ಅತ್ತ ದರಿ ಇತ್ತ ಪುಲಿ: ಅಮೆರಿಕ-ಚೀನಾ ನಡುವಿನ ಶೀತಲ ಸಮರದಲ್ಲಿ ಹಿಂಡಿ ಹಿಪ್ಪೆಯಾದ ಭಾರತ
ಅಮೆರಿಕ ತನ್ನ ಸಹಭಾಗಿತ್ವ ಬಿಡದಿರುವಂತೆ ಭಾರತದ ಮೇಲೆ ಒತ್ತಡ ಹೇರುತ್ತದೆ. ಆದರೆ ಚೀನಾವನ್ನು ಪಕ್ಕಾ ಪ್ರತಿಸ್ಪರ್ಧಿ ಎಂದು ಭಾವಿಸುತ್ತದೆ. ಇದರಿಂದ ಭಾರತಕ್ಕೆ ದರಿ-ಇತ್ತ ಪುಲಿ ಎಂಬ ಸ್ಥಿತಿ.
ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿಬಿಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅ.15ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆಸಿದ ದೂರವಾಣಿ ಕರೆಯ ವೇಳೆ ಮಾತು ಕೊಟ್ಟಿದ್ದಾರೆ ಎನ್ನಲಾಗಿದೆ.
“ಭಾರತವು ತೈಲ ಖರೀದಿ ಮಾಡುತ್ತಿರುವುದರ ಬಗ್ಗೆ ನಾನು ಅಸಂತುಷ್ಟನಾಗಿದ್ದೇನೆ. ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ನಿಲ್ಲಿಸುತ್ತೇನೆ ಎಂದು ಇಂದು ಅವರು ನನಗೆ ಭರವಸೆ ನೀಡಿದ್ದಾರೆ. ಇದೊಂದು ಬಹಳ ದೊಡ್ಡ ನಿರ್ಧಾರ. ಈಗ ಚೀನಾ ಕೂಡ ಅದೇ ಹಾದಿ ತುಳಿಯಬೇಕು ಎಂಬುದು ನಮ್ಮ ಉದ್ದೇಶ,” ಎಂದು ಟ್ರಂಪ್ ತಿಳಿಸಿದ್ದಾರೆ.
ಅದೇ ಹೊತ್ತಿನಲ್ಲಿ ಅಮೆರಿಕದ ಉನ್ನತ ಮಟ್ಟದ ಅಧಿಕಾರಿಗಳು ಚೀನಾದ ಮೇಲೆ ತೀವ್ರ ಪ್ರಹಾರ ಆರಂಭಿಸಿದ್ದಾರೆ. ಅದು ರಷ್ಯಾದಿಂದ ತೈಲ ಖರೀದಿಗೆ ಸಂಬಂಧಿಸಿದ್ದಲ್ಲ. ಬದಲಾಗಿ ಆಧುನಿಕ ಆರ್ಥಿಕತೆಗೆ ಆಧಾರವಾಗಿರುವ 34 ನಿರ್ಣಾಯಕ ಕಚ್ಛಾ ಖನಿಜಗಳ ಮೇಲೆ ರಫ್ತು ನಿಯಂತ್ರಣಗಳನ್ನು ಪ್ರಸ್ತಾಪ ಮಾಡಿದ್ದಕ್ಕಾಗಿ ಈ ದಾಳಿ ಮಾಡಲಾಗಿದೆ. ಅಮೆರಿಕದ ಖಜಾಂಚಿ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಮತ್ತು ವಾಣಿಜ್ಯ ಪ್ರತಿನಿಧಿ ಜೆಮೀಸನ್ ಗೀರ್ ಅವರು ಚೀನಾದ ಈ ನಡೆಯನ್ನು ‘ಜಾಗತಿಕ ಪೂರೈಕೆ ಸರಣಿಯನ್ನು ವಶಕ್ಕೆ ತೆಗೆದುಕೊಳ್ಳುವ ಕ್ರಮ’ ಎಂದು ದೂರಿದ್ದು, ಇದು ‘ಇಡೀ ವಿಶ್ವದ ವಿರುದ್ಧ ಚೀನಾ’ ನಡೆ ಎಂದು ವಿಶ್ಲೇಷಿಸಿದ್ದಾರೆ.
ಇಷ್ಟೊಂದು ತೀವ್ರ ತದ್ವಿರುದ್ಧವಾದ ನಿಲುವಿನ ಮೂಲಕ ಅಮೆರಿಕವು ಏಷ್ಯಾದ ಎರಡು ಪ್ರಮುಖ ಸಹವರ್ತಿ ದೇಶಗಳನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದು ಅರಿವಾಗುತ್ತದೆ. ಮೈತ್ರಿಯ ನೆಪವೊಡ್ಡಿ ಭಾರತದ ಮೇಲೆ ಒತ್ತಡ ಹೇರಿದರೆ, ಚೀನಾವನ್ನು ಭಯ, ಅನುಮಾನ ಮತ್ತು ಕಾರ್ಯತಂತ್ರದ ಆಧಾರದಲ್ಲಿ ಬಂದಿಯಾಗಿ ಮಾಡುವ ಪ್ರಯತ್ನ ನಡೆಸುತ್ತದೆ.
ವಾಣಿಜ್ಯ ಒಪ್ಪಂದ ಅಂತಿಮಗೊಳಿಸಲು ಕಾತರ
ಮುಂದಿನ ತಿಂಗಳು ನಡೆಯಲಿರುವ ಬಿಹಾರ ರಾಜ್ಯ ವಿಧಾನ ಸಭೆ ಚುನಾವಣೆಗೂ ಮೊದಲು ಅಮೆರಿಕದ ಜೊತೆ ಬಹು-ನಿರೀಕ್ಷಿತ MEGA ವಾಣಿಜ್ಯ ಒಪ್ಪಂದವನ್ನು ಅಂತಿಮಗೊಳಿಸಲು ಮೋದಿ ಸರ್ಕಾರ ತುದಿಗಾಲಲ್ಲಿ ನಿಂತಿದೆ. ಕೃಷಿ ಕ್ಷೇತ್ರದಲ್ಲಿ ತಳಿ ಮಾರ್ಪಡಿಸಿದ ಮೆಕ್ಕೆಜೋಳಕ್ಕೆ ಅನುಮೋದನೆಯೂ ಸೇರಿದಂತೆ ಭಾರತವು ಬಯಸಿರುವ ನಿರ್ದಿಷ್ಟ ವಿನಾಯ್ತಿಗಳು ಇನ್ನೂ ರಹಸ್ಯವಾಗಿ ಉಳಿದಿದ್ದರೂ ಇದಕ್ಕೆ ಸಿಗುವ ಪ್ರತಿಫಲವು ಕಡಿಮೆ ಎಂದು ಕಾಣುತ್ತಿದೆ.
ಮಾತುಕತೆಯ ಇತ್ತೀಚಿನ ಸುತ್ತಿಗೂ ಮೊದಲು ಭಾರತದ ಮುಖ್ಯ ವ್ಯಾಪಾರ ಸಮಾಲೋಚಕರು ‘ಸರಿಯಾದ ಬೆಲೆಗೆ’ ಹೆಚ್ಚುವರಿ ಅಮೆರಿಕದ ತೈಲವನ್ನು ಖರೀದಿಸುವ ಯೋಚನೆಯನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಆದರೆ ಈಗಿನ ಸನ್ನಿವೇಶದಲ್ಲಿ ಅದಕ್ಕೆ ಹೆಚ್ಚಿನ ಕಿಮ್ಮತ್ತು ಸಿಗುವ ಸಾಧ್ಯತೆಗಳಿಲ್ಲ. ಭಾರತ ಮಾಡುವ ರಫ್ತುಗಳ ಮೇಲೆ ಅಮೆರಿಕ ಈಗಾಗಲೇ ಶೇ.50ರಷ್ಟು ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ (ಈಗ ಆ ವಿವಾದ ಅಮೆರಿಕದ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ) ಸರಿಯಾದ ಬೆಲೆ ಎಂಬ ಮಾತೇ ತೀರಾ ಸಪ್ಪೆಯಾಗಿ ಕಾಣುತ್ತದೆ.
ಭಾರತವು ಮಹತ್ವದ ಹಣಕಾಸು ಅಥವಾ ನೀತಿ ಸಂಬಂಧಿ ರಿಯಾಯ್ತಿಗಳನ್ನು ನೀಡದೇ ಹೋದರೆ ಅಮೆರಿಕವು ಭಾರತದ ಸರಕುಗಳ ಮೇಲೆ ಶೇ.16ರಿಂದ 18ರಷ್ಟು ಏಕಪಕ್ಷೀಯ ಸುಂಕವನ್ನು ವಿಧಿಸುವ ಸಾಧ್ಯತೆ ಎಂದು ವಿಶ್ಲೇಷಕರು ತಿಳಿಸುತ್ತಾರೆ. ಇದು ಜಪಾನ್ ಮತ್ತು ಐರೋಪ್ಯ ಒಕ್ಕೂಟದ ಮೇಲೆ ವಿಧಿಸಿದ ಶೇ.15ರ ಸುಂಕಕ್ಕಿಂತ ಅಧಿಕವಾಗಿದ್ದು ಪಾಕಿಸ್ತಾನದ ಮೇಲೆ ವಿಧಿಸಿದ ಶೇ.19ಕ್ಕೆ ಸಮಾನವಾಗಿದೆ.
ಭಾರತದ ಇವಿ ವಾಹನಗಳ ಬಗ್ಗೆ ಕ್ಯಾತೆ
ಅಮೆರಿಕ ಮತ್ತು ಚೀನಾ ನಡುವೆ ಉದ್ವಿಗ್ನ ವಾತಾವರಣವಿದೆ ಎಂಬ ಕಾರಣಕ್ಕಾಗಿ ಅನುಕೂಲಕರ ವ್ಯವಹಾರವನ್ನು ನಿರೀಕ್ಷಿಸುವುದು ಸುಳ್ಳಾಗುತ್ತದೆ. ವಾಸ್ತವವಾಗಿ ಹೇಳುವುದಾದರೆ ಚೀನಾ ಈಗಾಗಲೇ ತನ್ನ ಸೇಡು ತೀರಿಸಿಕೊಂಡಿದೆ. ಮೊನ್ನೆ ಬುಧವಾರವಷ್ಟೇ ಚೀನಾ ವಿಶ್ವ ವಾಣಿಜ್ಯ ಸಂಸ್ಥೆ (WTO)ಯಲ್ಲಿ ಭಾರತದ ಎಲೆಕ್ಟ್ರಿಕ್ ವಾಹನಗಳು ಮತ್ತು ಬ್ಯಾಟರಿಗಳ ಮೇಲೆ ನೀಡುವ ಸಹಾಯಧನದ ಮೇಲೆ ತನ್ನ ಕ್ಯಾತೆ ತೆಗೆದಿದೆ. ಭಾರತವು ನಿಷೇಧಿತ ಬದಲಿ ಆಮದು ಪದ್ಧತಿಗಳಲ್ಲಿ ತೊಡಗಿದೆ ಎಂದು ಅದು ಆರೋಪಿಸಿದೆ.
ಚೀನಾ ಕೊಟ್ಟಿರುವ ಈ ಪೆಟ್ಟು ಸಮಯೋಚಿತವೂ ಆಗಿದೆ. ಚೀನಾವನ್ನು ಬಲಿಕೊಟ್ಟು ಅಮೆರಿಕದ ಜೊತೆ ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳುವುದನ್ನು ತಾನು ಸಹಿಸುವುದಿಲ್ಲ ಎಂಬುದು ಚೀನಾ ಭಾರತಕ್ಕೆ ನೀಡಿದ ಎಚ್ಚರಿಕೆಯ ಗಂಟೆ ಇದಾಗಿದೆ.
ಭಾರತದಂತೆ ಚೀನಾವೇನೂ ಮಣಿಯುವುದಿಲ್ಲ. ಬದಲಾಗಿ ಅದು ಆರ್ಥಿಕ ಶಕ್ತಿಯ ಸಮತೋಲನವನ್ನು ಬದಲಾಯಿಸಲು ಪ್ರಮುಖ ಖನಿಜ ಪೂರೈಕೆ ಸರಪಳಿಯಲ್ಲಿ ತನ್ನ ಪ್ರಾಬಲ್ಯವನ್ನು ಬಳಸಿಕೊಳ್ಳುತ್ತಿದೆ. ಪ್ರಸ್ತಾಪಿತ ಚೀನಾ ನಿಬಂಧನೆಗಳ ಪ್ರಕಾರ, ಚೀನಾ ಸಂಸ್ಕರಣೆ ಮಾಡಿದ ಅಪರೂಪದ ಖನಿಜಗಳನ್ನು ಶೇ.0.1ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಯಾವುದೇ ಉತ್ಪನ್ನಕ್ಕೆ (ಅದನ್ನು ಬೇರೆಡೆ ಯಾರಿಸಿದ್ದರೂ ಕೂಡ) ಚೀನಾದ ರಫ್ತು ಅನುಮೋದನೆಯ ಅಗತ್ಯವಿದೆ.
ಅದಕ್ಕೆ ಗ್ರೀರ್ ಅವರು ಹೇಳುವುದು ಇಷ್ಟು; “ಇದರ ಅರ್ಥ ಏನೆಂದರೆ ಕೊರಿಯಾದಲ್ಲಿ ಖರೀಸಿದ ಒಂದು ಸ್ಮಾರ್ಟ್ ಫೋನ್ ಅನ್ನು ಆಸ್ಟ್ರೇಲಿಯಾದಲ್ಲಿ ಮಾರಾಟ ಮಾಡುವುದಾದರೆ ಅದಕ್ಕೆ ಚೀನಾ ಅನುಮತಿ ಬೇಕಾಗುತ್ತದೆ.”
ಇದನ್ನು ಕೇವಲ ವ್ಯಾಪಾರ ಎಂದು ತಳ್ಳಿಹಾಕುವ ಅಗತ್ಯವಿಲ್ಲ. ಯಾಕೆಂದರೆ ಇದು ನಿಯಂತ್ರಣ ಸಾಧಿಸುವ ಪರಿ. ಗ್ರಾಹಕರು ಬಳಸುವ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಂದ ರಕ್ಷಣಾ ವ್ಯವಸ್ಥೆಯ ತನಕ ಚೀನಾ ಅತ್ಯಂತ ಕಟ್ಟುನಿಟ್ಟಾಗಿ ಜಾಗತಿಕ ತಂತ್ರಜ್ಞಾನ ಉತ್ಪಾದನೆಯನ್ನು ತನ್ನ ಒತ್ತೆಯಾಳಾಗಿ ಮಾಡಿಕೊಳ್ಳಲು ಬಯಸುತ್ತದೆ.
ಅಮೆರಿಕವೂ ಬಳಸಿದೆ ನಿರ್ಬಂಧ
ಅಮೆರಿಕ ಇದನ್ನು ‘ಆರ್ಥಿಕ ದಿಗ್ಬಂಧನ’ ಎಂದು ಕರೆಯುತ್ತದೆ. ಹಾಗಂತ ಅಮೆರಿಕ ಇಂತಹ ತಂತ್ರಗಳನ್ನು ಯಾವತ್ತೋ ಬಳಸಿದೆ. ಎದುರಾಳಿಗಳ ಮೇಲೆ ಒತ್ತಡ ಹೇರಲು ಸೆಮಿಕಂಡಕ್ಟರ್ ನಿಷೇಧಗಳು ಮತ್ತು ದ್ವಿಬಳಕೆಯ ತಂತ್ರಜ್ಞಾನ ನಿರ್ಬಂಧಗಳನ್ನು ವಿಧಿಸಿದೆ.
ವಿಪರ್ಯಾಸದ ಸಂಗತಿ ಎಂದರೆ, ಇತ್ತೀಚಿನ ವಾಣಿಜ್ಯ ಮಾತುಕತೆಯ ನಿಯಮಗಳನ್ನು ಚೀನಾ ಗಾಳಿಗೆ ತೂರಿದೆ ಎಂದು ಆರೋಪಿಸುವ ಇದೇ ಟ್ರಂಪ್ ಆಡಳಿತವು ಮುಕ್ತ ಮಾರುಕಟ್ಟೆಯ ಸಾಂಪ್ರದಾಯಿಕತೆಗೆ ವಿರುದ್ಧವಾಗಿ ಕೈಗಾರಿಕಾ ನೀತಿಯನ್ನು ಅಳವಡಿಸಿಕೊಳ್ಳುತ್ತಿದೆ.
“ನೀವು ಚೀನಾದಂತಹ ಮಾರುಕಟ್ಟೆ ರಹಿತ ಆರ್ಥಿಕತೆಯನ್ನು ಎದುರಿಸುತ್ತಿರುವಾಗ ಕೈಗಾರಿಕಾ ನೀತಿಗಳನ್ನು ಜಾರಿಗೆ ತರುವುದು ಅನಿವಾರ್ಯವಾಗುತ್ತದೆ,” ಎಂದು ಸಿ.ಎನ್.ಬಿ.ಸಿ ವೇದಿಕೆಯಲ್ಲಿ ಮಾತನಾಡಿದ ಬೆಸೆಂಟ್ ಅವರು ಸಮರ್ಥಿಸಿಕೊಳ್ಳುತ್ತಾರೆ. ಹಾಗಾದರೆ ಇದರ ಮುಂದಿನ ಗುರಿಯೇನು? ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನಿರ್ಣಾಯಕವಾಗಿರುವ ಅಮೆರಿಕದ ಸಂಸ್ಥೆಗಳಲ್ಲಿ ಈಕ್ವಿಟಿ ಪಾಲನ್ನು ಪಡೆಯುವ ಮೂಲಕ ಚೀನಾ ನಿಯಂತ್ರಿತ ಸರಬರಾಜು ಸರಪಳಿಗಳ ಮೇಲೆ ಅಮೆರಿಕದ ಅವಲಂಬನೆಯನ್ನು ತಗ್ಗಿಸುವುದು.
ಇಂತಹ ವಿಚಾರಗಳಲ್ಲಿ ಅಮೆರಿಕದ ಅಧಿಕಾರಿಗಳು ಕಡಕ್ಕಾಗಿ ಮಾತನಾಡುತ್ತಾರೆ. “ತಪ್ಪಾಗಿ ಭಾವಿಸಬೇಡಿ, ಇದು ಚೀನಾ vs ವಿಶ್ವ. ಅವರದ್ದು ಹಿಡಿತ ಸಾಧಿಸುವ ನಿಯಂತ್ರಿತ ಆರ್ಥಿಕತೆ, ನಾವು ಮತ್ತು ನಮ್ಮ ಮಿತ್ರರು ಆಜ್ಞಾಪಿಸುವುದಾಗಲಿ, ನಿಯಂತ್ರಣ ಹೇರುವುದಾಗಲಿ ಇಲ್ಲ,” ಬೆಸೆಂಟ್ ಪ್ರತಿಪಾದಿಸುತ್ತಾರೆ.
ಚೀನಾದ ಕಪಟ ಬುದ್ಧಿ
ಶಾಂತಿಯ ಬೋಧನೆ ಮಾಡುವ ಚೀನಾ ಆ ಕಡೆಯಿಂದ ಭರ್ಜರಿ ಇಂಧನ ಖರೀದಿ ಮಾಡುವ ಮೂಲಕ ರಷ್ಯಾದ ಯುದ್ಧ ಯಂತ್ರಗಳಿಗೆ ಇಂಧನ ತುಂಬುವ ಕೆಲಸ ಮಾಡುತ್ತಿದೆ. ಇದು ಚೀನಾದ ಕಪಟ ಬುದ್ಧಿ ಎಂದು ಅವರು ಆರೋಪಿಸುತ್ತಾರೆ. ಅಮೆರಿಕ ಮಾಡಿರುವ ಅಂದಾಜಿನ ಪ್ರಕಾರ ಚೀನಾ ಶೇ.60ರಷ್ಟು ರಷ್ಯಾ ತೈಲವನ್ನು ಖರೀದಿಸುತ್ತಿದೆ ಮತ್ತು ಇರಾನ್ ನಿಂದ ಶೇ.90ರಷ್ಟು. ‘ಚೀನಾದ ಮೇಲೆ ರಷ್ಯಾದ ತೈಲ ಸುಂಕ’ವನ್ನು ಹೇರಬೇಕು ಎಂದು ಯುರೋಪಿನ ಮಿತ್ರರಾಷ್ಟ್ರಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಈ ಸುಂಕವನ್ನು ಟ್ರಂಪ್, ‘ಉಕ್ರೇನಿನ ವಿಜಯ ಸುಂಕ’ ಎಂದೂ ಕರೆದಿದ್ದಾರೆ.
ಈ ಮಧ್ಯೆ, ಚೀನಾದ ಸಂಧಾನಕಾರರ ವಿಷಯದಲ್ಲಿ ಅಮೆರಿಕದ ಹತಾಶೆ ಮಿತಿಮೀರಿದೆ. ಚೀನಾದ ವಾಣಿಜ್ಯ ಖಾತೆ ಸಹಾಯಕ ಸಚಿವ ಲಿ ಚೆಂಗಾಂಗ್ ಅವರು ‘ಪಟಿಂಗ’ ಇರಬೇಕು ಎಂದು ಬೆಸೆಂಟ್ ಹೇಳಿದ್ದಾರೆ. ಹಿಂದಿನ ಸಭೆಗಳಲ್ಲಿ ಚೆಂಗಾಂಗ್ ಅವರು ‘ಅಗೌರವ’ದಿಂದ ನಡೆದುಕೊಂಡಿದ್ದು, ವಾಷಿಂಗ್ಟನ್ ನಲ್ಲಿ ಆಹ್ವಾನವಿಲ್ಲದೆ ಕಾಣಿಸಿಕೊಂಡು, ಅಲ್ಲಿ ಬಂದರು ಶುಲ್ಕಗಳ ಬಗ್ಗೆ ಜಾಗತಿಕವಾಗಿ ಕಳವಳಕ್ಕೆ ಒಳಗಾಗುವಂತೆ ಮಾಡಿದ್ದಾರೆ ಎಂದು ಅವರು ಉಲ್ಲೇಖಿಸಿದರು. “ಅವರು ತಮ್ಮನ್ನು ಆಕ್ರಮಣಕಾರಿ ರಾಜತಾಂತ್ರಿಕ ಅಂದುಕೊಂಡಿರಬಹುದು. ಅದು ಅವರಿಗೆ ಬಿಟ್ಟಿದ್ದು,” ಎಂದು ಬೆಸೆಂಟ್ ಹೇಳಿದರು.
ಭಾರತದ ಇವಿ ವಾಹನಗಳ ಸಹಾಯಧನದ ವಿರುದ್ಧ WTOನಲ್ಲಿ ದೂರು ನೀಡಿರುವ ಚೀನಾ ಇನ್ನೊಂದು ಸಂಕೀರ್ಣ ಸಂಗತಿಗಳಿಗೆ ಕೈಹಾಕಿದೆ. ಭಾರತದ ಈ ನೀತಿಗಳು ದೇಶೀಯ ಉತ್ಪಾದಕರಿಗೆ ಅನುಕೂಲ ಮಾಡಿಕೊಡುವ ಹುನ್ನಾರ, ಇದು WTO ನಿಯಮಗಳ ಶುದ್ಧ ಉಲ್ಲಂಘನೆ ಎಂದು ಚೀನಾ ಮಾಡಿರುವ ತೀರಾ ನಗೆಪಾಟಲಿನದ್ದು ಎಂದು ವಿಶ್ಲೇಷಕರು ಹೇಳುತ್ತಾರೆ. ಯಾಕೆಂದರೆ ಸ್ವತಃ ಚೀನಾ ತನ್ನದೇ ಇವಿ ಮತ್ತು ಬ್ಯಾಟರಿಗಳ ಕ್ಷೇತ್ರಕ್ಕೆ ನೂರಾರು ಕೋಟಿಗಳನ್ನು ಸುರಿಯತ್ತಿದೆ ಮತ್ತು ಇದೀಗ ಯುರೋಪ್ ಒಕ್ಕೂಟದಲ್ಲಿ ಪ್ರತಿರೋಧ ಸುಂಕಗಳನ್ನೂ ಅಮೆರಿಕ ಮಾರುಕಟ್ಟೆಯಲ್ಲಿ ಸಂಪೂರ್ಣ ನಿಷೇಧದ ಶಿಕ್ಷೆಯನ್ನೂ ಎದುರಿಸುತ್ತಿದೆ ಎಂಬುದನ್ನು ಅವರು ಉಲ್ಲೇಖಿಸುತ್ತಾರೆ.
WTO ಆದೇಶ ಜಾರಿ ಅಸಾಧ್ಯ
ಒಂದೊಮ್ಮೆ ಚೀನಾ ವಾದವನ್ನು ಕೇಳಿ WTO ಸಮಿತಿಯು ಭಾರತದ ವಿರುದ್ಧ ತೀರ್ಪು ನೀಡಿದರೂ ಕೂಡ ಅದನ್ನು ಜಾರಿಗೊಳಿಸುವುದು ಅಸಂಭವದ ಮಾತು ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ. ಯಾಕೆಂದರೆ ಮೇಲ್ಮನವಿ ಮಂಡಳಿಯೇ ಅಸ್ತವ್ಯಸ್ತವಾಗಿ ಹೋಗಿದೆ. ಹಾಗಾಗಿ ಯಾವುದೇ ಪ್ರತಿಕೂಲ ತೀರ್ಪನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು ಕಷ್ಟದ ಕೆಲಸ.
ಅಷ್ಟೆಲ್ಲವೂ ಚೀನಾಗೆ ತಿಳಿಯದ ವಿಚಾರವೇನೂ ಅಲ್ಲ. ಹೇಗಾದರೂ ಮಾಡಿ ಬಹುಪಕ್ಷೀಯ ವೇದಿಕೆಗಳನ್ನು ತನ್ನ ತಂತ್ರಗಾರಿಕೆಯ ಅಸ್ತ್ರವಾಗಿ ಬಳಸಿಕೊಳ್ಳುವುದು ಅದರ ಉದ್ದೇಶವಾಗಿದೆ.
ಆ ಕಡೆ ಅಮೆರಿಕ-ಈ ಕಡೆ ಚೀನಾ ಎಂಬ ಎರಡು ಮಹಾಶಕ್ತಿಗಳ ನಡುವಿನ ತೀವ್ರ ಪೈಪೋಟಿಯಲ್ಲಿ ಭಾರತ ಕೈಗೊಂಬೆಯಾಗುವ ಅಪಾಯದಲ್ಲಿದೆ. ಒಂದು ರಾಷ್ಟ್ರ ತನ್ನ ಪ್ರಾಬಲ್ಯವನ್ನು ಶತಾಯಗತಾಯ ಉಳಿಸಿಕೊಳ್ಳಲು ಹವಣಿಸುತ್ತಿದೆ, ಇನ್ನೊಂದು ತನ್ನ ಸ್ಥಾನಕ್ಕಾಗಿ ಹೋರಾಟ ನಡೆಸಿದೆ. ಪೆಲಪೋನಿಸಿಯನ್ ಯುದ್ಧದ ಸಮಾನಾಂತರಗಳನ್ನು ನಿರ್ಲಕ್ಷಿಸುವುದು ಕಷ್ಟ. ಈಗಿನ ಅಮೆರಿಕ ಮತ್ತು ಚೀನಾದಂತೆಯೇ ಅಂದು ಅಥೆನ್ಸ್ ಮತ್ತು ಸ್ಪಾರ್ಟಾ ತಮ್ಮ ನಡುವಿನ ವೈಷಮ್ಯಕ್ಕೆ ಮಿತ್ರರಾಷ್ಟ್ರಗಳನ್ನು ಎಳೆದು ತಂದವು. ಅದರ ಬೆಲೆಯನ್ನು ಸಣ್ಣ ರಾಷ್ಟ್ರಗಳು ತೆರಬೇಕಾಯಿತು.
ತನ್ನದು “ಪ್ರತ್ಯೇಕತೆಯಲ್ಲ, ಅಪಾಯ ನಿವಾರಣೆ’ಯ ನಿಲುವು ಎಂದು ಅಮೆರಿಕ ಹೇಳುತ್ತದೆ. ಆದರೆ ಚೀನಾ, ತನ್ನ ರಫ್ತು ನಿಯಂತ್ರಣಗಳ ಮೂಲಕ ಮುನ್ನಡೆಯಲು ಪ್ರಯತ್ನಿಸುತ್ತದೆ. ಆದರೆ, “ಜಗತ್ತು ದುರ್ಬಲಗೊಳ್ಳಬೇಕಾಗುತ್ತದೆ” ಎಂದು ಅಮೆರಿಕ ಎಚ್ಚರಿಕೆ ನೀಡುತ್ತದೆ. ಗ್ರೀರ್ ಅವರು ಮಂಡಿಸುವ ವಾದದಂತೆ, “ಚೀನಾದ ಅನುಮತಿ ಚೀಟಿ ಪಡೆದುಕೊಂಡು ನಾವು ಜಗತ್ತಿನ ಅರ್ಥ ವ್ಯವಸ್ಥೆಯನ್ನು ನಡೆಸಬೇಕಾದ ಅಗತ್ಯವಿಲ್ಲ”
ಇಂತಹ ವಿದ್ಯಮಾನದಲ್ಲಿ ಭಾರತದ ನಿಲುವು ಸ್ಪಷ್ಟ. ಎರಡು ದಿಗ್ಗಜಗಳ ಜಿದ್ದಾಜಿದ್ದಿ ಪೈಪೋಟಿಯ ಜಗತ್ತಿನಲ್ಲಿ ಕಾರ್ಯತಂತ್ರದ ಹತೋಟಿ ಇದ್ದಾಗ ಮಾತ್ರ ಸಾರ್ವಭೌಮತೆಗೆ ಬೆಲೆ ಬರುತ್ತದೆ. ಇಲ್ಲದೇ ಹೋದರೆ 140 ಕೋಟಿ ಜನಸಂಖ್ಯೆ ಇರುವ ರಾಷ್ಟ್ರವನ್ನು ಕೂಡ ಕೇವಲ ಪೂರೈಕೆದಾರರು ಎಂದು ನಡೆಸಿಕೊಳ್ಳಬೇಕಾಗುತ್ತದೆ.