
25ಸಾವಿರ ಕೊಟ್ರೂ ಮೆಸ್ಸಿ ಕಾಣಲೇ ಇಲ್ಲ... ರೊಚ್ಚಿಗೆದ್ದ ಫ್ಯಾನ್ಸ್; ಸ್ಟೇಡಿಯಂ ಧ್ವಂಸ
ಉದ್ರಿಕ್ತ ಮೆಸ್ಸಿ ಅಭಿಮಾನಿಗಳು ಇಡೀ ಸ್ಟೇಡಿಯಂ ಅನ್ನೇ ಪುಡಿಗಟ್ಟಿದ್ದಾರೆ. ಸರಿಯಾಗಿ ಮೆಸ್ಸಿಯನ್ನು ನೋಡಲು ಆಗಲಿಲ್ಲವೆಂದು ಕೋಪಗೊಂಡು ಬಾಟಲಿಗಳನ್ನು ಎಸೆದು, ಕುರ್ಚಿಯನ್ನು ಪುಡಿಗಟ್ಟಿ ದಾಂಧಲೆ ಎಬ್ಬಿಸಿದ್ದಾರೆ.
ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಫುಟ್‌ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಇಂದು ಕೋಲ್ಕತ್ತಾಕ್ಕೆ ಬಂದಿಳಿದಿದ್ದಾರೆ. ನೆಚ್ಚಿನ ಆಟಗಾರನನ್ನು ಕಣ್ತುಂಬಿಕೊಳ್ಳಲು ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಅದಕ್ಕಾಗಿಯೇ ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಬೃಹತ್ ಕಾರ್ಯಕ್ರಮವನ್ನೇ ಆಯೋಜಿಸಲಾಗಿತ್ತು. ಆದರೆ ಇದೀಗ ಉದ್ರಿಕ್ತ ಮೆಸ್ಸಿ ಅಭಿಮಾನಿಗಳು ಇಡೀ ಸ್ಟೇಡಿಯಂ ಅನ್ನೇ ಪುಡಿಗಟ್ಟಿದ್ದಾರೆ. ನೆಚ್ಚಿನ ಆಟಗಾರನನ್ನು ಕಾಣಬೇಕು ಎಂದು ಕಾದುಕುಳಿತಿದ್ದ ಅಭಿಮಾನಿಗಳು ಮೆಸ್ಸಿಯನ್ನು ನೋಡಲು ಆಗಲಿಲ್ಲವೆಂದು ಕೋಪಗೊಂಡು ಬಾಟಲಿಗಳನ್ನು ಎಸೆದು, ಕುರ್ಚಿಯನ್ನು ಪುಡಿಗಟ್ಟಿ ದಾಂಧಲೆ ಎಬ್ಬಿಸಿದ್ದಾರೆ.
ಅಷ್ಟಕ್ಕೂ ನಡೆದಿದ್ದೇನು?
ಕೋಲ್ಕತ್ತಾದ ವಿವೇಕಾನಂದ ಯುವಭಾರತಿ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗಾಗಿಯೇ ಮೆಸ್ಸಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಒಂದೆರಡಲ್ಲ 5,000 ರೂ.ಗಳಿಂದ 25,000 ರೂ.ಗಳವರೆಗಿನ ಭಾರಿ ಮೊತ್ತದ ಟಿಕೆಟ್ ಖರೀದಿಸಿ ಅಭಿಮಾನಿಗಳು ಬಂದಿದ್ದರು. ಆದರೆ ಅಭಿಮಾನಿಗಳಿಗೆ ಪುಟ್ಬಾಲ್ ದಿಗ್ಗಜನನ್ನು ಸರಿಯಾಗಿ ನೋಡಲು ಆಗಲೇ ಇಲ್ಲ ಎಂದು ಎಂಬ ಆರೋಪ ಕೇಳಿ ಬಂದಿದೆ. ಮೆಸ್ಸಿ ಬಂದಾಗ ಅವರ ಸುತ್ತಲೂ ಜನ ಸುತ್ತುವರಿದಿದ್ದರು. ಹೀಗಾಗಿ ಅಭಿಮಾನಿಗಳಿಗೆ ಅವರನ್ನು ನೋಡಲು ಸಾಧ್ಯವಾಗಲೇ ಇಲ್ಲ. ಇದರಿಂದ ಅಭಿಮಾನಿಗಳು ಹತಾಶೆಯಿಂದ ಬಾಟಲಿಗಳನ್ನು ಎಸೆದು ಹೋರ್ಡಿಂಗ್‌ಗಳನ್ನು ಹಾನಿಗೊಳಿಸಿದ್ದಾರೆ.
10ನಿಮಿಷಕ್ಕೆ ಸ್ಟೇಡಿಯಂ ಬಿಟ್ಟು ಹೋದ ಮೆಸ್ಸಿ
ಇನ್ನು ಮೆಸ್ಸಿ ಕಾರ್ಯಕ್ರಮ ಕೇವಲ 10ನಿಮಿಷಕ್ಕೆ ಮುಕ್ತಾಯಗೊಂಡಿತ್ತು. ಅಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿರುವಾಗ ಕನಿಷ್ಟ ಅರ್ಧಗಂಟೆಯೂ ಮೆಸ್ಸಿ ಕಾರ್ಯಕ್ರಮದಲ್ಲಿರಲಿಲ್ಲ. ವಿಶೇಷ ಕಾರ್ಯಕ್ರಮಕ್ಕಾಗಿ ಕೋಲ್ಕತ್ತಾಗೆ ಆಗಮಿಸಿದ್ದ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲೂ ಸಾಧ್ಯವಾಗಲಿಲ್ಲ. ಗೊಂದಲದ ನಡುವೆಯೇ ಕಾರ್ಯಕ್ರಮವನ್ನು ಮೊಟಕುಗೊಳಿಸಲಾಗಿತ್ತು. ಇನ್ನು ಮೆಸ್ಸಿ ಮೈದಾನದ ಟನೆಲ್‌ನಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪಿತು.
ಬಾಟಲಿ, ಕುರ್ಚಿ ಎಸೆದು ಆಕ್ರೋಶ
ಮೆಸ್ಸಿ ಕಾರ್ಯಕ್ರಮದಿಂದ ತೆರಳುತ್ತಿದ್ದಂತೆ ದಾಂಧಲೆ ಶುರುವಿಟ್ಟುಕೊಂಡ ಅಭಿಮಾನಿಗಳು ಕೋಪದಿಂದ ಆಟದ ಪ್ರದೇಶಕ್ಕೆ ಬಾಟಲಿಗಳು ಮತ್ತು ಕುರ್ಚಿಗಳನ್ನು ಎಸೆಯುವುದರು. ಹಲವಾರು ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ಕಾರ್ಯಕ್ರಮಕ್ಕಾಗಿ ಮಾಡಿದ್ದ ಕ್ಯಾನೊಪಿಗಳನ್ನು ಧ್ವಂಸಗೊಳಿಸಿದರು. ಮೆಸ್ಸಿಯ ಭೇಟಿಯಲ್ಲಿ ಸೆಲೆಬ್ರಿಟಿಗಳ ಸಂವಹನವೇ ಹೆಚ್ಚಾಗಿದ್ದು, ಅಭಿಮಾನಿಗಳನ್ನು ಬದಿಗಿಟ್ಟಿದ್ದಾರೆ ಎಂದು ಆರೋಪಿಸಿ ಅಭಿಮಾನಿಗಳ ಒಂದು ವರ್ಗ ಬಹಿರಂಗವಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿತು.

