ಕ್ರಿಕೆಟ್ ಹುಚ್ಚಿನ ದೇಶದಲ್ಲಿ ಮೆಸ್ಸಿ ಮೆರೆದ ಫುಟ್ಬಾಲ್ ಉನ್ಮಾದ: ಸಂಭ್ರಮದಲ್ಲಿ ಮಿಂದೆದ್ದ ಯುವಸಮೂಹ

ಕೋಲ್ಕತ್ತಾದಲ್ಲಿ ಎದುರಾದ ಗೊಂದಲಗಳ ಹೊರತಾಗಿಯೂ 'ದಿ ಗೋಟ್ ಟೂರ್' ಅತ್ಯಂತ ಯಶಸ್ವಿ ಮತ್ತು ಸ್ಪೂರ್ತಿದಾಯಕವಾಗಿತ್ತು ಹಾಗೂ ಇದು ಭಾರತೀಯ ಕ್ರೀಡಾ ಕ್ಷೇತ್ರದ ಹಲವು ಬದಲಾವಣೆಗಳಿಗೆ ಕಾರಣವಾಯಿತು.

Update: 2025-12-24 02:30 GMT
ಜೀವನದ ಮಹತ್ವಾಕಾಂಕ್ಷೆಯೊಂದು ಸಾಕ್ಷಾತ್ಕಾರಗೊಂಡ ಕ್ಷಣ. ಫುಟ್ಬಾಲಿನ ಜೀನಿಯಸ್ ಎಂದೇ ಖ್ಯಾತನಾಗಿರುವ ಮೆಸ್ಸಿಯನ್ನು ಕಾಣಲು ಈ ದೇಶದ ಯುವಜನತೆ ಮುಗಿಬಿದ್ದರು. ಮೊನ್ನೆ ಮೊನ್ನೆ ಮುಗಿದ GOAT (Greatest Of All Time) TOUR ಯುವಕರಿಗೆ ಅಪೂರ್ವ ಅವಕಾಶವನ್ನು ಒದಗಿಸಿಕೊಟ್ಟಿತು.

ಕೋಲ್ಕತ್ತಾ ಮೂಲದ ಶತಾದ್ರು ದತ್ತಾ ಅವರು ಆಯೋಜಿಸಿದ್ದ ಲಿಯೋನೆಲ್ ಮೆಸ್ಸಿಯವರ ಈ ಮೂರು ದಿನಗಳ ಭಾರತ ಪ್ರವಾಸ ಯುವಸಮುದಾಯದ ಅಪಾರ ಉತ್ಸಾಹಕ್ಕೆ ಸಾಕ್ಷಿಯಾಗಿತ್ತು. ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರೇ ಖುದ್ದಾಗಿ ಫುಟ್‌ಬಾಲ್ ಜೆರ್ಸಿ ಧರಿಸಿ ಬಾಲ್ ಕಿಕ್ ಮಾಡುವ ಮೂಲಕ ಸಂಭ್ರಮಿಸಿದ ಮೊದಲ ಕ್ರೀಡಾಕೂಟ ಇದಾಗಿದೆ.

ಕೇರಳ ಸರ್ಕಾರದ ವತಿಯಿಂದ ಆಯೋಜಿಸಲಾಗಿದ್ದ ಅರ್ಜೆಂಟೀನಾ ತಂಡದ ಫಿಫಾ ಮಾನ್ಯತೆ ಪಡೆದ ಸೌಹಾರ್ದ ಪಂದ್ಯವು ತಿಂಗಳುಗಳ ಸಿದ್ಧತೆ ಮತ್ತು ನಿರೀಕ್ಷೆಯ ಬಳಿಕವೂ ವಿಫಲವಾದ ಕೇವಲ ಒಂದು ತಿಂಗಳಲ್ಲೇ ಈ ಪ್ರವಾಸವನ್ನು ಆಯೋಜಿಸಲಾಗಿತ್ತು. ಕೊಚ್ಚಿಯ ಫುಟ್ಬಾಲ್ ಕ್ರೀಡಾಂಗಣವನ್ನು ನವೀಕರಿಸಲು ಸರ್ಕಾರವು ಆದೇಶ ನೀಡಿದ್ದರೂ ಆ ಪಂದ್ಯವು ರದ್ದಾಗಿತ್ತು.

ಸಿಟ್ಟಿಗೆದ್ದ ಅಭಿಮಾನಿಗಳು

ಮೆಸ್ಸಿ ಅವರ ಈ ಪ್ರವಾಸವು ಅವರ ಇಬ್ಬರು ಫುಟ್‌ಬಾಲ್ ಸ್ನೇಹಿತರು ಹಾಗೂ ಇಂಟರ್ ಮಿಯಾಮಿ ತಂಡದ ಸಹ ಆಟಗಾರರಾದ ಉರುಗ್ವೆಯ ಫಾರ್ವರ್ಡ್ ಆಟಗಾರ ಲೂಯಿಸ್ ಸೌರೇಜ್ ಮತ್ತು ಅರ್ಜೆಂಟೀನಾದ ರೊಡ್ರಿಗೋ ಡಿ ಪಾಲ್ ಅವರನ್ನು ಒಳಗೊಂಡಿತ್ತು. ಆದರೆ, ಭದ್ರತಾ ಭೀತಿಯಿಂದಾಗಿ ಮೆಸ್ಸಿ ಅವರು ಕೇವಲ 20 ನಿಮಿಷಗಳಲ್ಲೇ ಮೈದಾನದಿಂದ ನಿರ್ಗಮಿಸಿದಾಗ, ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನೆರೆದಿದ್ದ ಜನಸಮೂಹಕ್ಕೆ ನಿರಾಶೆಯಾಯಿತು. ಜನ ಸಿಟ್ಟಿಗೆದ್ದು ದಾಂಧಲೆ ನಡೆಸಿದರು. ಈ ಕಾರಣದಿಂದಾಗಿ ಮೆಸ್ಸಿ ಪ್ರವಾಸವು ನಕಾರಾತ್ಮಕ ಸುದ್ದಿಗಳ ಮೂಲಕ ಮುನ್ನೆಲೆಗೆ ಬಂದಿತು.

ಈ ಗೊಂದಲದ ಪರಿಣಾಮವಾಗಿ ಆಯೋಜಕರನ್ನು ಬಂಧಿಸಲಾಯಿತು ಮತ್ತು ಕ್ರೀಡಾ ಸಚಿವರು ರಾಜೀನಾಮೆ ನೀಡಬೇಕಾಯಿತು. ಸಾರ್ವಜನಿಕ ಆಸ್ತಿಗೆ ಉಂಟಾದ ಅಲ್ಪ ಪ್ರಮಾಣದ ಹಾನಿಗಾಗಿ ದತ್ತಾ ಅವರಿಗೆ 14 ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಯಿತು, ಇದು ಹಿಂದೆಂದೂ ಕಂಡಿರದ ಅತಿರೇಕದ ಆದೇಶವಾಗಿತ್ತು.

ಇಲ್ಲಿ ನಾವು ಮುಖ್ಯವಾಗಿ ಉಲ್ಲೇಖಿಸಬೇಕಾದ ವಿಷಯವೆಂದರೆ, ಯುವ ಫುಟ್‌ಬಾಲ್ ಮತ್ತು ಕ್ರೀಡಾ ಅಭಿಮಾನಿಗಳಿಗೆ ಮೆಸ್ಸಿಯನ್ನು ಕಣ್ಣು ತುಂಬಿಕೊಳ್ಳಲು ಸಿಕ್ಕ ಅದ್ಭುತ ಅವಕಾಶವಾಗಿತ್ತು. ಫುಟ್‌ಬಾಲ್ ಲೋಕದ ಈ ಪ್ರತಿಭಾವಂತ ಆಟಗಾರ ಕೇವಲ ಟೀವಿಯಲ್ಲಿ ಮ್ಯಾಜಿಕ್ ಮಾಡುವ ವ್ಯಕ್ತಿಯಲ್ಲ (ಹೆಚ್ಚಿನ ಭಾರತೀಯರು ಅವರನ್ನು ಟೀವಿಯಲ್ಲಿ ನೋಡಿಯೇ ಮಾರುಹೋಗಿದ್ದರು, 2011ರಲ್ಲಿ ಅವರು ಕೊಲ್ಕತ್ತಾದಲ್ಲಿ ಪಂದ್ಯವನ್ನಾಡಿದ್ದರು), ಬದಲಿಗೆ ಅವರು ನಮ್ಮೆದುರಿರುವ ಜೀವಂತ ಮತ್ತು ನೈಜ ವ್ಯಕ್ತಿ. ಇದನ್ನು ನೋಡಲು ಈ ಪ್ರವಾಸವು ದಾರಿಮಾಡಿ ಕೊಟ್ಟಿತು.

ಇತ್ತೀಚೆಗೆ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು, ಫ್ರಾನ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ದಿಗ್ವಿಜಯ ಸಾಧಿಸಿದಾಗ ಅವರು ಸೃಷ್ಟಿಸಿದ ಆ ಅದ್ಭುತ ಆಟವನ್ನು ಇಂದಿಗೂ ಜಗತ್ತಿನಾದ್ಯಂತ ಸ್ಮರಿಸಲಾಗುತ್ತದೆ.

ಆ ವ್ಯಕ್ತಿಯಲ್ಲಿ ಮತ್ತು ಆತನ ಸುತ್ತ ಹರಡಿಕೊಂಡಿರುವ ತರಾವರಿ ಕಥೆಗಳು ಹಾಗೂ ಅದ್ಭುತ ಕೌಶಲ್ಯಗಳಲ್ಲಿ, ಕ್ರೀಡಾ ಝಲಕ್ಕುಗಳು ಪ್ರತಿದಿನವೂ ಮರುಸೃಷ್ಟಿಯಾಗುತ್ತಿರುತ್ತವೆ. ಭಾರತದಲ್ಲಿ ದೊಡ್ಡ ಮಟ್ಟದ ಫುಟ್‌ಬಾಲ್ ಪಂದ್ಯಾವಳಿಗಳು ಎಂದಿಗೂ ನಡೆದಿಲ್ಲ ಎನ್ನುವುದು ಸತ್ಯ. ಜೊತೆಗೆ ಯಾವುದೇ ವಿಶ್ವಕಪ್ ತಾರೆ ತನ್ನ ಉತ್ತುಂಗದ ಕಾಲದಲ್ಲಿ ಈ ನೆಲದಲ್ಲಿ ಆಡಿಲ್ಲ. ಹಾಗಿದ್ದರೂ ಕ್ರಿಕೆಟ್ ಹುಚ್ಚಿನಲ್ಲಿಯೇ ಮಿಂದೇಳುವ ಮತ್ತು ಅತಿಯಾದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಮುಳುಗಿ ಹೋಗಿರುವ ಭಾರತವು, ಟಿವಿಯನ್ನು ಹೊರತುಪಡಿಸಿದರೆ ಅದು ತನ್ನ ಕಲ್ಪನಾ ಲೋಕದಲ್ಲಿ ಮಾತ್ರ ಫುಟ್‌ಬಾಲ್ ನ್ನು ಜೀವಂತ ಇರಿಸಿದೆ.

ನಮ್ಮದು ಅತಿ ಹೆಚ್ಚು ಸಂಖ್ಯೆಯ ಕ್ರಿಕೆಟ್ ಕ್ರೀಡಾಂಗಣಗಳನ್ನು ಹೊಂದಿರುವ ದೇಶ. ಇದು ವಿಶ್ವ ಫುಟ್ಬಾಲ್ ಶ್ರೇಯಾಂಕದಲ್ಲಿ 100ಕ್ಕಿಂತ ಕೆಳಗಿರುವುದರಿಂದಾಗಿ ಯಾವುದೇ ದೊಡ್ಡ ಫುಟ್ಬಾಲ್ ತಂಡಗಳು ಇಲ್ಲಿಗೆ ಭೇಟಿ ನೀಡುವುದಿಲ್ಲ. ಆದರೆ ಸಿಂಗಾಪುರ ಮತ್ತು ಥೈಲ್ಯಾಂಡ್ನಂತಹ ಅತ್ಯಂತ ಸಣ್ಣ ದೇಶಗಳು ತಮ್ಮ ಕ್ರೀಡಾ ಋತುವಿನ ಆರಂಭಿಕ ಪ್ರವಾಸದ ವೇಳೆ ಪ್ರೀಮಿಯರ್ ಲೀಗ್ ಕ್ಲಬ್ಗಳಿಗೆ ಆತಿಥ್ಯ ನೀಡಿವೆ. ದೊಡ್ಡ ಮಟ್ಟದ ಫುಟ್ಬಾಲ್ ಪಂದ್ಯಗಳಿಂದ ಭಾರತ ಸದಾ ದೂರವೇ ಉಳಿದಿರುವುದು ದಿಟ. ಇಷ್ಟೆಲ್ಲದರ ಹೊರತಾಗಿಯೂ ಯಾರಿಗೂ ತಿಳಿಯದಂತೆ ದೇಶದ ಒಳಗೆ ಫುಟ್ಬಾಲ್ ಕುರಿತಾದ ಭಾರೀ ಉನ್ಮಾದ ಸದಾ ಗರಿಗೆದರಿಕೊಂಡೇ ಇರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಉನ್ಮಾದವೇ ನೈಜ ಬಂಡವಾಳ

ಇಂತಹ ಫುಟ್ಬಾಲ್ ಉನ್ಮಾದವನ್ನೇ ಬಂಡವಾಳವಾಗಿಸಿಕೊಂಡಿದ್ದು ಮೆಸ್ಸಿ ಪ್ರವಾಸ. ಭಾರತದಲ್ಲಿ ಕನಿಷ್ಠ ಟಿಕೆಟ್ ದರ 7,000 ದಿಂದ 10,000 ರೂಪಾಯಿ ವರೆಗೆ ಇದ್ದರೂ, ಈ ಮಟ್ಟದ ಜನಸಾಗರವನ್ನು ಕಂಡ ಯಾವುದೇ ಕ್ರೀಡಾಕೂಟ ಈವರೆಗೆ ನಡೆದಿಲ್ಲ. ಇಷ್ಟೇ ಜನಸಂದಣಿಯನ್ನು ಕಾಣುವ ಐಪಿಎಲ್ ಪಂದ್ಯಗಳ ಕನಿಷ್ಠ ಟಿಕೆಟ್ ದರ ಕೇವಲ 500 ರೂಪಾಯಿ ಅಥವಾ ಆರಂಭಿಕ ಪಂದ್ಯಗಳಿಗೆ 250 ರೂ. ಇದ್ದರೆ ಹೆಚ್ಚು. ದೆಹಲಿಯ ಪ್ರಸಿದ್ಧ ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೆಸ್ಸಿಯನ್ನು ನೋಡಲು ನೆರೆದ ಜನರ ಸಂಖ್ಯೆ ಅಜಮಾಸು 25,000.

ವಿಶೇಷವೆಂದರೆ ಅದು ಯಾವುದೇ ಪಂದ್ಯವಾಗಿರಲಿಲ್ಲ, ಕೇವಲ ಚೆಂಡನ್ನು ಕಿಕ್ ಮಾಡುವ ಅಭ್ಯಾಸದ ಪ್ರದರ್ಶನವಾಗಿತ್ತು (ಸಾಮಾನ್ಯವಾಗಿ ರಾಕ್ ಮ್ಯೂಸಿಕ್ ಕಾರ್ಯಕ್ರಮಗಳಿಗೆ ಮಾತ್ರ ಈ ಮಟ್ಟದ ಟಿಕೆಟ್ಗಳು ಮಾರಾಟವಾಗುತ್ತವೆ).

ಟಿಕೆಟ್ ದರವು ದುಬಾರಿಯಾಗಿದ್ದರೂ ಕೂಡ ಈ ಕಾರ್ಯಕ್ರಮವನ್ನು ಹೆಚ್ಚು ಹಣಕ್ಕಾಗಿ ಖಾಸಗೀಕರಣಗೊಳಿಸುವ ಸಾಧ್ಯತೆಯೂ ಇದ್ದ ಸಂದರ್ಭದಲ್ಲಿ ಅದನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಯಿತು. ಮೆಸ್ಸಿ ಮತ್ತು ಅವರ ಸ್ನೇಹಿತರನ್ನು ಅಂಬಾನಿಯವರು ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾನೂನುಬದ್ಧಗೊಳ್ಳದ 'ವಂತಾರಾ' ಪ್ರಾಣಿಸಂಗ್ರಹಾಲಯಕ್ಕೆ ಕ್ಷಿಪ್ರ ಪ್ರವಾಸಕ್ಕಾಗಿ ಕರೆದೊಯ್ದದ್ದು, ಮೆಸ್ಸಿಯವರ ಜಾಗತಿಕ ಖ್ಯಾತಿ ಮತ್ತು ಗುರುತನ್ನು ಬಳಸಿಕೊಳ್ಳಲು ಖಾಸಗಿ ಸಂಪತ್ತು ಕಾತುರದಿಂದ ಕಾಯುತ್ತಿತ್ತು ಎಂಬುದಕ್ಕೆ ಸಾಕ್ಷಿ. ಮುಂಬೈನಲ್ಲಿ ಅತೀ ಶ್ರೀಮಂತ ಉದ್ಯಮಿಗಳು ಮತ್ತು ಬಾಲಿವುಡ್ ಮಂದಿಗಾಗಿ ಏರ್ಪಡಿಸಲಾಗಿದ್ದ ಭೋಜನಕೂಟ ಮತ್ತು ಫೋಟೋ ಕ್ಲಿಕ್ಕಿಸಿಕೊಳ್ಳುವ ಕಾರ್ಯಕ್ರಮಕ್ಕೆ ಒಬ್ಬ ವ್ಯಕ್ತಿಗೆ ನಿಗದಿಪಡಿಸಲಾಗಿದ್ದ ದರ 12 ಲಕ್ಷ ರೂಪಾಯಿ ಎಂದರೆ ಅದರ ಕ್ರೇಝ್ ಎಷ್ಟರ ಮಟ್ಟಿಗೆ ಎಂಬುದು ಸಾಬೀತಾಗುತ್ತದೆ.

ಹಣದ ಪೊಳ್ಳು ಪ್ರದರ್ಶನ

ಆದರೆ ಪ್ರಮುಖ ಕ್ರೀಡಾಪಟುಗಳು ಈ ಕಾರ್ಯಕ್ರಮವನ್ನು ಟೀಕಿಸಿದ್ದಾರೆ. ಒಲಿಂಪಿಕ್ ಚಾಂಪಿಯನ್ ಶೂಟರ್ ಅಭಿನವ್ ಬಿಂದ್ರಾ ಅವರು ಮೊದಲ ವಿರೋಧದ ಧ್ವನಿ ಎತ್ತಿ, ಇದೊಂದು ಹಣದ ವ್ಯರ್ಥ ಪ್ರದರ್ಶನ ಎಂದು ಕರೆದರು; ಆದರೂ ಇದರಲ್ಲಿ ಯಾವುದೇ ಸರ್ಕಾರಿ ಹಣ ಬಳಕೆಯಾಗಿರಲಿಲ್ಲ ಎನ್ನುವುದು ಬೇರೆ ಮಾತು. ಭಾರತದ ಕ್ರೀಡಾ ಸಂಸ್ಕೃತಿಯನ್ನು ಬಲಪಡಿಸುವ ಬದಲು, ಕೇವಲ ಸನಿಹ ನಿಂತು ಫೋಟೋ ತೆಗೆಸಿಕೊಳ್ಳಲು ಮತ್ತು ಭೇಟಿ ಮಾಡುವ ಕಾರ್ಯಕ್ರಮಗಳಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಪ್ರದರ್ಶನಗಳಿಂದ ನಾವು ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಪ್ರಶ್ನಿಸಿದ್ದಾರೆ.

ಕ್ರೀಡಾ ಪ್ರದರ್ಶನಗಳು ಯಾವುದೇ ಉದ್ದೇಶವನ್ನು ಪೂರೈಸುವುದಿಲ್ಲ ಎಂಬ ಕಟ್ಟುನಿಟ್ಟಿನ ದೃಷ್ಟಿಕೋನವು ಸತ್ಯಕ್ಕೆ ದೂರವಾಗಿದೆ. ಕ್ರೀಡೆ ಎಂಬುದು ಕೇವಲ ಸೋಲು, ಗೆಲುವು ಮತ್ತು ಸಾಧನೆಯ ಕಲ್ಪನೆಗಳನ್ನು ಪೋಷಿಸುವುದು ಮಾತ್ರವಲ್ಲದೆ, ಅದೊಂದು ಪ್ರದರ್ಶನ ಮತ್ತು ರಾಷ್ಟ್ರದ ಹೆಮ್ಮೆಯೂ ಹೌದು. ಸಾಧನೆಯ ಸ್ಫೂರ್ತಿಯನ್ನು ಜನರಲ್ಲಿ ಬೆಳೆಸುವಲ್ಲಿ ಕ್ರೀಡಾ ತಾರೆಗಳು ಬಹಳ ದೊಡ್ಡ ಪಾತ್ರ ನಿರ್ವಹಿಸುತ್ತ ಬಂದಿದ್ದಾರೆ.

ಈ ಅಂಕಣಕಾರರು ಕೂಡ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣಕ್ಕೆ ಲಗ್ಗೆ ಇಟ್ಟಿದ್ದ ಆ ಬೃಹತ್ ಜನಸಮೂಹದ ಭಾಗವಾಗಿದ್ದರು. ಆ ಹೊತ್ತಿಗೆ ಸಂಸತ್ತಿನ ಅಧಿವೇಶನ ನಡೆಯುತ್ತಿದ್ದರೂ ಈ ಜನಸ್ತೋಮ ಅಂದು ಮಧ್ಯಾಹ್ನ ಸೆಂಟ್ರಲ್ ದೆಹಲಿಯ ಸಂಚಾರವನ್ನೇ ಅಸ್ತವ್ಯಸ್ತಗೊಳಿಸಿತ್ತು. ಸಾಲಿನಲ್ಲಿ ನಿಂತಿದ್ದ ಹೆಚ್ಚಿನವರು ವಿದ್ಯಾರ್ಥಿಗಳು ಮತ್ತು ಕೆಲಸಕ್ಕೆ ಚಕ್ಕರ್ ಹೊಡೆದು ಬಂದಿದ್ದರು. ದೆಹಲಿ ವಿಶ್ವವಿದ್ಯಾಲಯದ ಫಿಲಾಸಫಿ ಆನರ್ಸ್ ವಿದ್ಯಾರ್ಥಿ ಇದಕ್ಕೆ ಪಕ್ಕಾ ಸಾಕ್ಷಿ. ಆತ ಕ್ಯಾಂಪಸ್‌ನಿಂದ ಸುಮಾರು 8 ಕಿ.ಮೀ ದೂರದಲ್ಲಿದ್ದ ಮೆಸ್ಸಿ ಕಾರ್ಯಕ್ರಮದ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗಲು ಪರೀಕ್ಷಾ ಹಾಲ್‌ನಲ್ಲಿ ಕೇವಲ ಎರಡು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ ಹೊರಬಿದ್ದಿದ್ದ. ಕ್ಲಾಸ್ ಟೆಸ್ಟ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವುದರಿಂದ ಈ ಪರೀಕ್ಷೆ ಅಷ್ಟೇನೂ ಮುಖ್ಯವಲ್ಲ ಎಂದು ಆತ ಹೇಳಿದ್ದು ಈ ದೇಶದ ಯುವಜನರಲ್ಲಿ ಇದ್ದ ಫುಟ್ಬಾಲ್ ಉನ್ಮಾದಕ್ಕೆ ಸಾಕ್ಷಿಯಾಗಿತ್ತು.

ಏಳು ಸಾವಿರ ಎಂಬ ಯಕಶ್ಚಿತ್ ಶುಲ್ಕ!

ಅದೇ ರೀತಿ ಪಂಜಾಬಿನ ಸಂಗ್ರೂರ್ ಉಕ್ಕಿನ ಕಾರ್ಖಾನೆಯ ಕಾರ್ಮಿಕನೊಬ್ಬನ ಮಾತನ್ನು ದಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ಉಲ್ಲೇಖಿಸಿದೆ; ಆತ ಹಿಂದಿನ ದಿನ ರಾತ್ರಿ 9 ಗಂಟೆಗೆ ತನ್ನ ಕಠಿಣ ಕೆಲಸದ ಶಿಫ್ಟ್ ಮುಗಿಸಿ, ಮಧ್ಯರಾತ್ರಿ ಹೊರಡುವ ರೈಲು ಹತ್ತಿದ್ದ. ಅದು ಮಧ್ಯಾಹ್ನ 1:30ಕ್ಕೆ ದೆಹಲಿ ತಲುಪಿತ್ತು. ಅನಿವಾರ್ಯ ಕಾರಣಗಳಿಂದ ವಿಳಂಬವಾಗಿದ್ದ ಆ ಕಾರ್ಯಕ್ರಮವು ಸರಿಯಾಗಿ ಅದೇ ಸಮಯಕ್ಕೆ ಆರಂಭವಾಗಬೇಕಿತ್ತು. ‘ನಾನು ಖರ್ಚು ಮಾಡಿದ 7,000 ರೂಪಾಯಿ ನಿಜಕ್ಕೂ ಸಾರ್ಥಕವಾಗಿದೆ, ಮೆಸ್ಸಿಯನ್ನು ನೋಡುವುದು ನನ್ನ ಜೀವಮಾನದ ಕನಸಾಗಿತ್ತು,’ ಎಂದು ಆತ ಹೇಳಿದ್ದಾನೆ.

ಸಮಾಜದ ಅಂಚಿನಲ್ಲಿ ಬದುಕುತ್ತಿರುವ ಈ ಉಕ್ಕಿನ ಕಾರ್ಖಾನೆಯ ಕಾರ್ಮಿಕನಂತಹ ಬಡ ಮಂದಿಗೆ, ಇಂತಹ ಬೃಹತ್ ಪ್ರದರ್ಶನದ ಭಾಗವಾಗುವುದು ಎಂದರೆ ದೇಶದ ಕೇಂದ್ರಬಿಂದುವಿನ ಭಾಗವಾಗುವುದು ಎಂದರ್ಥ. ಅಂದರೆ ಎಲ್ಲಿ ಬೃಹತ್ ವಿದ್ಯಮಾನಗಳು ಸಂಭವಿಸುತ್ತವೆಯೋ ಅದರಲ್ಲಿ ತಾವೂ ಇದ್ದೇವೆ ಎಂದು ಹೆಮ್ಮೆಯಿಂದ ಅವರು ಎದೆಯುಬ್ಬಿಸುತ್ತಾರೆ. ಇವರಲ್ಲಿ ಅನೇಕ ಮಂದಿಗೆ ಆ ದುಬಾರಿ ಟಿಕೆಟ್ ದರವೇನು ದೊಡ್ಡ ವಿಷಯವೇ ಆಗಿರಲಿಲ್ಲ. ಜಾಗತಿಕವಾಗಿ ಚರ್ಚೆಗೆ ಗ್ರಾಸವಾಗಿದ್ದ ಈ ಕಾರ್ಯಕ್ರಮದ ಭಾಗವಾಗಲು ಅದು ಅವರಿಗೆ ಸಿಕ್ಕ ಅವಕಾಶ ಎಂಬುದು ಒಂದು ಕಡೆಯಾದರೆ, ಇಂತಹ ಕಾರ್ಯಕ್ರಮಗಳು ತಾವು ಕೂಡ ಈ ದೇಶದ ಒಂದು ದೊಡ್ಡ ಸಮೂಹದ ಭಾಗವೇ ಹೊರತು ಕೇವಲ ಸಮಾಜದ ಅಂಚಿನಲ್ಲಿ ಬಿದ್ದು ಸಾಯುವವರಲ್ಲ ಎಂಬ ನಂಬಿಕೆ ಮೂಡಿಸುತ್ತವೆ. ಆ ಸಾವು ಕಾರ್ಖಾನೆಯ ಕುಲುಮೆಯ ಶಾಖದಿಂದಲೇ ಆಗಿರಲಿ ಅಥವಾ ಗಣ್ಯರ ತುಳಿತದಿಂದಲೇ ಆಗಿರಲಿ, ಅಂತಹ ಅಸಹಾಯಕತೆಯ ನಡುವೆ ಅದು ಅವರಿಗೆ ತಮ್ಮ ಅಸ್ತಿತ್ವದ ಭರವಸೆಯನ್ನು ಅರಳಿಸುತ್ತದೆ.

ಒಂದು ಕ್ರೀಡಾಂಗಣವು ಯಾವತ್ತೂ ಒಂದು ನಗರ ಕೇಂದ್ರಿತ ವಿದ್ಯಮಾನ. ಅದು ಬೆಳೆಯುತ್ತಿರುವ ಉಪನಗರಗಳಲ್ಲಿ ನೆಲೆಸಿದ್ದರೂ ಅಲ್ಲಿ ಒಬ್ಬ ಅಧಿಕೃತ ವೀಕ್ಷಕನಾಗುವುದು ಎಂದರೆ ಒಂದು ಚಲನಶೀಲ ಜಗತ್ತನ್ನು ಕಣ್ಣಾರೆ ನೋಡುವುದು ಎಂದರ್ಥ. ಅಂತಹ ಉನ್ಮಾದ ಮತ್ತು ಸಂಭ್ರಮದ ಕ್ಷಣಗಳಲ್ಲಿ, ಯಾವುದೋ ಒಂದು ದಿನ ಅದೃಷ್ಟದ ದಾಳವು ತನ್ನ ಪರವಾಗಿ ಉರುಳಬಹುದು ಎಂಬ ಭರವಸೆಯಲ್ಲಿ ಬದುಕುವ ಯುವಕನಿಗೆ, ಆ ಕ್ರೀಡಾಂಗಣ ಒಂದು 'ಪ್ರಾರ್ಥನಾ ಮಂದಿರ'ಕ್ಕೆ ಸಮ.

ಇಲ್ಲಿ ಇರುವುದು ಒಬ್ಬನೇ ದೇವರು, ಒಂದೇ ಬಯಕೆ ಮತ್ತು ಒಂದೇ ಪ್ರಾರ್ಥನೆ. ಆಟದ ಮೇಲೆ ಅಥವಾ ಆ ವ್ಯಕ್ತಿಯ ಮೇಲಿರುವ ಪ್ರೀತಿ. ಅದಕ್ಕೆ ಎದುರಾಗುವ ಪ್ರತಿಯೊಂದು ಅಡೆತಡೆಗಳು ತೀರಾ ನಗಣ್ಯ.

ಹಾಗಾಗಿ, ಅಂದು ಮೆಸ್ಸಿಯನ್ನು ನೋಡಲು ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಬಂದಿದ್ದ ಭಾರತದ ಒಂದು ಲಕ್ಷಕ್ಕೂ ಅಧಿಕ ಮಂದಿ ಯುವಕರಿಗೆ, ಮೆಸ್ಸಿ ಮತ್ತು ಅವರ ಆ ಸಪೂರ ದೇಹದ ಮೇಲೆ ಹೊತ್ತು ನಿಂತಿರುವ ಹತ್ತಾರು ಆಶೋತ್ತರಗಳು ದೈವತ್ವದಂತೆ ಕಂಡಿದ್ದರೆ ಅಚ್ಚರಿಯೇನೂ ಇಲ್ಲ. ಅಂತಹ ಒಬ್ಬ ವ್ಯಕ್ತಿಯ ಅಥವಾ ಆರಾಧ್ಯ ದೈವದ ಸನಿಹದಲ್ಲಿ ನಿಂತು ಬೀಗುವುದೆಂದರೆ ಅವರಿಗೆ ಜೀವನದ ಮಹತ್ವಾಕಾಂಕ್ಷೆಯೊಂದು ಸಾಕ್ಷಾತ್ಕಾರವಾದಂತಿತ್ತು.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Tags:    

Similar News