ಪರಸ್ಪರ ಸಹಮತದ ಕಾಲಘಟ್ಟದಲ್ಲಿ ನೋಬೆಲ್ ಮೋಹಕ್ಕೆ ಬಿದ್ದ ಯುದ್ಧದಾಹಿ ಟ್ರಂಪ್

ಔಷಧಗಳ ಬೆಲೆಯನ್ನು ಶೇ.600ರಿಂದ 1000ದಷ್ಟು ಕಡಿಮೆ ಮಾಡುತ್ತೇನೆ ಎನ್ನುವ ಟ್ರಂಪ್ ಅವರ ಹೇಳಿಕೆ ಎಷ್ಟು ಅಜ್ಞಾನದಿಂದ ಕೂಡಿದೆಯೋ ಹಾಗೇ ಇಸ್ರೆಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಶತಮಾನಗಳಷ್ಟು ಹಳೆಯದು ಎಂಬ ಹೇಳಿಕೆಯೂ ಕೂಡ....

By :  TK Arun
Update: 2025-10-14 03:51 GMT
ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ತಮ್ಮ ರಾಷ್ಟ್ರದ ಸೇನಾ ವೆಚ್ಚವನ್ನು ಏರಿಸಿದ್ದಾರೆ. ಇದರಿಂದ ಜಗತ್ತಿನ ಇತರ ರಾಷ್ಟ್ರಗಳು ಕೂಡ ಪೈಪೋಟಿಗೆ ಬಿದ್ದು ತಮ್ಮ ಮಿಲಿಟರಿ ಬಜೆಟ್ ಹೆಚ್ಚಿಸುತ್ತ ಸಾಗಿವೆ.

ತಾನು ಜಗತ್ತಿನಲ್ಲಿ ಈಗಾಗಲೇ ಏಳು ಯುದ್ಧಗಳನ್ನು ಕೊನೆಗೊಳಿಸಿದ್ದು ಈಗ ಗಾಜಾದಲ್ಲಿ ಎಂಟನೇ ಯುದ್ಧಕ್ಕೆ ಪೂರ್ಣ ವಿರಾಮ ಹಾಕಲು ಹೊರಟಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಇತ್ತೀಚಿನ ಕೆಲವು ಕಾಲದಿಂದ ನೋಬೆಲ್ ಶಾಂತಿ ಪುರಸ್ಕಾರಕ್ಕಾಗಿ ಹಕ್ಕು ಚಲಾಯಿಸುತ್ತಿದ್ದಾರೆ.

ಕೇವಲ ರಕ್ಷಣಾ ಇಲಾಖೆಯನ್ನು ಸಮರ ಇಲಾಖೆ ಎಂದು ಹೆಸರು ಬದಲಾಯಿಸಿದ ವ್ಯಕ್ತಿಗೆ ಪುರಸ್ಕಾರ ನೀಡುವ ಒಣ ತರ್ಕವನ್ನು ಬದಿಗಿಟ್ಟು ನೋಬೆಲ್ ಸಮಿತಿಯು ವೆನೆಜುವೆಲಾದ ಪ್ರಜಾಸತ್ತಾತ್ಮಕ ಪ್ರಚಾರಕರ್ತೆಯನ್ನು ಆ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಇಸ್ರೇಲಿನ ಪ್ರಧಾನಿ ಮತ್ತು ಅಧ್ಯಕ್ಷರಿಬ್ಬರೂ ಟ್ರಂಪ್ ಅವರಿಗೇ ಶಾಂತಿ ಪ್ರಶಸ್ತಿ ಕೊಡಿ ಎಂದು ನೋಬೆಲ್ ಸಮಿತಿಯನ್ನು ಒತ್ತಾಯಿಸಿದ್ದರು. ಅದೇ ರೀತಿ ಇನ್ನೊಂದು ‘ಶಾಂತಿಶೀಲ’ ರಾಷ್ಟ್ರ ಪಾಕಿಸ್ತಾನದ ನಾಯಕರೂ ಟ್ರಂಪ್ ಪರವಾಗಿ ದನಿ ಎತ್ತಿದ್ದರು.

ಏಳು ರಾಷ್ಟ್ರಗಳಲ್ಲಿ ಯುದ್ದವಿಲ್ಲವೇ?

ಶಾಂತಿ ಪ್ರಶಸ್ತಿಗೆ ತಾವು ಅರ್ಹ ಎಂದು ಹೇಳುವ ಟ್ರಂಪ್ ಅವರ ವಾದವು ಸಲ್ಪ ವಿಚಿತ್ರವಾಗಿದೆ. ಅವರು ಇರಾನ್-ಇಸ್ರೇಲ್, ರುವಾಂಡ-ಕಾಂಗೊ, ಅರ್ಮೆನಿಯಾ-ಅಜರ್ಬೈಜಾನ್, ಈಜಿಪ್ಟ್-ಇತಿಯೋಪಿಯಾ, ಸರ್ಬಿಯಾ-ಕೊಸೊವಾ, ಕಾಂಬೋಡಿಯಾ-ಥೈಲ್ಯಾಂಡ್ ಮತ್ತು ಭಾರತ-ಪಾಕಿಸ್ತಾನ- ಹೀಗೆ ಏಳು ರಾಷ್ಟ್ರಗಳ ನಡುವಿನ ಯುದ್ಧವನ್ನು ತಾವು ನಿಲ್ಲಿಸಿರುವುದಾಗಿ ಅವರು ವಾದಿಸುತ್ತಾರೆ.

ಸೇನಾ ವಿಜಯಕ್ಕಿಂತ ಮಿಗಿಲಾಗಿ ಭಯೋತ್ಪಾದನೆಯನ್ನೇ ತನ್ನ ಅಸ್ತ್ರವನ್ನಾಗಿ ಮಾಡಿಕೊಂಡ ಪಾಕಿಸ್ತಾನಕ್ಕೆ ಪಾಠ ಕಲಿಸಲೇಬೇಕು ಎಂದು ಭಾರತ ಹಠತೊಟ್ಟಿದ್ದರಿಂದ ಪಾಕಿಸ್ತಾನವು ತನ್ನ ಮುಖ ಉಳಿಸಿಕೊಳ್ಳಲು ನಿರ್ಣಾಯಕವಾಗಿ ಸೋತ ಘರ್ಷಣೆಯಲ್ಲಿ ಅಮೆರಿಕವು ಹೆಚ್ಚೆಂದರೆ ಒಂದು ಪಾರ್ಶ್ವದಷ್ಟು ಪಾತ್ರವನ್ನು ನಿರ್ವಹಿಸಿದ್ದಿರಬಹುದು ಎಂಬುದು ಭಾರತದಲ್ಲಿರುವ ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ.

ಇಸ್ರೇಲ್ ಮತ್ತು ಇರಾನ್ ನಡುವಿನ ದ್ವೇಷಕ್ಕೆ ವಿರಾಮ ನೀಡಲಾಗಿದೆ ಎನ್ನುವುದಕ್ಕೆ ಬದಲಾಗಿ ಕೊನೆ ಹಾಡಲಾಗಿದೆ ಎಂಬ ಹೇಳಿಕೆಯು ಒಂದು ಕಾದಂಬರಿಗೆ ಬಹುಮಾನ ಪಡೆಯಲು ಅರ್ಹವೇ ಹೊರತು ಶಾಂತಿಗಾಗಿ ಅಲ್ಲ. ಎಂ23 ಎಂಬ ರುವಾಂಡ ಬಂಡಾಯ ಗುಂಪು ರುವಾಂಡ ಮತ್ತು ಕಾಂಗೊ ನಡುವಿನ ಶಾಂತಿ ಒಪ್ಪಂದಕ್ಕೆ ಒಪ್ಪಿಗೆ ಮುದ್ರೆ ಒತ್ತಿಲ್ಲ. ಎಂ23ಗೆ ಬೆಂಬಲ ನೀಡುತ್ತಿದೆ ಎಂಬುದನ್ನು ರುವಾಂಡ ಕೂಡ ಅಧಿಕೃತವಾಗಿ ಒಪ್ಪಿಕೊಳ್ಳುವುದಿಲ್ಲ. ಇನ್ನು ಅರ್ಮೆನಿಯಾ ಮತ್ತು ಅಜರ್ಬೈಜಾನ್ ರಾಷ್ಟ್ರದ ಮುಖ್ಯಸ್ಥರು ತಮ್ಮ ವಿದೇಶಾಂಗ ಸಚಿವರು ಸಹಿಮಾಡಿದ ಒಪ್ಪಂದವನ್ನು ಇನ್ನೂ ಒಪ್ಪಿಕೊಂಡಿಲ್ಲ.

ನೀರಿನ ತಕರಾರು ಇನ್ನೂ ಜೀವಂತವಿದೆ

ಇಥಿಯೋಪಿಯಾದ ಮಹಾ ಅಣೆಕಟ್ಟಿನ ಕೆಳಭಾಗದಲ್ಲಿ ಇರುವ ಎರಡು ನದಿಪಾತ್ರದ ರಾಷ್ಟ್ರಗಳಿಗೆ ತಡೆಹಿಡಿದಿರುವ ನೀರಿನ ವಿಚಾರದಲ್ಲಿ ಇಥಿಯೋಪಿಯಾ ಮತ್ತು ಸುಡಾನ್ ನಡುವೆ ತಕರಾರಿದೆ, ಜಗಳವಿದೆ. ಬಹುದೊಡ್ಡ ಕ್ಷಾಮ ಎದುರಾಗಿಬಿಟ್ಟಿತೆಂದರೆ ಸಂಘರ್ಷ ನಿಜಕ್ಕೂ ತಪ್ಪಿದೆಯೆ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಬೇಕಾಗಿದೆ. ಸರ್ಬಿಯಾ ಮತ್ತು ಕೊಸೊವೊ ವಾಸ್ತವವಾಗಿ ಯುದ್ಧಕ್ಕೇ ಇಳಿದಿಲ್ಲ. ಆ ವಲಯದಲ್ಲಿ ಬೀಡುಬಿಟ್ಟಿರುವ ನ್ಯಾಟೊ ಶಾಂತಿ ಪಾಲನಾ ಪಡೆಗೆ ಥ್ಯಾಂಕ್ಸ್ ಹೇಳಬೇಕು. ಈ ಟ್ರಂಪ್ ನ್ಯಾಟೊವನ್ನೇ ನಾಶಮಾಡುತ್ತೇನೆ ಎಂದು ಹೊರಟಿದ್ದಾರೆ. ಆದರೆ ಸರ್ಬಿಯಾ ಮತ್ತು ಅದರ ವಿಭಜಿತ ಪ್ರದೇಶವಾದ ಕೊಸೊವೊ ನಡುವಿನ ಉದ್ವಿಗ್ನ ಸ್ಥಿತಿ ಉಲ್ಬಣಗೊಳ್ಳದೇ ಇರುವುದಕ್ಕೆ ನ್ಯಾಟೊ ಪಡೆಗಳೇ ಕಾರಣ. ಅದಕ್ಕಾಗಿ ಅವರಿಗೆ ಮನ್ನಣೆ ನೀಡುವುದು ಕಷ್ಟ.

ಇನ್ನು ಕಾಂಬೊಡಿಯಾ ಮತ್ತು ಥೈಲ್ಯಾಂಡ್ ತಮ್ಮ ದ್ವೇಷವನ್ನು ಬದಿಗಿರಿಸಿದ್ದು ಬೇರೆ ಕಾರಣಕ್ಕೆ. ಇದಕ್ಕಾಗಿ ಟ್ರಂಪ್ ಅವರಿಗೆ ಥ್ಯಾಂಕ್ಸ್ ಅನ್ನಬೇಕು ಎಂಬುದು ದಿಟ. ನಿಮ್ಮ ನಡುವಿನ ಘರ್ಷಣೆ ನಿಲ್ಲಿಸದೇ ಇದ್ದರೆ ವ್ಯಾಪಾರ ಒಪ್ಪಂದಗಳಿಗೆ ಕಡಿವಾಣ ಹಾಕಲಾಗುತ್ತದೆ ಎಂಬ ಟ್ರಂಪ್ ಎಚ್ಚರಿಕೆಯೇ ಅವರು ಹಿಂದೆ ಸರಿಯಲು ಮುಖ್ಯ ಕಾರಣವಾಗಿರಬಹುದು.

ಸಾವಿರ ವರ್ಷದ ಕದನ ಎಂಬ ಬೊಗಳೆ

ಎಲ್ಲಕ್ಕಿಂತ ದೊಡ್ಡದೆಂದು ಟ್ರಂಪ್ ಹೇಳಿಕೊಳ್ಳುವ ಗಾಜಾ ಶಾಂತಿ ಒಪ್ಪಂದದ ಬಗೆಗಿನ ನಿಲುವಾದರೂ ಏನು? ಇದು ಸಾವಿರಾರು ವರ್ಷಗಳಿಂದ ನಡೆಯುತ್ತಿರುವ ಕದನಕ್ಕೆ ಇತಿಶ್ರೀ ಹಾಡುತ್ತದೆ ಎಂಬುದು ಅವರ ವಾದವಾಗಿದೆ. 1948ರಲ್ಲಿ ಸಿಯೋನಿಸ್ಟ್ ರಾಷ್ಟ್ರದ ಸ್ಥಾಪನೆ ಮಾಡಿದ್ದರಿಂದಷ್ಟೇ ಅಧಿಕೃತವಾಗಿ ಆರಂಭವಾಗಿದ್ದು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ. ಯಹೂದ್ಯರೇ ಹೇಳಿಕೊಳ್ಳುವ ಹಾಗೆ ಮೊದಲು ಇರಾಕಿನ ಆಸ್ಸಿರಿಯನ್ನರು, ಆ ಬಳಿಕ ಬಂದ ಇರಾಕಿನವರಾದ ಬ್ಯಾಬಿಲೋನ್ ರಾಜ ಎರಡನೇ ನೆಬುಕಡ್ನೇಜರ್ ಮತ್ತು ಅಂತಿಮವಾಗಿ ರೋಮನ್ನರು ಅವರನ್ನು ಸೋಲಿಸಿದರು. ಇವರು ಯಹೂದಿಯರನ್ನು ಅವರ ‘ಪ್ರತಿಜ್ಞೆಯ ಭೂಮಿ’ಯಿಂದ ಸಾರಾಸಗಟಾಗಿ ಹೊರಹಾಕಿದರು. ಅಷ್ಟಕ್ಕೂ ಬೈಬಲ್-ನಲ್ಲಿ ಪ್ಯಾಲೆಸ್ತೀನಿಯರ ಉಲ್ಲೇಖವೇನೂ ಕಾಣಿಸುವುದಿಲ್ಲ.

ಔಷಧಗಳ ಬೆಲೆಯನ್ನು ಶೇ.600ರಿಂದ 1000ದಷ್ಟು ಕಡಿಮೆ ಮಾಡುವ ಟ್ರಂಪ್ ಅವರ ಹೇಳಿಕೆ ಎಷ್ಟು ಅಜ್ಞಾನದಿಂದ ಕೂಡಿದೆಯೋ ಹಾಗೆ, ಇಸ್ರೆಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಶತಮಾನಗಳಷ್ಟು ಹಳೆಯದು ಎಂಬ ಹೇಳಿಕೆಯೂ ಕೂಡ. ಯಾವುದೇ ವಸ್ತುವಿನ ಬೆಲೆಯನ್ನು ಶೇ.100ಕ್ಕಿಂತ ಕಡಿಮೆ ಮಾಡಿದರೆ ಆಗ ಮಾರಾಟ ಮಾಡುವವನೇ ಖರೀದಿ ಮಾಡುವವನಿಗೆ ಹಣ ಪಾವತಿ ಮಾಡಬೇಕಾಗುತ್ತದೆ. ಆ ರೀತಿಯ ಇಂದ್ರಜಾಲ MAGA (Make America Great Again) ಭೂಮಿಯಲ್ಲೂ ಕಾಣಸಿಗುವುದಿಲ್ಲ.

ಆದರೆ ಟ್ರಂಪ್ ಅವರು ನೆತನ್ಯಾಹು ಅವರ ಮೇಲೆ ಒತ್ತಡವನ್ನು ಹೇರಿ 2024ರ ಸೆಪ್ಟೆಂಬರ್ ತಿಂಗಳಿನಲ್ಲಿ ಆಗಿನ್ನೂ ಅಧ್ಯಕ್ಷರಾಗಿದ್ದ ಬಿಡೆನ್ ಜೊತೆ ನಿರಾಕರಿಸಿದ್ದ ಒಪ್ಪಂದವನ್ನು ಇಸ್ರೇಲಿ ಪ್ರಧಾನಿ ಜೊತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟಕ್ಕಾದರೂ ಟ್ರಂಪ್ ಅವರಿಗೆ ಮನ್ನಣೆ ಸಿಗಬಾರದೆ? ಇದಕ್ಕೂ ಎರಡು ಆಕ್ಷೇಪಗಳಿವೆ.

ತೋಳದ ಗಂಟಲಲ್ಲಿ ಸಿಕ್ಕ ಮೂಳೆ

ಪಂಚತಂತ್ರದ ಒಂದು ಕಥೆಯನ್ನು ಇಲ್ಲಿ ಪ್ರಸ್ತಾಪಮಾಡಬಹುದು. ಅದು ತೋಳ ಮತ್ತು ಕೊಕ್ಕರೆಯ ಕಥೆ. ಒಂದು ದಿನ ತೋಳದ ಗಂಟಲಲ್ಲಿ ಮೂಳೆಯೊಂದು ಸಿಕ್ಕಿಹಾಕಿಕೊಂಡಿರುತ್ತದೆ. ಆದ್ದರಿಂದ ಅದಕ್ಕೆ ಏನನ್ನೂ ತಿನ್ನಲು ಸಾಧ್ಯವಾಗುವುದಿಲ್ಲ. ಆಗ ಕೊಕ್ಕರೆ ತನ್ನ ನೀಳವಾದ ಕೊಕ್ಕನ್ನು ಬಳಸಿ ಆ ತೋಳದ ಬಾಯೊಳಗೆ ತನ್ನ ಇಡೀ ತಲೆಯನ್ನು ಹಾಕಿ ಮೂಳೆಯನ್ನು ತೆಗೆದು ತೋಳವನ್ನು ಹಸಿವಿನಿಂದ ಪಾರುಮಾಡುತ್ತದೆ. ಆ ಕೊಕ್ಕರೆಗೊಂದು ಧನ್ಯವಾದವನ್ನು ಕೂಡ ಹೇಳದೆ ತೋಳ ಅಲ್ಲಿಂದ ಹೊರಡಲು ಅನುವಾಗುತ್ತದೆ. ಆಗ ಕೊಕ್ಕರೆಯು, ನೀನು ಯಾಕೆ ಇಷ್ಟೊಂದು ನಿರ್ದಯಿ ಮತ್ತು ಎಳ್ಳಷ್ಟು ಕೃತಜ್ಞತೆಯೂ ನಿನಗೆ ಇಲ್ಲವಲ್ಲ ಎಂದು ಕೇಳುತ್ತದೆ. ಆಗ ತೋಳವು ಹೀಗೆ ಹೇಳುತ್ತದೆ; ನಿನ್ನ ಇಡೀ ತಲೆ ನನ್ನ ಬಾಯಿಯಲ್ಲಿ ಇದ್ದಾಗ ಗಕ್ಕನೆ ಬಾಯಿ ಮುಚ್ಚಿ ನಿನ್ನನ್ನೇ ಆಹಾರವಾಗಿ ಮಾಡಿಕೊಳ್ಳಬಹುದಿತ್ತು. ಆದರೆ ಹಾಗೆ ಮಾಡದೇ ಇರಲು ನಿರ್ಧರಿಸಿದ್ದೇ ಕೃತಜ್ಞತೆಗೂ ಮೀರಿದ ಔದಾರ್ಯ!

ಅಮೆರಿಕದ ಅಧ್ಯಕ್ಷರು ಮತ್ತು ಗಾಜಾದವರಿಗೂ ಇದೇ ತರ್ಕ ಅನ್ವಯವಾಗುತ್ತದೆ. ನಿಜಕ್ಕೂ ಏನನ್ನು ಮಾಡಬಹುದಾಗಿತ್ತೋ ಅದನ್ನು ಮಾಡಿಲ್ಲ. ಅಂದರೆ ತೋಳದ ಕಥೆಯಲ್ಲಿ ಆದಂತೆ ಗಾಜಾದಲ್ಲಿ ಕೊಲ್ಲುವ ಬದಲು ಉಳಿಸಲಿಕ್ಕೆ ಏನನ್ನು ಮಾಡಬಹುದಿತ್ತೊ ಅದನ್ನು ಮಾಡಿಲ್ಲ. ಗಾಜಾದಲ್ಲಿ ಇಸ್ರೇಲ್ ತನ್ನ ನರಮೇಧವನ್ನು ಮುಂದುವರಿಸಿದಾಗ ಯುದ್ಧವನ್ನು ಕೊನೆಗೊಳಿಸಲು ಅಮೆರಿಕವು ಇಸ್ರೆಲಿಗೆ ಶಸ್ತ್ರಾಸ್ತ್ರ ಪೂರೈಕೆ ಮತ್ತು ರಾಜತಾಂತ್ರಿಕ ಬೆಂಬಲವನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗಿತ್ತು.

ಡೆಮೊಕ್ರಟ್-ಗಳ ಮರು-ಚುನಾವಣೆ ಪ್ರಚಾರದ ಮಧ್ಯದಲ್ಲಿ ಬಿಡೆನ್ ಅವರು ಇಸ್ರೇಲ್ ಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕಾಗಿತ್ತು. ಹಾಗೆ ಮಾಡದೇ ಇರುವುದೇ ಮಾರಣಾಂತಿಕವಾಗಿ ಪರಿಣಮಿಸಿತು. ಅದು ಮತದಾರರ ಬೆಂಬಲವನ್ನು ಕಳೆದುಕೊಳ್ಳಲು ಅದು ಮುಖ್ಯ ಕಾರಣವಾಯಿತು. ಈ ಕಾರಣದಿಂದಲೇ ಟ್ರಂಪ್ ನೆತನ್ಯಾಹು ಅವರನ್ನು ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಲು ಸಾಧ್ಯವಾಯಿತು. ಬಿಡೆನ್ ಅವರಿಗೆ ಇದು ಸಾಧ್ಯವಾಗಿರಲಿಲ್ಲ. ಇಂತಹ ಗಾಜಾ ಒಪ್ಪಂದದ ಹಿನ್ನೆಲೆಯಲ್ಲಿ ತಾವು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹ ಎನ್ನುವುದು ತೋಳದ ಪರವಾಗಿ ನಿಲ್ಲುವುದಕ್ಕೆ ಸಮವಾಗುತ್ತದೆ.

ಬಡಾಯಿ ಹಿಂದಿನ ರಕ್ತಪಾತ

ಗಾಜಾ ಯುದ್ಧವು ಕನಿಷ್ಠ 67 ಸಾವಿರ ಪ್ಯಾಲೆಸ್ತಿಯರ ಜೀವಗಳನ್ನು ಕಸಿದಿದೆ. ಅವರಲ್ಲಿ ಶೇ,30ರಷ್ಟು ಮಂದಿ ಮಕ್ಕಳು. ಆ ವಲಯದ ಭೌತಿಕ ಮೂಲಸೌಕರ್ಯಗಳನ್ನು ಪುಡಿಗಟ್ಟಿದೆ. ಅಷ್ಟು ಮಾತ್ರವಲ್ಲದೆ ಜಗತ್ತಿನ ನಾನಾ ಭಾಗಗಳಲ್ಲಿರುವ ಮುಸ್ಲಿಮರು ಮತ್ತು ಯಹೂದಿಗಳ ವಿರುದ್ಧ ದ್ವೇಷ ಭಾವನೆಯಿಂದ ನೋಡುವಂತೆ ಮಾಡಿದೆ. ಅದು ಮುಂಬರುವ ವರ್ಷಗಳಲ್ಲಿ ದಾಳಿ ಮತ್ತು ಹತ್ಯೆಗಳಿಗೆ ದಾರಿಮಾಡಿಕೊಡಬಹುದು.

ಅಮೆರಿಕ ಸೇನೆಯ ಖರ್ಚು-ವೆಚ್ಚಗಳನ್ನು ಟ್ರಂಪ್ ಹೆಚ್ಚಿಸಿದ್ದಾರೆ. ಇದರಿಂದಾಗಿ ಜಗತ್ತಿನ ಉಳಿದ ರಾಷ್ಟ್ರಗಳೂ ಕೂಡ ತಮ್ಮ ಮಿಲಿಟರಿ ಬಜೆಟ್ ಅನ್ನು ಏರಿಸಬೇಕಾದ ಅನಿವಾರ್ಯತೆಗೆ ಸಿಲುಕಿವೆ.

ಹಿನ್ನೆಲೆ ಹೀಗೆಲ್ಲ ಇರುವಾಗ ಟ್ರಂಪ್ ಅವರು ಶಾಂತಿಗಾಗಿ ತಾವು ಮಾಡಿದ್ದೇನೆ ಹೇಳಿಕೊಳ್ಳುವ ಸಾಧನೆಗಳಿಗೆ ತಕ್ಕ ಅರ್ಹತೆಯನ್ನು ಹೊಂದಿಲ್ಲದೇ ಇದ್ದರೂ ನೋಬೆಲ್ ಶಾಂತಿ ಪುರಸ್ಕಾರ ತಮಗೆ ಬರಬೇಕು ಎಂದು ವಾದಿಸುವುದಾದರೂ ಯಾಕಾಗಿ? ಟ್ರಂಪ್ ಯಾವತ್ತಿದ್ದರೂ ಯುದ್ಧದಾಹಿ. ಅವರು ಪನಾಮಾ ಕಾಲುವೆಯನ್ನು ತಮ್ಮ ವಶಕ್ಕೆ ಪಡೆಯಲು ಗ್ರೀನ್-ಲ್ಯಾಂಡ್ ಸ್ವಾಧೀನಕ್ಕೆ ಪಡೆಯುವುದಾಗಿ ಬೆದರಕೆ ಹಾಕಿದ್ದಾರೆ. ಅಂತಾರಾಷ್ಟ್ರೀಯ ಜಲಸಮೂಹದಲ್ಲಿ ವೆನೆಜುವೆಲಾದ ದೋಣಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ, ಇರಾನ್ ಮೇಲೆ ಬಂಕರ್ ಹೊಡೆದುರುಳಿಸುವ ಬಾಂಬ್ ಗಳನ್ನು ಹಾಕಿದ್ದಾರೆ, ಯೆಮೆನ್ ಮೇಲೆ ಹೆಚ್ಚು ಸಾಂಪ್ರದಾಯಿಕ ಯುದ್ಧ ಸಾಮಗ್ರಿಗಳನ್ನು ಪೇರಿಸಿದ್ದಾರೆ. ಹೀಗಿರುವಾಗ ಶಾಂತಿ ನೋಬೆಲ್ ಪುರಸ್ಕಾರಕ್ಕೆ ಹೇಗೆ ಅವರು ಅರ್ಹರಾಗುತ್ತಾರೆ?

ಆಂತರ್ಯದ್ಧದಲ್ಲಿ ವಿನಾಶದ ಚಿತ್ರ

ಪ್ರಪಂಚದ ಏಕಧ್ರುವೀಯ ಪ್ರಾಬಲ್ಯದಲ್ಲಿ ಅಮೆರಿಕದ ರಚನಾತ್ಮಕ ಹಿಂಸಾಚಾರವು ಅಂತರ್ಗತವಾಗಿದೆ. ಅದು ಸುಪ್ತವಾಗಿರುವ ಹಿಂಸಾಚಾರ. ಅದರ ನಿಜವಾದ ಸಾವು ಮತ್ತು ವಿನಾಶವಾಗಿ ಮೇಲ್ಪದರಕ್ಕೆ ಕಾಣಿಸುವುದಿಲ್ಲ. ಈ ಮಧ್ಯೆ, ಯೂರೋಪಿಯನ್ನರು ತಮ್ಮದೇ ಆದ ಶಕ್ತಿಕೇಂದ್ರವಾಗಿ ಹೊರಹೊಮ್ಮುವಂತೆ ಮತ್ತು ಏಷ್ಯಾದ ಮಿತ್ರರಾಷ್ಟ್ರಗಳು ರಾಷ್ಟ್ರೀಯ ಭದ್ರತೆಯಲ್ಲಿ ಹೆಚ್ಚುತ್ತಿರುವ ಸ್ವಾವಲಂಬನೆಯ ಮೌಲ್ಯವನ್ನು ಕಂಡುಕೊಳ್ಳುವಂತೆ ಒತ್ತಾಯಿಸುವ ಕೆಲಸವನ್ನು ಟ್ರಂಪ್ ಇಷ್ಟವಿಲ್ಲದಿದ್ದರೂ ಮಾಡುತ್ತಿದ್ದಾರೆ. ಆ ಮೂಲಕ ಅವರು ಏಕಧ್ರುವೀಯ ಪ್ರಾಬಲ್ಯವನ್ನು ಸಡಿಲಗೊಳಿಸುತ್ತಿದ್ದಾರೆ ಕೂಡ. ಅಮೆರಿಕದ ಪ್ರತ್ಯೇಕವಾದದ ಕಡೆಗೆ ಟ್ರಂಪ್ ತೋರುತ್ತಿರುವ ಒಲವಿನ ಕಾರಣದಿಂದ ಮತ್ತು ಒಂದು ವೇಳೆ ಮಿತ್ರರಾಷ್ಟ್ರಗಳ ಮೇಲೆ ದಾಳಿ ಸಂಭವಿಸಿದರೆ ಅವರ ಬೆಂಗಾವಲಿಗೆ ನಿಲ್ಲುವ ಭರವಸೆಯೊಂದಿಗೆ ದೇಶದಿಂದ ದೇಶಕ್ಕೆ ರಕ್ಷಣಾ ಬಜೆಟ್ ಹಂಚಿಕೆಗಳಲ್ಲಿ ಹೆಚ್ಚಳ ಮಾಡಲಾಗುತ್ತಿದೆ. ಇದು ಮುಂಬರುವ ವಿಶ್ವದ ಬಹುಧ್ರವೀಯತೆಗೆ ಸಾಕ್ಷಿಯೂ ಆಗಿದೆ.

ವಾಣಿಜ್ಯ ಮತ್ತು ವಲಸೆ ಪ್ರತಿಭೆಗಳಿಗೆ ಅಮೆರಿಕದ ಅರ್ಥವ್ಯವಸ್ಥೆಯ ಬಾಗಿಲು ಮುಕ್ತವಾಗಿ ತೆರೆದಿರುವುದರಿಂದ ಆರ್ಥಿಕತೆ ಮತ್ತು ತಾಂತ್ರಿಕ ಶಕ್ತಿಯಲ್ಲಿ ಅಮೆರಿಕವು ಅಚಲವಾಗಿ ಮುನ್ನಡೆಯುವಂತೆ ಮಾಡಿದೆ. ಟ್ರಂಪ್ ಇದನ್ನು ಹಾಳುಗೆಡಹುತ್ತಿದ್ದಾರೆ. 2025ರ ರಸಾಯನಶಾಸ್ತ್ರ ವಿಭಾಗದಲ್ಲಿ ನೋಬೆಲ್ ಪ್ರಶಸ್ತಿ ವಿಜೇತರಾಗಿರುವ ಒಮರ್ ಯಾಘಿ ಅವರು ಜೋರ್ಡಾನ್ ನಲ್ಲಿರುವ ಪ್ಯಾಲೆಸ್ತೀನ್ ವಲಸಿಗರು. ಪ್ರತಿಭೆಗಳು ಮುಕ್ತವಾಗಿ ಪ್ರವೇಶಿಸಲು ಅವಕಾಶವಿದ್ದ ಸಂದರ್ಭದಲ್ಲಿ ಅವರು ಅಮೆರಿಕಕ್ಕೆ ಬಂದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು.

ಯುರೋಪಿಯನ್ ಮೂಲದ ಜನರಿಗಾಗಿ ಅಮೆರಿಕವು ತನ್ನ ಪ್ರದೇಶವನ್ನು ಸಂರಕ್ಷಿಸಬೇಕು ಎಂಬ ಟ್ರಂಪ್ ಅವರ ನಿರ್ಧಾರವು ಅಮೆರಿಕವೇ ಶ್ರೇಷ್ಠ ಎಂಬುದಕ್ಕೆ ಬಾಗಿಲು ಮುಚ್ಚುತ್ತದೆ. ಅವರ ಆರ್ಥಿಕ ನೀತಿಗಳು ಡಾಲರ್-ನ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತಿವೆ ಮತ್ತು ಅಮೆರಿಕನ್ ಸ್ಪರ್ಧಾತ್ಮಕತೆಯನ್ನು ಕುಗ್ಗಿಸಿ ಚಿನ್ನ ಮತ್ತು ಬಿಟ್ ಕಾಯಿನ್-ನಂತಹ ಪರ್ಯಾಯ ಸ್ವತ್ತುಗಳ ಮೌಲ್ಯವನ್ನು ಹೆಚ್ಚಿಸುತ್ತಿವೆ.

ಮುಚ್ಚಟೆಯಾಗಿರುವ ಸೂಪರ್ ಪವರ್ ಶಾಂತಿಯುತ ಸಹಬಾಳ್ವೆ ಮಾಡಬೇಕಾದರೆ ಇರುವ ಏಕೈಕ ವಿವೇಕಯುತ ಮಾರ್ಗವೆಂದರೆ ಇತರ ಶಕ್ತಿಗಳ ನಡುವೆ ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳುವುದು. ಉಕ್ರೇನ್ ನನ್ನು ನ್ಯಾಟೊದ ಭಾಗವಾಗಿ ಮಾಡುವ ಮೂಲಕ ಪ್ರಶ್ನಾತೀತ ಅಮೆರಿಕ ನಾಯಕತ್ವದ ಅಡಿಯಲ್ಲಿ ಏಕೀಕೃತಗೊಂಡ ನ್ಯಾಟೊವು ರಷ್ಯಾದ ಕ್ರಿಮಿಯಾದಲ್ಲಿರುವ ಏಕೈಕ ಬೆಚ್ಚಗಿನ ನೀರಿನ ನೌಕಾನೆಲೆಯ ವಿಚಾರದಲ್ಲಿ ದ್ರೋಹವೆಸಗುವ ಬಗ್ಗೆ ಯೋಚಿಸಬಹುದು.

ಒಂದು ಪ್ರತ್ಯೇಕವಾದಿ ಅಮೆರಿಕವು ರಷ್ಯಾದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವುದಕ್ಕೆ ಬದಲಾಗಿ ಅದನ್ನು ಹೇಗಿದೆಯೋ ಹಾಗೆಯೇ ಇರಲು ಬಿಡುವಂತೆ ಯುರೋಪ್ ಅನ್ನು ಒತ್ತಾಯಿಸಲಿದೆ. ಇದರಿಂದ ರಷ್ಯಾವನ್ನು ಯುರೋಪಿನ ಮುಖ್ಯವಾಹಿನಿಗೆ ಮತ್ತೆ ಸೇರ್ಪಡೆಗೊಳಿಸಲು ಕಾರಣವಾಗಬಹುದು.

ಜಗತ್ತು ಈಗ ಪರಸ್ಪರ ಒಬ್ಬರಿಗೊಬ್ಬರು ಅವಲಂಬಿತವಾಗಿದೆ. ಹೀಗೆ ಒಬ್ಬರಿಗೊಬ್ಬರು ಅವಲಂಬಿಸಿಕೊಂಡೇ ಸಹಮತದ ನಿರ್ಧಾರ ಕೈಗೊಳ್ಳಬೇಕಾದ ಅಗತ್ಯವಿರುವ ಇಂತಹ ಸನ್ನಿವೇಶದಲ್ಲಿ ಸೂಪರ್ ಪವರ್ ಎನ್ನುವುದು ವಿರೋಧಾಭಾಸವಾಗಿದೆ. ಟ್ರಂಪ್ ಅವರು ಮಾಡಲು ಹೊರಟಿರುವಂತೆ ಅಂತಹ ಪ್ರಾಬಲ್ಯವನ್ನು ಕಳಚಿಹಾಕುವುದರಿಂದ ನಿಜವಾದ ಬಹುಪಕ್ಷೀಯತೆಗೆ ದಾರಿಮಾಡಿಕೊಡುತ್ತದೆ.

ಟ್ರಂಪ್ ಅವರು ಅಮೆರಿಕದ ಪ್ರಾಬಲ್ಯವನ್ನು ಇನ್ನಷ್ಟು ಮತ್ತಷ್ಟು ತಗ್ಗಿಸುತ್ತ ಹೋಗಲಿ ಬಿಡಿ. ಹಾಗೆ ಮಾಡುವುದರಿಂದಲಾದರೂ ಜಾಗತಿಕ ಅಭಿಪ್ರಾಯದ ಬಹುತೇಕ ಭಾಗದ ಜನ ಟ್ರಂಪ್ ಅವರು ನೋಬೆಲ್ ಶಾಂತಿಗೆ ಅರ್ಹರು ಎಂಬುದನ್ನು ಒಪ್ಪಿಕೊಳ್ಳುತ್ತದೆ.

Tags:    

Similar News