ಬಿಹಾರದ ಸಮ್ಮಿಶ್ರ ರಾಜಕೀಯದ ಜಟಿಲ ಸಮೀಕರಣ: ಇಲ್ಲಿ ಯಾರೂ ಮುಖ್ಯರಲ್ಲ, ಅಮುಖ್ಯರೂ...

ಬಿಹಾರ ಚುನಾವಣಾ ಆಖಾಡ ಸಜ್ಜಾಗಿದೆ. ಒಂದರ ಹಿಂದೆ ಒಂದರಂತೆ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ದಂಡೆತ್ತಿ ಬರುತ್ತಿವೆ. ಹೊಸಬರೂ ಒಂದು ಕೈ ನೋಡಿಬಿಡುವ ಉಮೇದಿನಲ್ಲಿದ್ದಾರೆ.

Update: 2025-10-14 03:41 GMT
ನಿರ್ಣಾಯಕ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಬಿಹಾರ ರಾಜಕೀಯದ ಎರಡು ಪ್ರಮುಖ ಮಿತ್ರಕೂಟದ ನೇತೃತ್ವ ವಹಿಸಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಆರ್.ಜೆ.ಡಿ.ಯ ತೇಜಸ್ವಿ ಯಾದವ್.

ದೇಶದ ಹಿಂದಿ ಭಾಷೆ ಮಾತನಾಡುವ ಪ್ರಾಂತ್ಯದಲ್ಲಿ ಏಕ-ಪಕ್ಷದ ಪ್ರಾಬಲ್ಯ ಹೊಂದಿದ್ದರೆ ಬಿಹಾರ ಮಾತ್ರ ಅದಕ್ಕೆ ಅಪವಾದವಾಗಿದೆ. ಇಲ್ಲಿ ಹಿಂದುತ್ವದ ಪ್ರಭಾವವನ್ನು ಮೀರಿಸುವ ಹಾಗೆ ಜಾತಿ ರಾಜಕೀಯವಿದೆ. ಸಮ್ಮಿಶ್ರ ಸರ್ಕಾರವು ಸುದೀರ್ಘ ಕಾಲದಿಂದ ಮಾದರಿಯಾಗಿಯೇ ಉಳಿದಿದೆ.

ಬಿಹಾರ ವಿಧಾನಸಭೆಯಲ್ಲಿ ಇರುವುದು 243 ಸ್ಥಾನಗಳು. ಇಲ್ಲಿ ಈ ಬಾರಿಯ ಚುನಾವಣೆ ನವೆಂಬರ್ ಆರು ಮತ್ತು ಹನ್ನೊಂದರಂದು ಎರಡು ಹಂತಗಳಲ್ಲಿ ನಡೆಯಲಿದೆ. 2025 ಹಿಂದಿನದಕ್ಕಿಂತ ಭಿನ್ನವೇನೂ ಅಲ್ಲ ಎಂಬ ಭರವಸೆ ನೀಡಿದೆ.

ಇಲ್ಲಿ ನಿರ್ದಿಷ್ಟವಾಗಿ ಇಂಥವರೇ ನಿರ್ಣಾಯಕರು ಎಂದು ಹೇಳುವ ಹಾಗಿಲ್ಲ. ಇಲ್ಲಿ ಎಲ್ಲರೂ ಮುಖ್ಯರು. ನಿತೀಶ್ ಕುಮಾರ್ ಅವರ ಆಡಳಿತಾರೂಢ ಜೆಡಿಯು ಮತ್ತು ಬಿಜೆಪಿಯಿಂದ ಹಿಡಿದು ಆರ್.ಜೆ.ಡಿ ಮತ್ತು ಕಾಂಗ್ರೆಸ್ ತನಕ, ಜನಲೋಕಶಕ್ತಿ ಪಕ್ಷ(ಎಲ್.ಜೆ.ಪಿ)ದಿಂದ ಜನ ಸುರಾಜ್ ಮತ್ತು ಹಿಂದುಸ್ತಾನಿ ಅವಾಮ್ ಮೋರ್ಚಾ (ಎಚ್.ಎ.ಎಂ) ತನಕ ಇಲ್ಲಿ ಯಾರು ಅಮುಖ್ಯರು ಎಂದು ಹೇಳುವಂತಿಲ್ಲ. ಅಖಿಲ ಭಾರತ ಮಜ್ಲೀಸ್-ಎ-ಇತ್ತೆಹಾದುಲ್-ನಿಂದ ವಿಕಾಸಶೀಲ ಇನ್ಸಾನ್ ಪಾರ್ಟಿ (ವಿಐಪಿ) ತನಕ ಸ್ಪರ್ಧಾಳುಗಳಿದ್ದಾರೆ. ಇತ್ತೀಚೆಗೆ ತಾನೂ ಇದ್ದೇನೆ ಎಂದು ಕಣಕ್ಕೆ ಇಳಿದವರು ಆಮ್ ಆದ್ಮಿ ಪಾರ್ಟಿ (ಎಎಪಿ).

ಸಮ್ಮಿಶ್ರ ರಾಜಕಾರಣದ ಉಮೇದು

ಬಿಹಾರದಲ್ಲಿ ಸಮ್ಮಿಶ್ರ ರಾಜಕೀಯ ಉಚ್ಛ್ರಾಯ ಸ್ಥಿತಿಗೆ ಬಂದಿದ್ದು 1990ರ ದಶಕದಲ್ಲಿ. ಇದಕ್ಕೆ ಮುಖ್ಯವಾಗಿ ಕಾರಣವಾಗಿದ್ದು ಜನತಾ ದಳ ಮತ್ತು ಅದರ ಉತ್ತರಾಧಿಕಾರಿ ಪಕ್ಷಗಳು. ಅದೇ ಹೊತ್ತಿನಲ್ಲಿ ರಾಜ್ಯವು ಕೆಲವು ಹಂತಗಳಲ್ಲಿ ಏಕ-ಪಕ್ಷದ ಪ್ರಾಬಲ್ಯಕ್ಕೂ ಸಾಕ್ಷಿಯಾಗಿದೆ. ಅದರಲ್ಲೂ ಮುಖ್ಯವಾಗಿ 1995ರಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ಜನತಾ ದಳವು ನಿಚ್ಚಳ ಬಹುಮತವನ್ನು ಗಳಿಸಿತು.

ಆದರೆ 1997ರಿಂದ ಬಿಹಾರ ಸಂಪೂರ್ಣವಾಗಿ ಸಮಶ್ರ ರಾಜಕೀಯದ ಆಡಂಬೋಲವಾಯಿತು. 2005ರ ಆರಂಭದಿಂದ ಮಿತ್ರ ಸರ್ಕಾರಗಳೇ ರಾಜ್ಯವನ್ನು ಪದೆ ಪದೇ ಆಳಿದವು. ಅದರಲ್ಲಿಯೂ ಮುಖ್ಯವಾಗಿ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಬಿಜೆಪಿ ನಡುವಿನ ಸಹಭಾಗಿತ್ವ. ಜೊತೆಗೆ ಆರ್.ಜೆ.ಡಿ. ನೇತೃತ್ವದ ಮಹಾಘಟಬಂಧನ್ ಕೂಡ ಸೇರಿದೆ. ಈ ಕೂಟದಲ್ಲಿ ಕಾಂಗ್ರೆಸ್ ಕೂಡ ಇದೆ.

ಬಿಹಾರ ರಾಜಕೀಯ ಸ್ಪರ್ಧೆಯನ್ನು ಚಕಿತಗೊಳಿಸುವಂತೆ ಮಾಡಿರುವುದು ಮತದಾರರ ನೆಲೆ. ಅದು ಬಹುತೇಕ ಸಮಾನ ರೀತಿಯಲ್ಲಿ ವಿಭಜನೆ ಹೊಂದಿದೆ. ಯಾವುದೇ ಒಂದು ಪಕ್ಷ ತನ್ನ ಸ್ವಂತ ಬಲದಿಂದ ಅಧಿಕಾರ ಸೂತ್ರ ಹಿಡಿಯಲು ಸಾಧ್ಯವೇ ಇಲ್ಲ. ಕಣದಲ್ಲಿರುವ ಪ್ರತಿಯೊಬ್ಬನಿಗೂ ಮಿತ್ರನೊಬ್ಬನ ಸಾಥ್ ಬೇಕೇಬೇಕು. 243 ಸದಸ್ಯರ ಬಲವನ್ನು ಹೊಂದಿರುವ ವಿಧಾನಸಭೆಯಲ್ಲಿ ಯಾವುದೇ ಪಕ್ಷ ಅಥವಾ ಮಿತ್ರಕೂಟ ಅಧಿಕಾರದ ಗದ್ದುಗೆ ಏರಬೇಕೆಂದರೆ 122 ಸ್ಥಾನಗಳನ್ನು ಗೆಲ್ಲಬೇಕು.

ಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯ

2020ರ ಚುನಾವಣೆಯಲ್ಲಿ 75 ಸ್ಥಾನಗಳನ್ನು ಗಳಿಸಿದ ಆರ್.ಜೆ.ಡಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಅದಕ್ಕಿಂತ ಕೇವಲ ಒಂದು ಸ್ಥಾನ ಕಡಿಮೆ (74) ಪಡೆದ ಬಿಜೆಪಿ ಎರಡನೇ ಸ್ಥಾನದಲ್ಲಿತ್ತು, ಜೆಡಿಯು ಜಯ ಗಳಿಸಿದ್ದು 43 ಕ್ಷೇತ್ರಗಳಲ್ಲಿ. ಕಾಂಗ್ರೆಸ್ 19, ಸಿಪಿಐ(ಎಂಎಲ್) 12, ಅಖಿಲ ಭಾರತ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಐದು, ಎಚ್ಎಎಂ ಮತ್ತು ವಿಐಪಿ ತಲಾ ನಾಲ್ಕು ಸೀಟುಗಳನ್ನು ಗಳಿಸಿದ್ದವು. ಹೀಗೆ ಈ ಪಕ್ಷಗಳ ಬಲಾಬಲವನ್ನು ಗಮನಿಸಿದರೆ ರಾಜ್ಯದಲ್ಲಿ ಯಾವುದೇ ಒಂದು ಪಕ್ಷ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂಬುದು ವೇದ್ಯವಾಗುತ್ತದೆ.

ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ಒದಗಿಸಿದ ಮಾಹಿತಿಯನ್ನು ಪರಿಗಣಿಸಿದರೆ 2020ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಚಲಾವಣೆಯಾದ ಮತಗಳ ಪೈಕಿ ಬಿಜೆಪಿ ಸುಮಾರು ಶೇ.15ರಷ್ಟು ಮತ ಗಳಿಸಿದ್ದರೆ ಜೆಡಿಯು ಶೇ.20ಕ್ಕಿಂತ ಸಲ್ಪ ಅಧಿಕ ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಮತಗಳ ಹಂಚಿಕೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಆರ್.ಜೆ.ಡಿ. ಅದು ಸುಮಾರು ಶೇ.24ರಷ್ಟು ಮತದಾರರ ಬೆಂಬಲವನ್ನು ಹೊಂದಿದ್ದು ವಿಶೇಷ. ಮಿತ್ರಕೂಟದಲ್ಲಿ, ಎನ್.ಡಿ.ಎ ಮೈತ್ರಿಕೂಟದ ಜನಶಕ್ತಿ ಪಕ್ಷ (ಎಲ್.ಜೆ.ಪಿ) ಶೇ.11ಕ್ಕೂ ಹೆಚ್ಚು ಮತಗಳನ್ನು ಪಡೆದಿತ್ತು. ಈ ಬಾರಿ ಉತ್ತಮ ನಿರ್ವಹಣೆ ತೋರುವ ನಿರೀಕ್ಷೆ ಮೂಡಿರುವ ಕಾಂಗ್ರೆಸ್ ಶೇ.6ರಷ್ಟು ಮತದ ಪಾಲನ್ನು ಗಳಿಸಿತ್ತು.

ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಉಳಿದ ರಾಜ್ಯಗಳಿಗೆ, ಅದರಲ್ಲೂ ಮುಖ್ಯವಾಗಿ ಉತ್ತರ ಪ್ರದೇಶಕ್ಕೆ ಹೋಲಿಸಿದರೆ ಬಿಹಾರದಲ್ಲಿ ಹೆಚ್ಚು ಪ್ರಾದೇಶಿಕ ಪಕ್ಷಗಳಿವೆ. ಇಂತಹ ರಾಜಕೀಯ ವಾತಾವರಣದಲ್ಲಿ ಬಹುಮಿತ್ರ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರಲು ಪ್ರಯತ್ನ ನಡೆಸುತ್ತವೆ. 1989ರಿಂದಲೇ ಕಾಂಗ್ರೆಸ್ ಸರ್ಕಾರ ಅಂತ್ಯಗೊಳ್ಳುವುದರೊಂದಿಗೆ ಏಕಪಕ್ಷ ರಾಜಕೀಯಕ್ಕೆ ಇತಿಶ್ರೀ ಹಾಡಲಾಯಿತು.

ಇಂದು ಬಿಹಾರದ ರಾಜಕೀಯ ಖೆಡ್ಡಾದಲ್ಲಿ ಎದುರಾ-ಬದುರಾ ನಿಂತಿರುವ ಎರಡು ಪ್ರಮುಖ ಮಿತ್ರಕೂಟಗಳೆಂದರೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮಿತ್ರಕೂಟ (ಎನ್.ಡಿ.ಎ) ಮತ್ತು ಮಹಾಘಟಬಂಧನ್. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದ ಜೆಡಿಯು ಈಗಲೂ ರಾಜ್ಯದಲ್ಲಿ ಪ್ರಮುಖ ಪ್ರಭಾವಿ ಶಕ್ತಿಯಾಗಿದೆ. ಸಮ್ಮಿಶ್ರ ಸರ್ಕಾರಗಳಲ್ಲಿ ಅವರೇ ಚಾಲಕ ಶಕ್ತಿಯಾಗಿದ್ದಾರೆ ಎಂಬುದು ನಿರ್ವಿವಾದ.

ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಪುತ್ರ ತೇಜಸ್ವಿ ಯಾದವ್ ಅವರ ಸಾರಥ್ಯದ ಆರ್.ಜೆ.ಡಿ. ಮಹಾಘಟಬಂಧನದ ನೇತೃತ್ವ ವಹಿಸಿದ್ದಾರೆ ಮತ್ತು ಉಳಿದವರಿಗೆ ದೊಡ್ಡ ಸವಾಲಾಗಿದ್ದಾರೆ. ಎನ್.ಡಿ.ಎ ಮೈತ್ರಿಕೂಟದ ಪ್ರಮುಖ ಭಾಗವಾಗಿರುವ ಮತ್ತು ಪ್ರಮುಖ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ಈ ಬಾರಿ ಮಹತ್ವದ ಪಾತ್ರವನ್ನು ನಿರ್ವಹಿಸಲಿದೆ. ಅದಕ್ಕೆ ಬೆಂಬಲವಾಗಿ ನಿಂತಿರುವವರು ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಮತ್ತು ಜಿತಿನ್ ರಾಮ್ ಮಾಂಜಿ ಅವರ ಹಿಂದುಸ್ಥಾನಿ ಅವಾಮ್ ಮೋರ್ಚಾ (ಜಾತ್ಯತೀತ).

ಇನ್ನೊಂದು ಕಡೆ ಕಳೆದ 2024ರಲ್ಲಿ ಎರಡು ಲೋಕಸಭಾ ಸ್ಥಾನಗಳನ್ನು ಗೆದ್ದಿರುವ ಮಹಾಘಟಬಂಧನ್ ಭಾಗವೂ ಆಗಿರುವ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ ಲೆನಿನ್ ವಾದಿ) ತಕ್ಕಮಟ್ಟಿಗೆ ಪ್ರಭಾವವನ್ನು ಹೊಂದಿದೆ.

ಜನ್ ಸುರಾಜ್ ತಂದ ಅಚ್ಚರಿ

ಬಿಹಾರದ ರಾಜಕೀಯ ಆಖಾಡಕ್ಕೆ ಹೊಸದಾಗಿ ಚುರುಕು ಮುಟ್ಟಿಸಿದವರು ಮಾಜಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷ. ಅದು ಈ ವಾರವೇ 51 ಅಭ್ಯರ್ಥಿಗಳ ಪಟ್ಟಿಯನ್ನು ಮೊದಲು ಪ್ರಕಟಿಸಿದೆ. ವಿಧಾನ ಸಭಾ ಚುನಾವಣೆಯ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿಯೂ ಅವರು ಹೇಳಿದ್ದಾರೆ.

“ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷ ಕೂಡ ಚುನಾವಣೆ ಕಣಕ್ಕೆ ಇಳಿದಿದೆ. ಸಾಂಪ್ರದಾಯಿಕ ರಾಜಕೀಯದ ಮೇಲೆ ಮತದಾರರು ಹೊಂದಿರುವ ಬೇಸರವನ್ನು ಬಳಸಿಕೊಂಡು ಮತದಾನದ ಚಿತ್ರಣವನ್ನು ಬದಲಿಸಬಹುದು. ಅದನ್ನು ತಳ್ಳಿಹಾಕುವಂತಿಲ್ಲ,” ಎಂದು ರಾಜಕೀಯ ವಿಶ್ಲೇಷಕ ಪ್ರಭಾತ್ ಸಿಂಗ್ ಹೇಳುತ್ತಾರೆ.

ಆಡಳಿತಾರೂಢ ಎನ್.ಡಿ.ಎ. ಮತ್ತು ವಿರೋಧ ಪಕ್ಷವಾದ ಮಹಾಘಟಬಂಧನ್ ಸೀಟು ಹಂಚಿಕೆ ಸುಲಭದ ಮಾತಲ್ಲ. ಆ ಹಿನ್ನೆಲೆಯಲ್ಲಿ ಮಾತುಕತೆಗಳು ಜಾರಿಯಲ್ಲಿವೆ. ಎರಡೂ ರಾಜಕೀಯ ಬಣಗಳಲ್ಲಿ ಪ್ರಭಾವ ಬೀರುವ, ಅನುಕೂಲಕರ ಷರತ್ತುಗಳಿಗಾಗಿ ಮಿತ್ರಪಕ್ಷಗಳು ಕಸರತ್ತು ನಡೆಸಿವೆ. ಎನ್.ಡಿ.ಎ. ತನ್ನ ಪಟ್ಟಿಯನ್ನು ಆದಷ್ಟು ಬೇಗ ಅಖೈರುಗೊಳಿಸುವ ಸಾಧ್ಯತೆಯಿದೆ.

ಸೀಟಿನ ಚೌಕಾಶಿ: ಜಟಿಲ ಮಾತುಕತೆ

2024ರ ಲೋಕಸಭಾ ಚುನಾವಣೆಯ ಬಳಿಕ ನಿತೀಶ್ ಕುಮಾರ್ ಅವರ ಜೆಡಿಯು ಹೆಚ್ಚಿನ ಚೌಕಾಶಿ ನಡೆಸುವ ಸ್ಥಿತಿಯಲ್ಲಿದೆ. ಹಾಗಾಗಿ ಎನ್.ಡಿ.ಎ. ಒಳಗಿನ ಮಾತುಕತೆಗಳು ಜಟಿಲವಾಗಿವೆ. ಸಣ್ಣ ಸಣ್ಣ ರಾಜಕೀಯ ಪಕ್ಷಗಳು ಕೂಡ ಹೆಚ್ಚು ಸ್ಥಾನಗಳಿಗಾಗಿ ಹಕ್ಕು ಮಂಡಿಸುತ್ತಿವೆ.

ಎನ್.ಡಿ,ಎ ವಿಶಾಲವಾದ ಒಮ್ಮತಕ್ಕೆ ಬಂದಿದೆ. ಅಧಿಕೃತ ಪ್ರಕಟಣೆಯನ್ನು ಬಹಳಷ್ಟು ಬೇಗ ಮಾಡಲಿದ್ದೇವೆ ಎಂದು ಬಿಹಾರ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಹೇಳಿದ್ದಾರೆ. ಮಿತ್ರಕೂಟದ ಪ್ರಮುಖ ಘಟಕಗಳಾಗಿರುವ ಬಿಜೆಪಿ ಮತ್ತು ಜೆಡಿಯು ಸಹಮತಕ್ಕೆ ಬಂದಿವೆ ಎಂದು ಹೇಳಲಾಗುತ್ತದೆ. ಆದರೂ 2020ರ ಚುನಾವಣೆಗೆ ಹೋಲಿಸಿದರೆ ಜೆಡಿಯು ಸ್ಥಾನ ಹೆಚ್ಚು ಗಟ್ಟಿಯಾಗಿದೆ.

ಚಿರಾಗ್ ಪಾಸ್ವಾನ್ ನೇತೃತ್ವದ ಎಲ್.ಜೆ.ಪಿ. 35-40 ಸ್ಥಾನಗಳಿಗಾಗಿ ಬೇಡಿಕೆ ಇಟ್ಟಿತ್ತು. ಅದಕ್ಕೆ 22ರಿಂದ 26 ಸೀಟುಗಳು ಸಿಕ್ಕರೆ ಹೆಚ್ಚು. ಸೀಟಿನ ಚೌಕಾಶಿ ಮುಂದುವರಿದಿದೆ ಎಂದು ಪಾಸ್ವಾನ್ ಹೇಳಿದ್ದಾರೆ. ಜಿತನ್ ರಾಮ್ ಮಾಂಜಿ ಅವರ ಎಚ್ಎಎಂಎಸ್ ಹದಿನೈದು ಸೀಟುಗಳು ಬೇಕೆಂದಿದೆ. ಆದರೆ ಅದಕ್ಕೆ ಏಳರಿಂದ ಎಂಟು ಸ್ಥಾನಗಳಲ್ಲಿ ಸ್ಪರ್ಧಿಸುವ ಅವಕಾಶ ಸಿಗಬಹುದು. ಮಾಂಜಿ ಅವರು ಒಂದು ನಿರ್ದಿಷ್ಟ ಸ್ಥಾನಕ್ಕಾಗಿ ತಮ್ಮ ಹತಾಶೆ ವ್ಯಕ್ತಪಡಿಸಿದ್ದಾರೆ. ತಮ್ಮ ಪಕ್ಷಕ್ಕೆ ಹೆಚ್ಚು ಸೀಟುಗಳು ಸಿಗುತ್ತವೆ ಎಂಬ ಆಕಾಂಕ್ಷೆಯನ್ನು ಅವರು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಲೋಕ ಮೋರ್ಚಾ (ಆರ್.ಎಲ್.ಎಂ) ನಾಯಕ ಉಪೇಂದ್ರ ಕುಶ್ವಾ ಅವರೂ ಎನ್.ಡಿ.ಎ ಪಾಲುದಾರರು. ಅವರು ತಮ್ಮ ವಿರುದ್ಧ ಯಾವುದೇ ಕುತಂತ್ರ ನಡೆದರೆ ಸುಮ್ಮನಿರುವುದಿಲ್ಲ ಎಂದು ಅವರು ಹೇಳಿದ್ದಾಗಿದೆ.

ವಿರೋಧ ಪಕ್ಷವಾದ ಮಹಾಘಟಬಂಧನ್ ಪಾಳಯದಲ್ಲಿ ಸೀಟು ಹಂಚಿಕೆಯ ಕಠಿಣ ಮಾತುಕತೆಗಳು ಜಾರಿಯಲ್ಲಿವೆ. ಮುಖ್ಯವಾಗಿ ಆರ್.ಜೆ.ಡಿ., ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವೆ ಸೀಟುಗಳ ವಿತರಣೆ ನಡೆಯಬೇಕಿದೆ.

ಪಾಟ್ನಾದಿಂದ ಬಂದಿರುವ ವರದಿಗಳ ಪ್ರಕಾರ ಮಹಾಘಟಬಂಧನ್ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದೆ. ಅದರಲ್ಲಿ ಮುಂಚೂಣಿಯಲ್ಲಿರುವುದು ನಿಶ್ಚಿತವಾಗಿ ಆರ್.ಜೆ.ಡಿ. ಮಾತುಕತೆಗಳು ಪೂರ್ಣಗೊಂಡಿವೆ ಎಂದು ಹೇಳಲಾಗುತ್ತಿದ್ದರೂ 2020ರ ಚುನಾವಣೆಯಲ್ಲಿ 50 ಸೀಟುಗಳನ್ನು ಪಡೆದಿದ್ದ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಅಷ್ಟು ಸೀಟುಗಳು ಸಿಗುವ ಸಾಧ್ಯತೆಗಳಿಲ್ಲ. ಕಾಂಗ್ರೆಸ್ ನಾಯಕರು ‘ಗೆಲ್ಲುವ ಸೀಟುಗಳ’ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ.

ಅಧಿಕ ಸೀಟುಗಳಿಗೆ ಬೇಡಿಕೆ ಇಡುವುದಕ್ಕಿಂತ ಯಾವುದು ಗೆಲ್ಲುವ ಸ್ಥಾನಗಳಿಗೆ ಅವುಗಳ ಕಡೆಗೆ ಆದ್ಯುತೆ ನೀಡಿ ಎಂದು ಆರ್.ಜೆ.ಡಿ ಮತ್ತು ಎಡಪಕ್ಷಗಳು ಕಾಂಗ್ರೆಸ್ ಮತ್ತು ವಿಐಪಿಗೆ ತಾಕೀತುಮಾಡಿವೆ. ವಿಐಪಿಯ ಮುಕೇಶ್ ಸಾಹ್ನಿ ಅವರು ಮಹಾಘಟಬಂಧನ್ ಜೊತೆ ಸೇರಿಕೊಂಡಿರುವುದರಿಂದ ಮಾತುಕತೆಗೆ ಹೊಸ ದನಿ ಸೇರ್ಪಡೆಯಾಗಿದೆ.

ಎರಡು ಮುಖ್ಯ ಮಿತ್ರಕೂಟದ ಹೊರತಾಗಿ ಇತರ ರಾಜಕೀಯ ಪಕ್ಷಗಳು ಕೂಡ ಚುನಾವಣಾ ಕಣದಲ್ಲಿ ಸದ್ದುಮಾಡಲು ಸಿದ್ದತೆ ಮಾಡಿಕೊಂಡಿವೆ. ಅವುಗಳಲ್ಲಿ ಮುಖ್ಯವಾಗಿ ಆಮ್ ಆದ್ಮಿ ಪಕ್ಷವು ಬಿಹಾರದಲ್ಲಿ ಎಲ್ಲ 243 ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಹೇಳಿದೆ. ಪರ್ಯಾಯ ಶಕ್ತಿಯಾಗಿ ಹೊರಹೊಮ್ಮುವ ಆಕಾಂಕ್ಷೆ ಅದರದ್ದಾಗಿದೆ.

“ನಮ್ಮದೇನಿದ್ದರೂ ಪ್ರಗತಿ ಮತ್ತು ಸರ್ಕಾರದ ಸಿದ್ಧ ಮಾದರಿಗಳಾಗಿವೆ. ಆಪ್ ಮಾಡಿದ ಕೆಲಸಗಳ ಬಗ್ಗೆ ಇಡೀ ರಾಷ್ಟ್ರವೇ ಮಾತನಾಡುತ್ತದೆ,” ಎಂದು ಬಿಹಾರ ಆಪ್ ಮುಖ್ಯಸ್ಥ ಅಜೇಶ್ ಯಾದವ್ ಹೇಳಿದ್ದಾರೆ.

ಒಟ್ಟಾರೆಯಾಗಿ ಬಿಹಾರ ಚುನಾವಣಾ ಕಣ ಮಿತ್ರ ಪಕ್ಷಗಳಿಂದ ತುಂಬಿ ಹೋಗಿದೆ. ಕೆಲವು ಕ್ಷೇತ್ರಗಳಲ್ಲಿ ಮಿತ್ರ ಪಕ್ಷಗಳ ನಡುವೆಯೇ ಪೈಪೋಟಿ ನಡೆದರೆ ಅಚ್ಚರಿಯಿಲ್ಲ. ಅಲ್ಲೆಲ್ಲ ರಾಜಕೀಯ ಇನ್ನಷ್ಟು ಕಗ್ಗಂಟಾದರೆ ಅಚ್ಚರಿಯಿಲ್ಲ. ಆಗ ನಿರ್ದಿಷ್ಟವಾಗಿ ಹೀಗೇ ಆಗುತ್ತದೆ ಎಂದು ರಾಜಕೀಯ ವೀಕ್ಷಕರು ಭವಿಷ್ಯ ನುಡಿಯಲು ಸಾಧ್ಯವಿಲ್ಲ.

Tags:    

Similar News