ಮೋದಿ ಜೊತೆ ಕೊನೆಗೂ ಕದನ ವಿರಾಮ: ಭಾಗವತರ ವಿಜಯದಶಮಿ ಭಾಷಣದ ಗುಟ್ಟು ರಟ್ಟು
ವಿಜಯದಶಮಿಯ ದಿನದಂದು ಆರ್.ಎಸ್.ಎಸ್.ನ ಶತಮಾನೋತ್ಸವ ಭಾಷಣ ಮಾಡಿದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಮೋದಿ ಸರ್ಕಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರು ವಾರ್ಷಿಕ ವಿಜಯದಶಮಿ ಭಾಷಣ ಮಾಡಿದ್ದಾರೆ. ಪ್ರತಿ ವರ್ಷ ನಡೆಯುವ ಈ ಕಾರ್ಯಕ್ರಮವು ಆ ಸಂಘಟನೆಯ ಬಗ್ಗೆ ನಂಬಿಕೆಯುಳ್ಳವರಿಗೆ ಅತ್ಯಂತ ನಿರೀಕ್ಷೆಯದ್ದು. ಸರಸಂಘಚಾಲಕರು ಅಂದು ಆಡುವ ಮಾತುಗಳು ಆ ವರ್ಷದ ಸಂಘದ ನಿಲುವನ್ನು ಪ್ರಸ್ತುತಪಡಿಸುತ್ತದೆ.
ಆರ್.ಎಸ್.ಎಸ್.ನ ಬೆಳವಣಿಗೆಯನ್ನು ಕುತೂಹಲದಿಂದ ಗಮನಿಸುವವರೂ ಕೂಡ ಸಂಘದ ನಿಲುವನ್ನು ಅರ್ಥಮಾಡಿಕೊಳ್ಳಲು ಈ ಭಾಷಣದ ಮೇಲೊಂದು ಕಣ್ಣಿಡುತ್ತಾರೆ. ಆದರೆ ಹಿಂದೂ ಶ್ರೇಷ್ಠತೆಯ ತಳಹದಿಯಿಂದ ಬರುವ ಮಾತುಗಳನ್ನು ಅಪರೂಪವಾಗಿ ಅವರವರ ಮೌಲ್ಯಕ್ಕೆ ತಕ್ಕಂತೆ ನೋಡಲಾಗುತ್ತದೆ ಮತ್ತು ವೀಕ್ಷಕರು ಕೆಲವೊಮ್ಮೆ ದಾರಿತಪ್ಪುತ್ತಾರೆ. ಇನ್ನು ಅನುಯಾಯಿಗಳ ವಿಚಾರಕ್ಕೆ ಬಂದರೆ ಅವರಿಗೆ ಯಾವ ಸೂಚನೆಯನ್ನು ಹೇಗೆ ವ್ಯಾಖ್ಯಾನ ಮಾಡಬೇಕು ಎಂಬುದು ಗೊತ್ತಿರುತ್ತದೆ ಮತ್ತು ಸ್ಥಳೀಯ ನಾಯಕರಿಂದಲೂ ಮಾರ್ಗದರ್ಶನ ಪಡೆದಿರುತ್ತಾರೆ.
ಈ ಬಾರಿಯ ಅಕ್ಟೋಬರ್ ಎರಡಕ್ಕೆ ಹೆಚ್ಚಿನ ವಿಶೇಷತೆ ಇತ್ತು. ಯಾಕೆಂದರೆ ಅವರು ಮುನ್ನಡೆಸುತ್ತಿರುವ ಈ ಸಂಘಟನೆ ಶತಮಾನೋತ್ಸವದ ಆಚರಣೆಯ ಸಂಭ್ರಮದಲ್ಲಿತ್ತು. ಅದಕ್ಕಾಗಿ ಮಾಧ್ಯಮಗಳು ಮೋಹನ್ ಭಾಗವತ್ ಅವರ ಪ್ರತಿಯೊಂದು ಮಾತನ್ನೂ ಕಿವಿಗೊಟ್ಟು ಕೇಳುತ್ತಿದ್ದರು. ಇನ್ನೂ ಒಂದು ಮುಖ್ಯ ಕಾರಣವೆಂದರೆ ಅದು ಹಿಂದಿಗಿಂತ ಉನ್ನತ ಪ್ರೊಫೈಲ್-ನ್ನು ಪಡೆದುಕೊಂಡಿರುವುದು. ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಮತ್ತು ಹಾಗೆ ಅಧಿಕಾರದಲ್ಲಿ ಇರುವಾಗ ಸಿಂಹಾಸನದ ಹಿಂದಿನ ಶಕ್ತಿ ಎಂದು ಭಾವಿಸುವುದು.
ಅಷ್ಟಕ್ಕೂ ಬಿಜೆಪಿ ಆರ್.ಎಸ್.ಎಸ್.ನ ಸೃಷ್ಟಿ. ಅದರ ರಾಜಕೀಯ ಅಸ್ತ್ರ.
ಹೀಗೆ ಪಡೆದಂತಹ ಪ್ರಭಾವದ ಫಲವಾಗಿ ಆರ್.ಎಸ್.ಎಸ್. ಮುಖ್ಯಸ್ಥರಿಗೆ ವಿಜ್ಞಾನ ಭವನದಿಂದಲೂ ತಮ್ಮ ನಿಷ್ಠಾವಂತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಅವಕಾಶ ಸಿಕ್ಕಿದೆ. ರಾಷ್ಟ್ರದ ರಾಜಧಾನಿಯಲ್ಲಿರುವ ಈ ಪ್ರತಿಷ್ಠಿತ ಸಭಾಭವನವು ಸಾಮಾನ್ಯವಾಗಿ ಉನ್ನತ ಮಟ್ಟದ ಅಧಿಕೃತ ಕಾರ್ಯಕ್ರಮಗಳ ಸ್ಥಳವಾಗಿದೆ. ಕೇವಲ ಸಾಂಸ್ಕೃತಿಕ ಮತ್ತು ದೇಶದ ಪ್ರಬಲ ಧಾರ್ಮಿಕ ಸಮುದಾಯದ ಪರವಾಗಿ ಮಾತನಾಡುತ್ತೇವೆಂದು ಹೇಳಿಕೊಳ್ಳುವ, ಒಳಿತನ್ನು ಮಾಡುವ ಸ್ವಯಂಸೇವಕರ ಸಂಘಟನೆಯ ಪಾಲಿಗೆ ಸಾಮಾನ್ಯವಾಗಿ ಮೀರಿದ ವಿಷಯ ಅದು.
ಆದರೆ ಯಾವುದೇ ರಾಗ-ದ್ವೇಷರಹಿತವಾಗಿ ಇದನ್ನು ಗಮನಿಸಿದರೆ, ಇಂತಹ ಸೌಲಭ್ಯಗಳನ್ನು ವಿಸ್ತರಿಸುವುದು ಅಧಿಕಾರದ ಆಕರ್ಷಣೆಯ ಒಂದು ಭಾಗವಷ್ಟೇ ಆಗಿದೆ. ಅದಕ್ಕಿಂತ ಹೆಚ್ಚೇನೂ ಹೇಳಲು ಸಾಧ್ಯವಿಲ್ಲ. ಪಕ್ಷವು ರಾಷ್ಟ್ರ ಮಟ್ಟದಲ್ಲಿ ಅಧಿಕಾರವನ್ನು ಹೊಂದಿರುವಾಗ ಹಾಗೂ ಆರ್.ಎಸ್.ಎಸ್ ಮತ್ತು ಬಿಜೆಪಿ ನಡುವಿನ ಸಂವಹನದ ವಾಸ್ತವವು ಸಾಮಾನ್ಯವಾಗಿ ಊಹೆಗೂ ಮೀರಿದ ಸಂಕೀರ್ಣ ಹಾಗೂ ಸೂಕ್ಷ್ಮವಾಗಿದೆ. ಇದು ಈ ವರ್ಷದ ಸರಸಂಘಚಾಲಕರ ವಿಜಯದಶಮಿಯ ಆಲೋಚನೆಗಳು ಎಂದಿಗಿಂತ ಹೆಚ್ಚು ಗಮನಸೆಳೆಯಲು ಕಾರಣವಾಗಿದೆ.
ಮಾತಿನ ಸಂದೇಶ ರವಾನೆ
ಭಾಗವತ್ ಅವರು ಮಾತನಾಡಿದ ವಿಷಯಗಳ ಭರಾಟೆಯಲ್ಲಿ ಪ್ರಮುಖ ವಿಷಯ ಕಳೆದುಹೋಗಿದೆ ಎಂಬುದು ಆಸಕ್ತಿಯ ಸಂಗತಿ. ಹಾಗಂತ ಪೂರ್ತಿಯಾಗಿ ಅಚ್ಚರಿಪಡಬೇಕಾದದ್ದೇನೂ ಇಲ್ಲ. ಬಹುಷಃ ವಿಷಯದ ತಿರುಳನ್ನು ಬೇಕೆಂದೇ ಮರೆಮಾಚಿರುವ ಸಾಧ್ಯತೆಯಿದೆ. ಆಡಿದ ಮಾತಿನ ಸಂದೇಶ ಎಲ್ಲಿ ತಲುಪಬೇಕೋ ಅಲ್ಲಿಗೆ ತಲುಪಿದೆ ಎಂಬುದು ಅವರಿಗೆ ಚೆನ್ನಾಗಿ ತಿಳಿದಿರುವುದರಿಂದ ಆರ್.ಎಸ್.ಎಸ್ ಮುಖ್ಯಸ್ಥರಿಗೆ ಅದು ತಳಮಳ ಉಂಟುಮಾಡಲಾರದು.
ದೂರದರ್ಶಿತ್ವದ ಗುಣಮಟ್ಟ ಮತ್ತು ಹಿಂದಿನ ವೈಭವಗಳ ನೆನಪಿನಿಂದ ಕೂಡಿದ ಭಾಗವತರ ಮಾತುಗಳು ಶತಮಾನೋತ್ಸವ ಭಾಷಣದಂತೆ ಇರಲಿಲ್ಲ. ಸಂಘಟನೆಯೊಂದಿಗೆ ನಾಥುರಾಮ್ ಗೋಡ್ಸೆ ಹೊಂದಿದ್ದ ಸಂಬಂಧವನ್ನು ಎಂದಾದರೂ ತ್ಯಜಿಸಿದ್ದನೇ ಎಂಬುದೂ ಸೇರಿದಂತೆ ಸಂಘಟನೆಯ ಹಿನ್ನೆಲೆಯು ವಿವಾದಗಳಿಂದ ಕೂಡಿದೆ. ಸದ್ಯಕ್ಕೆ ಆ ವಿಷಯದ ತಂಟೆಗೆ ಹೋಗುವುದು ಬೇಡ ಬಿಡಿ.
ಭಾಗವತ್ ಆಡಿದ, ಆಡದ ಮಾತಿನ ಅಂಶಗಳು
ಭಾಗವತ್ ಅವರ ಮಾತಿನ ವ್ಯಾಪ್ತಿಯು ವ್ಯಾಪಕವಾಗಿತ್ತು. ಆದರೆ ಅದು ಶತಮಾನಕ್ಕಿಂತ ಬಹಳ ಸೀಮಿತವಾದ ಕಾಲಾವಧಿಯನ್ನು ಮಾತ್ರ ಒಳಗೊಂಡಂತೆ ವ್ಯಕ್ತವಾಯಿತು. ಬಹುಷಃ ಅವರ ಉದ್ದೇಶವೂ ಹೆಚ್ಚು ಸೀಮಿತವಾಗಿತ್ತು. ಆರ್.ಎಸ್.ಎಸ್.ನ ಪರಮೋಚ್ಚ ನಾಯಕ ಆರ್ಥಿಕ ಅಸಮಾನತೆ ಹೆಚ್ಚುತ್ತಿರುವ ಬಗ್ಗೆ ಮತ್ತು ‘ಸ್ವದೇಶಿ’ಯ ಅಗತ್ಯದ ಬಗ್ಗೆ ಮಾತನಾಡಿದರು. ನೇಪಾಳ ಮತ್ತು ಇತರ ನೆರೆಯ ರಾಷ್ಟ್ರಗಳಲ್ಲಿ ಇತ್ತೀಚೆಗೆ ನಡೆದ ಹಿಂಸಾತ್ಮಕ ಯುವ ದಂಗೆಗಳು ಹಾಗೂ ಅದರಿಂದಾದ ಆಡಳಿತ ಬದಲಾವಣೆಗಳ ಬಗೆಗೂ ಗಮನಸೆಳೆದರು. ಹಿಂಸೆಯನ್ನು ಖಂಡಿಸಿದ ಅವರು ಪ್ರಜಾಸತ್ತಾತ್ಮಕ ವಿಧಾನಗಳ ಅಗತ್ಯವನ್ನು ಎತ್ತಿಹಿಡಿದರು. ಹಿಮಾಲಯದಲ್ಲಿ ಉಂಟಾಗುತ್ತಿರುವ ಪರಿಸರ ನಾಶದ ಬಗೆಗೂ ಗಮನಹರಿಸಿದರು.
ಕೊನೆಯದಾಗಿ, ಈ ವರ್ಷದ ಆರಂಭದಲ್ಲಿ ನಡೆದ ಆಪರೇಷನ್ ಸಿಂಧೂರ್ ನಂತರ ಭಾರತಕ್ಕೆ ನೀಡಿದ ಬೆಂಬಲದ ಪ್ರಮಾಣದ ಆಧಾರದಲ್ಲಿ ಜಾಗತಿಕವಾಗಿ ದೇಶದ ನಿಜವಾದ ಸ್ನೇಹಿತರು ಯಾರು ಎಂಬುದರ ಬಗೆಗೂ ತಮ್ಮ ಭಾಷಣದಲ್ಲಿ ಚಿಂತಿಸುವ ಕೆಲಸ ಮಾಡಿದ್ದಾರೆ.
ಈ ಎಲ್ಲ ಮಾತುಗಳಿಗೆ ಯಾವುದೇ ನಿರ್ದಿಷ್ಟ ಫೋಕಸ್ ಇರಲಿಲ್ಲ. ಅವುಗಳಿಗೆ ರಚನಾತ್ಮಕ ದೃಷ್ಟಿಕೋನಗಳಿರಲಿಲ್ಲ. ನಿಜವಾಗಿ ಹೇಳಬೇಕೆಂದರೆ ಒಂದು ರೀತಿಯಲ್ಲಿ ದೇಶಾವರಿ ಮಾತುಗಳವು. ಸಂದೇಶವನ್ನು ಬಹಳ ಸೂಕ್ಷ್ಮವಾಗಿ ತಲುಪಿಸುವುದಷ್ಟೇ ಅದರ ಹಿಂದಿನ ಉದ್ದೇಶ. ಯಾರಿಗೆ ಅದು ಬೇಕೋ ಅವರು ಅದನ್ನು ಅರ್ಥಮಾಡಿಕೊಳ್ಳುತ್ತಾರೆ. ಸಾಮಾನ್ಯ ಜನರಿಗೆ ಅದರ ಅರ್ಥ ತಿಳಿಯಬಾರದು ಮತ್ತು ಮುಖ್ಯಸ್ಥರು ತಮ್ಮ ಘನತೆಯನ್ನು ಉಳಿಸಿಕೊಳ್ಳಬೇಕು.
ಕದನ ವಿರಾಮದ ಮೊರೆಹೋದ ಭಾಗವತರು
ನಾಗಪುರದಲ್ಲಿರುವ ಆರ್.ಎಸ್.ಎಸ್. ಕೇಂದ್ರ ಕಚೇರಿಯಿಂದ ಮಾಡಲಾದ ವಿಜಯದಶಮಿ ಭಾಷಣವನ್ನು ಯಾವುದೇ ವೈಭವೀಕರಣವಿಲ್ಲದೆ ವಿಶ್ಲೇಷಣೆ ಮಾಡುವುದಾದರೆ ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸುದೀರ್ಘ ಕಾಲದಿಂದ ಹೊಂದಿದ್ದ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಆರ್.ಎಸ್.ಎಸ್ ಮುಖ್ಯಸ್ಥರು ಈಗ ಶಾಂತಿ ಬಯಸಿ ಕದನ ವಿರಾಮಕ್ಕೆ ಮೊರೆಹೋಗಿದ್ದಾರೆ. ಈ ಸಂದೇಶವಂತೂ ಸ್ಪಷ್ಟವಾಗಿತ್ತು. ಅದರಲ್ಲಿ ಯಾವುದೇ ಗೊಂದಲವಿರಲಿಲ್ಲ. ಇದು ಫಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ನಡೆದ ಆಪರೇಷನ್ ಸಿಂಧೂರ್ ಕುರಿತ ಅವರ ಹೇಳಿಕೆಯಲ್ಲಿ ಹೆಚ್ಚು ಸ್ಪಷ್ಟವಾಗಿ ಗೋಚರಿಸಿತು.
ಇಂಡಿಯನ್ ಎಕ್ಸ್-ಪ್ರೆಸ್ ಪತ್ರಿಕೆ ಮಾಡಿದ ವರದಿಯ ಪ್ರಕಾರ, “...ಅತ್ಯಂತ ಕರಾರುವಕ್ಕಾದ ಯೋಜನೆಯ ಬಳಿಕ ಭಾರತ ಸರ್ಕಾರ ಈ ದಾಳಿಗೆ ತಕ್ಕ ಪ್ರತ್ಯುತ್ತರವನ್ನೇ ನೀಡಿದೆ. ಈ ಅಷ್ಟೂ ಅವಧಿಯಲ್ಲಿ ನಾವು ರಾಷ್ಟ್ರದ ನಾಯಕತ್ವದ ದೃಢತೆ, ನಮ್ಮ ಸಶಸ್ತ್ರ ಪಡೆಗಳ ಪರಾಕ್ರಮ ಮತ್ತು ಯುದ್ಧಸಿದ್ಧತೆಯ ಉತ್ಸಾಹಭರಿತ ದೃಶ್ಯಗಳನ್ನು ನೋಡಿದೆವು...” ಎಂದು ಆರ್.ಎಸ್.ಎಸ್. ಮುಖ್ಯಸ್ಥರು ಹೇಳಿದರು.
ಇಂತಹ ಮುಕ್ತಕಂಠದ ಶ್ಲಾಘನೆ ಪ್ರಧಾನಿ ಅವರನ್ನು ಪ್ರಸನ್ನಗೊಳಿಸಿರಲೇಬೇಕು. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಆರ್.ಎಸ್.ಎಸ್. ಸರಸಂಘಚಾಲಕರು ಭಿನ್ನಸ್ವರಗಳಲ್ಲಿ ಮಾತನಾಡಿದ್ದೇ ಹೆಚ್ಚು. ಅನೇಕ ಸಂದರ್ಭಗಳಲ್ಲಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದರು. ಇದನ್ನು ಅನೇಕರು ಅನೇಕ ರೀತಿಯಲ್ಲಿ ಅರ್ಥಮಾಡಿಕೊಂಡಿದ್ದೇ ಹೆಚ್ಚು.
ಪ್ರಸ್ತುತ ‘ನಾಯಕತ್ವ’ವನ್ನು ವೈಭವೀಕರಿಸುವ ಕುರಿತು ಭಾಗವತ್ ಅವರು ಉಲ್ಲೇಖಿಸಿದ ನಾನಾ ವಿಷಯಗಳು ಮುಖ್ಯ ಸಂದೇಶವನ್ನು ರವಾನಿಸುವುದಕ್ಕಿಂತ ಹೆಚ್ಚಾಗಿ ವಿಷಯವನ್ನು ಬೇರೆಡೆಗೆ ಸೆಳೆಯುವ ತಂತ್ರವಿರುವಂತೆ ಕಾಣಿಸುತ್ತಿದೆ. ವಾಸ್ತವವಾಗಿ ಇಷ್ಟೂ ವರ್ಷಗಳಲ್ಲಿ ಆರ್.ಎಸ್.ಎಸ್. ಇಂತಹ ಪ್ರಮುಖ ವಿಷಯಗಳಲ್ಲಿ ಎಂದಿಗೂ ತನ್ನನ್ನು ಅರ್ಥಪೂರ್ಣವಾಗಿ ತೊಡಗಿಸಿಕೊಂಡಿಲ್ಲ. ಉದಾಹರಣೆಗೆ ಪರಿಸರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಅದು ಯಾವುದೇ ಹಂತದಲ್ಲೂ ಗಮನ ಹರಿಸಿಲ್ಲ.
ಗಣಿಗಾರಿಕೆ ಮತ್ತು ಇತರ ಕೈಗಾರಿಕೆ ಸಂಬಂಧಿ ಚಟುವಟಿಕೆಗಳಿಗಾಗಿ ಅಭಿವೃದ್ಧಿಯ ಹೆಸರು ಹೇಳಿಕೊಂಡು ಅರಣ್ಯಗಳು ಮತ್ತು ಇತರ ಸೂಕ್ಷ್ಮ ಪ್ರದೇಶಗಳನ್ನು ನಾಶಪಡಿಸಿ ದೊಡ್ಡ ದೊಡ್ರಡ ಕುಳಗಳಿಗೆ, ಸಾಮಾನ್ಯವಾಗಿ ಬಂಡವಾಳಶಾಹಿ ಆಪ್ತರಿಗೆ ಮೋದಿ ಆಡಳಿತವು ಹಸ್ತಾಂತರ ಮಾಡಿದೆ. ಸರ್ಕಾರದ ಇಂತಹ ನೀತಿಗಳ ವಿರುದ್ಧ ಆರ್.ಎಸ್.ಎಸ್. ಎಂದೂ ದನಿ ಎತ್ತಿಲ್ಲ. ಯಾಕೆಂದರೆ ಅದು ಅದರ ಕಾರ್ಯಸೂಚಿಯ ಭಾಗವಾಗಿಲ್ಲ.
ಆರ್.ಎಸ್.ಎಸ್. ಪದಕೋಶದಲ್ಲಿ ಸ್ವದೇಶಿಗೆ ಏನು ಅರ್ಥ
ಆದಾಯದ ಅಸಮಾನತೆಗಳು, ಸರ್ಕಾರದ ಆರ್ಥಿಕ ನೀತಿಗಳಿಂದ ಉಂಟಾಗುವ ತೀವ್ರತರದ ತಾರತಮ್ಯಗಳ ಬಗ್ಗೆ ಆರ್.ಎಸ್.ಎಸ್. ಮಾತನಾಡಿದ್ದು ವಿರಳಾತಿವಿರಳ ಮಾತ್ರವಲ್ಲ ವಿಡಂಬನೆಗೆ ಆಹ್ವಾನಿಸುವಷ್ಟು ತೋರಿಕೆಯಾಗಿದೆ. ಆರ್.ಎಸ್.ಎಸ್. ಮುಖ್ಯಸ್ಥರು ತಮ್ಮ ವಾರ್ಷಿಕ ಭಾಷಣದಲ್ಲಿ ‘ಸ್ವದೇಶಿ’ ಪ್ರಸ್ತಾಪವನ್ನೂ ಮಾಡಿದ್ದಾರೆ. ಇದು ನಿಸ್ಸಂದೇಹವಾಗಿ ಹಳೆಯ ಹವ್ಯಾಸಕ್ಕೆ ಮರುಜೀವ ನೀಡುವ ಉದಾಹರಣೆಯಷ್ಟೆ. ತನ್ನ ‘ರಾಷ್ಟ್ರೀಯವಾದಿ’ ರುಜುವಾತುಗಳಿಗೆ ಹೊಳಪನ್ನು ನೀಡಲು ಸೂಕ್ತವೆಂದು ಕಂಡಾಗ ಲೀಲಾಜಾಲವಾಗಿ ಬಳಸುವ ‘ಸ್ವದೇಶಿ’ ಪದಕ್ಕೆ ನಿಜವಾದ ಅರ್ಥವೇನು ಎಂಬುದನ್ನು ಅದೇ ವಿವರಿಸಬೇಕಾಗಿದೆ.
ಆರ್.ಎಸ್.ಎಸ್. ಪದಕೋಶದಲ್ಲಿ ‘ಸ್ವದೇಶಿ’ ಎಂದರೆ ಸ್ವಾವಲಂಭನೆ ಎಂದೇ? ಇದು ಗಾಂಧಿ ಹೇಳಿದ ಮೌಲ್ಯಗಳಿಗಿಂತ ಹೇಗೆ ಭಿನ್ನವಾಗಿದೆ? ಅಥವಾ ಎಡಪಂಥೀಯರು ಮಂಡಿಸಿದ ಪರ್ಯಾಯ ಆಮದು ಚಿಂತನೆ ಅಥವಾ ಕೆಲವು ನಿರ್ದಿಷ್ಟ ಹಂತಗಳಲ್ಲಿ ಕಾಂಗ್ರೆಸ್ ಸರ್ಕಾರ ಮುಂದಿಟ್ಟ ವಿಚಾರಗಳಿಂದ ಹೇಗೆ ಬೇರೆಯಾಗಿದೆ?
ಜನರೊಂದಿಗೆ ಹಂಚಿಕೊಳ್ಳಲಾಗಿರುವ ಇತ್ತೀಚಿನ ಪ್ರಮುಖ ಪ್ರಶ್ನೆಗಳ ವಿಚಾರದಲ್ಲಿ ಆರ್.ಎಸ್.ಎಸ್. ವೇದಿಕೆಗಳಲ್ಲಿ ಯಾವುದೇ ಚರ್ಚೆ ಅಥವಾ ಸಂವಾದವಾಗಲಿ ನಡೆದಿಲ್ಲ. ಸಾಂವಿಧಾನಿಕ ಅಥವಾ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುವ ವಿಷಯಕ್ಕೆ ಬಂದಾಗಲೂ ಆರ್.ಎಸ್.ಎಸ್. ದಾಖಲೆ ಅದಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಯಾಕೆಂದರೆ ಅದರ ಮೂಲಭೂತ ತಿರುಳಿನಲ್ಲಿಯೇ ಅಹಿಂಸೆ ಕಲ್ಪನೆ ಅಡಗಿದೆ. ಇದರ ಅಪೂರ್ವವಾದ ಉದಾಹರಣೆಯನ್ನು 20ನೇ ಶತಮಾನದಲ್ಲಿ ಮಹಾತ್ಮ ಗಾಂಧಿ ಅವರಿಗಿಂತ ಶ್ರೇಷ್ಠರಾಗಿ ಇನ್ನೊಬ್ಬರನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಹಿಂದೂ ಬಲಪಂಥೀಯದ ಪ್ರಮುಖ ನಾಯಕರು ಗಾಂಧಿ ಅವರನ್ನು ಕೊಂದ ಗೋಡ್ಸೆಯನ್ನು ವಾಚಾಮಗೋಚರ ಕೊಂಡಾಡುತ್ತಿರುವುದನ್ನು ನೋಡುತ್ತೇವೆ. ಯಾಕೆಂದರೆ ಅವರ ಚಿಂತನೆಗಳು ವಿರೋಧಾಭಾಸದಿಂದ ಕೂಡಿದ್ದವು. ಹಿಂಸೆಯ ಉದ್ದೇಶದಿಂದ ಜನಸಮೂಹವನ್ನು ಒಂದುಗೂಡಿಸುವ ಕಲ್ಪನೆ ಆರ್.ಎಸ್.ಎಸ್.ಗೆ ತಿಳಿಯದೇ ಇರುವಂತಹುದಲ್ಲ.
ಆಪರೇಷನ್ ಸಿಂಧೂರ್-ವಿರೋಧಾಭಾಸದ ನಿಲುವು
ಇನ್ನು ಆಪರೇಷನ್ ಸಿಂಧೂರ್ ಕುರಿತು ಆರ್.ಎಸ್.ಎಸ್. ಮುಖ್ಯಸ್ಥರು ಈಗ ನೀಡುತ್ತಿರುವ ಶ್ಲಾಘನೆಯ ಮಾತು ನಾಲ್ಕು ದಿನಗಳ ಕಾರ್ಯಾಚರಣೆಯ ಸಂದರ್ಭದಲ್ಲಿ ಎಲ್ಲಿ ಹೋಗಿತ್ತು? ಮೇ ತಿಂಗಳಲ್ಲಿ ನಡೆದ ಆ ಅಲ್ಪಾವಧಿಯ ಹೋರಾಟವನ್ನು ಸ್ಥಗಿತಗೊಳಿಸಿದಾಗ (ಅಧಿಕೃತವಾಗಿ ‘ಸ್ಥಗಿತಗೊಳಿಸಲಾಗಿದೆ’ ಎಂದು ಕರೆಯಲಾಗಿದ್ದರೂ) ಆರ್.ಎಸ್.ಎಸ್. ನಾಯಕತ್ವವು ಮಾತನಾಡಿದ್ದೇ ಕಡಿಮೆ. ಆದರೆ ಹಾಗೆ ಸ್ಥಗಿತಗೊಳಿಸಿದ್ದಕ್ಕೆ ಕಾರ್ಯಕರ್ತರೇ ಕೋಪಗೊಂಡಂತೆ ಮತ್ತು ನಿರಾಶರಾದವರಂತೆ ಕಂಡುಬಂದರು. ಬಹುಷಃ ಅವರೇ ಸಾಮಾಜಿಕ ಮಾಧ್ಯಮದಲ್ಲಿ ಸರ್ಕಾರದ ವಿರುದ್ಧ ದ್ವೇಷವನ್ನು ತುಂಬುವ ಕೆಲಸ ಮಾಡಿದರು.
ಈ ‘ಸಂಸ್ಕಾರಿ’ (ವೈದಿಕ ವಿಧಿಗಳನ್ನು ಪಾಲಿಸುವವರು) ಮತ್ತು ದೇಶಭಕ್ತ ಮೋದಿ ಸರ್ಕಾರದ ನೇತೃತ್ವವನ್ನು ವಹಿಸಿರುವುದರಿಂದ ಭಾರತೀಯ ಪಡೆಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಓಕೆ)ವನ್ನು ಆಕ್ರಮಿಸಿಕೊಂಡು ಭಾರತದಲ್ಲಿ ಪಿಓಕೆ ವಿಲೀನಗೊಳ್ಳುವ ತನಕವೂ ಹೋರಾಡುತ್ತದೆ ಎಂದೇ ಭಾವಿಸಿದ್ದರು.
1948-49ರಿಂದಲೂ ಆರ್.ಎಸ್.ಎಸ್. ಮಾಡುತ್ತ ಬಂದ ಪ್ರಚಾರವಾದರೂ ಏನು? ಭಾರತೀಯ ಸೇನೆಯು ಈಗ ಪಿಓಕೆ ಆಗಿರುವ ಪ್ರದೇಶಗಳನ್ನು ಹಿಡಿದಿಟ್ಟುಕೊಳ್ಳಬಹುದಿತ್ತು ಅಥವಾ ವಶಕ್ಕೆ ತೆಗೆದುಕೊಳ್ಳಬಹುದಿತ್ತು, ಆದರೆ ಅಳ್ಳಕ ನೆಹರೂ ಸರ್ಕಾರವು ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು 1949ರ ಜನವರಿ ಒಂದರಿಂದ ಆರಂಭವಾಗುವ ವಿಶ್ವಸಂಸ್ಥೆ ಮಾರ್ಗದರ್ಶಿ ಕದನ ವಿರಾಮಕ್ಕೆ ಸಹಿಹಾಕಿತು ಎಂಬುದೇ ಅದರ ಪ್ರಚಾರವಾಗಿತ್ತು.
ಮತ್ತು ಈಗ ಮಾದಿ ಸರ್ಕಾರ ಮಾಡಿದ್ದೇನು? ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳುವ (ಮತ್ತು ಮರಳಿ ಪಡೆಯುವ) ಅಪೂರ್ವ ಅವಕಾಶವನ್ನು ಕೈಬಿಟ್ಟಿದೆ.
ನಿಷ್ಠಾವಂತರಿಗೆ ಇದು ಸಹಿಸಿಕೊಳ್ಳಲಾಗದ ಆಘಾತ ಮತ್ತು ದುಃಖ ಎರಡೂ ಜೊತೆಯಲ್ಲಿ ಸುತ್ತಿಕೊಂಡಂತಾಗಿದೆ. ಇದರ ಜೊತೆಗೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಯುದ್ಧ ನಿಲ್ಲಿಸಿದ್ದೇ ನಾನು’ ಎಂದು ಪದೇ ಪದೇ ಹೇಳಿಕೊಂಡಿದ್ದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುವಂತೆ ಮಾಡಿತು.
ಯುದ್ಧ ನಿಂತಿರುವ ವಿಷಯವನ್ನು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಅಧಿಕೃತವಾಗಿ ಘೋಷಿಸಿದಾಗ ಅದರ ನಿಜವಾದ ಪರಿಣಾಮವನ್ನು ಎದುರಿಸಬೇಕಾಯಿತು. ಸಾಮಾಜಿಕ ಮಾಧ್ಯಮದಲ್ಲಿ ಅವರ ಕುಟುಂಬದವರನ್ನು ಅವಮಾನಿಸುವ ಮತ್ತು ಬೆದರಿಕೆಯೊಡ್ಡಿದ ಬಗ್ಗೆ ವರದಿಯಾದವು.
ಕರ್ನಲ್ ಖುರೇಷಿಗೆ ಅವಮಾನವಾದಾಗ ಮೌನವೇಕೆ?
ಈ ಯುದ್ಧ ನಡೆಯುತ್ತಿದ್ದಾಗಲೇ ಟಿವಿಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದ ಸೇನಾ ವಕ್ತಾರರಾದ ಕರ್ನಲ್ ಸೊಫಿಯಾ ಖುರೇಷಿ ಅವರನ್ನು ಮಧ್ಯಪ್ರದೇಶದ ಹಿರಿಯ ಬಿಜೆಪಿ ನಾಯಕ ಹಾಗೂ ಸಚಿವ ವಿಜಯ್ ಶಾ ಅವರು ‘ಭಯೋತ್ಪಾದಕರ ಸಹೋದರಿ” ಎಂದು ಕರೆದರು. ಆಗ ಮೋದಿ ಸರ್ಕಾರ ವಿದೇಶಾಂಗ ಕಾರ್ಯದರ್ಶಿ ಅಥವಾ ಸೇನಾ ವಕ್ತಾರರನ್ನು ಸಮರ್ಥಿಸಿಕೊಳ್ಳಲು ಹೋಗಲೇ ಇಲ್ಲ.
ಸಾಮಾನ್ಯವಾಗಿ ನಿರರ್ಗಳವಾಗಿ ಮಾತನಾಡುವ ವಿದೇಶಾಂಗ ಸಚಿವರು ಗಂಟಲು ಕಟ್ಟಿದವರಂತೆ ಕಂಡುಬಂದರು. ಮೋದಿ ಅವರ ಸಣ್ಣ-ಪುಟ್ಟ ದೇಶೀಯ ವಿವಾದಗಳನ್ನೆಲ್ಲ ಎದುರಿಸುವ ವಾಚಾಳಿ ಗೃಹ ಸಚಿವರು ಕೂಡ ತುಟಿ ಪಿಟಕ್ಕೆನ್ನಲಿಲ್ಲ. ಪ್ರಧಾನಿಯವರಂತೂ ಗಂಭೀರ ಮೌನಕ್ಕೆ ಶರಣಾದರು.
ಆಪರೇಷನ್ ಸಿಂಧೂರ್ ಮತ್ತು ಅದರ ಪರಿಣಾಮಗಳ ನಿರ್ವಹಣೆಗಾಗಿ ‘ನಾಯಕತ್ವ’ವನ್ನು ಭಾಗವತ್ ಅವರು ಅತ್ಯಂತ ಧಾರಾಳತನದಿಂದ ಕೊಂಡಾಡಿದ್ದರ ಹಿನ್ನೆಲೆ ಇದೇ ಆಗಿದೆ. ಹಾಗಾಗಿ ಇದನ್ನು ಪ್ರಧಾನಿಯವರನ್ನು ಒಲಿಸಿಕೊಳ್ಳಲು ಮಾಡಿದ ಪ್ರಯತ್ನ ಎಂದು ಪರಿಗಣಿಸಿದರೆ ಅಚ್ಚರಿಯಿಲ್ಲ. ಸರಸಂಘಚಾಲಕರು, ಇತ್ತೀಚಿನ ಘಟನೆಗಳು “ನಮ್ಮ ನಂಬಿಕೆ ಮತ್ತು ಭರವಸೆ ಎರಡನ್ನೂ ಬಲಪಡಿಸಿವೆ” ಎಂದು ಹೇಳಿದ್ದನ್ನು ಕೂಡ ಇಂಡಿಯನ್ ಎಕ್ಸ್-ಪ್ರೆಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಇತ್ತೀಚಿನ ಘಟನೆಗಳು ಏನು ಹೇಳುತ್ತವೆ? ಬೆಲೆಗಳು ಇಳಿಯುತ್ತಿಲ್ಲ, ನಿರುದ್ಯೋಗ ಏರುತ್ತಲೇ ಇದೆ. ನಿರ್ದಿಷ್ಟ ಸಮುದಾಯಗಳ ಸದಸ್ಯರ ವಿರುದ್ಧ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಂದಾಗಿ ಸಾಮಾಜಿಕ ಬಿರುಕುಗಳು ಇನ್ನಷ್ಟು ಢಾಳಾಗಿ ಕಾಣುವಂತಾಗಿವೆ. 2024ರ ಆರಂಭದಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರ ಉದ್ಘಾಟನೆಯಾದ ಕೆಲವೇ ತಿಂಗಳುಗಳಲ್ಲಿ ಬಿಜೆಪಿ ಅಯೋಧ್ಯ ಸಂಸದೀಯ ಸ್ಥಾನವನ್ನು ಕಳೆದುಕೊಂಡಿತು. ಮೋದಿ ಅವರೇ ವಾರಾಣಸಿ ಸ್ಥಾನವನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದರು. ಬಿಜೆಪಿಯ ಲೋಕಸಭೆ ಸಂಖ್ಯೆಗಳು ಕೂಡ ತೀವ್ರವಾಗಿ ಕುಸಿದವು.
ಸಂಭ್ರಮಕ್ಕೇನು ಕಾರಣ?
ಹೀಗಿರುವಾಗ ಮೋದಿ ಅವರ ಜೊತೆ ರಾಜಿ ಮಾಡಿಕೊಳ್ಳಲು ಪ್ರಯತ್ನ ನಡೆಸಿರುವ ಆರ್.ಎಸ್.ಎಸ್. ಸಂಭ್ರಮಿಸುತ್ತಿರುವುದಾದರೂ ಏನನ್ನು? ಸ್ಪಷ್ಟವಾಗಿ ಹೇಳಬೇಕೆಂದರೆ ಅತಿಯಾಗಿ ಸಂಭ್ರಮಿಸುವಂತಹುದು ಏನೂ ಇಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ತೀವ್ರ ಕಳಪೆ ಪ್ರದರ್ಶನದ ಬಳಿಕ ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಗೆಲುವು ವೀಕ್ಷಕರನ್ನು ಅಚ್ಚರಿಗೆ ದೂಡಿತು. ಇದನ್ನು ಬಿಟ್ಟರೆ ಬೇರಿನ್ನೇನೂ ಇಲ್ಲ.
ಆರ್.ಎಸ್.ಎಸ್.ನ ಅಗ್ರ ನಾಯಕರು ಸದ್ಯಕ್ಕೆ ಮೋದಿ ಅವರೊಂದಿಗೆ ಘರ್ಷಣೆ ಬೇಡವೆಂದು ನಿರ್ಧರಿಸಿದ್ದಾದರೂ ಯಾಕೆ?
ಇಲ್ಲಿ ನಾವು ಒಂದು ರಚನಾತ್ಮಕವಾದ ಉತ್ತರವನ್ನು ನೋಡಬೇಕಾಗುತ್ತದೆ. ಬಿಜೆಪಿ ಸರ್ಕಾರವನ್ನು ನಡೆಸದೇ ಇದ್ದಾಗ ಆರ್.ಎಸ್.ಎಸ್. ಸಂಘಟನೆ ಹೆಚ್ಚು ವಿಮರ್ಶಾತ್ಮಕವಾಗಿ ಮಾತನಾಡುತ್ತದೆ ಎಂದನಿಸುತ್ತದೆ. ಆದರೆ ಮೋದಿ ಅವರಂತಹ ಆರ್.ಎಸ್.ಎಸ್. ನಾಯಕರಾಗಲಿ ಅಥವಾ ಅವರಿಗಿಂತ ಮೊದಲು ವಾಜಪೇಯಿ ಅವರು ಪ್ರಧಾನಿಯಾದಾಗ, ಅವರು ಸ್ವಯಂಚಾಲಿತವಾಗಿ ಭಾರತದ ಸಂವಿಧಾನದಿಂದ ಹೊರಹೊಮ್ಮುವ ಎಲ್ಲವನ್ನೂ ಒಳಗೊಳ್ಳುವ ಅತಿಯಾದ ಅಧಿಕಾರವನ್ನು ಪಡೆಯುತ್ತಾರೆ.
ಮೋದಿ ಅವರು ಮಾತ್ರವಲ್ಲದೆ ವಾಜಪೇಯಿ ಅವರು ಕೂಡ ತಮ್ಮ ಅಧಿಕಾರದ ಉಳಿವಿಗಾಗಿ ಅನೇಕ ಪಕ್ಷಗಳ ದಯೆಗೆ ಒಳಗಾಗಿದ್ದರು. ಆದರೂ ಅವರ ಸರ್ಕಾರ ಅಧಿಕಾರದ ಚುಕ್ಕಾಣಿಯನ್ನು ನಡೆಸುತ್ತಿದ್ದಾಗ ಆಗಿನ ಸಂಘ ಪರಿವಾರದ ಮುಖ್ಯಸ್ಥರಾದ ಕೆ.ಎಸ್.ಸುದರ್ಶನ್ ಅವರಿಗೆ ಅಷ್ಟೊಂದು ಪ್ರಾಮುಖ್ಯತೆ ಕೊಟ್ಟಿರಲಿಲ್ಲ.
ಆರ್.ಎಸ್.ಎಸ್. ಶಕ್ತಿ ಏನಿದ್ದರೂ ಅದರ ಬಲಿಷ್ಠ ಸ್ವಯಂಸೇವಕರ ಪಡೆ. ಈ ಪಡೆಗಳು ದೇಶದ ಬಹುತೇಕ ರಾಜ್ಯಗಳಲ್ಲಿ ಹರಡಿಕೊಂಡಿವೆ. ಅವರು ವರ್ಷದ ಪ್ರತಿದಿನವೂ ‘ಹಿಂದೂ ರಾಷ್ಟ್ರ’ಕ್ಕಾಗಿ ಸೈದ್ಧಾಂತಿಕ ಪ್ರಚಾರದಲ್ಲಿ ತೊಡಗಿದ್ದಾರೆ. ಜೊತೆಗೆ ಚುನಾವಣೆ ಬಂತೆಂದರೆ ಬಿಜೆಪಿಗೆ ಅತ್ಯಮೂಲ್ಯ ಸಂಪನ್ಮೂಲವಾಗಿದ್ದಾರೆ.
ಆದರೆ ದೇಶದ ಅತಿ ಮಹತ್ವದ ಸ್ಥಾನದಲ್ಲಿ ಕುಳಿತ ನರೇಂದ್ರ ಮೋದಿ ಅವರ ಹತ್ತು ವರ್ಷಗಳ ಅಧಿಕಾರಾವಧಿಯ ಬಳಿಕ ಈಗ ಈ ಕಾರ್ಯಕರ್ತರು ತಮ್ಮ ಜೀವನಾಧಾರಕ್ಕಾಗಿ ಪ್ರಧಾನಿ ಕಡೆಗೆ ನೋಡುತ್ತಿದ್ದಾರೆ ಎಂದು ಆರ್.ಎಸ್.ಎಸ್. ವಲಯಗಳಲ್ಲಿ ವ್ಯಾಪಕವಾಗಿ ನಂಬಲಾಗಿದೆ. ಆ ಕಾರಣದಿಂದ ನಾಗಪುರದ ನಾಯಕರ ಸದ್ಯದ ನಿಲುವಿನಲ್ಲಿ ದ್ವಂದ್ವ ಎದ್ದು ಕಾಣುತ್ತಿದೆ.
ಈಡೇರಿದ ಪರಿವಾರದ ಕಾರ್ಯಸೂಚಿಗಳು
ಈ ಎಲ್ಲ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ನಾಗಪುರದ ವಿರುದ್ಧ ಚೌಕಾಶಿ ಅಸ್ತ್ರವನ್ನು ಬಳಸುತ್ತಾರೆ. ರಾಮ ಮಂದಿರ ನಿರ್ಮಾಣ ಮತ್ತು 270ನೇ ವಿಧಿ ರದ್ದು ಗೊಳಿಸಿರುವುದು ಸೇರಿದಂತೆ ಆರ್.ಎಸ್.ಎಸ್.ನ ಅನೇಕ ದೀರ್ಘಕಾಲೀನ ಕಾರ್ಯಸೂಚಿಗಳನ್ನು ಈಡೇರಿಸಲು ಮೋದಿ ಅವರು ತಮ್ಮ ಅಧಿಕಾರವಧಿಯನ್ನು ಬಳಸಿಕೊಂಡಿದ್ದರಿಂದ ಅವರು ಗಣನೀಯವಾದ ಮನ್ನಣೆಯನ್ನು ಕೂಡ ಪಡೆದಿದ್ದಾರೆ.
ಮುಂಬರುವ ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎನ್.ಡಿ.ಎ ಉತ್ತಮ ಪ್ರದರ್ಶನವೇನಾದರೂ ನೀಡಿದರೆ ಪ್ರಧಾನಿಯವರು ನಾಗಪುರ ಸಂಬಂಧದ ವಿಷಯದಲ್ಲಿ ಇನ್ನಷ್ಟು ಶಕ್ತಿಯನ್ನು ಪಡೆಯಲಿದ್ದಾರೆ. ಇಲ್ಲದೇ ಹೋದರೆ ಭಾಗವತ್ ಅವರು ಮತ್ತಷ್ಟು ಬಲಗೊಳ್ಳುವ ಸಾಧ್ಯತೆಯಿದೆ.
ಕೆಲವೊಮ್ಮೆ ಆರ್.ಎಸ್.ಎಸ್. ಮಾತುಗಳನ್ನು ಯಥಾವತ್ತಾಗಿ ಪರಿಗಣಿಸಲಾಗುತ್ತದೆ. ನಾಯಕರು ಮಾಡಿದ ಭಾಷಣವು ಹಿಂದೂ ರಾಷ್ಟ್ರೀಯತೆಯ ನಿರೂಪಣೆಯನ್ನು ವೃದ್ಧಿಗೊಳಿಸಿ ಸಾಮಾನ್ಯ ಜನರ ಮೇಲೆ ಪ್ರಭಾವ ಬೀರುವ ಉದ್ದೇಶವನ್ನೂ ಹೊಂದಲಾಗಿದೆ ಎಂಬ ಅರಿವು ಸಾಮಾನ್ಯವಾಗಿ ಇರುವುದಿಲ್ಲ. ಇಂದಿನ ಸಮಾಜ ಮಾಧ್ಯಮದ ದಿನಗಳಲ್ಲಿ ಒಂದು ನಿರೀಕ್ಷಿತ ವಿಜಯದಶಮಿ ಭಾಷಣವನ್ನು ವೈಭವೀಕರಣ ಮಾಡುವ ಪಿಆರ್ ಕಸರತ್ತಾಗುತ್ತದೆ.
ಹಾಗಾಗಿ ಅದರ ಭಾಷೆಯನ್ನು ಎಚ್ಚರಿಕೆಯಿಂದ ವಿಶ್ಲೇಷಿಸುವ ಅಗತ್ಯವಿದೆ. ಕೆಲವು ಸಂದರ್ಭಗಳಲ್ಲಿ ಯಾವುದು ಇಲ್ಲವೋ ಅದೇ ಮುಖ್ಯ ವಿಷಯವಾಗುತ್ತದೆ. ಸಹಜವಾಗಿ ನಿಷ್ಠಾಂವರು ಇದನ್ನು ಕಂಡುಕೊಳ್ಳುವ ಛಾತಿ ಹೊಂದಿರುತ್ತಾರೆ. ಅವರು ರಾಜಕೀಯವನ್ನು ಚೆನ್ನಾಗಿ ಅರ್ಥಮಾಡಿಕೊಂಡು ಬಿಡುತ್ತಾರೆ. ಹಾಗಾಗಿ ಹೇಳಿರುವ ಮಾತುಗಳ ಬಗ್ಗೆ ಮುಕ್ತವಾಗಿ ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡಬಹುದು. ಅದು ಪರಿಸ್ಥಿತಿಯ ತುರ್ತು ಅಗತ್ಯಕ್ಕೆ ಅನುಗುಣವಾಗಿಯೂ ಸನ್ನಿವೇಶಗಳಿಗೆ ಸರಿಹೊಂದುವಂತೆಯೂ ಇರಬಹುದು.
ಒಂದು ಸಂಸ್ಥೆಯಾಗಿ ಆರ್.ಎಸ್.ಎಸ್. ಹಲವಾರು ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸಲು ಕಲಿತಿದೆ ಎಂಬುದು ಸ್ಪಷ್ಟ. ಒಂದು ನಿಷೇಧಿತ ಸಂಘಟನೆಯಾಗಿಯೂ ಕೂಡ. ಅದು ಅಗತ್ಯವೆನಿಸಿದಾಗ ಹೊಂದುಕೊಂಡು ಮೆಲ್ಲಗೆ ತೆವಳಿಕೊಂಡು ಮುಂದೆ ಸಾಗಲು ಅಥವಾ ಅಗತ್ಯವಿದ್ದಾಗ ಮೌನವಾಗಿರಲು ಮತ್ತು ನಂತರ ವೇಗವಾಗಿ ಮುನ್ನುಗ್ಗಲೂ ಕಲಿತಿದೆ. ತನ್ನದೇ ಶ್ರೇಣಿಯ ವ್ಯಕ್ತಿಯೊಬ್ಬರು ಪ್ರಧಾನಿ ಹುದ್ದೆಗೇರಿದಾಗ ತನ್ನ ವ್ಯವಹಾರಗಳನ್ನು ಹೇಗೆ ನಿಭಾಯಿಸಿಕೊಳ್ಳಬೇಕು ಎಂಬುದೂ ಅದಕ್ಕೆ ತಿಳಿದಿದೆ. ಅದು ಅಧಿಕಾರದ ಕೇಂದ್ರಗಳಿರಲಿ, ಒಳಗಿನ ಬಣಗಳಿರಲಿ ಅದನ್ನು ನಿಭಾಯಿಸುವುದು ಆರ್.ಎಸ್.ಎಸ್.ನ ಬೆಳವಣಿಗೆಯ ಭಾಗವೇ ಆಗಿದೆ.
ಇದಕ್ಕೆ ಹತ್ತಿರದ ಸಮೀಕರಣ ಮಾಡುವುದಾದರೆ ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿನ ಮುಸ್ಲಿಂ ಬ್ರದರಹುಡ್ (MB). ಧರ್ಮದಿಂದಲೇ ಪೋಷಿಸಲ್ಪಟ್ಟಿದೆ ಎಂದು ಭಾವಿಸಲಾದ ರಾಷ್ಟ್ರೀಯತೆಯು ಅವರ ಪ್ರಯತ್ನಗಳ ಮೂಲಭೂತ ಅಂಶವಾಗಿದೆ. ಆರ್.ಎಸ್.ಎಸ್. ಮತ್ತು ಎಂಬಿ ವಿಷಯದಲ್ಲಿ ಗಮನಾರ್ಹವಾದ ವೈಫಲ್ಯವೂ ಮತ್ತು ಯಶಸ್ಸುಗಳೂ ಇವೆ.
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಬಂದಂದಿನಿಂದ ಆರ್.ಎಸ್.ಎಸ್. ಸೈದ್ಧಾಂತಿಕ ಯಶಸ್ಸಿನ ಉನ್ನತ ಹಂತದಲ್ಲಿದೆ ಎಂದು ಗಟ್ಟಿಯಾಗಿ ಹೇಳಬಹುದು. ಮೋದಿ ಅವರು ಸ್ವತಃ ಆರ್.ಎಸ್.ಎಸ್. ಪ್ರಚಾರಕ್ ಅಥವಾ ಪೂರ್ಣಕಾಲಿಕ ಸ್ವಯಂಸೇವಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಕಾರಣ, ದಶಕಗಳಿಂದ ಪೋಷಿಸಿದ ಅದರ ಪ್ರೀತಿಯ ಕಾರ್ಯಸೂಚಿಗಳಲ್ಲಿ ಬಹುಪಾಲು ಈಡೇರಿದೆ. ಇಲ್ಲೊಂದು ಒಳನೋಟವೂ ಇದೆ. ಮೋದಿ ಅವರು ಆರ್.ಎಸ್.ಎಸ್. ನಾಯಕತ್ವಕ್ಕೆ ತಲೆಬಾಗದೆ ತಮಗೆ ಇಷ್ಟ ಎನಿಸಿದ್ದನ್ನು ಮಾಡಿ ಮುಗಿಸಿದ್ದಾರೆ. ಯಾಕೆಂದರೆ ಅವರು ತಮ್ಮ ಸಾಂಸ್ಥಿಕ ಶಕ್ತಿಯನ್ನು ಸಂಸತ್ತು ಮತ್ತು ಸಂವಿಧಾನದಿಂದ ಪಡೆಯುತ್ತಾರೆಯೇ ಹೊರತು ತಮ್ಮ ಹಿಂದಿನ ಭೂಗತ ಆಶ್ರಯದಾಣಗಳಿಂದ ಅಲ್ಲ.