಿಕತೆ ಕಾರಣದಿಂದ ಭಾರೀ ಮಳೆ ಪಡೆಯುತ್ತವೆ; ಪರ್ವತಗಳ ಮೇಲಿನ ಪದರಗಳು ನೀರಿನಿಂದ ನೆನೆದು, ಗುರುತ್ವಾಕರ್ಷಣೆಯಿಂದ ಕೆಳಕ್ಕೆ ಸೆಳೆಯಲ್ಪಟ್ಟಾಗ ಭೂಕುಸಿತಗಳು ಸಂಭವಿಸುತ್ತವೆ. 

ಭೂಕುಸಿತ ಯಾವಾಗ ಸಂಭವಿಸುತ್ತದೆ ಎಂಬುದನ್ನು ಊಹಿಸುವುದು ಕಷ್ಟ. ಆದರೆ, ವಿಜ್ಞಾನಿಗಳು ಉಪಗ್ರಹ ದತ್ತಾಂಶ ಮತ್ತು ಕಂಪ್ಯೂಟರ್ ಮಾದರಿಗಳನ್ನು ಬಳಸಿಕೊಂಡು, ಭೂಕುಸಿತಕ್ಕೆ ಒಳಗಾಗಬಹುದಾದ ಪ್ರದೇಶಗಳನ್ನು ಗುರುತಿಸಬಹುದು. ಭಾರೀ ಮಳೆ ಮತ್ತು ಭೂಕುಸಿತಗಳ ನಡುವಿನ ಸಂಬಂಧವನ್ನುಕೂಡ ಸಾಬೀತುಪಡಿಸಿದ್ದಾರೆ.

 ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿಪಡಿಸಿರುವ 'ಲ್ಯಾಂಡ್‌ಸ್ಲೈಡ್ ಅಟ್ಲಾಸ್', ಮೆಪ್ಪಾಡಿ ಮತ್ತು ಚೂರಲ್‌ಮಲಾವನ್ನು ಅಧಿಕ ಅಪಾಯದ ಪ್ರದೇಶಗಳೆಂದು ಪರಿಗಣಿಸಿದೆ.

ನಾಸಾ ಇದೇ ರೀತಿಯ ಜಾಗತಿಕ ಅಟ್ಲಾಸ್ ನ್ನು ಅಭಿವೃದ್ಧಿಪಡಿಸಿದೆ. ನಾಸಾ ಸ್ಥಾಪಿಸಿದ ಏಜೆನ್ಸಿ ʻಲ್ಯಾಂಡ್‌ಸ್ಲೈಡ್‌ ಹೆಜಾರ್ಡ್‌ ಅಸೆಸ್‌ಮೆಂಟ್‌ ಫಾರ್‌ ಸಿಚುಯೇಷನಲ್‌ ಅವೇರ್‌ನೆಸ್‌ʼ, ಪ್ರಪಂಚದಾದ್ಯಂತ ನಿಯಮಿತವಾಗಿ ಮುನ್ಸೂಚನೆಗಳನ್ನು ನೀಡುತ್ತದೆ.

ಎಐ, ಎಂಎಲ್‌ ಮತ್ತು ಬಿಗ್ ಡೇಟಾ: ವಿಜ್ಞಾನಿಗಳು ಉಪಗ್ರಹಗಳು ಮತ್ತು ವೀಕ್ಷಣಾ ಕೇಂದ್ರಗಳಿಂದ ದತ್ತಾಂಶಗಳನ್ನು ಬಳಸುತ್ತಾರೆ ಮತ್ತು ಇವುಗಳನ್ನು ವಾಸ್ತವ ಅಂಶಗಳೊಂದಿಗೆ ತಾಳೆ ನೋಡಲಾಗುತ್ತದೆ. 

ಸಾಂಪ್ರದಾಯಿಕ ವಿಧಾನದಲ್ಲಿ ಹವಾಮಾನಶಾಸ್ತ್ರಜ್ಞರು 50 ವಿಭಿನ್ನ ಮುನ್ಸೂಚನೆಗಳನ್ನು ಸಂಗ್ರಹಿಸಿ, ಅವುಗಳನ್ನು ಸಮಗ್ರವಾಗಿ ಸಂಯೋಜಿಸಿ, ಸ್ಪಷ್ಟವಾದ ಚಿತ್ರವನ್ನು ಸೃಷ್ಟಿಸುತ್ತಾರೆ. ಆದರೆ, ಕೃತಕ ಬುದ್ಧಿಮತ್ತೆಯ ಆಗಮನದಿಂದ ಲಕ್ಷಾಂತರ ಮೂಲಗಳಿಂದ ಸಂಗ್ರಹಿಸಿದ 'ಭಾರಿ ದತ್ತಾಂಶ'ಗಳನ್ನು ಮಷಿನ್ ಲರ್ನಿಂಗ್ ಅಲ್ಗರಿದಮ್‌ಗಳಿಗೆ ನೀಡಿ, ಭೂಕುಸಿತಗಳನ್ನು ಊಹಿಸಲಾಗುತ್ತದೆ. 

ಆದರೆ, ಮಾನವ ಪ್ರೇರಿತ ತಪ್ಪುಗಳು ಆಗುತ್ತವೆ; ಭಾರೀ ಮಳೆ, ತೀವ್ರ ಶೀತ ಅಲೆಗಳು, ಚಂಡಮಾರುತಗಳು ಮತ್ತು ಭೂಕಂಪ ಚಟುವಟಿಕೆಯಂತಹ ಅನಿರೀಕ್ಷಿತ ಘಟನೆಗಳಿಂದ ಪ್ರಕೃತಿಯು ನಮ್ಮನ್ನು ತಬ್ಬಿಬ್ಬುಗೊಳಿಸುತ್ತದೆ. 

ಇಂಗಾಲದ ಹೆಜ್ಜೆಗುರುತು ಹೆಚ್ಚಳ ಮತ್ತು ಇದರ ಪರಿಣಾಮವಾದ ಹವಾಮಾನ ಬದಲಾವಣೆಯಿಂದ ಉಂಟಾಗುವ ಸಮಸ್ಯೆಗಳನ್ನು ರಾಜಕೀಯ ವರ್ಗ ಗಂಭೀರವಾಗಿ ಪರಿಗಣಿಸಬೇಕಿದೆ. 

ಪರಿಹಾರದ ಕಡೆಗೆ: ಶ್ರೀಮಂತ ಮತ್ತು ಬಡ ರಾಷ್ಟ್ರಗಳು ಪರಿಸರ ನಾಶಕ್ಕೆ ಪರಸ್ಪರ ದೂಷಿಸುತ್ತಿದ್ದರೂ, ರಾಜಕಾರಣಿಗಳು ಈ ಸವಾಲನ್ನು ಎದುರಿಸಲು ಸಜ್ಜಾಗಿಲ್ಲ.

ರಾಜಕಾರಣಿಗಳು ಅಭಿವೃದ್ಧಿ ಇಲ್ಲವೇ ಜೀವನೋಪಾಯ ಎಂಬುದಕ್ಕೆ ವಿರುದ್ಧವಾಗಿ ಸಂರಕ್ಷಣೆಯನ್ನು ಇರಿಸುವ ಬದಲು, ಹವಾಮಾನ ಬದಲಾವಣೆ ಮತ್ತು ಪರಿಸರ ಅವನತಿ ಸಮಸ್ಯೆಯನ್ನು ಪರಿಹರಿಸಲು ನಿರ್ಣಾಯಕ ಯತ್ನ ಮಾಡಬೇಕಿದೆ.

ಬಿಕ್ಕಟ್ಟು ನಮ್ಮ ಮನೆ ಬಾಗಿಲಲ್ಲಿ ಬಂದು ನಿಂತಿದೆ; ಏನಾದರೂ ಮಾಡಲೇಬೇಕಿದೆ. ಇದು ರಾಜಕೀಯಕ್ಕಿಂತ ಹೆಚ್ಚಾಗಿ ಕ್ರಿಯೆಯ ಸಮಯ.

Tags:    

Similar News