ಭಾರತೀಯ ಕ್ರೀಡಾ ಕಲಿಗಳು ಕಲಿಸಿದ ಪಾಠ; ವಿಜಯದ ಆಲಿಂಗನದಲ್ಲಿ ಮಿಂದೆದ್ದ ಮಾನವೀಯ ಕ್ಷಣಗಳು
ಬಹುಶಃ ಮಹಿಳೆಯರು ಜಗತ್ತನ್ನು ಆಳಿದರೆ ಹೀಗಿರಬಹುದು, ಅಲ್ಲಿ ಪೈಪೋಟಿ ಎಂಬುದು ಪರಾನುಭೂತಿಯೊಂದಿಗೆ ಸಹಬಾಳ್ವೆ ನಡೆಸುತ್ತದೆ, ಅಲ್ಲಿ ಯಶಸ್ಸೆಂಬ ಗರ್ವವು ವಿನಯವನ್ನು ಅಳಿಸಿಹಾಕುವುದಿಲ್ಲ, ಅಲ್ಲಿ ವಿಜಯವು ಕೇವಲ ಘೋಷಣೆಯಂತೆ ಭಾಸವಾಗದೆ ಒಂದು ಆಲಿಂಗನದಂತೆ ಭಾಸವಾಗುತ್ತದೆ.
ಒಂದು ವೇಳೆ ಮಹಿಳೆಯರು ಇಡೀ ಜಗತ್ತನ್ನು ಆಳಿದರೆ ಹೇಗಿರಬಹುದು? ನವಿ ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಭಾರತದ ಮಹಿಳಾ ತಂಡ ವಿಶ್ವಕಪ್ ಎತ್ತಿದ ಆ ರಾತ್ರಿ, ಬಹುಶಃ ನಾವು ಅದರ ಒಂದು ಝಲಕ್-ನ್ನು ಕಂಡೆವು.
ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸುವ ಮೂಲಕ ಭಾರತವು ತನ್ನ ಮೊಟ್ಟಮೊದಲ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಆಕಾಶದಲ್ಲಿ ಸಿಡಿಮದ್ದುಗಳು ಚಿತ್ತಾರ ಬಿಡಿಸಿದವು, ತ್ರಿವರ್ಣ ಧ್ವಜವು ಗ್ಯಾಲರಿಗಳ ಉದ್ದಗಲಕ್ಕೂ ಹಾರಾಡಿತು ಮತ್ತು ಒಮ್ಮೆಗೇ ಒಂದು ಶತಕೋಟಿ ಹೃದಯಗಳು ಒಂದೇ ಸ್ಥರದಲ್ಲಿ ಮಿಡಿದವು. ಆದರೂ, ಹರ್ಷೋದ್ಗಾರ ಮತ್ತು ಸಂಭ್ರಮಗಳ ನಡುವೆಯೂ ಆ ರಾತ್ರಿ ವಿಭಿನ್ನವಾಗಿ ತೆರೆದುಕೊಂಡಿತು.
ಇದು ಕೇವಲ ಒಂದು ಗೆಲುವಿನ ಸಂಕೇತ ಆಗಿರಲಿಲ್ಲ. ಗಾಳಿಯಲ್ಲಿ ಏನೋ ಮೃದುವಾದ, ಆಪ್ತವಾದ, ಆರ್ದ್ರವಾದ ಭಾವನೆ ತೇಲುತ್ತಿತ್ತು, ಕ್ರೀಡೆಯನ್ನು ಮೀರಿದ ಸೌಜನ್ಯದ ಅನುಭೂತಿ ಅದಾಗಿತ್ತು ಎಂದರೆ ಅತಿಶಯೋಕ್ತಿ ಆಗಲಾರದು.
ಸಾಂಸ್ಕೃತಿಕ ಸೌಜನ್ಯದ ಕ್ಷಣ
ಪಂದ್ಯದ ನಂತರದ ಸಮಾರಂಭವು ನಿರೀಕ್ಷೆಯಂತೆ ಪ್ರಾರಂಭವಾಯಿತು. ನಾಯಕಿ ಟ್ರೋಫಿಯನ್ನು ಮೇಲಕ್ಕೆತ್ತಿ ಸಂಭ್ರಮಿಸಿದರು. ಆಟಗಾರರು ಜಿಗಿದರು, ಅವರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು ಮತ್ತು ಜನಸಮೂಹದತ್ತ ಕೈಬೀಸಿದರು. ಆದರೆ ನಂತರ ನಡೆದ ಘಟನೆಯು ಕ್ರೀಡಾ ವಿಜಯವನ್ನು ಸಾಂಸ್ಕೃತಿಕ ಸೌಜನ್ಯದ ಕ್ಷಣವಾಗಿ ಪರಿವರ್ತಿಸಿತು.
ಆ ಮೈದಾನದಲ್ಲಿ ತಾವಷ್ಟೇ ಕೇಂದ್ರಬಿಂದುವಾಗಿ, ಪ್ರಕಾಶಮಾನವಾಗಿ, ದೇದೀಪ್ಯಮಾನವಾಗಿ ಪ್ರಜ್ವಲಿಸುವ ಬದಲು, ಆ ಅಷ್ಟೂ ಆಟಗಾರರು ಇತರರತ್ತ ಚಿತ್ತ ಹರಿಸಿದರು. ಅವರು ಬೇರೆ ಯಾರೂ ಅಲ್ಲ. ಒಂದು ಕಾಲದಲ್ಲಿ ಯಾರೂ ನೋಡದಿದ್ದಾಗಲೂ ಭಾರತೀಯ ಕ್ರಿಕೆಟ್-ನ್ನು ಮುನ್ನಡೆಸಿದ್ದ ಮಿಥಾಲಿ ರಾಜ್, ಝೂಲನ್ ಗೋಸ್ವಾಮಿ, ಅಂಜುಮ್ ಚೋಪ್ರಾ, ರೀಮಾ ಮಲ್ಹೋತ್ರಾ ಅವರ ಕಡೆಗೆ ತಿರುಗಿ ಅವರನ್ನು ಮೈದಾನಕ್ಕೆ ಕರೆದರು. ಅವರು ಕೇವಲ ಮಾತಿನಲ್ಲಿ ಧನ್ಯವಾದ ಹೇಳಲಿಲ್ಲ, ಬದಲಿಗೆ ಟ್ರೋಫಿಯನ್ನು ಅವರೊಂದಿಗೆ ಹಂಚಿಕೊಂಡರು, ಅವರನ್ನು ತಬ್ಬಿಕೊಂಡರು, ಹೊಸ ಭಾಷ್ಯೆ ಬರೆದರು... ಅವರ ಅಷ್ಟೂ ದಿನದ ಶ್ರಮದಿಂದ ಸಾಧ್ಯವಾಗಿಸಿದ ಕ್ಷಣದ ಭಾಗವಾಗಿ ಮಾಡಿದ್ದು ನಿಜಕ್ಕೂ ಕಣ್ಣು ತುಂಬಿಕೊಳ್ಳುವ ಅನನ್ಯತೆ.
ಇದೇನು ಮೊದಲೇ ಯೋಜನೆ ಮಾಡಿ ರೂಪಿಸಿದ ಗೌರವವಾಗಿರಲಿಲ್ಲ; ಅದು ಸ್ವಯಂಪ್ರೇರಿತ ಮತ್ತು ಶುದ್ಧಾತಿ ಶುದ್ಧವಾಗಿತ್ತು. ಮಿಥಾಲಿ ತಮ್ಮ ಕೈಯಲ್ಲಿ ಕಪ್ ಹಿಡಿದರು... ಅವರ ಕಣ್ಣಿನಲ್ಲಿ ಖುಷಿಯ ಬಾಷ್ಪ, ಭಾವಪರವಶರಾಗಿ ನಕ್ಕರು. ಒಂದು ಕಾಲದಲ್ಲಿ ಆಡಲು ಶೂಗಳನ್ನು ಸಾಲ ಪಡೆಯುತ್ತಿದ್ದ, ದಣಿವರಿಯದ ವೇಗದ ಬೌಲರ್ ಝೂಲನ್ ಮಾತು ಮರೆತು ಮೌನಕ್ಕೆ ಶರಣಾದರು. ವರ್ಷಗಳ ಕಾಲ, ಈ ಮಹಿಳಾಮಣಿಗಳು ಮೂಲಭೂತ ಭತ್ಯೆಗಳಿಗಾಗಿ ಹೋರಾಡಿದರು, ಮೈದಾನಗಳು ಖಾಲಿ ಖಾಲಿ ಇದ್ದಾಗಲೂ ಆಡಿದರು ಮತ್ತು ಅವರನ್ನು ಅಪರೂಪದಲ್ಲಿ ಅಪರೂಪಕ್ಕೆ ಮಾತ್ರ ನೋಡುತ್ತಿದ್ದ ವ್ಯವಸ್ಥೆಯನ್ನು ಸಹಿಸಿಕೊಂಡವರು...
ಆ ರಾತ್ರಿ, ಅವರು ಮಹಿಳಾ ಕ್ರಿಕೆಟ್ ಇತಿಹಾಸ ಮರೆತುಹೋದ ಫುಟ್-ನೋಟ್ ಆಗಲಿಲ್ಲ. ಅವರು ಆ ಯಶೋಗಾಥೆಯ ಕ್ಲೈಮ್ಯಾಕ್ಸ್‌ನ ಭಾಗವಾಗಿದ್ದರು.
ಮನೆಗೆ ಮರಳಿದ ಸಂಭ್ರಮ
ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ ಅವರಂತಹ ಈಗಿನ ತಲೆಮಾರಿನ ಈ ಗೆಲುವು ಕೇವಲ ವೈಯಕ್ತಿಕ ವೈಭವವಾಗಿರಲಿಲ್ಲ. ಇದು ನಿರಂತರತೆಯ ದ್ಯೋತಕವಾಗಿತ್ತು. ಕ್ರೀಡೆಯ ಮೇಲಿನ ಪ್ರೀತಿಗಾಗಿ ಮಾತ್ರ ಆಡಿದ್ದವರ ಭುಜಗಳ ಮೇಲೆ ತಮ್ಮ ಯಶಸ್ಸು ನಿಂತಿದೆ ಎಂಬುದನ್ನು ಅವರು ಅರ್ಥಮಾಡಿಕೊಂಡರು.
ಮಹಿಳಾ ಕ್ರಿಕೆಟಿಗರು ಮೀಸಲಾತಿ ಇಲ್ಲದ ವಿಭಾಗಗಳಲ್ಲಿ ಪ್ರಯಾಣಿಸುತ್ತಿದ್ದ ಮತ್ತು ತಮ್ಮದೇ ಕಿಟ್‌ಗಳಿಗೆ ಹಣ ಪಾವತಿಸುತ್ತಿದ್ದ ದಿನಗಳಿಂದ ಆರಂಭಿಸಿ, ತುಂಬಿ ತುಳುಕಿದ ಕ್ರೀಡಾಂಗಣಗಳು ಮತ್ತು ಮಿಲಿಯನ್-ಡಾಲರ್ ಲೀಗ್‌ಗಳ ಯುಗದವರೆಗೂ, ಈ ಪ್ರಯಾಣವು ದೀರ್ಘವಾಗಿತ್ತು, ಏಕಾಂಗಿಯಾಗಿತ್ತು ಮತ್ತು ಆಗಾಗ್ಗೆ ಕೃತಜ್ಞತೆಯೇ ಇಲ್ಲದಂತಿತ್ತು. ಆದರೆ ಈ ಗೆಲುವು ಎಲ್ಲರಿಗಾಗಿ ಸಮರ್ಪಿತವಾಗಿತ್ತು; ಕ್ರಿಕೆಟ್ ಆಕೆಗಾಗಿ ಅಲ್ಲ ಎಂದು ಹೇಳಿದ ಪ್ರತಿಯೊಬ್ಬ ಯುವತಿಗಾಗಿ, ತನ್ನ ಮಗಳನ್ನು ಆಟವಾಡಲು ಬಿಡಲು ಹೋರಾಡಿದ ಪ್ರತಿಯೊಬ್ಬ ತಾಯಿಗಾಗಿ ಮತ್ತು ಕ್ಯಾಮೆರಾಗಳಿಲ್ಲದ, ಪ್ರಾಯೋಜಕರಿಲ್ಲದ, ಚಪ್ಪಾಳೆಗಳೇ ಇಲ್ಲದೇ ಇದ್ದಾಗಲೂ ಉಳಿದುಕೊಂಡವರಿಗಾಗಿ ಆಗಿತ್ತು. ಇದು ಮನೆಗೆ ಮರಳಿದ ಸಂಭ್ರಮವಾಗಿತ್ತು.
ಕ್ರೀಡೆಯ ನಿಜವಾದ ಸಾರ
ಅದು ನಿಜಾರ್ಥದ ಕ್ರೀಡೆಯ ಸೊಗಸು. ಭಾರತದ ಈ ಹುಡುಗಿಯರು ತಮ್ಮ ಹಿಂದೆ ಇದ್ದ ದಿಟ್ಟೆಯರ ಜೊತೆ ಮಾತ್ರ ಸಂಭ್ರಮಿಸಲಿಲ್ಲ, ಅವರು ತಮ್ಮ ಎದುರಾಳಿಗಳ ಕಡೆಗೂ ಕೈಚಾಚಿದರು. ಸ್ಮೃತಿ ಮಂಧಾನಾ ಮತ್ತು ಜೆಮಿಮಾ ರಾಡ್ರಿಗಸ್ ಮೊದಲಾದವರು ಕಣ್ಣೀರಿನಲ್ಲಿ ಮಿಂದು ಬಿಮ್ಮಗೆ ನಿಂತಿದ್ದ ದಕ್ಷಿಣ ಆಫ್ರಿಕಾದ ಆಟಗಾರ್ತಿಯರನ್ನು ಹೋಗಿ ತಬ್ಬಿಕೊಂಡರು. ಅವರೊಂದಿಗೆ ಇವರೂ ಕಣ್ಣೀರಾದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ದ.ಆಫ್ರಿಕಾದ ನಾಯಕಿ ಲಾರಾ ವೋಲ್ವಾರ್ಡ್ಟ್ ಅವರ ತಂಡವನ್ನು ವೈಯಕ್ತಿಕವಾಗಿ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದರು...
ಗೆಲುವಿನಲ್ಲಿ ವಿನಯ ಮತ್ತು ಸೋಲಿನಲ್ಲಿ ಸೌಜನ್ಯ – ಇದು ಅತ್ಯಂತ ಹಳೆಯ ಕ್ರೀಡಾ ಸಿದ್ಧಾಂತಗಳು. ಅಂದು ರಾತ್ರಿ ನಿಜವಾದ ಅಭಿವ್ಯಕ್ತಿಯನ್ನು ಕಂಡಿದ್ದು ಇದೇ ಸಿದ್ಧಾಂತಗಳು. ಭಾರತದ ಆಟಗಾರ್ತಿಯರು ತಮ್ಮ ಮೊದಲ ವಿಶ್ವಕಪ್ ಪ್ರಶಸ್ತಿಯ ಸಂಭ್ರಮವನ್ನು ಆಚರಿಸುತ್ತಿದ್ದಾಗ, ಹೃದಯ ಒಡೆದು ಚೂರಾದ ದಕ್ಷಿಣ ಆಫ್ರಿಕಾದ ಆಟಗಾರ್ತಿಯರು ಕಣ್ಣೀರನ್ನು ತಡೆಹಿಡಿಯಲು ಅಕ್ಷರಶಃ ಹೆಣಗಾಡುತ್ತಿದ್ದರು. ಆಗ ಜೆಮಿಮಾ ಮತ್ತು ರಾಧಾ ಯಾದವ್ ತಮ್ಮದೇ ಸಂಭ್ರಮವನ್ನು ಕೈಚೆಲ್ಲಿ, ತಮ್ಮ ಜೀವನದ ಐದನೇ ವಿಶ್ವಕಪ್ ಆಡುತ್ತಿದ್ದ ಮರಿಜಾನ್ನೆ ಕಾಪ್ ಸೇರಿದಂತೆ ಮ್ಲಾನವದನರಾಗಿ, ಕಣ್ಣೀರಲ್ಲಿ ಮೀಯುತ್ತಿದ್ದ ದಕ್ಷಿಣ ಆಫ್ರಿಕಾದ ತಾರೆಯರನ್ನು ಸಂತೈಸಲು ಧಾವಿಸಿದರು.
ಇಂತಹುದೊಂದು ದೃಶ್ಯವು ಪುರುಷರ ಕ್ರಿಕೆಟ್‌ನ ದೊಡ್ಡ ಪಂದ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಆಕ್ರಮಣಶೀಲತೆ ಮತ್ತು ತೋರಿಕೆಯ ಭಾವನೆಗಳಿಂದ ದೂರವಿತ್ತು. ಯಾವುದೇ ಯೋಜಿತ ಭಂಗಿಗಳು, ಬ್ರ್ಯಾಂಡ್-ಚಾಲಿತ ಪ್ರದರ್ಶನಗಳು, ಅಥವಾ ಎದೆ ಬಡಿದುಕೊಳ್ಳುವ ದೃಶ್ಯಗಳು ಇರಲಿಲ್ಲ. ಕೇವಲ ನಗು, ಮಾನವೀಯತೆ, ಮತ್ತು ಕ್ರೀಡಾಸ್ಪೂರ್ತಿ, ಅತ್ಯುನ್ನತ ಸ್ಥಿತಿಯಲ್ಲಿತ್ತು. ವಿಭಜಿಸುವ ಬದಲು ಪರಸ್ಪರ ಸಂಹವನವೇ ನಮ್ಮ ಧ್ಯೇಯ ಎಂಬುದಕ್ಕೆ ಮೌನ ಸಮ್ಮತಿ ಅದಾಗಿತ್ತು.
ಎಲ್ಲರನ್ನೂ ಒಳಗೊಳ್ಳುವ ನಾಯಕತ್ವ
ಇದು ಪುರುಷರು ಮತ್ತು ಮಹಿಳೆಯರನ್ನು ಹೋಲಿಕೆ ಮಾಡಿ ನೋಡುವ ಬಗೆ ಅಲ್ಲ. ಇದು ಆ ರಾತ್ರಿ ಮಹಿಳೆಯರು ಅನಾವರಣಗೊಳಿಸಿದ ನಾಯಕತ್ವದ ಸಂಸ್ಕೃತಿಯ ಬಗೆ, ಬಲವಂತದ ಬದಲಾಗಿ ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆಯ ಮೇಲೆ ರೂಪುಗೊಂಡ ನಾಯಕತ್ವಕ್ಕೊಂದು ನಿದರ್ಶನವಾಗಿತ್ತು. ಕ್ರೀಡಾ ವಿಜಯಗಳೆಂದರೆ ಕ್ಯಾಮೆರಾಗಳಿಗಾಗಿ ನಿರ್ದೇಶಿಸಲ್ಪಡುವ ಈ ಯುಗದಲ್ಲಿ, ಭಾರತೀಯ ಮಹಿಳೆಯರು ವಿಜಯವು ಪ್ರಾಮಾಣಿಕ, ಸಾಮೂಹಿಕ ಮತ್ತು ದಯೆಯಿಂದಲೂ ಕೂಡಿರಬಹುದಲ್ಲವೇ ಎಂಬುದನ್ನು ನಮಗೆ ನೆನಪಿಸಿದರು. ಅವರ ಈ ಸಂಕೇತ ವಿನಯವಷ್ಟೇ ಆಗಿರಲಿಲ್ಲ, ಅದು ಅವರ ಪ್ರಬುದ್ಧತೆಗೆ ಹಿಡಿದ ಕನ್ನಡಿಯಾಗಿತ್ತು. ಆ ದಿನ ಆಡಿದ ಹನ್ನೊಂದು ಮಂದಿ ಆಟಗಾರರಿಗಿಂತ ಹೆಚ್ಚಿನವರಿಗೆ ಈ ಟ್ರೋಫಿ ಸೇರಿದೆ ಎಂಬುದು ಅವರಿಗೆ ತಿಳಿದಿತ್ತು. ಇದು ನಿರೀಕ್ಷೆಗಳನ್ನು ವಿರೋಧಿಸಿ ಬ್ಯಾಟ್ ಹಿಡಿದ ಪ್ರತಿಯೊಬ್ಬ ಮಹಿಳೆಗೂ ಸೇರಿದ್ದಾಗಿತ್ತು.
ಈ ಕ್ಷಣದ ಬಗ್ಗೆ ರವಿ ಅಶ್ವಿನ್ ನಂತರ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದರು. "ಕ್ರೀಡೆ ನಿಜಕ್ಕೂ ಏನಾಗಿದೆ ಎಂಬುದನ್ನು ಅವರು ನಮಗೆ ನೆನಪು ಮಾಡಿಕೊಟ್ಟರು. ಯಾರನ್ನು ಮುಖ್ಯವಾಗಿ ನೆನಪಿಸಿಕೊಳ್ಳಬೇಕಿತ್ತೋ ಅವರನ್ನು ಮರೆಯಲಿಲ್ಲ" ಎಂದು ಹೇಳಿದ್ದು ವಿಶೇಷವಾಗಿತ್ತು. ಹಿಂದಿನ ತಲೆಮಾರಿನ ಕ್ರೀಡಾಪಟುಗಳಿಗೆ ನಿಜವಾದ ಮನ್ನಣೆಯನ್ನು ನೀಡಿದ್ದಕ್ಕಾಗಿ ಅವರು ಮಹಿಳಾ ತಂಡವನ್ನು ಶ್ಲಾಘಿಸಿದರು.
ಯುಗಗಳ ನಡುವಿನ ಸೇತುವೆ
ಮಿಥಾಲಿ ರಾಜ್ ಅವರು ಮತ್ತೊಮ್ಮೆ ಟ್ರೋಫಿಯನ್ನು ಎತ್ತಿ ಹಿಡಿದಾಗ, ಈ ಬಾರಿ ಅವರನ್ನು ನೋಡಿ ಬೆಳೆದ ಆಟಗಾರ್ತಿಯರಿಂದ ಸುತ್ತುವರೆದಾಗ, ಅದು ಕೇವಲ ವಿಜಯದ ಸಂಕೇತವಾಗಿರಲಿಲ್ಲ; ಅದು ಯುಗಗಳ ನಡುವಿನ ಸೇತುವೆಯಾಗಿತ್ತು. ಧೈರ್ಯ ಮತ್ತು ಕೃತಜ್ಞತೆಯಿಂದ ತುಂಬಿದ ಪರಂಪರೆಯಾಗಿತ್ತು. ಕೇವಲ ಫುಟ್-ನೋಟ್ ಗಳಾಗಿ ಮಾಯವಾಗಲು ನಿರಾಕರಿಸಿದ ಮಹಿಳೆಯರ ಕಥೆಯಾಗಿತ್ತು.
ಬಹುಶಃ ಅದಕ್ಕಾಗಿಯೇ ಆ ರಾತ್ರಿಯನ್ನು ಸ್ಕೋರ್‌ಬೋರ್ಡ್‌ಗಿಂತ ಹೆಚ್ಚಾಗಿ ಅದರ ಆತ್ಮಕ್ಕಾಗಿ ಸ್ಮರಿಸಬೇಕಾಗುತ್ತದೆ. ಇದು ವಿಶೇಷ ರೀತಿಯ ಶಕ್ತಿಯನ್ನು ತೋರಿಸಿತು, ಗಟ್ಟಿ ಧ್ವನಿಯಲ್ಲಿ ಅಬ್ಬರಿಸುವ ಅಗತ್ಯವಿಲ್ಲದ ಶಕ್ತಿ. ಮನ್ನಣೆಯು ಸಾಧನೆಯನ್ನು ಕಡಿಮೆ ಮಾಡುವುದಿಲ್ಲ ಎಂದು ತಿಳಿದಿರುವ ಶಕ್ತಿ, ಮತ್ತು ದಯೆಯು ವಿಜಯದಷ್ಟೇ ಭಾರವನ್ನು ಹೊರಬಲ್ಲದು ಎಂಬುದನ್ನು ಅರಿತಿರುವ ಶಕ್ತಿ.
ಬಹುಶಃ ಮಹಿಳೆಯರು ಜಗತ್ತನ್ನು ಆಳಿದರೆ ಹೀಗಿರಬಹುದು; ಅಲ್ಲಿ ಪೈಪೋಟಿ ಎಂಬುದು ಪರಾನುಭೂತಿಯೊಂದಿಗೆ ಸಹಬಾಳ್ವೆ ನಡೆಸುತ್ತದೆ, ಅಲ್ಲಿ ಯಶಸ್ಸೆಂಬ ಗರ್ವವು ವಿನಯವನ್ನು ಅಳಿಸಿಹಾಕುವುದಿಲ್ಲ, ಮತ್ತು ಅಲ್ಲಿ ವಿಜಯವು ಕೇವಲ ಘೋಷಣೆಯಂತೆ ಭಾಸವಾಗದೆ ಒಂದು ಆಲಿಂಗನದಂತೆ ಭಾಸವಾಗುತ್ತದೆ.
ಕ್ರೀಡೆಯ ನಿಜವಾದ ಹೃದಯ
ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ದೀಪಗಳು ಮಂಕಾಗುತ್ತಿದ್ದಂತೆ, ಅಲ್ಲಿನ ಚಿತ್ರಗಳು ಮನಸ್ಸಿನಲ್ಲಿ ಸ್ಥಾಯಿಯಾದವು: ಝೂಲನ್ ಅವರು ಕಿರಿಯರೊಂದಿಗೆ ಸೇರಿ ನಗುತ್ತಿರುವುದು, ಮಿಥಾಲಿ ತಮ್ಮ ಕಣ್ಣುಗಳನ್ನು ಮತ್ತೆ ಒರೆಸಿಕೊಳ್ಳುತ್ತಿರುವುದು, ಹೃದಯ ಒಡೆದು ಚೂರಾದರೂ ನಗುವಿನಲ್ಲಿರು ದಕ್ಷಿಣ ಆಫ್ರಿಕಾದ ಆಟಗಾರ್ತಿಯರು, ಭಾರತೀಯ ತಂಡದ ಸದಸ್ಯರ ತೋಳುಗಳನ್ನು ಬೆಸೆದುಕೊಂಡಿರುವುದು... ಈ ಎಲ್ಲ ಭಾವಗಳಿಗೆ, ಚಿತ್ರಗಳಿಗೆ ಘೋಷಣೆಗಳಿಲ್ಲ. ಹ್ಯಾಶ್‌ಟ್ಯಾಗ್‌ಗಳಿಲ್ಲ. ಯಾವ ನಿರ್ದೇಶನವೂ ಅವುಗಳಿಗೆ ಇರಲಿಲ್ಲ... ಅಲ್ಲಿದ್ದುದು ಅಪ್ಪಟ ಸೌಜನ್ಯ ಮಾತ್ರ.
ಆ ರಾತ್ರಿ, ಭಾರತೀಯ ಕ್ರಿಕೆಟ್ ತಾನು ಬಹಳ ಹಿಂದೆಯೇ ಕಳೆದುಕೊಂಡಿದ್ದ ಒಂದು ವಸ್ತುವನ್ನು ಮರಳಿ ದಕ್ಕಿಸಿಕೊಂಡಿತು – ಅದು ತನ್ನ ಹೃದಯ! ಮತ್ತು ಹಾಗೆ ಮಾಡುವ ಮೂಲಕ, ಅತಿ ದೊಡ್ಡ ಸಂಭ್ರಮಾಚರಣೆಗಳಲ್ಲಿ ಯಾರು ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ ಎಂಬುದು ಮುಖ್ಯವಾಗುವುದಿಲ್ಲ, ಬದಲಿಗೆ ಯಾರು ಹಿಂದಕ್ಕೆ ಕೈಚಾಚಿ ಮತ್ತೊಂದು ಕೈಯನ್ನು ಬೆಸೆದುಕೊಳ್ಳಲು ಮುಂದಾಗುತ್ತಾರೆ ಎಂಬುದು ಮುಖ್ಯವಾಗುತ್ತದೆ ಎಂಬುದನ್ನು ಈ ಮಹಿಳೆಯರು ನಮಗೆ ನೆನಪಿಸಿದರು.
ಮಹಿಳೆಯರು ಮುನ್ನಡೆಸಿದಾಗ ಜಗತ್ತು ಹೀಗಿದ್ದರೆ, ಇದು ನಂಬಲು ಯೋಗ್ಯವಾದ ದೃಷ್ಟಿಕೋನ.