ಒಪ್ಪಂದ ತಾಲಿಬಾನ್ ಜೊತೆ, ಭಾರತದ ಕಣ್ಣು ಚೀನಾ ಮತ್ತು ಪಾಕಿಸ್ತಾನದ ಮೇಲೆ

ಬದಲಾಗಿರುವ ಪ್ರಾದೇಶಿಕ ಸಮೀಕರಣದ ಹಿನ್ನೆಲೆಯಲ್ಲಿ ಭಾರತ ತನ್ನ ರಾಜತಾಂತ್ರಿಕ ನೀತಿಯನ್ನು ಬದಲಿಸಬೇಕಾಗಿದೆ. ಅದು ಆಫ್ಘಾನಿಸ್ತಾನದ ನೆಲದಲ್ಲಿ ನಿಂತು ಎರಡು ಹಕ್ಕಿಗಳನ್ನು ಹೊಡೆಯಬೇಕಾಗಿದೆ; ಒಂದು ಚೀನಾ ಇನ್ನೊಂದು ಪಾಕಿಸ್ತಾನ...afg

Update: 2025-10-16 04:19 GMT
ಭಾರತಕ್ಕೆ ಭೇಟಿ ನೀಡಿದ ತಾಲಿಬಾನ್ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಅಮೀರ್ ಖಾನ್ ಮುತ್ತಖಿ ಅವರ ಜೊತೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್.
Click the Play button to listen to article

2021ರ ಆಗಸ್ಟ್ ತಿಂಗಳು. ತಾಲಿಬಾನ್ ಕಾಬುಲ್ ಅನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಪಾಕಿಸ್ತಾನದಲ್ಲಿ ಎಲ್ಲಿಲ್ಲದ ಸಂಭ್ರಮ-ವಿಜಯೋತ್ಸಾಹ. ಪಾಕಿಸ್ತಾನದ ಅಂದಿನ ಪ್ರಧಾನಿ ಇಮ್ರಾನ್ ಖಾನ್ ಅಫ್ಗನ್ ಗುಂಪನ್ನು ಮನಸಾರೆ ಶ್ಲಾಘಿಸಿದ್ದರು. “ಗುಲಾಮಗಿರಿಯ ಸಂಕೋಲೆಗಳನ್ನು ಮುರಿದಿದ್ದೀರಿ” ಎಂದು ಹುರಿದುಂಬಿಸಿದ್ದರು. ಕಾಬುಲ್-ನಲ್ಲಿ ನಿಯೋಜಿತರಾಗಿದ್ದ ಪಾಕಿಸ್ತಾನಿ ರಾಜತಾಂತ್ರಿಕರು ಸಂಭ್ರಮದಲ್ಲಿದ್ದ ಚಿತ್ರಗಳನ್ನು ಸೆರೆಹಿಡಿಯಲಾಗಿತ್ತು.

ಇನ್ನೊಂದು ಕಡೆ ಭಾರತವು ಮೂಲೆಗುಂಪಾದಂತೆ ಗೋಚರಿಸುತ್ತಿತ್ತು. ತಾಲಿಬಾನ್ ಮರುಪ್ರವೇಶವು ಪಾಕಿಸ್ತಾನದ ಪಾಲಿಗೆ ಒಂದು ಕಾರ್ಯತಂತ್ರದ ಗೆಲುವು ಎಂದು ಪರಿಗಣಿಸಲಾಗಿತ್ತು. ಆ ಗುಂಪಿನ ಅಧಿಕಾರದ ಮರುಸ್ಥಾಪನೆಯಲ್ಲಿ ಪಾಕಿಸ್ತಾನದ ಕೈವಾಡವಿತ್ತು ಎಂದು ವ್ಯಾಪಕವಾಗಿ ನಂಬಲಾಗಿತ್ತು.

ಹೊಸ ಅಧ್ಯಾಯಕ್ಕೆ ಮುನ್ನುಡಿ

ಅಂತಹುದೊಂದು ಮಹತ್ವದ ಘಟನೆಗಳು ನಾಲ್ಕು ವರುಷಗಳು ಸರಿದುಹೋಗಿವೆ. ಈಗ ಭಾರತದ ಕೈಮೇಲಾಗಿರುವಂತೆ ಕಾಣುತ್ತಿದೆ. ಭಾರತ ಮತ್ತು ತಾಲಿಬಾನ್ ನೇತೃತ್ವದ ಸರ್ಕಾರದ ನಡುವೆ ದ್ವಿಪಕ್ಷೀಯ ಸಂಬಂಧಗಳ ಹೊಸ ಅಧ್ಯಾಯ ಆರಂಭವಾದಂತೆ ಕಾಣುತ್ತಿದೆ. ಅಫ್ಘನ್ ಮತ್ತು ಪಾಕಿಸ್ತಾನದ ಸಂಬಂಧಗಳಲ್ಲಿ ಬಿರುಕು ಬಿಟ್ಟಿರುವುದಕ್ಕೆ ಸಂಕೇತವಾಗಿ ದುರ್ಗಮ ದುರಾಂಡ್ ವಾಸ್ತವ ರೇಖೆಯಲ್ಲಿ ಭೀಕರ ಘರ್ಷಣೆಗಳು ನಡೆಯುತ್ತಿದೆ. ಅವೆಲ್ಲದರ ನಡುವೆಯೂ ತಾಲಿಬಾನ್ ಆಡಳಿತದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ ಅವರಿಗೆ ಭಾರತ ರತ್ನಗಂಬಳಿ ಹಾಸಿದೆ.

ಆಫ್ಗಾನಿಸ್ತಾನದ ತಾಲಿಬಾನ್ ಆಡಳಿತವೇ ಒಂದು ರೀತಿಯಲ್ಲಿ ಬಹಿಷ್ಕೃತ ಸ್ಥಿತಿಯಲ್ಲಿದೆ. ಹಾಗಿದ್ದರೂ ಮುತ್ತಕಿ ಅವರನ್ನು ಆಹ್ವಾನಿಸುವ ಭಾರತದ ನಿರ್ಧಾರವು ವಾಸ್ತವಿಕ ರಾಜಕೀಯದ ಭಿನ್ನ ಕಾರ್ಯತಂತ್ರದಿಂದ ಪ್ರೇರಿತವಾದಂತೆ ಕಾಣುತ್ತಿದೆ. ಈ ಹಿಂದೆ ತಾಲಿಬಾನ್ ಪಾಕಿಸ್ತಾನ ಮತ್ತು ಭಾರತದ ನೆಲದ ಮೇಲೆ ಪದೇ ಪದೇ ದಾಳಿ ಮಾಡಿದ ಅದರ ‘ಗುಪ್ತ ಶಕ್ತಿ’ಗಳ ಜೊತೆ ಶಾಮೀಲಾಗಬಹುದು ಎಂಬ ಕಳವಳ ಭಾರತಕ್ಕಿತ್ತು ಎಂಬುದು ಸ್ಪಷ್ಟ.

ಈ ತನಕ ತಾಲಿಬಾನ್-2.0 ಅಧೀನದಲ್ಲಿರುವ ಆಫ್ಘಾನಿಸ್ತಾನದ ಇಸ್ಲಾಮಿಕ್ ಗಣರಾಜ್ಯವನ್ನು ಮಾನ್ಯ ಮಾಡಿರುವ ಏಕೈಕ ರಾಷ್ಟ್ರವೆಂದರೆ ರಷ್ಯಾ. ಆದರೂ ಅದು ಭಾರತ ಸೇರಿದಂತೆ ಇತರ ರಾಷ್ಟ್ರಗಳ ಜೊತೆ ಸಂಪರ್ಕ ಸಾಧಿಸಲು ನಿರಂತರ ಪ್ರಯತ್ನ ನಡೆಸಿದೆ.

1996ರಿಂದ 2001ರ ವರೆಗೆ ಅಧಿಕಾರದಲ್ಲಿದ್ದ ತಾಲಿಬಾನ್-1.0 ತಂಡದ ಜೊತೆ ಭಾರತವು ಅಂತರ ಕಾಯ್ದುಕೊಂಡಿತ್ತು. ವಿಶೇಷವಾಗಿ ಮಹಿಳೆಯರ ಹಕ್ಕುಗಳ ವಿಚಾರದಲ್ಲಿ ಪ್ರತಿಗಾಮಿ ನಿಲುವನ್ನು ತಳೆದಿದೆ ಎಂಬ ಕಾರಣಕ್ಕಾಗಿ ಆ ಆಡಳಿತದಿಂದ ದೂರವೇ ಉಳಿದಿತ್ತು.

ವಿದೇಶಾಂಗ ಸಚಿವ ಮುತ್ತಖಿ ಪತ್ರಿಕಾಗೋಷ್ಠಿಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಡಬೇಕು ಎನ್ನುವ ನಿರ್ಧಾರದಲ್ಲಿಯೇ ಇದು ಸ್ಪಷ್ಟವಾಗಿ ಗೋಚರಿಸಿತ್ತು. ಇದು ಕೋಲಾಹಲಕ್ಕೆ ಕಾರಣವಾಯಿತು. ಮಹಿಳೆಯರ ಹಕ್ಕುಗಳನ್ನು ತುಳಿದುಹಾಕುವ ಸಂಪ್ರದಾಯವಾದಿ ಆಡಳಿತಕ್ಕೆ ಸೇರಿದ ನಾಯಕರಿಗೆ ಭಾರತ ಆತಿಥ್ಯ ವಹಿಸಿದ್ದಾದರೂ ಏಕೆ ಎಂಬ ಪ್ರಶ್ನೆಗಳೂ ಎದುರಾದವು. ಈ ವಿಚಾರದಲ್ಲಿ ಮುತ್ತಖಿ ಅವರು ತಾಲಿಬಾನ್ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರೂ ಮಹಿಳೆಯರಿಗೆ ಕೊನೆಗೂ ಆಹ್ವಾನ ನೀಡಿದ ಅವರ ಎರಡನೇ ಪತ್ರಿಕಾಗೋಷ್ಠಿಯಲ್ಲಿ ಅವರು ನೀಡಿದ ಪ್ರತಿಕ್ರಿಯೆಗಳು ಮನವರಿಕೆಯಾಗುವಂತಿರಲಿಲ್ಲ.

ಆರಂಭಿಕ ಪತ್ರಿಕಾಗೋಷ್ಠಿಯಿಂದಲೇ ಮಹಿಳೆಯರನ್ನು ದೂರವಿಡಲು ಪ್ರಯತ್ನಿಸಿದರೆ ಅದು ಕೆಟ್ಟ ತಾರತಮ್ಯದ ಚಿತ್ರಣವನ್ನು ನೀಡುತ್ತದೆ ಎಂದು ಭಾರತವು ಭೇಟಿ ನೀಡಿದ ಸಚಿವರ ಸಹಾಯಕರಿಗೆ ಮನವರಿಕೆ ಮಾಡಿದ್ದರೆ ಉತ್ತಮವಾಗಿತ್ತು. ತಾಲಿಬಾನ್-2.0 ಜೊತೆ ಗುರುತಿಸಿಕೊಳ್ಳುವ ಸಂದರ್ಭದಲ್ಲಿ ಜಗತ್ತಿನಲ್ಲಿ ಭಾರತದ ಘನತೆ ಏನಾಗುತ್ತದೆ ಎಂಬುದನ್ನು ಚಿಂತಿಸಬೇಕಾಗಿತ್ತು.

ಪಾಕಿಸ್ತಾನ-ಚೀನಾ ಮೇಲೆ ಕಣ್ಣು

ಚೀನಾ ಈಗಾಗಲೇ ಆಫ್ಘಾನಿಸ್ತಾನದಲ್ಲಿ ತನ್ನ ರಾಯಭಾರಿಯನ್ನು ನಿಯೋಜಿಸಿದೆ. ಹಾಗಾಗಿ ತಾನು ಈಗ ನಡೆಸುವ ಪ್ರಯತ್ನಗಳಿಂದ ತಾಲಿಬಾನ್ ನೆಲದಲ್ಲಿ ಚೀನಾದ ಕಾರ್ಯತಂತ್ರವೇನೂ ಮಸುಕಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಭಾರತ ಹೊಸ ಪ್ರಯತ್ನ ನಡೆಸಿದಂತೆ ಕಾಣುತ್ತಿದೆ. ಆಫ್ಘಾನಿಸ್ತಾನದಲ್ಲಿರುವ ಚೀನಾ-ಪಾಕಿಸ್ತಾನದ ಅಕ್ಷದ ಮೇಲೆ ಕಣ್ಣಿಡುವ ಕೆಲಸವನ್ನೂ ಅದು ಮಾಡಬೇಕಾಗಿದೆ.

ಕಳೆದ ತಿಂಗಳು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಕಾಬುಲ್ ಭೇಟಿ ನೀಡಿದ್ದರು. ತಾಲಿಬಾನ್ ತನಗೆ ‘ಅಚಲ ಮಿತ್ರ’ ಎಂಬುದನ್ನು ಅವರು ಆ ಮೂಲಕ ಖಚಿತಪಡಿಸಿದ್ದರು.

ಆಡಳಿತವನ್ನು ಔಪಚಾರಿಕವಾಗಿ ಗುರುತಿಸುವುದರ ಹೊರತಾಗಿ, ದ್ವಿಪಕ್ಷೀಯ ಸಂಬಂಧಗಳನ್ನು ಸಹಜ ಸ್ಥಿತಿಗೆ ತರಲು ಪ್ರಯತ್ನಗಳು ಉಭಯ ಪಕ್ಷಗಳ ಕಡೆಯಿಂದಲೂ ನಡೆಯುತ್ತಿವೆ ಎಂಬುದನ್ನು ಖಚಿತಪಡಿಸುವುದು ಮುತ್ತಖಿ ಅವರ ಭಾರತ ಭೇಟಿಯ ಹಿಂದಿನ ಮುಖ್ಯ ಉದ್ದೇಶವಾಗಿದೆ. 2022ರಲ್ಲಿ ಆರಂಭಿಸಲಾದ ಕಾಬುಲ್ ನಲ್ಲಿರುವ ಭಾರತದ ತಾಂತ್ರಿಕ ಕಾರ್ಯಾಲಯವನ್ನು ಪೂರ್ಣ ಪ್ರಮಾಣದ ರಾಯಭಾರ ಕಚೇರಿಯನ್ನಾಗಿ ಮೇಲ್ದರ್ಜೆಗೇರಿಸುವ ನಿರ್ಧಾರವು ಆ ದಿಕ್ಕಿನಲ್ಲಿ ಒಂದು ದಿಟ್ಟ ಹೆಜ್ಜೆಯಾಗಿದೆ.

2001ರಲ್ಲಿ ತಾಲಿಬಾನ್ ಪದಚ್ಯುತಿಯ ನಂತರ ಆಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ಪ್ರಭಾವನ್ನು ತಗ್ಗಿಸುವುದು ಭಾರತಕ್ಕೆ ಮುಖ್ಯವಾಗಿದೆ. ಅದನ್ನು ತಡೆಯಲು ಸಾಕಷ್ಟು ಪ್ರಮಾಣದಲ್ಲಿ ‘ರಾಜತಾಂತ್ರಿಕ ಬಂಡವಾಳ’ ಹೂಡಿಕೆ ಮಾಡಿತ್ತು. ತಾಲಿಬಾನ್ ಆಡಳಿತದ ಜೊತೆ ತೊಡಗಿಸಿಕೊಂಡು ಮತ್ತು ಈಗ ಅದರ ವಿದೇಶಾಂಗ ಸಚಿವರಿಗೆ ಆತಿಥ್ಯ ನೀಡುವ ಮೂಲಕ, ಕಳೆದ ನಾಲ್ಕು ವರ್ಷಗಳಿಂದ ಮಸುಕಾಗಿರುವ ಕಾರ್ಯತಂತ್ರದ ಅವಕಾಶವನ್ನು ಮರಳಿ ಪಡೆಯುವ ಪ್ರಯತ್ನ ನಡೆಸಿದೆ.

ತಪ್ಪಿದ ಪಾಕಿಸ್ತಾನದ ಲೆಕ್ಕಾಚಾರ

ತಾಲಿಬಾನ್ ಆಡಳಿತವು ತನ್ನೊಂದಿಗೆ ಹೊಂದಿಕೊಳ್ಳುತ್ತದೆ, ಮಿತ್ರನಾಗಿರುತ್ತದೆ ಎಂಬುದು ಪಾಕಿಸ್ತಾನದ ನಿರೀಕ್ಷೆಯಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಈಗ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಅತ್ಯಂತ ಕೆಳಮಟ್ಟದಲ್ಲಿದೆ. ಉಭಯ ಪಕ್ಷಗಳ ನಡುವೆ ಬಹುದೊಡ್ಡ ಬಿರುಕು ಇದೆ. ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಪಾಕಿಸ್ತಾನದ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದರ್ ಅವರ ಭೇಟಿ ಕೂಡ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಿಸಲು ಪೂರಕ ಫಲವನ್ನೇನೂ ನೀಡಿಲ್ಲ.

ಅಫ್ಘನ್ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಸುಧಾರಿಸದ ಹಿನ್ನೆಲೆಯಲ್ಲಿಯೇ ಭಾರತವು ಹಂತ ಹಂತವಾದ ವಿಧಾನವನ್ನು ಅಳವಡಿಸಿಕೊಂಡಿತು. ಅದರ ಭಾಗವಾಗಿ ಮೊದಲು ಜನವರಿ ತಿಂಗಳಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರನ್ನು ದುಬೈನಲ್ಲಿ ಮುತ್ತಖಿ ಅವರನ್ನು ಭೇಟಿ ಮಾಡಲು ಕಳುಹಿಸಿತು. ಇದಾದ ಬಳಿಕ ಮೇ ತಿಂಗಳಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಮುತ್ತಖಿ ನಡುವೆ ದೂರವಾಣಿ ಸಂಭಾಷಣೆ ನಡೆಯಿತು.

ಈ ನಡುವೆ ತನ್ನ ನೆರೆಯ ರಾಷ್ಟ್ರಕ್ಕೆ ಮಾನವೀಯ ನೆರವು ನೀಡುವುದನ್ನು ಭಾರತ ಮುಂದುವರಿಸಿತು. ಆಫ್ಘಾನಿಸ್ತಾನದ ಅಭಿವೃದ್ಧಿಯ ಅಗತ್ಯಗಳನ್ನು ಪೂರೈಸಲು ಸಿದ್ಧವಿರುವುದಾಗಿ ತನ್ನನ್ನು ಬಿಂಬಸಿಕೊಂಡಿತು. ಅಫ್ಘನ್ ಜನರ ಶ್ರೇಯಸ್ಸಿಗಾಗಿ ಕೆಲಸ ಮಾಡುವ ವಿಶ್ವಾಸಾರ್ಹ ಪಾಲುದಾರನಾಗಿ ಗುರುತಿಸಿಕೊಳ್ಳುವ ಕೆಲಸವನ್ನು ಕರಾರುವಕ್ಕಾಗಿ ಮಾಡಿತು.

ಸ್ನೇಹ ಗಟ್ಟಿಗೊಳಿಸಿದ ಬದ್ಧತೆಗಳು

ತನ್ನ ಭದ್ರತಾ ಹಿತಾಸಕ್ತಿಗಳ ವಿಚಾರದಲ್ಲಿ ಗಮನಹರಿಸುವುದಾಗಿ ತಾಲಿಬಾನ್ ಆಡಳಿತ ಮತ್ತೆ ಮತ್ತೆ ಭರವಸೆ ನೀಡಿತು ಮತ್ತು ಪಹಲ್ಗಾಂ ಭಯೋತ್ಪಾದಕ ದಾಳಿಯನ್ನು ಗಟ್ಟಿ ಧ್ವನಿಯಲ್ಲಿ ಖಂಡಿಸಿತು. ಈ ಎರಡೂ ಸಂಗತಿಗಳು ಎರಡೂ ರಾಷ್ಟ್ರಗಳ ನಡುವೆ ಸೇತುವೆ ನಿರ್ಮಿಸಲು ಅನುವು ಮಾಡಿಕೊಟ್ಟಿತು.

ಅಕ್ಟೋಬರ್ 11ರಂದು ನಡೆದ ಜೈಶಂಕರ್ ಮತ್ತು ಮುತ್ತಖಿ ಅವರ ಭೇಟಿಯ ನಂತರ ಬಿಡುಗಡೆ ಮಾಡಲಾದ ಜಂಟಿ ಹೇಳಿಕೆಯಲ್ಲಿ, ಯಾವುದೇ ವ್ಯಕ್ತಿ ಅಥವಾ ಗುಂಪು ಭಾರತದ ವಿರುದ್ಧ ತನ್ನ ನೆಲವನ್ನು ಬಳಸಿಕೊಳ್ಳಲು ಬಿಡುವುದಿಲ್ಲ ಎಂದು ತನ್ನ ಬದ್ದತೆಯನ್ನು ವ್ಯಕ್ತಪಡಿಸಿತು. ಈ ಸಂದರ್ಭದಲ್ಲಿ ಬೆಂಕಿಗೆ ತುಪ್ಪ ಸುರಿದ ಇನ್ನೊಂದು ಅಂಶವೆಂದರೆ ಜಮ್ಮು-ಕಾಶ್ಮೀರದ ಮೇಲೆ ಭಾರತಕ್ಕಿರುವ ಸಾರ್ವಭೌಮತೆಯನ್ನು ಪ್ರತಿಪಾದಿಸಿದ್ದು. ಇದು ಪಾಕಿಸ್ತಾನಕ್ಕೆ ಸಹಜವಾಗಿ ಕೋಪ ತರಿಸಿರುತ್ತದೆ.

ಅಭಿವೃದ್ಧಿಯನ್ನು ಮುನ್ನಡೆಸಲು ಸ್ನೇಹಿತನ ಅಗತ್ಯ

ಪಾಕಿಸ್ತಾನದ ಜೊತೆಗಿನ ಸಂಬಂಧಗಳು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಆಫ್ಗಾನಿಸ್ತಾನಕ್ಕೆ ಈಗ ಬೇಕಾಗಿರುವುದು ತನ್ನ ದೇಶದ ಆರ್ಥಿಕ ಪ್ರಗತಿಗೆ ಮತ್ತು ಅಭಿವೃದ್ಧಿ ಪಥದಲ್ಲಿ ರಾಷ್ಟ್ರವನ್ನು ಕೊಂಡೊಯ್ಯಲು ಸಹಾಯ ಮಾಡುವ ಮಿತ್ರ ರಾಷ್ಟ್ರ. ಆ ಹಿನ್ನೆಲೆಯಲ್ಲಿ ಅದು ಭಾರತದ ಸ್ನೇಹದಲ್ಲಿ ನಂಬಿಕಸ್ಥ ಪಾಲುದಾರನನ್ನು ಕಾಣುತ್ತಿದೆ. ಯಾಕೆಂದರೆ ಭಾರತವು ಸಾಲ್ಮಾ ಅಣೆಕಟ್ಟು ಮತ್ತು ಸಂಸತ್ ಭವನದ ಕಟ್ಟಡವೂ ಸೇರಿದಂತೆ ಮೂಲಸೌಕರ್ಯಗಳ ಯೋಜನೆಗಳನ್ನು ನಿರ್ಮಿಸಲು ಸಹಾಯ ಮಾಡಿದೆ. ಜೊತೆಗೆ ಅಗತ್ಯ ಬಿದ್ದಾಗಲೆಲ್ಲ ಮಾನವೀಯ ನೆರವನ್ನೂ ಒದಗಿಸಿದೆ.

ಸಂಪರ್ಕ, ಇಂಧನ, ಕೃಷಿ, ಮೂಲಸೌಕರ್ಯ ಮತ್ತು ಖನಿಜಗಳಂತಹ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಅರಸಲು ಕಾಬೂಲ್ ಕೂಡ ಭಾರತೀಯ ಕಂಪನಿಗಳಿಗೆ ಆಹ್ವಾನ ನೀಡುತ್ತಿದೆ. ಇಷ್ಟಿದ್ದೂ ಭದ್ರತೆಗೆ ಸಂಬಂಧಿಸಿದ ಕಳವಳ ಮತ್ತು ಕಳಪೆ ಭೌತಿಕ ಸಂಪರ್ಕಗಳು ಆ ರಾಷ್ಟ್ರದಲ್ಲಿ ಹೂಡಿಕೆ ಮಾಡಲು ಭಾರತದ ಖಾಸಗಿ ವಲಯ ಹಿಂಜರಿಯಬಹುದು. ಮುತ್ತಖಿ ಅವರ ಈ ಭೇಟಿಯ ಸಂದರ್ಭದಲ್ಲಿಯೇ ಭಾರತ-ಆಫ್ಘಾನಿಸ್ತಾನ ನಡುವಿನ ವಾಯು ಸರಕು ಸಾಗಣೆ ಮಾರ್ಗವನ್ನು ಕೂಡ ಘೋಷಿಸಲಾಗಿದೆ. ಆದರೆ ವ್ಯಾಪಾರದ ಮಟ್ಟಿಗೆ ಅದು ದುಬಾರಿ ಆಯ್ಕೆಯಾಗುವ ಸಾಧ್ಯತೆಯೇ ಹೆಚ್ಚು.

ತನ್ನ ವಿಶಾಲವಾದ ನಿರ್ಣಾಯಕ ಖನಿಜ ನಿಕ್ಷೇಪಗಳಲ್ಲಿ ಗಣಿಗಾರಿಕೆ ನಡೆಸುವ ಬಗ್ಗೆ ಸಂಶೋಧನೆ ನಡೆಸಲು ಭಾರತಕ್ಕೆ ತಾಲಿಬಾನ್ ಆಹ್ವಾನ ನೀಡಿದೆ. ಇದು ಭಾರತವು ನೇರವಾಗಿ ಚೀನಾದೊಂದಿಗೆ ಜಿದ್ದಿಗೆ ಇಳಿಯುವಂತೆ ಮಾಡುತ್ತದೆ. ಯಾಕೆಂದರೆ ಚೀನಾ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ. ಭಾರತದ ಪ್ರಯತ್ನಗಳಿಗೆ ಯಾವುದೇ ಸಮಯದಲ್ಲಿ ಕಲ್ಲುಹಾಕಲು ಪಾಕಿಸ್ತಾನ ಕೂಡ ಸಮಯಾವಕಾಶಕ್ಕಾಗಿ ಕಾಯುತ್ತಿದೆ. ಭಾರತ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲೇಬೇಕಿದೆ. ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆಯುವಂತಿಲ್ಲ.

Tags:    

Similar News