ನೆತನ್ಯಾಹು ಗೆಲುವಿಗೆ ನಿಲುಕದ ಗಾಜಾ ಕದನ: ಜನರ ವಿರುದ್ಧ ಹೇರಿದ ಯುದ್ಧಕ್ಕಿಲ್ಲ ಭವಿಷ್ಯ
ಹಮಾಸ್ ಉಗ್ರರ ವಿರುದ್ಧ ಯುದ್ದಕ್ಕೆ ನಿಂತಿರುವ ನೆತನ್ಯಾಹು ಅಂದುಕೊಂಡಂತೆ ಯಾವುದೂ ನಡೆಯಲಿಲ್ಲ. ಯಾಕೆಂದರೆ ಅವರು ನಡೆಸುತ್ತಿರುವ ಸಮರ ಉಗ್ರರ ವಿರುದ್ಧ ಅಲ್ಲ, 20 ಲಕ್ಷ ಗಾಜಾ ನಾಗರಿಕರ ವಿರುದ್ಧ...
ಗಾಜಾದಲ್ಲಿ ನಡೆಯುತ್ತಿರುವ ಯುದ್ಧ ಕೊನೆಗೊಂಡಿದೆ ಎಂದು ಇಸ್ರೇಲ್ ಮತ್ತು ಹಮಾಸ್ ಅಧಿಕೃತವಾಗಿ ಘೋಷಿಸಿದೆ. ‘ಯುದ್ಧವು ಸಂಪೂರ್ಣ ಮುಗಿದಿದೆ’ ಎಂದು ಮಧ್ಯವರ್ತಿಗಳಾದ ಕತಾರ್, ಈಜಿಪ್ಟ್ ಮತ್ತು ಟರ್ಕಿ ದೃಢಪಡಿಸಿದೆ ಎಂದು ಹಮಾಸ್ ಅಧಿಕಾರಿ ಖಲೀಲ್ ಅಲ್-ಹಯ್ಯಾ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಮುಂದಿಟ್ಟ 20 ಅಂಶಗಳ ಶಾಂತಿ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಕಟಿಸಿದ್ದಾರೆ.
“ಬದುಕಿರುವ ಮತ್ತು ಸತ್ತಿರುವ ಎಲ್ಲ ಒತ್ತೆಯಾಳುಗಳ ಬಿಡುಗಡೆ ಮಾಡಲು ಸರ್ಕಾರ ಒಂದು ಚೌಕಟ್ಟನ್ನ ಸಿದ್ಧಪಡಿಸಿದೆ,” ಎಂದು ಅವರು ತಮ್ಮ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ಒತ್ತೆಯಾಳುಗಳನ್ನು ಬಿಡಗಡೆ ಮಾಡುವ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ದೃಢಪಡಿಸಿದ್ದಾರೆ. ಇದು ಶಾಂತಿ ಯೊಜನೆಯ ಮೊದಲ ಹಂತ ಎಂದೂ ಅವರು ಹೇಳಿದ್ದಾರೆ. ಆ ಪ್ರಕ್ರಿಯೆಯನ್ನು ಇಸ್ರೇಲ್ ಈಗಾಗಲೇ ಆರಂಭಿಸಿದೆ.
ಉಳಿದ ಯೋಜನೆ ಅಂದುಕೊಂಡಂತೆ ಆಗಲಿದೆಯೇ? ಅದನ್ನು ಎರಡೂ ಕಡೆಯವರು ಪಾಲಿಸಲಿದ್ದಾರೆಯೇ? ಎಂಬ ಆತಂಕಗಳು ಸಹಜವಾಗಿ ಉಳಿದುಕೊಂಡಿವೆ. ಹಮಾಸ್ ರಾಜಕೀಯ ರಂಗದಿಂದಲೇ ಸರಿದುಹೋಗಲಿದೆಯೆ ಎಂಬ ಪ್ರಶ್ನೆಯೂ ಇದರಲ್ಲಿ ಸೇರಿದೆ. ಎಲ್ಲಕ್ಕಿಂತ ಮುಖ್ಯವಾದ ಇನ್ನೂ ಒಂದು ಸಂಗತಿ ಎಂದರೆ ಇಸ್ರೇಲಿ ಪಡೆಗಳು ಅಕ್ಷರಶಃ ನೆಲಸಮ ಮಾಡಿರುವ ಗಾಜಾ ಪಟ್ಟಿಯನ್ನು ಮರುನಿರ್ಮಾಣ ಮಾಡುವ ಸವಾಲು.
ಹಮಾಸನ್ನು ಸಂಪೂರ್ಣ ಹತ್ತಿಕ್ಕಲು ಸೇನಾ ಕ್ರಮದಿಂದ ಮಾತ್ರ ಸಾಧ್ಯ ಎಂದು ನೆತನ್ಯಾಹು ನಂಬಿರುವುದರಿಂದ ಇಂತಹ ಪ್ರಶ್ನೆಗಳು ಉದ್ಭವಿಸಿವೆ. ಶಾಂತಿ ಯೋಜನೆಯ ಮುಖ್ಯ ಉದ್ದೇಶವೇ ಹಮಾಸ್ ಉಗ್ರರನ್ನು ರಾಜಕೀಯ ರಂಗದಿಂದಲೇ ಇಲ್ಲದಂತೆ ಮಾಡುವುದು. ಒಂದು ಉಗ್ರಗಾಮಿ ಸಂಘಟನೆಯನ್ನು ರಾಜತಾಂತ್ರಿಕ ಒತ್ತಡದ ಮೂಲಕ ಎದುರಿಸುವುದು ಯಾವತ್ತೂ ಉತ್ತಮ ಮಾರ್ಗ.
ಕಳೆದ ಎರಡು ವರ್ಷಗಳಿಂದ ನೆತನ್ಯಾಹು ಹಮಾಸ್ ವಿರುದ್ಧ ನಡೆಸುತ್ತಿದ್ದ ಅವ್ಯಾಹತವಾದ ಯುದ್ಧ ವ್ಯರ್ಥ ಪ್ರಯತ್ನವೆಂದು ಕಾಣುತ್ತಿದೆ. ಹಾಗಂತ ಅದನ್ನು ಅವರು ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಬೇರೆ ಮಾತು.
ಸುಲಭಕ್ಕೆ ಜಗ್ಗದ ನೆತನ್ಯಾಹು
ಹಮಾಸ್-ನಂತಹ ಪ್ಯಾಲೆಸ್ತೀನಿ ಉಗ್ರಗಾಮಿ ಸಂಘಟನೆ ವಿಚಾರದಲ್ಲಿ ಯಾವುದೇ ರೀತಿಯ ರಿಯಾಯಿತಿ ನೀಡದ ಇಸ್ರೇಲಿ ರಾಜಕಾರಣಿ ಎಂಬ ಉಗ್ರ ನಿಲುವಿನಿಂದ ಗುರುತಿಸಿಕೊಳ್ಳುವುದು ನೆತನ್ಯಾಹು ಅವರ ಮುಖ್ಯ ಉದ್ಧೇಶ. ಎರಡು ವರ್ಷಗಳ ಹಿಂದೆ 2023ರ ಅಕ್ಟೋಬರ್ 7ರಂದು ಇಸ್ರೇಲಿ ನಾಗರಿಕರನ್ನು ಹತ್ಯೆ ಮಾಡಿರುವುದು ಮತ್ತು 251 ಒತ್ತೆಯಾಳುಗಳ ಕುಟುಂಬಗಳನ್ನು ಅಪಹರಿಸಿದ ಬಳಿಕ ದೇಶಾದ್ಯಂತ ವ್ಯಕ್ತವಾದ ತೀವ್ರ ವಿರೋಧದ ನಡುವೆಯೂ ಅವರು ಅದನ್ನು ಉಳಿಸಿಕೊಂಡು ಬಂದಿದ್ದಾರೆ.
ಸೆ.10ರಂದು ಕತಾರ್ ರಾಜಧಾನಿ ದೋಹಾದಲ್ಲಿ ಹಮಾಸ್ ಸಮಾಲೋಚಕರ ಮೇಲೆ ಇಸ್ರೇಲ್ ದಾಳಿ ಮಾಡುವ ಮೂಲಕ ಅವರು ತಮ್ಮ ದೃಢವಾದ ವಿರೋಧಿ ನಿಲುವನ್ನು ಅಥವಾ ಬೆಳೆಯುತ್ತಿರುವ ಹತಾಶೆಯನ್ನು ಸ್ಪಷ್ಟವಾಗಿ ತೋರ್ಪಡಿಸಿದ್ದರು. ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೂ ಇದನ್ನು ನೋಡಿ ಅಚ್ಚರಿಯಾಗಿತ್ತು ಮತ್ತು ಅಂತಹ ದಾಳಿಗೆ ತಮ್ಮ ಅಸಮ್ಮತಿಯನ್ನೂ ವ್ಯಕ್ತಪಡಿಸಿದ್ದರು.
ಇಸ್ರೇಲ್ ತನ್ನ ಆಪ್ತಮಿತ್ರ ಅಮೆರಿಕಕ್ಕೆ ಇರಿಸುಮುರುಸು ಉಂಟುಮಾಡಲು ಹೊರಟಿದೆ ಎಂಬ ವಾದಗಳು ಕೂಡ ಇವೆ. ಯಾಕೆಂದರೆ ಅಮೆರಿಕವು ಯಹೂದ್ಯ ರಾಷ್ಟ್ರಕ್ಕೆ ನೀಡುವ ನಿರ್ಬಂಧರಹಿತ ಬೆಂಬಲವನ್ನು ಎಂದಿಗೂ ಹಿಂದಕ್ಕೆ ಪಡೆಯುವುದಿಲ್ಲ ಎಂದು ಇಸ್ರೇಲ್ ನಲ್ಲಿ ಉಗ್ರ ನಿಲುವು ಹೊಂದಿರುವವರು ಹೇಳುತ್ತಾರೆ. ಅಮೆರಿಕವು ಇಸ್ರೇಲಿನ ಭದ್ರತಾ ಭರವಸೆದಾರ ಕೂಡ ಹೌದು.
ಇನ್ನೊಂದು ಅಚ್ಚರಿಯ ಸಂಗತಿ ಏನೆಂದರೆ ದೋಹಾದ ಮೇಲೆ ಇಸ್ರೇಲ್ ಮಾಡಿದ ದಾಳಿಯನ್ನು ಭಾರತವು ಖಂಡಿಸಿದ್ದು. ಮೋದಿ ಮತ್ತು ನೆತನ್ಯಾಹು ಎಷ್ಟು ಆಪ್ತರು ಎಂದು ಗೊತ್ತಿರುವವರಿಗೆ ಇದು ಅಚ್ಚರಿ ಎನಿಸದೇ ಇರಲು ಸಾಧ್ಯವಿಲ್ಲ. ಇನ್ನೊಂದು ಕಡೆ ಭಾರತ-ಕತಾರ್ ಸಂಬಂಧ ತುಂಬ ಆಪ್ತವಾಗಿದೆ. ಕತಾರಿನ ರಾಜಕೀಯ ನಾಯಕರ ಜೊತೆ ನರೇಂದ್ರ ಮೋದಿ ನಿಕಟ ಸಂಬಂಧವನ್ನು ಹೊಂದಿದ್ದಾರೆ.
ಫಲಕೊಡದ ಶಾಂತಿ ಯೋಜನೆ
ಹಮಾಸ್ ಉಗ್ರರನ್ನು ಸಂಪೂರ್ಣವಾಗಿ ಹುಟ್ಟಡಗಿಸದೆ ಯುದ್ಧದಿಂದ ಹಿಂದೆ ಸರಿಯುವುದಿಲ್ಲ ಎಂದು ನೆತನ್ಯಾಹು ಪಟ್ಟು ಹಿಡಿದಿದ್ದರು. ಅವರ ಕೋಪದ ಮುಂದೆ ಹಮಾಸ್ ಉಗ್ರರಿಗೆ ಉಳಿಗಾಲವಿಲ್ಲ ಎಂಬುದು ಸ್ಪಷ್ಟವಾಗಿತ್ತು. ಆದರೆ ಎರಡು ವರ್ಷಗಳ ಬಳಿಕ ಇಸ್ರೇಲ್ ಹಮಾಸ್ ವಿಚಾರದಲ್ಲಿ ಮಾತುಕತೆಗೆ ಸಿದ್ಧವಾಯಿತು. ಹಮಾಸ್ ಸಂಪೂರ್ಣ ನಿಶ್ಯಸ್ತ್ರವಾಗಬೇಕು ಎಂಬ ಷರತ್ತನ್ನು ನೆತನ್ಯಾಹು ಅವರು ಈಗ ಹಾಕಿದ್ದಾರೆ. ಹಮಾಸ್ ಆಗಲಿ, ಫತಾಹ್ ಗುಂಪನ್ನು ಮುನ್ನಡೆಸುವ ಪ್ಯಾಲೆಸ್ತೀನ್ ಪ್ರಾಧಿಕಾರವಾಗಲಿ ಗಾಜಾದ ಆಡಳಿತವನ್ನು ನೋಡಿಕೊಳ್ಳಲು ಅನರ್ಹರು ಎಂಬ ತೀರ್ಮಾನವನ್ನೇ ಹೊಂದಿದ್ದ ನೆತನ್ಯಾಹು ನಿಲುವಿನಲ್ಲಿ ತಕ್ಕಮಟ್ಟಿನ ಬದಲಾವಣೆ ಕಂಡುಬಂದಿದೆ.
ಮಾತುಕತೆಗಳು ಜಾರಿಯಲ್ಲಿವೆ, ಕದನ ವಿರಾಮ ಜಾರಿಗೆ ಬಂದೇ ಬರುತ್ತದೆ ಎಂಬ ಹೇಳಿಕೆಗಳನ್ನು ಟ್ರಂಪ್ ನೀಡುತ್ತಲೇ ಇದ್ದರು. ಅವರ ಹೇಳಿಕೆಗಳಲ್ಲಿ ಯಾವುದೇ ಹುರುಳು ಇರುತ್ತಿರಲಿಲ್ಲ. ಗಾಜಾದ ಮೇಲೆ ಎಷ್ಟೇ ಕಠಿಣ ಶಾಂತಿ ಸಂಧಾನ ಹೇರಲು ನೆತನ್ಯಾಹು ಸಿದ್ದವಿದ್ದರೂ ಕೂಡ ಆ ಪ್ರದೇಶವು ಇಸ್ರೇಲಿನ ನಿರಂತರ ದಾಳಿಗೆ ಒಳಗಾಗಿ ಅಲ್ಲಿನ 65000ಕ್ಕೂ ಅಧಿಕ ನಾಗರಿಕರ ಸಾವಿನಿಂದ ನೆಲಸಮವಾಗಿತ್ತು. ಹಾಗಾಗಿ ಮಾತುಕತೆಯೇ ಬಿಕ್ಕಟ್ಟಿಗೆ ಸಿಕ್ಕಿತ್ತು.
ಹಮಾಸ್ ಮುಂದೆ ಸೋತಿತೇ ಅಗ್ನಿಶಕ್ತಿಯ ಇಸ್ರೇಲ್?
ಹಿಂಭಾಗಿಲಿನ ಮಾತುಕತೆಗಳು ಯಾವುದೋ ತಾತ್ಕಾಲಿಕವಾದ ಅತೃಪ್ತಿಕರ ಅಂತ್ಯಕ್ಕೆ ಕೊಂಡೊಯ್ಯುತ್ತಿರುವ ಈ ಹೊತ್ತಿನಲ್ಲಿ ಒಂದು ಖಡಕ್ ಪ್ರಶ್ನೆಯನ್ನು ಕೇಳಲೇಬೇಕಾಗಿದೆ. ಅದೇನೆಂದರೆ, ಅಸಾಧರಣವಾದ ಅಗ್ನಿಶಕ್ತಿಯನ್ನು ಹೊಂದಿರುವ ಇಸ್ರೇಲಿಗೆ ಯಾಕೆ ಇನ್ನೂ ಹಮಾಸ್ ನ್ನು ಬಗ್ಗುಬಡಿಯಲು ಸಾಧ್ಯವಾಗಿಲ್ಲ? ಹಮಾಸ್ ಉಗ್ರರ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಕಾರಣಕ್ಕೆ ಲೆಬನಾನ್ ನಲ್ಲಲಿರುವ ಹಿಜ್ಬುಲ್ಲಾ ಹಾಗೂ ಇರಾನ್ ಮತ್ತು ಯೆಮನ್ ನಲ್ಲಿರುವ ಹೌತಿಗಳ ಮೇಲೆ ಇಸ್ರೇಲ್ ದಾಳಿ ಮಾಡುತ್ತದೆ. ಆ ದಾಳಿಗಳೂ ಪರಿಣಾಮಕಾರಿಯಾಗಿಲ್ಲ ಅನ್ನುವುದು ಬೇರೆಯೇ ಮಾತು. ಇಷ್ಟಾಗಿಯೂ ಅದಕ್ಕೆ ಗಾಜಾದಲ್ಲಿನ ಫಲಿತಾಂಶ ಮತ್ತು ಹಮಾಸ್ ನಿರ್ನಾಮ ಅದಕ್ಕೆ ಸಾಧ್ಯವಾಗಿಲ್ಲ.
ಬಹುಷಃ ಗಾಜಾ ಮಂದಿ 2006ರಲ್ಲಿ ಹಮಾಸ್ ಗೆ ಮತ ನೀಡಿದ್ದರೂ ಅವರು ಉಗ್ರರಿಗೆ ಬೆನ್ನು ತೋರಿಸುತ್ತಾರೆ ಎಂದು ನಿರೀಕ್ಷಿಸುವುದು ಅಸಹಜವಲ್ಲ. ಆದರೆ ನಿರಂತರ ಬಾಂಬ್ ದಾಳಿಯಿಂದ ಮನೆಗಳು, ಆಸ್ಪತ್ರೆಗಳು ಮತ್ತು ಶಾಲೆಗಳು ಪುಡಿಗಟ್ಟುತ್ತಿರುವಾಗ ಜನರ ಭಾವನೆ ಹೇಗಿದೆ ಎಂದು ಅರ್ಥಮಾಡಿಕೊಳ್ಳುವುದು ಕಷ್ಟ. ಅಲ್ಲಿಗೆ ಪೂರೈಕೆಯಾಗುತ್ತಿರುವ ನೆರವು ಅಸ್ತವ್ಯಸ್ತವಾಗಿರುವ ಕಾರಣ ಹಸಿವು ಜನರ ಜೀವವನ್ನು ಕಿತ್ತು ತಿನ್ನುತ್ತಿದೆ. ಈ ಆಹಾರದ ನೆರವಿನ ಮೇಲ್ವಿಚಾರಣೆಯನ್ನೂ ನಡೆಸುತ್ತಿರುವ ಇಸ್ರೇಲ್, ತನ್ನ ಭದ್ರತಾ ಕಣ್ಣಿನ ಅಡಿಯಲ್ಲಿಯೇ ಸಾವಿರಾರು ಟನ್ ಆಹಾರ ಪೂರೈಕೆಯಾಗಿದೆ ಎಂಬ ಅಂಕಿ-ಸಂಖ್ಯೆಗಳನ್ನು ಮುಂದಿಡುತ್ತದೆ.
ಅಷ್ಟಕ್ಕೂ ಈ ನೆರವನ್ನು ಗಾಜಾದಲ್ಲಿ ಯಾರು ವಿತರಣೆ ಮಾಡುತ್ತಾರೆ ಎಂಬುದು ಗೊಂದಲಕ್ಕೆ ಕಾರಣವಾಗಿದೆ. ಹಮಾಸ್ ಇನ್ನೂ ಪರಿಹಾರ ಸಾಮಗ್ರಿಗಳ ಆಡಳಿತದ ನಿಯಂತ್ರಣದಲ್ಲಿ ಇದೆಯೆ ಎಂಬುದು ಸ್ಪಷ್ಟವಾಗಿಲ್ಲ. ಗಾಜಾದಲ್ಲಿನ ಸಾವಿನ ಸಂಖ್ಯೆಯ ಏಕೈಕ ಮೂಲವೆಂದರೆ ಅಲ್ಲಿನ ಆರೋಗ್ಯ ಸಚಿವಾಲಯ. ಇಸ್ರೇಲ್ ಈ ಮೂಲವನ್ನು ವಿರೋಧಿಸುವ ಧೈರ್ಯ ಮಾಡಿಲ್ಲ. ಆದರೆ ಪ್ರಧಾನಿಯವರ ಮಿಲಿಟರಿ ವಿಜಯದ ನಿಲುವಿನ ಹೊರತಾಗಿಯೂ ಅಪೇಕ್ಷಿತ ಫಲಿತಾಂಶ ದಕ್ಕಿಲ್ಲ.
ಮಿಲಿಟರಿ ಶಕ್ತಿಯ ಹೊರನೋಟ
ಸೇನಾ ಪ್ರವೃತ್ತಿಯೇ ಮೈಗೂಡಿಸಿಕೊಂಡಿರುವ ಇಸ್ರೇಲ್ ಅಜೇಯವಾಗಿರುವುದು ಭಾರತದ ಬಲಪಂಥೀಯರಿಗೆ ಹೆಚ್ಚು ಮೆಚ್ಚುಗೆ. ಭಾರತವು ಪಾಕಿಸ್ತಾನದ ಜೊತೆ ವ್ಯವಹರಿಸುವಾಗಲೂ ಇಸ್ರೇಲ್ ತಳೆದ ಈ ರಾಜಿಯಾಗದ ಮಾದರಿಯನ್ನೇ ಅನುಸರಿಸಬೇಕು ಎನ್ನುವುದು ಅವರ ನಿಲುವಾಗಿದೆ. ಇದು ಅತ್ಯಂತ ದೋಷಪೂರಿತ ವಿಶ್ವದೃಷ್ಟಿಕೋನವಾಗಿದೆ. ಭಾರತದ ಕಾರ್ಯತಂತ್ರದ ತಜ್ಞರು ಭಾರತದಲ್ಲಿರುವ ಇಸ್ರೇಲ್ ಪರ ಗುಂಪಿನ ಆಶಾವಾದಿ ಊಹೆಗಳನ್ನು ಹಂಚಿಕೊಳ್ಳಲು ಹೋಗುವುದಿಲ್ಲ.
ನೆತನ್ಯಾಹು ಅವರ ಗಾಜಾ ಯುದ್ಧದ ಈ ಎರಡು ವರ್ಷಗಳಲ್ಲಿ ಒಂದು ವಿಷಯವಂತೂ ಮುನ್ನೆಲೆಗೆ ಬಂದಿದೆ. ಅದೇನೆಂದರೆ ಇಸ್ರೇಲ್ ಅನ್ನು ಎಷ್ಟು ಶಕ್ತಿಶಾಲಿ ಎಂದು ಗ್ರಹಿಸಲಾಗಿತ್ತೋ ಅಷ್ಟು ಅದರ ಮಿಲಿಟರಿ ಬಲಿಷ್ಠವಾಗಿಲ್ಲ ಎಂಬುದು. ಇರಾನಿನ ಪರಮಾಣು ಸ್ಥಾವರಗಳ ಮೇಲೆ ಇಸ್ರೇಲಿನ 200 ವಿಮಾನಗಳ ವಾಯುಪಡೆ ದಾಳಿ ಮಾಡಿದಾಗಲೇ ಇದು ಸ್ಪಷ್ಟವಾಯಿತು. ಇದರಲ್ಲಿ ಕಾರ್ಯತಂತ್ರದ ತಪ್ಪೂ ಇತ್ತು. ಯಾಕೆಂದರೆ ಅದು ಇರಾನಿನ ಅಣ್ವಸ್ತ್ರದ ಸಾಮರ್ಥ್ಯವನ್ನು ನಿಷ್ಕ್ರಿಯಗೊಳಿಸಿರಲಿಲ್ಲ. ಇಸ್ರೇಲಿನ ಮಿತಿಯನ್ನು ಅರಿತ ಟ್ರಂಪ್ ಅಮೆರಿಕದ ಬಿ-52 ಬಾಂಬರ್ ಗಳನ್ನು ಸೂಕ್ಷ್ಮವಾಗಿ ಬಳಸುವಂತೆ ಮಾಡಿದರು. ಅಮೆರಿಕದ ಹೇಳಿಕೆಗಳು ಹೇಗಾದರೂ ಇರಲಿ, ಆಯಕಟ್ಟಿನಲ್ಲಿರುವ ಇರಾನಿನ ಪರಮಾಣು ಸ್ಥಾವರಗಳನ್ನು ಮುಚ್ಚಲಾಗಿದೆ ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆ ಇಲ್ಲ.
ವಿನಾಶದ ಚಿತ್ರಣ ಸುಸ್ಪಷ್ಟ
ಇಸ್ರೇಲ್ ಇನ್ನೂ ತನ್ನ ವಿನಾಶಕಾರಿ ಶಕ್ತಿಯನ್ನು ಬಳಕೆ ಮಾಡುವ ವಿಚಾರದಲ್ಲಿ ಸಂಯಮ ತೋರುತ್ತಿದೆ ಎಂದು ಅಲ್ಲಿನ ಆಕ್ರಮಣಕಾರಿ ನಾಯಕರು ಮತ್ತು ಇಸ್ರೇಲಿನ ಒಳ-ಹೊರಗೆ ಇರುವ ಬೆಂಬಲಿಗರು ವಾದಿಸಬಹುದು. ಆದರೆ ಅಂತಹ ವಾದವನ್ನು ಇಡೀ ಜಗತ್ತು ಯಾವುದೇ ಮುಲಾಜಿಲ್ಲದೆ ತಿರಸ್ಕರಿಸುತ್ತದೆ. ಯಾಕೆಂದರೆ ಈಗಾಗಲೇ ಬಯಲಾಗಿರುವ ವಿನಾಶದ ಚಿತ್ರಣವು ಕಣ್ಣಿಗೆ ಕಟ್ಟುವಷ್ಟಿದೆ. ಅದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಅದು ಸಂಯಮ ರಹಿತವೂ, ಅನಾಗರಿಕವೂ, ಕ್ರೂರವೂ ಆಗಿದೆ.
ಗಾಜಾದಲ್ಲಿನ ಕಣ್ಣಿಗೆ ಕಾಣುತ್ತಿರುವ ಪುರಾವೆಗಳು ಸ್ಪಷ್ಟವಾಗಿವೆ. ಅಷ್ಟೊಂದು ಭಗ್ನಾವಶೇಷಗಳ ನಡುವೆಯೂ ಹಮಾಸ್ ಇನ್ನೂ ಅಸ್ತಿತ್ವದಲ್ಲಿದೆ. ಬಹುಶಃ ಹಮಾಸ್ ಉಗ್ರರಿಗೆ ಅದರ ಶ್ರೇಯಸ್ಸು ಸಿಗಲಾರದು. ಯಾಕೆಂದರೆ ಅದು ಅನುಸರಿಸುತ್ತಿರುವುದು ಸ್ವಯಂ-ನಾಶದ ಕಾರ್ಯತಂತ್ರವನ್ನು. ಅದು ಇಸ್ರೇಲ್ ಮೇಲೆ ಘಾತಕವಾದ ಭಾರೀ ಹಾನಿ ಮಾಡದೇ ಇರಬಹುದು ಮತ್ತು ಇಡೀ ಗಾಜಾವನ್ನೂ ಮಟ್ಟಸ ಮಾಡಿದರೂ ಅದು ತಲೆಕೆಡಿಸಿಕೊಳ್ಳುವುದಿಲ್ಲ.
ಇದು ಇಸ್ರೇಲಿಗಾಗಲಿ, ನೆತನ್ಯಾಹುಗಾಗಿ ಇಷ್ಟವಾಗದ ಪರಿಸ್ಥಿತಿ. ಹಮಾಸ್ ವಿರುದ್ಧದ ಯುದ್ಧವು ನೆತನ್ಯಾಹು ಅಂದುಕೊಂಡಂತೆ ನಡೆಯಲಿಲ್ಲ. ಇಸ್ರೇಲಿ ಪ್ರಧಾನಿ ಹಮಾಸ್ ಉಗ್ರರನ್ನು ಪ್ರತ್ಯೇಕಿಸಿ ಗುಂಡುಹೊಡೆಯುವುದನ್ನು ಬಿಟ್ಟು ಇಪ್ಪತ್ತು ಲಕ್ಷ ಗಾಜಾ ಮಂದಿಯ ಮೇಲೆ ಮುಗಿಬಿದ್ದಿದ್ದಾರೆ ಎಂಬುದು ಸ್ಪಷ್ಟ. ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿರುವ ಪ್ಯಾಲೆಸ್ತೀನಿಯರ ವಿಚಾರದಲ್ಲಿ ಇಸ್ರೇಲ್ ಸಾಮರಸ್ಯದ ಕೊರತೆಯನ್ನು ಎದುರಿಸುತ್ತಿದೆ. ಇಸ್ರೇಲ್ ವಿಚಾರದಲ್ಲಿ ಹಮಾಸ್ ಹಠಮಾರಿ ಧೋರಣೆಯನ್ನು ತಳೆದಿದ್ದರೆ, ಇಸ್ರೇಲ್ ಪಕ್ಕದಲ್ಲಿ ಪ್ಯಾಲೆಸ್ತೀನ್ ಅಸ್ತಿತ್ವವನ್ನು ಗುರುತಿಸುವ ಧೋರಣೆ ನೆತನ್ಯಾಹು ಅವರದ್ದಾಗಿದೆ. ಇದರಿಂದ ಉಂಟಾಗುವುದು ಭೀಕರ ಬಿಕ್ಕಟ್ಟಷ್ಟೇ ಬಿಟ್ಟರೆ ಬೇರೇನೂ ಇಲ್ಲ.
ಜನರ ವಿರುದ್ಧ ಹೇರಿದ ಯುದ್ಧಕ್ಕೆಲ್ಲಿಯ ಶ್ರೇಷ್ಠತೆ?
ಒಂದು ಯುದ್ಧವನ್ನು ಜನರ ವಿರುದ್ಧ ಹೇರಿದಾಗ ಅದರ ವಿಜಯವನ್ನು ಸೇನೆಯ ಶ್ರೇಷ್ಠತೆಗೆ ಸೇರ್ಪಡೆ ಮಾಡಲು ಸಾಧ್ಯವಿಲ್ಲ ಎಂಬುದು ನೆತನ್ಯಾಹು ಅವರಿಗೆ ಮತ್ತೆ ಮತ್ತೆ ಮನವರಿಕೆಯಾಗುತ್ತ ಹೋಯಿತು. ಇಸ್ರೇಲ್ ಈ ವಲಯದಲ್ಲಿ ಅತ್ಯಂತ ಸುಸಜ್ಜಿತವಾದ ಮತ್ತು ಅತ್ಯುತ್ತಮ ಸಂರಚಿತ ಸೇನೆಯನ್ನು ಹೊಂದಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಅದು ಹೋರಾಟಕ್ಕೆ ಇಳಿದಿದ್ದು ಬಹುತೇಕ ನಿರಾಯುಧ , ಪಾಪದ ಪ್ಯಾಲೆಸ್ತೀನಿಯರ ವಿರುದ್ಧ. ಹಾಗಾಗಿ ಅದು ಎಷ್ಟೇ ಬಲಿಷ್ಠವಾಗಿದ್ದರೂ ನಿಷ್ಫಲ. ತಾನು ಸಂಪೂರ್ಣ ಶಸ್ತ್ರಸಜ್ಜಿತ ಎಂಬ ಕಾರಣಕ್ಕೆ ಇಸ್ರೇಲ್ ಒಬ್ಬಂಟಿಯಾಗಿ, ಸುರಕ್ಷಿತವಾಗಿ ನಿಲ್ಲಲು ಸಾಧ್ಯವಿಲ್ಲ. ದ್ವಿ-ರಾಷ್ಟ್ರ ಪರಿಹಾರಕ್ಕೆ ಯಾವುದೇ ಪರ್ಯಾಯವಿಲ್ಲ.
ಬಹುದೂರದ ಭವಿಷ್ಯದಲ್ಲಿ ಒಂದು ಆದರ್ಶವಾದಿ ಕಲ್ಪನೆಯನ್ನು ನಾವು ಮಾಡಿಕೊಳ್ಳಬಹುದು. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ವಿಲೀನಗೊಂಡು ಅದೊಂದು ಪ್ಯಾಲೆಸ್ತೀನ್ ರಾಷ್ಟ್ರವಾಗಿ ರೂಪುಗೊಳ್ಳುವುದು ಮತ್ತು ಅಲ್ಲಿ ಅರಬ್ ಮಾತನಾಡುವ ಪ್ಯಾಲೆಸ್ತೀನಿಯರು ಹಾಗೂ ಹಿಬ್ರೂ ಮಾತನಾಡುವ ಇಸ್ರೇಲಿಗಳು ಜೊತೆ ಜೊತೆಯಲ್ಲಿ ಬಾಳುವುದು.
ನಿರ್ಣಯಿಸಲಾಗದ ಭವಿಷ್ಯದಲ್ಲಿ ಸಹಬಾಳ್ವೆಯ ಸಾಧ್ಯತೆಗಳು ಏನೇ ಇರಲಿ, ಒಂದು ಮಿಲಿಟರಿ ಮುಷ್ಠಿಯ ಮೂಲಕ ನಿಯಂತ್ರಣ ಸಾಧಿಸುವ ಸಾಧ್ಯತೆಗೆ ಇಲ್ಲಿ ಜಾಗವಿಲ್ಲ.