ಮೋದಿ ಭದ್ರತೆಯ ಬದ್ಧತೆಗೆ ಸವಾಲಾಯಿತು ಕೆಂಪುಕೋಟೆ ಸ್ಫೋಟ ಪ್ರಕರಣ: ಮುಜುಗರದಿಂದ ಪಾರಾಗುವ ಪರಿ ಹೇಗೆ?
ಪಾಕಿಸ್ತಾನದಿಂದ ಯಾವುದೇ ಭಯೋತ್ಪಾದಕ ದಾಳಿ ನಡೆದರೂ ಅದನ್ನು ಯುದ್ಧದ ಕೃತ್ಯವೆಂದೇ ಪರಿಗಣಿಸಲಾಗುವುದು ಎಂದು ಮೋದಿ ಸರ್ಕಾರ ಸ್ಪಷ್ಟವಾಗಿ ಹೇಳಿದೆ.
ರಾಷ್ಟ್ರೀಯ ಭದ್ರತೆಯಲ್ಲಿ ತನಗಿರುವ ಬಲವಾದ ಬದ್ಧತೆ ಮತ್ತು ಕಾರ್ಯಕ್ಷಮತೆಯ ಬಗ್ಗೆ ನರೇಂದ್ರ ಮೋದಿ ಸರ್ಕಾರ ಯಾವತ್ತೂ ಹೆಮ್ಮೆಯಿಂದ ಬೀಗುತ್ತದೆ. ಆದರೆ ನವೆಂಬರ್ 10ರ ಸಂಜೆ ಕೆಂಪು ಕೋಟೆಯ ಬಳಿ ಸಂಭವಿಸಿದ ಸ್ಫೋಟವು ಅದಕ್ಕೆ ಬಹಳ ದೊಡ್ಡ ಮುಜುಗರ ತಂದಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.
ಈ ದುರಂತದಲ್ಲಿ ಸತ್ತವರ ಸಂಖ್ಯೆ 13ಕ್ಕೆ ತಲುಪಿದ್ದು, ಸುಮಾರು 20 ಜನರು ಗಾಯಗೊಂಡಿದ್ದಾರೆ. ಪ್ರಧಾನಿ ಮೋದಿ ಅವರು 2014ರ ಮೇ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ನಂತರ ದೇಶದ ರಾಜಧಾನಿಯಲ್ಲಿ ಸಂಭವಿಸಿದ ಮೊದಲ ಇಂತಹ ಘಟನೆ ಇದಾಗಿದೆ.
ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ಹಸ್ತಾಂತರಿಸಲಾಗಿದೆ. ಈ ಸ್ಫೋಟವು ಭಯೋತ್ಪಾದಕ ಕೃತ್ಯ ಎಂದು ಸರ್ಕಾರ ತೀರ್ಮಾನಿಸಿದೆ ಎಂಬುದಕ್ಕೆ ಇದು ಸೂಚನೆಯಾಗಿದೆ, ಏಕೆಂದರೆ NIA ಯ ತನಿಖಾ ವ್ಯಾಪ್ತಿಯು ಸಾಮಾನ್ಯ ಅಪರಾಧ ಚಟುವಟಿಕೆಗಳನ್ನು ಒಳಗೊಂಡಿರುವುದಿಲ್ಲ.
ಮೋದಿ ನೇತೃತ್ವದ ರಾಜಕೀಯ ನಾಯಕತ್ವವು ಈ ಸ್ಫೋಟದ ಸಂಪೂರ್ಣ ತನಿಖೆ ಮಾಡಲಾಗುವುದು ಮತ್ತು ಈ ಹೀನಾಯ ಕೃತ್ಯದ ಹಿಂದಿರುವ ಪಿತೂರಿಗಾರರು ಕಾನೂನಿನ ಬಲವನ್ನು ಎದುರಿಸಬೇಕಾಗುತ್ತದೆ ಎಂದು ಜನರಿಗೆ ಭರವಸೆ ನೀಡಿದೆ.
ಗೃಹ ಸಚಿವ ಅಮಿತ್ ಶಾ ಸೇರಿದಂತೆ ಸಚಿವರು ಯಾರ ಕಡೆಗೂ ಬೊಟ್ಟು ತೋರಿಸಿಲ್ಲ. ದೆಹಲಿ ಪೊಲೀಸರು ಸೇರಿದಂತೆ ಕಾನೂನು ಜಾರಿ ಸಂಸ್ಥೆಗಳು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ, ಹಾಗೆಯೇ ಯಾವುದೇ ತನಿಖಾ ಅಥವಾ ವಿಧಿವಿಜ್ಞಾನ ಸಂಸ್ಥೆಗಳೂ ಕೂಡಾ ಹೇಳಿಕೆ ನೀಡಿಲ್ಲ.
ಕೆಲವು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಆದರೆ ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುವ ಮತ್ತು ಕೇವಲ ಕ್ರಿಮಿನಲ್ ಚಟುವಟಿಕೆಯ ವ್ಯಾಪ್ತಿಗೆ ಬಾರದ ಇಷ್ಟು ಗಂಭೀರ ವಿಷಯದಲ್ಲಿ, ಅಂತಹ ಮಾಧ್ಯಮ ವರದಿಗಳ ಆಧಾರದ ಮೇಲೆ ಯಾವುದೇ ವ್ಯಾಖ್ಯಾನಕಾರರು ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಅಥವಾ ತೆಗೆದುಕೊಳ್ಳಬಾರದು ಕೂಡ.
ಮೊದಲೇ ಶುರುವಾಗಿತ್ತು ಕಾರ್ಯಾಚರಣೆ
ಫರಿದಾಬಾದ್ ಪೊಲೀಸ್ ಕಮಿಷನರ್ ಸತೇಂದ್ರ ಕುಮಾರ್ ಗುಪ್ತಾ ಅವರು ಸ್ಫೋಟಕ್ಕೆ ಸುಮಾರು ನಾಲ್ಕು ಅಥವಾ ಐದು ಗಂಟೆಗಳಿಗೂ ಮೊದಲು ನವೆಂಬರ್ 10ರ ಮಧ್ಯಾಹ್ನ ಮಾಧ್ಯಮಕ್ಕೆ ಸಂಕ್ಷಿಪ್ತ ಮಾಹಿತಿ ನೀಡಿದ್ದರು. ಗುಪ್ತಾ ಅವರು ಹೇಳಿದ್ದನ್ನು ಆಲ್ ಇಂಡಿಯಾ ರೇಡಿಯೋದ ವರದಿಯಿಂದ ಉಲ್ಲೇಖಿಸುವುದು ಸೂಕ್ತವಾಗಿದೆ.
ಆಲ್ ಇಂಡಿಯಾ ರೇಡಿಯೋ ಹೀಗೆ ವರದಿ ಮಾಡಿದೆ: "ಫರಿದಾಬಾದ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ದಾಳಿ ನಡೆಸಿ, ಫರಿದಾಬಾದ್‌ನಲ್ಲಿ ಓರ್ವ ಕಾಶ್ಮೀರಿ ವೈದ್ಯರನ್ನು ಬಂಧಿಸಿದ್ದಾರೆ. ಧೌಜ್‌ನಲ್ಲಿರುವ ವೈದ್ಯರ ಮನೆಯಿಂದ ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಾ. ಮುಜ್ಜಬಲ್ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಂಧನದ ವೇಳೆ ಕಾಶ್ಮೀರಿ ವೈದ್ಯರ ಮನೆಯಿಂದ 350 ಕೆಜಿಗಿಂತ ಹೆಚ್ಚು ದಹನಶೀಲ ವಸ್ತುಗಳು, ಸಜೀವ ಮದ್ದುಗುಂಡುಗಳು, ಮ್ಯಾಗಜೀನ್‌ಗಳು, ಟೈಮರ್‌ಗಳು ಮತ್ತು ಸರ್ಕ್ಯೂಟ್ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ, ಇದನ್ನು ಸ್ಫೋಟಕಗಳು ಅಥವಾ ಭಯೋತ್ಪಾದಕ ಚಟುವಟಿಕೆಗಳಲ್ಲಿ ಬಳಸುವ ಸಾಧ್ಯತೆ ಇದೆ ಎಂದು ಪೊಲೀಸ್ ಕಮಿಷನರ್ ಸತೇಂದ್ರ ಕುಮಾರ್ ಗುಪ್ತಾ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದರು."
"ಈ ಕಾರ್ಯಾಚರಣೆಯಲ್ಲಿ ಉತ್ತರ ಪ್ರದೇಶದ ಸಹರಾನ್‌ಪುರದಿಂದ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ಈ ಜಂಟಿ ಕಾರ್ಯಾಚರಣೆಯು ಕಳೆದ 15 ದಿನಗಳಿಂದ ನಡೆಯುತ್ತಿದೆ ಮತ್ತು ಈಗಲೂ ಮುಂದುವರಿದಿದೆ. ವಶಪಡಿಸಿಕೊಂಡಿರುವ ವಸ್ತುಗಳನ್ನು ಪರಿಶೀಲಿಸಲು ವಿಧಿವಿಜ್ಞಾನ ತಜ್ಞರ ತಂಡವನ್ನು ಕರೆಸಲಾಗಿದೆ ಎಂದು ಅವರು ಹೇಳಿದರು. ಪ್ರಾಥಮಿಕ ತನಿಖೆಗಳ ಪ್ರಕಾರ ಈ ಜಾಲವು ಅಂತರರಾಜ್ಯ ಮಟ್ಟದಲ್ಲಿ ಸಕ್ರಿಯವಾಗಿತ್ತು ಮತ್ತು ಹಲವಾರು ಶಂಕಿತರನ್ನು ಗುರುತಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.
ಗೊಂದಲದ ಹೇಳಿಕೆಗಳು
ಗುಪ್ತಾ ಅವರ ಮಾಧ್ಯಮ ಸಂಕ್ಷಿಪ್ತ ಮಾಹಿತಿಯ ವಿಡಿಯೋ ರೆಕಾರ್ಡಿಂಗ್ ಆಧರಿಸಿ AIR ವರದಿಗೆ ಎರಡು ಅಂಶಗಳನ್ನು ಸೇರಿಸಬಹುದು: ಒಂದು ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ ಫಲಾಹ್ ವೈದ್ಯರನ್ನು 9 ರಿಂದ 10 ದಿನಗಳ ಹಿಂದೆಯೇ ಬಂಧಿಸಲಾಗಿದೆ ಎಂದು ಬಹಿರಂಗಪಡಿಸಿದರು. ಇದರರ್ಥ ಅವರು ನವೆಂಬರ್ ತಿಂಗಳ ಆರಂಭದಿಂದಲೂ ಪೊಲೀಸ್ ಕಸ್ಟಡಿಯಲ್ಲಿ ಇದ್ದರು ಎಂದು ಸೂಚಿಸುತ್ತದೆ. ಇನ್ನೊಂದು ಪ್ರಶ್ನೆಗೆ ತಮ್ಮ ಉತ್ತರದಲ್ಲಿ, ಗುಪ್ತಾ ಅವರು ಒಬ್ಬ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ ಮತ್ತು ತನಿಖೆಗಳು ನಡೆಯುತ್ತಿವೆ ಎಂದು ಹೇಳುತ್ತಾರೆ.
ಸ್ವಾಭಾವಿಕವಾಗಿ, ಈಗ NIA ಈ ಜಾಲದ ಮತ್ತು ಸ್ಫೋಟದ ಎಲ್ಲಾ ಅಂಶಗಳನ್ನು, ವಿಶೇಷವಾಗಿ ಅದರ ಅಪರಾಧಿಗಳ ಗುರುತನ್ನು ಪರಿಶೀಲಿಸುತ್ತದೆ.
'ಆಪರೇಷನ್ ಸಿಂಧೂರ್'ನ್ನು ಸರ್ಕಾರವು ತಾಂತ್ರಿಕವಾಗಿ ಇನ್ನೂ ಕೊನೆಗೊಳಿಸಿಲ್ಲ. ಇಂತಹ ಸಮಯದಲ್ಲಿ ದೆಹಲಿಯಲ್ಲಿ ಸ್ಫೋಟ ಸಂಭವಿಸಿದೆ. ಇದು ಭಾರತ-ಅಮೆರಿಕ ಸಂಬಂಧಗಳಲ್ಲಿನ ಸೂಕ್ಷ್ಮ ಸಮಯವೂ ಆಗಿದೆ, ಯಾಕೆಂದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನಗಳ ಹಿಂದೆ ಎರಡೂ ದೇಶಗಳು ಒಂದು ಒಪ್ಪಂದಕ್ಕೆ ಹತ್ತಿರವಾಗುತ್ತಿವೆ ಎಂದು ಹೇಳಿದ್ದಾರೆ.
"ನಾವು ನ್ಯಾಯಯುತವಾದ ಒಪ್ಪಂದ, ಕೇವಲ ನ್ಯಾಯಯುತ ವ್ಯಾಪಾರ ಒಪ್ಪಂದಕ್ಕೆ ಬರುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ಉಲ್ಲೇಖಿಸಿವೆ. "ನಾವು ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ, ಇದು ಹಿಂದೆ ಇದ್ದ ಒಪ್ಪಂದಕ್ಕಿಂತ ಇದು ಬಹಳ ಭಿನ್ನವಾಗಿದೆ" ಎಂದು ಅವರು ಮುಂದುವರಿದು ಹೇಳಿದ್ದರು.
ಭಾರತವು ಅಮೆರಿಕಕ್ಕೆ ಮಾಡುವ ರಫ್ತುಗಳ ಮೇಲೆ ವಿಧಿಸಲಾದ ಶೇ.50ರಷ್ಟು ಸುಂಕದಿಂದ ರಕ್ಷಿಸಿಕೊಳ್ಳಲು ಮೋದಿ ಸರ್ಕಾರ ಪ್ರಯತ್ನಿಸಿದೆಯಾದರೂ, ಈ ಸುಂಕದ ದರ ಮುಂದುವರಿದಿದೆ. ಇದು ಭಾರತದ ಅರ್ಥ ವ್ಯವಸ್ಥೆಗೆ ಹಾನಿ ಮಾಡಿದೆ ಎಂಬುದು ಸತ್ಯ.
ಭಾರತವು ರಷ್ಯಾದ ತೈಲದ ಆಮದನ್ನು ಕಟ್ಟುನಿಟ್ಟಾಗಿ ಮೊಟಕುಗೊಳಿಸಿದೆ, ಆದರೆ ಟ್ರಂಪ್ ಒತ್ತಡ ಹೇರುವುದನ್ನು ಮುಂದುವರಿಸಿದ್ದಾರೆ. ಭಾರತವು ರಷ್ಯಾ ತೈಲವನ್ನು ಖರೀದಿಸಿದ್ದ ಕಾರಣಕ್ಕಾಗಿ (ಶೇ.50ರ ಸುಂಕದ ಭಾಗವಾಗಿ) ಅವರು ವಿಧಿಸಿದ್ದ ಶೇ.25 ಸುಂಕ ಇನ್ನೂ ಚಾಲ್ತಿಯಲ್ಲಿದೆ. ಈ ಪರಿಸ್ಥಿತಿಯಲ್ಲಿ, ಮೋದಿ ಅವರು ಟ್ರಂಪ್ ಅವರನ್ನು ಕೆರಳಿಸುವ ಯಾವುದೇ ಹೆಜ್ಜೆಯನ್ನು ಇಡಲು ಬಯಸುವುದಿಲ್ಲ.
ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಜಾರಿಗೆ ತರಲು ಮುಖ್ಯ ಕಾರಣ ತಮ್ಮ ಮಧ್ಯಸ್ಥಿಕೆ ಎಂದು ಟ್ರಂಪ್ 40ಕ್ಕೂ ಹೆಚ್ಚು ಬಾರಿ ಹೇಳಿದ್ದಾರೆ ಎಂಬುದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು. ಆದರೆ, ಪಾಕಿಸ್ತಾನವು ಭಾರತಕ್ಕೆ ಮನವಿ ಮಾಡಿದ ನಂತರವೇ ಭಾರತವು ಯುದ್ಧವನ್ನು ನಿಲ್ಲಿಸಲು ಒಪ್ಪಿಕೊಂಡಿತು ಎಂದು ಮೋದಿ ಸರ್ಕಾರ ಹೇಳಿಕೊಂಡಿದೆ. ಅದೇ ಸಮಯದಲ್ಲಿ, ಈ ವಿಷಯದ ಕುರಿತು ಟ್ರಂಪ್ ಅವರ ಪುನರಾವರ್ತಿತ ಹೇಳಿಕೆಗಳ ಬಗ್ಗೆ ಮೋದಿ ಸರ್ಕಾರವು ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇನ್ನೊಂದು ಸಶಸ್ತ್ರ ಸಂಘರ್ಷ ಬೇಕಿಲ್ಲ
ಮಹಾನ್ ಶಕ್ತಿಗಳು ದೆಹಲಿ ಸ್ಫೋಟವನ್ನು ಖಂಡಿಸಿವೆ, ಆದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಮತ್ತೊಂದು ಸುತ್ತಿನ ಸಶಸ್ತ್ರ ಸಂಘರ್ಷವನ್ನು ಅವರು ಬಯಸುವುದಿಲ್ಲ. ಯಾಕೆಂದರೆ ಎರಡು ಪರಮಾಣು ರಾಷ್ಟ್ರಗಳ ನಡುವಿನ ಸಶಸ್ತ್ರ ಕಾರ್ಯಾಚರಣೆಯು ಪರಮಾಣು ವಿನಿಮಯದ ಬಗ್ಗೆ ಅವರೊಳಗಿನ ಭಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಭಾರತ ಮತ್ತು ಪಾಕಿಸ್ತಾನದ ನಾಯಕರು ಯಾವುದೇ ಪರಿಸ್ಥಿತಿಯನ್ನು ಅಂತಹ ಮಟ್ಟಕ್ಕೆ ಹೆಚ್ಚಿಸುವ ಇಚ್ಛೆಯನ್ನು ಹೊಂದಿಲ್ಲವಾದ್ದರಿಂದ, ಇದು ಅವಾಸ್ತವಿಕವಾಗಿದೆ.
ಆದಾಗ್ಯೂ, ಅಂತಾರಾಷ್ಟ್ರೀಯ ಸಮುದಾಯವು ಮಾಡಬೇಕಾದ ಮತ್ತು ಇಲ್ಲಿಯವರೆಗೆ ಪರಿಣಾಮಕಾರಿಯಾಗಿ ಮಾಡದೇ ಇರುವ ವಿಷಯವೆಂದರೆ ಭಾರತದ ವಿರುದ್ಧದ ತನ್ನ ಭಯೋತ್ಪಾದಕ ಚಟುವಟಿಕೆಯನ್ನು ನಿಲ್ಲಿಸಲು ಪಾಕಿಸ್ತಾನದ ಮೇಲೆ ಒತ್ತಡ ಹೇರುವುದು.
ಪಾಕಿಸ್ತಾನದಿಂದ ಯಾವುದೇ ಭಯೋತ್ಪಾದಕ ದಾಳಿಯನ್ನು ಯುದ್ಧದ ಕೃತ್ಯವೆಂದೇ ಪರಿಗಣಿಸಲಾಗುವುದು ಎಂದು ಮೋದಿ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಫರಿದಾಬಾದ್‌ನಲ್ಲಿ ಬಂಧಿತನಾದ ವೈದ್ಯ ಕಾಶ್ಮೀರಿ ಮೂಲದವನು. ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರೂವರೆ ದಶಕಗಳಿಂದ ಖುಲ್ಲಂಖುಲ್ಲ ನಡೆಯುತ್ತಿರುವ ಪಾಕಿಸ್ತಾನದ ಅತಿಕ್ರಮಣ ಚಟುವಟಿಕೆಗಳು ಎಲ್ಲರಿಗೂ ತಿಳಿದಿವೆ.
ನಿರಂತರ ಸಂಪರ್ಕದ ಕುರುಹು
ಆದ್ದರಿಂದ, ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳು ಮತ್ತು ರಾಷ್ಟ್ರದ ಗುಪ್ತಚರ ಏಜೆನ್ಸಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತು ಭಾರತದ ಇತರಡೆ ಇರುವ ವ್ಯಕ್ತಿಗಳು ಮತ್ತು ಗುಂಪುಗಳೊಂದಿಗೆ ಸಂಪರ್ಕ ಹೊಂದಿವೆ ಎಂಬ ಸಾರ್ವಜನಿಕ ಅಭಿಪ್ರಾಯವಿದೆ, ಆದರೆ ವಿಶೇಷವಾಗಿ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಅಭಿಪ್ರಾಯ ಬಲವಾಗಿದೆ.
ದೆಹಲಿ ಸ್ಫೋಟವು ಈ ಅಭಿಪ್ರಾಯಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಮೋದಿ ಸರ್ಕಾರವು ಈ ಅಭಿಪ್ರಾಯಗಳನ್ನು ನಿಭಾಯಿಸಬೇಕಾಗಿದೆ. ವಿರೋಧ ಪಕ್ಷಗಳು ಕೂಡ ಸ್ಫೋಟದ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇರುತ್ತವೆ.
ಆದ್ದರಿಂದ, ಸ್ಫೋಟದ ನಂತರದ ಪರಿಣಾಮಗಳನ್ನು ಹೇಗೆ ನಿಭಾಯಿಸಬೇಕು ಎಂಬ ಪ್ರಶ್ನೆಯು ಮೋದಿ ಸರ್ಕಾರಕ್ಕೆ ಹಲವಾರು ಗೊಂದಲಗಳನ್ನು ಒಡ್ಡುತ್ತದೆ. ಇದು ಸ್ಪರ್ಧಾತ್ಮಕ ಒತ್ತಡಗಳ ಮೂಲಕ ತನ್ನ ಹಾದಿಯನ್ನು ನ್ಯಾವಿಗೇಟ್ ಮಾಡಬೇಕಾಗುತ್ತದೆ. ಕೈಗೊಳ್ಳುವ ಯಾವುದೇ ಕಾರ್ಯಕ್ರಮವು ರಾಜಕೀಯ, ರಾಜತಾಂತ್ರಿಕ ಅಥವಾ ಆರ್ಥಿಕ ಪರಿಣಾಮಗಳಿಲ್ಲದೆ ಇರುವುದಿಲ್ಲ.
ವರದಿಗಳ ಪ್ರಕಾರ, ಕ್ಯಾಬಿನೆಟ್ ಭದ್ರತಾ ಸಮಿತಿಯು ಶೀಘ್ರದಲ್ಲೇ ಸಭೆ ಸೇರಲಿದೆ. ಸಭೆಯ ನಂತರ ಸರ್ಕಾರದ ಹೇಳಿಕೆ ಹೊರಬೀಳುವ ನಿರೀಕ್ಷೆಯಿದೆ. ಇದು ಭಯೋತ್ಪಾದನೆಯ ಬಗ್ಗೆ ಭಾರತದ ನಿಲುವುಗಳನ್ನು ಬಲವಾದ ಭಾಷೆಯಲ್ಲಿ ಪುನರುಚ್ಚರಿಸಿದರೂ ಸಹ, ವಿಷಯದಲ್ಲಿ ಎಚ್ಚರಿಕೆಯುಳ್ಳದ್ದಾಗಿರುವ ಸಾಧ್ಯತೆಯಿದೆ.
ಇದೇ ಸಂದರ್ಭದಲ್ಲಿ, ಪಾಕಿಸ್ತಾನವು ತನ್ನ ದೇಶದಲ್ಲಿ ತೆಹ್ರೀಕ್-ಎ-ತಾಲಿಬಾನ್-ಎ-ಪಾಕಿಸ್ತಾನ್ (TTP) ನಡೆಸುತ್ತಿರುವ ದಾಳಿಗಳಿಗೆ ಭಾರತ ಮತ್ತು ಅಫ್ಘಾನಿಸ್ತಾನವೇ ಪ್ರಚೋದಿಸುತ್ತಿದೆ ಮತ್ತು ಬೆಂಬಲಿಸುತ್ತಿದೆ ಎಂದು ದೂಷಿಸುವುದನ್ನು ಮುಂದುವರೆಸಿದೆ. ಕತಾರ್ ಮತ್ತು ಟರ್ಕಿ ಮಧ್ಯಸ್ಥಿಕೆಯಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಇಸ್ತಾಂಬುಲ್‌ನಲ್ಲಿ ನಡೆದ ಮಾತುಕತೆಗಳು ನಿರೀಕ್ಷೆಗಳಿಗೆ ವಿರುದ್ಧವಾಗಿ ವಿಫಲವಾಗಿವೆ.
ಪಾಕಿಸ್ತಾನದ ನಿಜವಾದ ಸಮಸ್ಯೆಗಳು ಅಫ್ಘಾನಿಸ್ತಾನವನ್ನು ದೂರವಿಡುವುದರಲ್ಲಿ ಮತ್ತು ಅದರ ಮೂಲಭೂತ ರಾಜಕೀಯ ಮತ್ತು ಜನಾಂಗೀಯ ವಿಭಜನೆಗಳಲ್ಲಿ ಅಡಗಿವೆ. ಆದರೆ, ಭಾರತ ಊಹಿಸಿದ ಪಾತ್ರದ ಬಗ್ಗೆ ಪಾಕಿಸ್ತಾನದ ತಪ್ಪು ಕಲ್ಪನೆಗಳು ಅದರ ಕಾರ್ಯಗಳಿಗೆ ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತವೆ. ಮೋದಿ ಸರ್ಕಾರ ಇವೆಲ್ಲವನ್ನೂ ನಿರ್ಲಕ್ಷಿಸಲಾರದು.
(Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ ದ ಫೆಡರಲ್ ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.)