ಉಕ್ರೇನ್ ಘಾತಕ ದಾಳಿಗೆ ಬೆಚ್ಚಿದ ರಷ್ಯಾ: ಕದನ ವಿರಾಮಕ್ಕೆ ಕಂಟಕವಾದ ‘ಆಪರೇಷನ್ ಸ್ಪೈಡರ್ ವೆಬ್’

ಪ್ರತಿಹೋರಾಟ ನಡೆಸುವ ತಾಕತ್ತು ಇನ್ನೂ ತನ್ನಲ್ಲಿ ಇದೆ ಎಂಬುದನ್ನು ದೃಢೀಕರಿಸುವುದೇ ಉಕ್ರೇನ್ ಈಗ ನಡೆಸಿರುವ ‘ಆಪರೇಷನ್ ಸ್ಪೈಡರ್-ವೆಬ್‘ (ಜೇಡರಬಲೆ ಕಾರ್ಯಾಚರಣೆ) ಉದ್ದೇಶ. ಅಮೆರಿಕ ಅಧ್ಯಕ್ಷ ಟ್ರಂಪ್ ಉಕ್ರೇನ್ ಅನ್ನು ವಾಸ್ತವಾಗಿ ಕೈಬಿಟ್ಟಿದ್ದರೂ ಯುರೋಪಿನ ನ್ಯಾಟೊ ಮಿತ್ರ ರಾಷ್ಟ್ರಗಳು ಝೆಲೆನ್ಸ್ಕಿ ಬೆಂಬಲಕ್ಕೆ ನಿಂತಿವೆ. ಹಾಗೆ ದೃಢವಾಗಿ ನಿಂತಿದ್ದರಿಂದಲೇ ಈ ಆಘಾತಕಾರಿ ದಾಳಿ ಸಾಧ್ಯವಾಗಿದೆ ಎಂಬುದು ಸ್ಪಷ್ಟ.;

Update: 2025-06-05 01:26 GMT

ಇನ್ನೇನು ರಷ್ಯಾ ಉಕ್ರೇನ್ ವಿರುದ್ಧ ಯುದ್ಧವನ್ನು ಗೆದ್ದೇ ಬಿಟ್ಟಿತು ಎಂದು ಗೋಚರಿಸುತ್ತಿದ್ದಾಗಲೇ ಕೈವ್ ನಿಂದ ಡ್ರೋನ್ ದಾಳಿ ನಡೆದಿದೆ. ಅದು ನಿಜಕ್ಕೂ ಅತ್ಯಂತ ಆಕ್ರಮಣಕಾರಿಯಾಗಿತ್ತು. ಇದರಿಂದ ಝೆಲೆನ್ಸ್ಕಿ ಮೇಲೆ ಸವಾರಿ ಮಾಡುವ ವ್ಲಾಡಿಮಿರ್ ಪುಟಿನ್ ಅವರ ಕನಸಿಗೆ ಕೊಳ್ಳಿ ಇಟ್ಟಂತಾಗಿದೆ.

ಎಫ್.ಪಿ.ವಿ (first-person-view) ತಂತ್ರಜ್ಞಾನವನ್ನು ಬಳಸಿಕೊಂಡು ನಡೆಸಿದ ಈ ಆಘಾತಕಾರಿ ಡ್ರೋನ್ ದಾಳಿಯಲ್ಲಿ ರಷ್ಯಾದ ಕನಿಷ್ಠ ಯುದ್ಧ ವಿಮಾನಗಳನ್ನು ಹೊಸಕಿಹಾಕಲಾಗಿದೆ. ನೆಲಕಚ್ಚಿದ ರಷ್ಯಾದ ಯುದ್ಧ ವಿಮಾನಗಳಲ್ಲಿ ಅತ್ಯಾಧುನಿಕವಾದ ಟಿಯು-95 ಮತ್ತು ಟಿ-22 ಎಂಬ ವ್ಯೂಹಾತ್ಮಕ ಬಾಂಬರ್ ಗಳು ಕೂಡ ಇದ್ದವು.

ಉಕ್ರೇನಿನ ಡ್ರೋನ್ ಗಳು ರಷ್ಯಾದ ಐದು ಅತ್ಯಂತ ಉನ್ನತ ಎಂದು ಹೇಳಲಾಗುವ ಸೇನಾ ವಿಮಾನ ನೆಲೆಗಳಿಗೆ ಹಾನಿ ಮಾಡಿವೆ. ಇವೆಲ್ಲವೂ ಆ ದೇಶದ ಅತ್ಯಂತ ಒಳಭಾಗಗಳಲ್ಲಿ ನೆಲೆ ಹೊಂದಿದವು. ಅವು ಮರ್ಮಾನ್ಸ್ಕ್, ಇರ್ಕುಟಸ್ಕ್, ರಿಯಾಝಾನ್ ಮತ್ತು ಅಮೂರ್ ವಲಯಗಳಿಗೆ ಸೇರಿದ್ದಾಗಿವೆ.

“ಆಪರೇಷನ್ ಸ್ಪೈಡರ್ ವೆಬ್” ಎಂಬ ಸಂಕೇತನಾಮವನ್ನು ಹೊಂದಿದ ಈ ದಾಳಿಗೆ ಸಾಮಾನ್ಯ ಸಿದ್ಧತೆ ಸಾಕಾಗುವುದಿಲ್ಲ. ಸರಿಸುಮಾರು ಹದಿನೆಂಟು ತಿಂಗಳ ಸತತ ಸಿದ್ಧತೆಯ ಫಲಿತಾಂಶ ಇದಾಗಿದೆ ಎಂದು ಹೇಳಲಾಗುತ್ತಿದೆ. ಇದು ಉಕ್ರೇನ್ ಎಂದಿಗೂ ದುರ್ಬಲವಾಗಿಲ್ಲ, ನಮ್ಮ ಶಕ್ತಿ ಯಾವತ್ತೂ ಗಣನೀಯ ಎಂಬುದನ್ನು ಸಾಬೀತುಪಡಿಸುವ ದೃಷ್ಟಿಯಿಂದ ಇಷ್ಟೊಂದು ಪ್ರಬಲ ದಾಳಿಯನ್ನು ಕೈಗೊಳ್ಳಲಾಗಿದೆ ಎಂಬುದು ಸ್ಪಷ್ಟ.

ಉಕ್ರೇನಿನ ಸಾಮರ್ಥ್ಯ

ಪುಟಿನ್ ಅವರ ನಿರ್ದೇಶನದಂತೆ ಟರ್ಕಿಯ ಇಸ್ತಾಂಬುಲ್ ನಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆ ಹಾಗೂ ಅಂತಿಮ ಶಾಂತಿ ಒಪ್ಪಂದದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ ರಷ್ಯಾದ ಮೇಲೆ ನಡೆಯುವ ದಾಳಿ ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಅದು ಉಕ್ರೇನ್ ಗೆ ನಿರ್ಣಾಯಕವೇ ಆಗಿದೆ. ಎಂತಹ ಒತ್ತಡದ ಸನ್ನಿವೇಶವಿದ್ದರೂ ತನ್ನ ನೆಲೆಯನ್ನು ಉಳಿಸಿಕೊಳ್ಳುವಲ್ಲಿ ಉಕ್ರೇನ್ ಸಮರ್ಥವಾಗಿದೆ ಎಂಬುದನ್ನು ಸಾಬೀತುಪಡಿಸುವಲ್ಲಿ ಈಗಿನ ಡ್ರೋನ್ ದಾಳಿಯೇ ತಕ್ಕ ಉತ್ತರವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇತ್ತೀಚಿನ ತಂತ್ರಜ್ಞಾನವೂ ತನ್ನ ಕೈಗೆ ಎಟುಕದೇ ಇರುವಂತಹುದೇನೂ ಅಲ್ಲ ಎಂಬುದನ್ನೂ ಸಾಬೀತುಪಡಿಸಿದೆ.

ಇದರ ತಕ್ಷಣ ಪರಿಣಾಮವೇನೆಂದರೆ ಕದನ ವಿರಾಮದ ಮಾತುಕತೆಗಳನ್ನು ಇನ್ನಷ್ಟು ಜಟಿಲಗೊಳಿಸಬಹುದು. ಉಕ್ರೇನ್ ದಾಳಿಗೆ ಪ್ರತಿಕಾರ ತೋರಿಸದೇ ಇರುವ ಬಿಡುವ ವ್ಯಕ್ತಿ ಪುಟಿನ್ ಅಲ್ಲ. 2022ರ ಫೆಬ್ರುವರಿಯಲ್ಲಿ ಉಕ್ರೇನ್ ಮೇಲೆ ದಾಳಿ ನಡೆಸುವ ಮೂಲಕ ಯುದ್ಧಕ್ಕೆ ನಾಂದಿ ಹಾಡಿದ ಪುಟಿನ್ ಅವರಿಗೆ ಈ ಹೊಸ ದಾಳಿ ವೈಯಕ್ತಿಕ ಅವಮಾನ ಎನ್ನುವುದರಲ್ಲಿ ಬೇರೆ ಮಾತಿಲ್ಲ.

ಇಸ್ತಾಂಬುಲ್ ನ ಶಾಂತಿ ಮಾತುಕತೆ ಹೆಚ್ಚು ಪ್ರಗತಿ ಸಾಧಿಸದೇ ಹೋದರೆ ಅದು ಶಾಂತಿ ಸಂಧಾನಕಾರ ಎಂಬ ಪೋಸು ಹಾಕಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಯತ್ನಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಉಕ್ರೇನ್ ನಡೆಸಿದ ಈ ದಿಟ್ಟ ದಾಳಿ ಮುಂದಾದರೂ ಒಂದು ಒಪ್ಪಂದ ಆದೀತು ಎಂಬ ಸಣ್ಣ ನಿರೀಕ್ಷೆಯನ್ನೂ ಹುಸಿಗೊಳಿಸಿದೆ.

ಕದನ ವಿರಾಮದ ಮಾತುಕತೆಯಿಂದ ಹೊರನಡೆದು ಬಿಡುವುದು ತಪ್ಪು ಸಂದೇಶವನ್ನು ರವಾನಿಸಲ್ಲದು, ಹಾಗೆ ಮಾಡಿದರೆ ಉಕ್ರೇನ್ ಪುಟಿನ್ ಗೆ ಘಾಸಿ ಮಾಡಿದ್ದನ್ನು ದೃಢೀಕರಿಸಿದಂತಾಗುತ್ತದೆ. ಇದೆಲ್ಲದಕ್ಕೆ ಪರ್ಯಾಯವಾಗಿ ರಷ್ಯಾ ತನ್ನ ನಿಲುವಿನಲ್ಲಿ ರಾಜಿ ಮಾಡಿಕೊಳ್ಳದೆ ತನ್ನ ಹಿಡಿತವನ್ನು ಸಾಧಿಸಲು ಪ್ರಯತ್ನ ನಡೆಸಬಹುದು.

ಪಟ್ಟು ಬಿಡದ ಪುಟಿನ್

ಈ ತನಕ, ಮಾತುಕತೆಗಳಲ್ಲಿ ರಷ್ಯಾದ ನಿಲುವು ಏನು ಎಂಬುದು ಬಹಿರಂಗಗೊಂಡಿಲ್ಲ. ಆದರೆ ರಷ್ಯಾ ಆಕ್ರಮಿಸಿಕೊಂಡಿರುವ ಉಕ್ರೇನಿನ ಯಾವುದೇ ಪ್ರದೇಶವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಪುಟಿನ್ ಸ್ಪಷ್ಟವಾಗಿ ತಿಳಿಸಿದ್ದಾರೆ.

ವಾಸ್ತವವಾಗಿ, ಉಕ್ರೇನ್ ಮತ್ತು ರಷ್ಯಾ ನಡುವಿನ ಒಪ್ಪಂದಕ್ಕೆ ಅಡ್ಡಿಯಾಗಿರುವುದು ಪೂರ್ವಭಾಗದಲ್ಲಿರುವ ಡಾನ್ಬಾಸ್ ಪ್ರದೇಶದಿಂದ ಕ್ರೈಮಿಯಾ ವರೆಗಿನ ಉಕ್ರೇನಿನ ಭೂಪ್ರದೇಶದ ಮರುಸ್ಥಾಪನೆ. ಪುಟಿನ್ ಉಕ್ರೇನಿನ ಈ ಬೇಡಿಕೆಯ ಬಗ್ಗೆ ಚರ್ಚಿಸಲು ನಿರಾಕರಿಸಿದ್ದಾರೆ. ಯಾಕೆಂದರೆ ಅತಿಕ್ರಮಿಸಲಾಗಿರುವ ಪ್ರದೇಶವು ರಷ್ಯಾ ಮತ್ತು ಅಮೆರಿಕ ನೇತೃತ್ವದ ಪಾಶ್ಚಾತ್ಯ ಒಕ್ಕೂಟಕ್ಕೆ ಸನಿಹದಲ್ಲಿರುವ ಉಕ್ರೇನ್ ನಂತಹ ರಾಷ್ಟ್ರಗಳ ನಡುವಿನ ಬಫರ್ ವಲಯವಾಗಿರಬೇಕು ಎಂಬುದು ಅವರ ವಾದವಾಗಿದೆ.

ದೀರ್ಘಾವಧಿ ಶಾಂತಿ ಒಪ್ಪಂದಕ್ಕೂ ಮೊದಲು ಸಂಪೂರ್ಣವಾದ ಮತ್ತು ಷರತ್ತು ರಹಿತವಾದ ಕದನ ವಿರಾಮ ಏರ್ಪಡಬೇಕು ಎಂಬುದು ಉಕ್ರೇನಿನ ಬೇಡಿಕೆಯಾಗಿದೆ.

ಪ್ರತಿ ಹೋರಾಟ ನಡೆಸುವ ತಾಕತ್ತು ಇನ್ನೂ ತನ್ನಲ್ಲಿ ಇದೆ ಎಂಬುದನ್ನು ದೃಢೀಕರಿಸುವುದೇ ಈಗ ನಡೆಸಿರುವ ‘ಆಪರೇಷನ್ ಸ್ಪೈಡರ್-ವೆಬ್‘ (ಜೇಡರಬಲೆ ಕಾರ್ಯಾಚರಣೆ) ಉದ್ದೇಶವಾಗಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಉಕ್ರೇನ್ ಅನ್ನು ವಾಸ್ತವಾಗಿ ಕೈಬಿಟ್ಟಿದ್ದರೂ ಯುರೋಪಿನ ನ್ಯಾಟೊ ಮಿತ್ರ ರಾಷ್ಟ್ರಗಳು ಝೆಲೆನ್ಸ್ಕಿ ಬೆಂಬಲಕ್ಕೆ ನಿಂತಿವೆ. ಹಾಗೆ ದೃಢವಾಗಿ ನಿಂತಿದ್ದರಿಂದಲೇ ಈ ಆಘಾತಕಾರಿ ದಾಳಿ ಸಾಧ್ಯವಾಗಿದೆ ಎಂಬುದು ಸ್ಪಷ್ಟ.

ಇನ್ನೊಂದು ದೃಷ್ಟಿಯಿಂದ, ಉಕ್ರೇನಿನ ಈ ದಾಳಿ ಟ್ರಂಪ್ ಗೆ ನೀಡಿದ ಸ್ಪಷ್ಟ ಸಂದೇಶವೂ ಆಗಿದೆ. ಝೆಲೆನ್ಸ್ಕಿ ಅವರು ಕಳೆದ ಮಾರ್ಚ್ ನಲ್ಲಿ ವಾಷಿಂಗ್ಟನ್ ಗೆ ಭೇಟಿ ನೀಡಿದಾಗ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜೊತೆ ಸೇರಿಸಿಕೊಂಡು ಮಾತುಕತೆ ಕುಳಿತ ಟ್ರಂಪ್ ಉಕ್ರೇನ್ ಅಧ್ಯಕ್ಷರನ್ನು ಸಾರ್ವಜನಿಕವಾಗಿ ಅಗೌರವಿಸಿದ್ದು ಇನ್ನೂ ಹಸಿಹಸಿಯಾಗಿದೆ.

ಟ್ರಂಪ್ ಗೆ ಹತಾಶೆ

ಅಂದು ನಡೆದ ಅಭೂತಪೂರ್ವ ಸಭೆಯಲ್ಲಿ ಶಾಂತಿ ಮಾತುಕತೆಗೆ ತಲೆಬಾಗದೇ ‘ಉಕ್ರೇನಿಗೆ ಯಾವುದೇ ಆಯ್ಕೆ ಉಳಿದಿಲ್ಲ’ ಎಂದು ಟ್ರಂಪ್ ತಾಕೀತು ಮಾಡಿದ್ದರು. ಉಕ್ರೇನ್ ಮತ್ತು ರಷ್ಯಾ ಯುದ್ಧವನ್ನು ಒಂದೇ ದಿನದಲ್ಲಿ ಖತಂ ಮಾಡುತ್ತೇನೆ ಎಂದು ತಮ್ಮ ಚುನಾವಣಾ ಪ್ರಚಾರದಲ್ಲಿ ಹೇಳಿದ್ದ ಟ್ರಂಪ್ ಗೆ ಎರಡೂ ಕಡೆಯವರನ್ನು ಯಾವುದೇ ಒಪ್ಪಂದದ ಟೇಬಲ್ಲಿಗೆ ಎಳೆದು ಸಾಧ್ಯವಾಗದೇ ಇರುವುದು ಕೈಕೈ ಹಿಸುಕುವಂತಾಗಿದೆ.

ಈಗಲೂ ಈ ವಿದ್ಯಮಾನಗಳ ನಡುವೆ ಟ್ರಂಪ್ ಚಿತ್ರವಿದೆಯಾದರೂ ಅವರ ಜಂಘಾಬಲವೆಲ್ಲ ಉಡುಗಿದಂತೆ ಕಾಣುತ್ತಿದೆ. ಅಮೆರಿಕ ಬೆಂಬಲವಿರಲಿ ಬಿಡಲಿ ತನಗಂತೂ ತಾಕತ್ತಿದೆ ಎಂಬುದನ್ನು ಝೆಲೆನ್ಸ್ಕಿ ಮತ್ತೆ ಮತ್ತೆ ಸಾಬೀತು ಮಾಡಿರುವುದರಿಂದ ಟ್ರಂಪ್ ಮುಂದೆ ದೊಡ್ಡ ಸವಾಲು ಬಂದು ಕುಳಿತಂತಾಗಿದೆ. ಯಾರೂ ನಿರೀಕ್ಷೆ ಮಾಡಿರದ ಹಂತದಲ್ಲಿ ಉಕ್ರೇನ್ ಘಾತಕ ದಾಳಿ ನಡೆಸಿರುವುದಕ್ಕೆ ಅಮೆರಿಕ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಟ್ರಂಪ್ ಯೂರೋಪಿನ ನ್ಯಾಟೋ ಮಿತ್ರ ರಾಷ್ಟ್ರಗಳನ್ನು ಕಡೆಗಣಿಸಿದ್ದರು. ಇದರಿಂದ ಕುಪಿತರಾಗಿರುವ ಆ ರಾಷ್ಟ್ರಗಳು ಸದ್ದಿಲ್ಲದೇ ಝೆಲೆನ್ಸ್ಕಿ ಪರವಾಗಿ ನಿಂತು ಆಘಾತಕ್ಕೆ ಕಾರಣರಾಗಿವೆ.

ಉಕ್ರೇನ್ ನಗರಗಳು ನಾಮಾವಶೇಷ

ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಷ್ಯಾ ನಡೆಸಿದ ‘ವಿಶೇಷ ಕಾರ್ಯಾಚರಣೆ’ಯಲ್ಲಿ ಉಕ್ರೇನ್ ಗೆ ಆಗಿರುವ ಹಾನಿ ಮಾತ್ರ ದೊಡ್ಡ ಪ್ರಮಾಣದ್ದು. ಅದರ ಹಲವಾರು ನಗರಗಳು ನಾಮಾವಶೇಷವಾಗಿವೆ, ಮೂಲಭೂತ ಸೌಕರ್ಯಗಳು ನೆಲಕಚ್ಚಿವೆ ಮತ್ತು ಒಂದು ಅಂದಾಜಿನ ಪ್ರಕಾರ ಅದು ಒಂದು ಲಕ್ಷ ಸೈನಿಕರನ್ನು ಕಳೆದುಕೊಂಡಿದೆ. ಕನಿಷ್ಠ 50 ಸಾವಿರ ಸೈನಿಕರು ಸತ್ತಿದ್ದಾರೆ ಎಂಬುದನ್ನು ಝೆಲೆನ್ಸ್ಕೀ ಅವರೇ ದೃಢಪಡಿಸಿದ್ದಾರೆ. 30 ಲಕ್ಷ ಉಕ್ರೇನ್ ನಾಗರಿಕರು ನಿರಾಶ್ರಿತರಾಗಿದ್ದಾರೆ. ಅಜಮಾಸು 60 ಲಕ್ಷ ಜನ ದೇಶವನ್ನೇ ಬಿಟ್ಟು ಪಲಾಯನ ಮಾಡಿದ್ದಾರೆ.

ಹಾಗಂತ ರಷ್ಯಾ ಕೂಡ ಸಾಕಷ್ಟು ನಷ್ಟ ಅನುಭವಿಸಿದೆ. ಉಕ್ರೇನಿನ ನಗರಗಳು ಮತ್ತು ಮೂಲಸೌಕರ್ಯಗಳು ನಾಶವಾಗಿರುವ ಲೆಕ್ಕಕ್ಕೆ ಅದನ್ನು ಸಮೀಕರಿಸಲು ಸಾಧ್ಯವಿಲ್ಲವಾದರೂ ಅದರ ಪ್ರಮಾಣವೇನೂ ಕಡಿಮೆಯಲ್ಲ. 2024ರಲ್ಲಿಯೇ ರಷ್ಯಾ ಸುಮಾರು 45000 ಯೋಧರನ್ನು ಕದನದಲ್ಲಿ ಕಳೆದುಕೊಂಡಿದೆ.

ಉಕ್ರೇನಿನ ಇತ್ತೀಚಿನ ದಾಳಿ ರಷ್ಯಾದ ಪ್ರತಿಷ್ಠೆಗೆ ಆಗಿರುವ ಧಕ್ಕೆ ಎನ್ನುವುದರಲ್ಲಿ ಎರಡುಮಾತಿಲ್ಲ. ತನ್ನದು ಅತ್ಯಾಧುನಿಕ ಸೇನಾ ಉಪಕರಣಗಳನ್ನು ಹೊಂದಿರುವ ಪಡೆ ಎಂದು ಹೇಳಿಕೊಳ್ಳುವ ರಷ್ಯಾದ ಘನತೆಗೆ ಬಿದ್ದ ಪೆಟ್ಟು. ಆ ನಿಟ್ಟಿನಲ್ಲಿ ಹೇಳುವುದಾದರೆ ಇದೊಂದು ದೊಡ್ಡ ತಿರುವು. ಇದು ಯುದ್ಧಕ್ಕೆ ಒಂದು ಪರಿಹಾರವನ್ನು ತರಲು ಸಹಾಯವಾದೀತೇ ಅಥವಾ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳಲು ದಾರಿಯಾದೀತೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.

Tags:    

Similar News