ಮಾವೋವಾದಿಗಳ ಭದ್ರಕೋಟೆ ಪತನ ಸನ್ನಿಹಿತ: ನಕ್ಸಲರ ಅಬ್ಬರಕ್ಕೆ ಬಿತ್ತೇ ಪೂರ್ಣ ವಿರಾಮ?
ಮಾವೋವಾದಿಗಳು ತಮ್ಮ ಹಾದಿಯ ಕೊನೆಯ ಅಂಚಿನಲ್ಲಿ ಬಂದು ನಿಂತಿದ್ದಾರೆ. ಅದರ ಛಲಬಿಡದ ಸೈದ್ಧಾಂತಿಕ ನಿಲುವುಗಳು ಕುಸಿಯುತ್ತಿವೆ. ಸರ್ಕಾರ ಇಟ್ಟಿರುವ ಷರತ್ತು ಇಷ್ಟೇ; ಒಂದೇ ಶರಣಾಗತಿ ಇಲ್ಲವೇ ಸರ್ವನಾಶ.
ನಕ್ಸಲ್ ಎಂದೇ ಗುರುತಿಸಿಕೊಂಡಿರುವ ಭಾರತದ ಮಾವೋವಾದಿಗಳು ಈಗ ಅಳಿವು-ಉಳಿವಿಗಾಗಿ ಹೋರಾಟ ನಡೆಸಿದ್ದಾರೆ.
1967ರಷ್ಟು ಹಿಂದೆ ಕ್ರಾಂತಿಯ ಬೀಜವನ್ನು ಬಿತ್ತಿದ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ) ಇಂದು ಬಹಳ ದೊಡ್ಡ ತಿರುವಿನಲ್ಲಿ ಬಂದು ನಿಂತಿದೆ. ಈಗ ಅದರ ಮುಂದೆ ಇರುವ ಸಾಧ್ಯತೆಗಳು ಎರಡು; ಒಂದು ಮಿಲಿಟರಿ ಶಕ್ತಿಯಾಗಿ ಸಂಪೂರ್ಣ ನಾಶವಾಗುವುದು ಅಥವಾ ಎರಡು ಇಷ್ಟವಿಲ್ಲದೇ ಇದ್ದರೂ ಶರಣಾಗುವುದು.
“ಬಂದೂಕಿನ ನಳಿಕೆಯಿಂದ ರಾಜಕೀಯ ಶಕ್ತಿ ಹೊರಹೊಮ್ಮುತ್ತದೆ’ ಎಂಬ ಕುರುಡು ತತ್ವಕ್ಕೆ ಕಟ್ಟುಬಿದ್ದ ಭಾರತದ ಮಾವೋವಾದಿಗಳು ಇಂದು ಈ ಫಲಿತಾಂಶವನ್ನು ಎದುರಿಸುವಂತಾಗಿದೆ. ಇದು ಅವರನ್ನು ಕಾಡುತ್ತಿರುವ ನಿರಾಶಾದಾಯಕ ಭವಿಷ್ಯವಾಗಿದೆ.
ಮಾವೋವಾದಿಗಳ ಈ ಕರೆಯು ಚೀನಾ ಮತ್ತು ಇನ್ನಿತರ ಒಂದೆರಡು ರಾಷ್ಟ್ರಗಳಲ್ಲಿ ಯಶಸ್ವಿಯಾಗಿರಬಹುದು. ಆದರೆ ಬೇರೆಲ್ಲೂ ಅವರು ವಿಜಯದ ದಾರಿಯಲ್ಲಿ ಸಾಗಲು ಸಾಧ್ಯವಾಗಲಿಲ್ಲ.
ನಕ್ಸಲರ ದುರಂತವೆಂದರೆ ಅವರು ಚೀನಾದ ಹಿಂದಿನ ಅದೇ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಬೇರೂರಿದ್ದ ಒಂದು ತಂತ್ರವನ್ನು ದೋಷಪೂರಿತ ಆಗಿದ್ದರೂ ಕೂಡ ಉತ್ತೇಜನಕಾರಿಯಾದ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಭಾರತದಂತಹ ರಾಷ್ಟ್ರದಲ್ಲಿ ಅದನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದರು.
ವಿನಾಶಕಾರಿ ಹಂತದಲ್ಲಿ ಹೋರಾಟ
ಅಷ್ಟಾಗಿಯೂ ನಕ್ಸಲೀಯರು ತಮ್ಮ ಕಟ್ಟಕಡೆಯ ಭದ್ರಕೋಟೆಯಾದ ವಿಶಾಲವಾದ ಬಸ್ತರ್ ಪ್ರದೇಶದಲ್ಲಿ ಇಷ್ಟು ದಶಕಗಳ ಕಾಲ ಅಸ್ತಿತ್ವವನ್ನು ಕಾಯ್ದುಕೊಂಡು ಬಂದಿದ್ದರು. ಯಾಕೆಂದರೆ ಒಂದು ರಾಜ್ಯದ ಶಕ್ತಿಯು ಈಗಿನಂತೆ ಇಷ್ಟೊಂದು ಪ್ರಮಾಣದಲ್ಲಿ ಬಳಕೆಯಾಗಿರಲಿಲ್ಲ. ಇಂದು ಅದು ವಿನಾಶಕಾರಿ ಹಂತ ತಲುಪಿದೆ.
ಇದರೊಂದಿಗೆ ಜಾಗತಿಕವಾಗಿಯೂ ಮಾರ್ಕ್ಸ್-ವಾದಕ್ಕೆ ಹಿನ್ನಡೆ ಉಂಟಾಗಿದೆ. ಅಂತಿಮ ಪ್ರಯತ್ನವಾಗಿ ಮಾವೋವಾದಿಗಳು ಅಡಗಿಕೊಂಡಿದ್ದು ಬಸ್ತರ್ ಎಂಬ ಮಹಾ ಅರಣ್ಯ ಪ್ರದೇಶದಲ್ಲಿ. ಆದರೆ ಈಗ ಅಲ್ಲಿಂದಲೂ ಹಿಮ್ಮೆಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ಕಳೆದ ಐದು ದಶಕಗಳಿಗೂ ಹೆಚ್ಚು ಕಾಲದಿಂದ ನಡೆಸಿಕೊಂಡು ಬಂದ ಶಸ್ತ್ರಸಜ್ಜಿತ ಹೋರಾಟಕ್ಕೆ ಅಂತ್ಯಹಾಡಲು ಕಾಲ ಸನ್ನಿಹಿತವಾಗಿದೆ.
2014ರಲ್ಲಿ ಭಾರತೀಯ ಜನತಾ ಪಕ್ಷವು ರಾಷ್ಟ್ರ ಮಟ್ಟದಲ್ಲಿ ಅಧಿಕಾರಕ್ಕೆ ಬಂದಾಗ ಸಿಪಿಐ(ಮಾವೋವಾದಿ) ನಂಬಿದ್ದೇನೆಂದರೆ ಬಿಜೆಪಿ ಸರ್ಕಾರ ಬಹಳ ಕಾಲ ಉಳಿಯುವುದಿಲ್ಲ ಎಂದು. ಬಿಜೆಪಿ ಮುಂದಿನ ಚುನಾವಣೆಯಲ್ಲಿ ಸೋಲುವ ತನಕ ಉಗ್ರರು ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳಬೇಕು ಎಂಬುದು ಅವರ ಕಾರ್ಯತಂತ್ರವಾಗಿತ್ತು.
ಬಿಜೆಪಿಯ ಭರ್ಜರಿ ಪ್ರತಿರೋಧ
ಅವರ ಈ ಗ್ರಹಿಕೆ ಶುದ್ಧ ಮೂರ್ಖತನದ್ದು ಎಂಬುದು ಸಾಬೀತಾಗಿದೆ. ಬಿಜೆಪಿ ತನ್ನ ಚುನಾವಣಾ ದೀರ್ಘಾಯುಷ್ಯವನ್ನು ಸಾಬೀತುಪಡಿಸಿದ್ದು ಮಾತ್ರವಲ್ಲದೆ ಸತತವಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಗಳು ಎಂದಿಗೂ ಮಾಡದ ಕೆಲಸವನ್ನು ಮಾಡಿತು. ಅಷ್ಟು ಮಾತ್ರವಲ್ಲದೆ ಅದು ಮಾವೋವಾದಿಗಳ ವಿರುದ್ಧ ತೀವ್ರ ಸೈದ್ಧಾಂತಿಕ ಆಕ್ರಮಣವನ್ನು ನಡೆಸಿತು. ಅದು ಎಷ್ಟರ ಮಟ್ಟಿಗೆಂದರೆ ಪ್ರಜಾಪ್ರಭುತ್ವದ ವಿಶಾಲ ಕ್ಯಾನ್ವಾಸಿನಲ್ಲಿ ಮಾವೋವಾದಿಗಳನ್ನು ಒಂದು ರೋಗದಂತೆ ಕಾಣುವ ಹಾಗೆ ಮಾಡಿತು.
ಇಂತಹುದೊಂದು ಪ್ರಹಾರವನ್ನು ಮಾವೋವಾದಿಗಳು ನಿರೀಕ್ಷಿಸಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಆಗಮಿಸುವ ವರೆಗೂ ಬುದ್ಧಿಜೀವಿಗಳ ಅನುಕಂಪದ ಜೊತೆಗೇ ಸರ್ಕಾರದ ಕೆಲವು ವಿಭಾಗಗಳು ಕೂಡ ನಕ್ಸಲೀಯರ ನಿರಂತರ ಅಸ್ತಿತ್ವಕ್ಕೆ ಸಮರ್ಥನೆ ನೀಡಲು ಪ್ರಯತ್ನಿಸುತ್ತಿದ್ದವು.
ಭಾರತದಲ್ಲಿ ಎಲ್ಲಿಯ ತನಕ ಅಸಮಾನತೆ ಮತ್ತು ಬಡತನ ಇರುವುದೋ ಅಲ್ಲಿಯ ವರೆಗೆ ನಮ್ಮ ಸಿದ್ದಾಂತಗಳು ಜೀವಂತ ಇರುತ್ತವೆ ಎಂದು ನಕ್ಸಲೀಯರು ಗಟ್ಟಿಯಾಗಿ ನಂಬಿದ್ದರು. ಅದು ಎಷ್ಟೇ ಹಳತಾದರೂ ಅದರ ಬೆಂಬಲಕ್ಕೇನೂ ಧಕ್ಕೆ ಉಂಟಾಗುವುದಿಲ್ಲ, ಅದು ಎಂದಿಗೂ ಕಣ್ಮರೆಯಾಗುವುದಿಲ್ಲ ಎಂಬುದು ಅವರ ಅಚಲ ವಿಶ್ವಾಸವಾಗಿತ್ತು. ಅಚ್ಚರಿ ಎನ್ನುವಂತೆ ಒಂದು ಕಾಲದಲ್ಲಿ ಅವರ ವಿರುದ್ಧ ಹೋರಾಟ ಮಾಡಿದ ಕೆಲವರಲ್ಲಿಯೂ ಇದು ಪ್ರತಿಧ್ವನಿಸಿತ್ತು.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಕ್ಸಲೀಯರು ಒಂದು ಸಾಮಾಜಿಕ ಮನ್ನಣೆಯನ್ನು ಪಡೆದುಕೊಂಡರು. ಈ ವಿಷಯದಲ್ಲಿ ಇತರ ಬಂಡುಕೋರ ಗುಂಪುಗಳಿಗೆ ಆಗದೇ ಇದ್ದುದು ಇವರಿಂದ ಸಾಧ್ಯವಾಗಿತ್ತು.
ನಿಂತುಹೋದ ಸೈದ್ಧಾಂತಿಕ ಬೆಳವಣಿಗೆ
ಆದರೆ ವಾಸ್ತವದ ಸಂಗತಿ ಎಂದರೆ ನಕ್ಸಲೀಯರು ಬಹಳಷ್ಟು ಹಿಂದೆಯೇ ಸೈದ್ಧಾಂತಿಕವಾಗಿ ಮಾತ್ರವಲ್ಲದೆ ಉಳಿದೆಲ್ಲ ವಿಚಾರಗಳಲ್ಲಿ ಬೆಳವಣಿಗೆಯನ್ನು ನಿಲ್ಲಿಸಿಬಿಟ್ಟಿದ್ದರು. ಒಂದು ಕಾಲದಲ್ಲಿ ಮಾವೋವಾದಿಗಳಿಗೆ ಬೆಂಬಲವಾಗಿ ನಿಂತಿದ್ದ ಮಧ್ಯಮ ವರ್ಗದ ಮಂದಿ ಬೆನ್ನು ತಿರುಗಿಸಿದರು. ತಮ್ಮ ಬೆನ್ನೆಲುಬು ಎಂದುಕೊಂಡಿದ್ದ ಬಸ್ತರ್ ಪ್ರದೇಶದ ಬುಡಕಟ್ಟು ಜನಾಂಗದವರು ಕೂಡ ನಕ್ಸಲರು ದುರ್ಬಲರಾಗುತ್ತಿರುವುದನ್ನು ಬಹುಬೇಗ ಗಮನಿಸಿದರು ಮತ್ತು ನಕ್ಸಲರನ್ನು ನಿರ್ದಯವಾಗಿ ಹಣಿಯಲು ನಿರ್ಧಾರ ಮಾಡಿದ ಸರ್ಕಾರದ ಪರವಾಗಿ ಅವರು ನಿಂತರು.
ಬಸ್ತರ್ ಪ್ರದೇಶದಲ್ಲಿ ಈಗಲೂ ಇರಬಹುದಾದ ನಕ್ಸಲರು ಬಹುತೇಕ ಅವಿಭಜಿತ ಆಂಧ್ರ ಪ್ರದೇಶದಿಂದ ಬಂದವರು. ತೆಲಂಗಾಣದಲ್ಲಿ ಅವರಿಗೆ ಭಾರೀ ಹಿನ್ನಡೆಯಾದ ಕಾರಣಕ್ಕೆ ಅವರು ಸುಮಾರು 25 ವರ್ಷಗಳಷ್ಟು ಹಿಂದೆಯೇ ಬಸ್ತರ್ ದುರ್ಗಮ ಅರಣ್ಯದಲ್ಲಿ ಬಂದು ಬೀಡುಬಿಟ್ಟಿದ್ದರು.
ದಶಕಗಳ ಕಾಲ ಅಲ್ಲಿ ಬೀಡುಬಿಟ್ಟಿದ್ದರೂ ಪವಾಡಸದೃಶವಾಗಿ ಪಾರಾದರು. ಒಂದು ಕಾಲದಲ್ಲಿ ರಾಜ್ಯದೊಳಗೊಂದು ರಾಜ್ಯವನ್ನು ನಡೆಸಿದರು. ಕಾಂಗ್ರೆಸ್ ಸರ್ಕಾರಗಳು ಮಾವೋವಾದಿಗಳ ಬೆದರಿಕೆಯನ್ನು ಸಹಿಸಿಕೊಂಡವು. ಇದು ಬಹಳ ಕಾಲ ವಿಸ್ತರಿಸುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಈ ಕಾರಣದಿಂದ ನಮ್ಮನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದು ಮಾವೋವಾದಿಗಳ ಹುಚ್ಚು ನಂಬಿಕೆಯಾಗಿತ್ತು.
ಮುಖ್ಯವಾಹಿನಿಯ ಭಾರತೀಯ ಕಮ್ಯುನಿಸ್ಟರು ಪಶ್ಚಿಮ ಬಂಗಾಲ, ತ್ರಿಪುರ ಮತ್ತು ಕೇರಳದಿಂದ ಆಚೆಗೆ ಹೇಗೆ ಗುಣಾತ್ಮಕವಾಗಿ ಬೆಳೆಯಲು ಸಾಧ್ಯವಾಗಲಿಲ್ಲೋ ಹಾಗೆ, ಬಸ್ತರ್ ಬುಡಕಟ್ಟು ಪ್ರದೇಶದಲ್ಲಿ ಅದಕ್ಕೆ ಸ್ಪಷ್ಟವಾದ ಯಶಸ್ಸು ಸಿಕ್ಕಿತ್ತಾದರೂ ಮಾವೋವಾದಿಗಳು ಉಳಿದೆಲ್ಲೂ ಹೆಚ್ಚಿನ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ.
ಬೆಲೆಯಿಲ್ಲದ ಗೊಡ್ಡು ವಾದ
ಇಂದು ನಕ್ಸಲೀಯರನ್ನು ಮೂಲೋತ್ಪಾಟನೆ ಮಾಡಲು ಬಿಜೆಪಿ ಆಡಳಿತ ಟೊಂಕ ಕಟ್ಟಿ ನಿಂತುಬಿಟ್ಟಿದೆ. ಆದರೆ ಐದು ದಶಕಗಳ ನಮ್ಮ ಸಶಸ್ತ್ರ ಹೋರಾಟವನ್ನು ಕೊನೆಗೊಳಿಸುವುದು ಎಂದಿಗೂ ಸಾಧ್ಯವಿಲ್ಲ ಎಂಬ ಮಾತನ್ನೇ ಮಾವೋವಾದಿಗಳು ಇಂದಿಗೂ ಹೇಳುತ್ತಿದ್ದಾರೆ.
ಆದರೂ ಕೆಲವು ನಕ್ಸಲರು ದಶಕಗಳ ಇದನ್ನೇ ಮಾಡುತ್ತ ಕೊನೆಗೆ ಬೇಸತ್ತು ಪ್ರಜಾಪ್ರಭುತ್ವ ಮಾರ್ಗವನ್ನು ಅಳವಡಿಸಿಕೊಂಡರು. ಅವರನ್ನು ಸಿಪಿಐ-ಮಾವೋವಾದಿಗಳು ‘ಪ್ರತಿಗಾಮಿಗಳು’ ಮತ್ತು “ಕ್ರಾಂತಿ’ಗೆ ಬೆನ್ನು ಹಾಕಿದವರು ಎಂದು ಖಂಡಿಸಿದರು.
ಈಗ ಇತಿಹಾಸ ಒಂದು ಪೂರ್ತಿ ಸುತ್ತು ಹೊಡೆದಿದೆ.
ಮಲ್ಲೊಜುಲಾ ವೇಣುಗೋಪಾಲ ರಾವ್ ಅಲಿಯಾಸ್ ಸೋನು ಅವರು ಪಕ್ಷವನ್ನು ಉಳಿಸಲು ‘ಸಶಸ್ತ್ರ ಹೋರಾಟವನ್ನು ಕೊನೆಗೊಳಿಸಿ’ ಎಂದು ಸಾರ್ವಜನಿಕವಾಗಿ ಕರೆ ನೀಡಿದ್ದಾರೆ. ಕಳೆದ ಒಂದು ವರ್ಷಕ್ಕೂ ಅಧಿಕ ಕಾಲದಿಂದ ಈ ಹೇಳಿಕೆಯನ್ನು ನೀಡುತ್ತಿದ್ದರಾದರೂ, ಈ ಹೋರಾಟವನ್ನು ಶತಾಯಗತಾಯ ಬಿಡಲೊಲ್ಲದವರು ಅವರಿಗೆ ‘ದ್ರೋಹಿ’ ಎಂಬ ಹಣೆಪಟ್ಟಿ ಕಟ್ಟಿದ್ದಾರೆ.
“ಸಶಸ್ತ್ರ ಹೋರಾಟವನ್ನು ಕೊನೆಗೊಳಿಸುವಂತೆ ಕರೆ ನೀಡುತ್ತಿರುವ ಈ ಹೊತ್ತಿನಲ್ಲಿ ಸುದೀರ್ಘ ಕಾಲ ಮಾವೋವಾದಿಗಳ ಜೊತೆ ಹೋರಾಡಿದ ಜನರ ಕ್ಷಮೆಯನ್ನೂ ಕೇಳಲು ಬಯಸುತ್ತೇನೆ. ಬದಲಾಗುತ್ತಿರುವ ಸನ್ನಿವೇಶಗಳಿಗೆ ಅನುಗುಣವಾಗಿ ನಾವು ಬದಲಾಗೋಣ” ಎಂದು 70 ವರ್ಷದ ಹಿರಿಯ ನಾಯಕ ವೇಣುಗೋಪಾಲ ರಾವ್ ಅವರು ತಮ್ಮ ಭೂಗತ ನೆಲೆಯಿಂದ ಬರೆದಿದ್ದಾರೆ.
ಮುಗಿದ ಹೋರಾಟದ ಹಾದಿ
ವೇಣುಗೋಪಾಲ್ ರಾವ್ ಅವರಿಗೆ ನಾಯಕತ್ವದ ಮಟ್ಟದಲ್ಲಿ ಸಹವರ್ತಿ ಕಾಮ್ರೆಡ್ ಗಳ ಬೆಂಬಲ ಇದ್ದಿರಬಹುದು ಅಥವಾ ಇಲ್ಲದೇ ಇರಬಹುದು. ಆದರೆ ಮುಂದಿನ ದಾರಿ ಕೇವಲ ಕಠಿಣ ಮಾತ್ರವಲ್ಲ ಅದು ಮುಗಿದ ಅಧ್ಯಾಯ ಎಂಬುದು ಮಾವೋವಾದಿಗಳ ಪಾಲಿನ ಸ್ಪಷ್ಟ ಸೂಚನೆ.
ಹಿಂದಿನ ಕಾಲದಲ್ಲಿ ಹೋರಾಟದಲ್ಲಿ ಹಿನ್ನಡೆ ಉಂಟಾಗಿದ್ದರೆ ಮಾವೋವಾದಿಗಳು ತಮ್ಮನ್ನು ಸುಧಾರಿಸಿಕೊಳ್ಳುವ ಅಸ್ತ್ರವಾಗಿ ಸರ್ಕಾರದ ಜೊತೆ ಮಾತುಕತೆಗೆ ಕರೆಕೊಡುತ್ತಿದ್ದರು. ಆದರೆ ಬಿಜೆಪಿ ಸರ್ಕಾರದಲ್ಲಿ ಮಾತುಕತೆಗೆ ಜಾಗ ಇಲ್ಲದಂತಾಗಿದೆ. ಬಿಜೆಪಿ ಸರ್ಕಾರದ ನೀತಿ ಎಂದರೆ ನಕ್ಸಲೀಯರು ಒಂದೇ ಶರಣಾಗಬೇಕು, ಇಲ್ಲವಾದರೆ ಸರ್ವನಾಶಕ್ಕೆ ಸಿದ್ಧವಾಗಬೇಕು.
ಒಮ್ಮೆ ಹಿಂದಿರುಗಿ ನೋಡಿದರೆ 1960ರ ದಶಕದ ಉತ್ತರಾರ್ಧದಲ್ಲಿ ಪಶ್ಚಿಮ ಬಂಗಾಲದ ನಕ್ಸಲ್-ಬರಿ ಎಂಬ ಸಣ್ಣ ಹಳ್ಳಿಯಲ್ಲಿ ಈ ಚಳವಳಿ ಏಕಾಏಕಿ ರಾಜಕೀಯ ರಂಗದಲ್ಲಿ ಸದ್ದು ಮಾಡಲು ಶುರುಮಾಡಿದಾಗಲೂ ಮಾವೋವಾದಿ ದಂಗೆಗೆ ಭಾರತ ಸಿದ್ಧವಿರಲಿಲ್ಲ.
ಅಲ್ಲಿಂದ ಮುಂದಕ್ಕೆ ನಕ್ಸಲ್ ಚಳವಳಿಯು ದೇಶದ ಉದ್ದಗಲಕ್ಕೆ ಹರಡಿದರೂ ಕೂಡ ಅಂತಿಮವಾಗಿ ಅದು ಸೈದ್ಧಾಂತಿಕವಾಗಿ ಮತ್ತು ಸಾಂಸ್ಥಿಕವಾಗಿ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತ ಹೋಯಿತು. ಆದರೆ ಅದರ ಹಿಂದೆ ಚದುರಿದ ಗುಂಪುಗಳನ್ನು ಬಿಟ್ಟು ಹೋಯಿತು ಮತ್ತು ಆ ಗುಂಪುಗಳು ಒಂದೊಂದಾಗಿ ತಮ್ಮ ಶಸ್ತ್ರಾಸ್ತ್ರಗಳ ಮೇಲಿನ ಪ್ರೀತಿಯನ್ನು ತ್ಯಜಿಸುತ್ತ ಹೋದವು.
ಕಮರಿದ ಉಜ್ವಲ ಮನಸುಗಳು
ನಕ್ಸಲ್ ಚಳವಳಿಯನ್ನು ಬೆನ್ನಿಗೆ ಕಟ್ಟಿಕೊಂಡಿದ್ದರಿಂದ ನಮಗಾದ ಹಾನಿ ಅಷ್ಟಿಷ್ಟಲ್ಲ ಎಂಬುದು ಭಾರತದ ಮುಖ್ಯವಾಹಿನಿಯ ಎಡಪಕ್ಷಗಳ ವಾದ ಎಂಬುದು ಇನ್ನೊಂದು ಕಥೆ. ಈ ಚಳವಳಿಯು ಸಾವಿರಾರು ಜೀವಗಳನ್ನು ಕಸಿದುಕೊಂಡಿತು. ಅದರಲ್ಲಿ ಮಧ್ಯಮ ವರ್ಗಕ್ಕೆ ಸೇರಿದ ಉಜ್ವಲ ಮನಸ್ಸುಗಳೂ ಇದ್ದವು ಎಂಬುದನ್ನು ಮರೆಯಬಾರದು.
ಬಸ್ತರ್ ದಟ್ಟಾರಣ್ಯದ ಪ್ರದೇಶವು ನಕ್ಸಲರ ಕಟ್ಟಕಡೆಯ ಕೋಟೆಯಾಗಿ ಉಳಿದಿತ್ತು. ಅದೀಗ ಬಹುತೇಕ ಕುಸಿದಿದೆ. ಯಾವುದೇ ಗೊಂದಲ ಬೇಡ, ಅವರು ಈಗ ಅನುಭವಿಸುತ್ತಿರುವ ದುಸ್ಥಿತಿಗೆ ಮಾವೋವಾದಿಗಳೇ ನೇರ ಹೊಣೆ.
ಕ್ಯಾಪ್: ಕೆಂಪು ಕೋಟೆ ಒಡೆದು ಚೂರಾಗುತ್ತಿದೆ. ಬಿಜೆಪಿ ಸರ್ಕಾರದ ವಿರುದ್ಧ ಸೆಣಸಾಡಲು ನಿಂತಿರುವ ಸಿಪಿಐ ಮಾವೋವಾದಿಗಳು ತಮ್ಮ ಐದು ದಶಕಗಳ ಸಶಸ್ತ್ರ ಹೋರಾಟವನ್ನು ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ನಕ್ಸಲೀಯರನ್ನು ಬೇರುಸಹಿತ ಕಿತ್ತುಹಾಕಲು ಸರ್ಕಾರ ಟೊಂಕಕಟ್ಟಿದೆ.