ಮಳೆಯಿಂದಲ್ಲ, ಆಡಳಿತದ ದುರವಸ್ಥೆಯಿಂದ ಭಾರತದ ನಗರಗಳು ಮುಳುಗುತ್ತಿವೆ
ನಮ್ಮ ಮಹಾನಗರಗಳಲ್ಲಿ ಕಾಣಿಸಿಕೊಳ್ಳುವ ಪ್ರವಾಹಗಳಿಗೆ ಪ್ರಕೃತಿಯನ್ನು ದೂರಿ ಪ್ರಯೋಜನವಿಲ್ಲ. ಅವು ನಮ್ಮದೇ ಯೋಜನೆಗಳು ಕೈಕೊಟ್ಟ ಫಲ. ಛಿದ್ರಗೊಂಡ ವ್ಯವಸ್ಥೆ, ಆದ್ಯತೆ ಇಲ್ಲದ ಆಡಳಿತ ವೈಖರಿಯಿಂದ ನಾವೇ ಮಾಡಿಕೊಂಡ ತಪ್ಪುಗಳು. ಇವು ಭಾರತದ ನಗರಗಳನ್ನು ಕಂಗಾಲು ಮಾಡಿವೆ...
ಭಾರತದ ನಗರಗಳಲ್ಲಿ ಜಲ ನಿರ್ವಹಣೆ ಹೇಗೆ ನಡೆಯಬೇಕು ಎಂಬುದನ್ನು ಕರಾರುವಕ್ಕಾಗಿ ತಿಳಿಸಲು ಏಕೀಕೃತ ಜಲವಿಜ್ಞಾನ ಪ್ರಾಧಿಕಾರವೇ ಇಲ್ಲ. ನಗರಗಳಲ್ಲಿ ನಮಗೆ ಬೇಕಾಗಿರುವುದು ಹರಿದುಬಂದ ನೀರನ್ನು ಹಿಮ್ಮೆಟ್ಟಿಸುವ ಯೋಜನೆಯಲ್ಲ, ಬದಲಾಗಿ ನೀರನ್ನು ಹೀರಿಕೊಳ್ಳಲು ಎಂಥ ವ್ಯವಸ್ಥೆ ಬೇಕು ಎಂಬುದು.
ಇತ್ತೀಚೆಗೆ ನಮ್ಮ ನಗರಗಳಲ್ಲಿ ದಿಢೀರ್ ಕಾಣಿಸಿಕೊಂಡಿರುವ ಪ್ರವಾಹವನ್ನು ನೀವು ಗಮನಿಸಿರಬಹುದು. ಕೊಲ್ಕತಾ, ಮುಂಬಯಿ, ವಾರಾಣಸಿ, ಪ್ರಯಾಗ್-ರಾಜ್ ಮತ್ತು ರಾಷ್ಟ್ರೀಯ ರಾಜಧಾನಿ ದೆಹಲಿ ಸೇರಿದಂತೆ ಅನೇಕ ನಗರಗಳನ್ನು ಈ ವಿನಾಶಕಾರಿ ಪ್ರವಾಹ ನಿಶ್ಚಲಗೊಳಿಸಿತ್ತು. ಇದನ್ನು ನಾವು ಸಾಮಾನ್ಯವಾಗಿ ‘ಪ್ರಕೃತಿ ವಿಕೋಪ’ ಎಂದು ಕರೆಯುತ್ತೇವೆ.
ಆದರೆ ಈ ಘಟನೆಗಳು ಹವಾಮಾನ ಬದಲಾವಣೆ ಮತ್ತು ಆಡಳಿತ ವೈಫಲ್ಯದ ನಡುವಿನ ಘರ್ಷಣೆಯಿಂದ ಹುಟ್ಟಿಕೊಂಡವು ಎಂಬುದನ್ನು ತೋರಿಸುತ್ತವೆ. ನಮ್ಮ ಯೋಜನಾ ನಿರ್ವಹಣೆ ಮತ್ತು ಹೊಣೆಗಾರಿಕೆಗಳಿಂದ ನುಣುಚಿಕೊಳ್ಳಲು ಹವಾಮಾನ ವೈಪರೀತ್ಯ ಎಂಬ ಹಣೆಪಟ್ಟಿ ಕಟ್ಟುತ್ತೇವೆ. 2030ರ ವೇಳೆಗೆ ಮಳೆಯ ತೀವ್ರತೆಯಲ್ಲಿ ಶೇ.43ರಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಸಮೀಕ್ಷೆಗಳು ಹೇಳುತ್ತವೆ. ಆದರೆ ನಮ್ಮ ನಗರಗಳು ನೈಸರ್ಗಿಕ ರಕ್ಷಣಾ ಕವಚಗಳನ್ನು ನಾಶಪಡಿಸಿಕೊಂಡು ಹೈರಾಣಾಗಿವೆ.
ಈಗ ಬರುತ್ತಿರುವ ಮಳೆಯ ಮಾದರಿಗಳು ಹಿಂದಿನಿಂತಿಲ್ಲ. ವಿನ್ಯಾಸದ ಮಾನದಂಡಗಳಿಗಿಂತ ಈ ಮಾದರಿಗಳು ಬದಲಾದಾಗ ಹಿಂದೆಲ್ಲ ಒಂದು ದಶಕಕ್ಕೆ ಒಮ್ಮೆ ಸಂಭವಿಸುವ ಘಟನೆಗಳು ಈಗ ವರ್ಷ ಬಿಟ್ಟು ವರ್ಷ ಸಂಭವಿಸುತ್ತಿವೆ. ವಿಭಿನ್ನ ಹವಾಮಾನಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಒಳಚರಂಡಿ ವ್ಯವಸ್ಥೆಗಳನ್ನು ಮೀರಿ ಅವು ಹರಿಯುತ್ತಿವೆ.
ತರ್ಕ ರಹಿತ ಯೋಜನೆಗಳು
ಹವಾಮಾನ ಬದಲಾವಣೆ ಎನ್ನುವುದು ಈ ಕಥೆಯ ಒಂದು ಪುಟ್ಟ ಭಾಗ ಅಷ್ಟೇ. ಆದರೆ ಭಾರತದ ನಗರಗಳಲ್ಲಿ ತೀವ್ರವಾದ ಹವಾಮಾನ ಸಂಬಂಧಿ ಘಟನೆಗಳು ಎಂದು ಕಾಣುವುದು ಯೋಜನೆ, ಹೊಣೆಗಾರಿಕೆ ಮತ್ತು ಸಾರ್ವಜನಿಕ ಹೂಡಿಕೆ ಹಿಂದೆ ಯಾವುದೇ ತರ್ಕ ಇಲ್ಲದಿರುವುದು. ಸಾಂಸ್ಥಿಕ ವಿಘಟನೆಯು ಯಾವುದೇ ಚೇತರಿಕೆಯನ್ನು ಅಸಾಧ್ಯವಾಗಿ ಮಾಡಿದೆ.
ಒಳಚರಂಡಿ, ಭೂಬಳಕೆ ಮತ್ತು ನದಿ ನಿರ್ವಹಣೆಯಂತಹ ಕೆಲಸಗಳನ್ನು ನಗರ ಪಾಲಿಕೆಗಳು, ಅಭಿವೃದ್ಧಿ ಪ್ರಾಧಿಕಾರಗಳು ಮತ್ತು ಜಲ ಮಂಡಳಿಗಳು ಸೇರಿದಂತೆ ಪ್ರತ್ಯೇಕ ಸಂಸ್ಥೆಗಳು ವಹಿಸಿಕೊಳ್ಳುತ್ತವೆ. ಇವುಗಳಲ್ಲಿ ಪ್ರತಿಯೊಂದು ಸಂಸ್ಥೆಗಳೂ ವಿಭಿನ್ನ ಆದ್ಯತೆಗಳನ್ನು ಹೊಂದಿರುತ್ತವೆ.
ಈ ಬಿಕ್ಕಟ್ಟಿಗೆ ಮುಖ್ಯ ಕಾರಣ ನಿಯಂತ್ರಣವೇ ಇಲ್ಲದ ನಗರಗಳ ವಿಸ್ತರಣೆ. ಭಾರತದ ನಗರ ಜನಸಂಖ್ಯೆ 2050ರ ಹೊತ್ತಿಗೆ 95 ಕೋಟಿ ಮೀರುವ ಸಾಧ್ಯತೆಯಿದೆ. ಈ ಬೆಳವಣಿಗೆಯು ಗಣನೀಯವಾದ ಭೂ-ಬಳಕೆ ಮತ್ತು ಭೂ-ಸೌಲಭ್ಯದ ಬದಲಾವಣೆಗೆ ಕಾರಣವಾಗುತ್ತದೆ.
ನಾವು ಸುರಿಯುವ ಕಾಂಕ್ರೀಟ್ ಮತ್ತು ಡಾಂಬರು ನಿಸರ್ಗದತ್ತವಾದ ನೆಲ ಮತ್ತು ಸಸ್ಯವರ್ಗವನ್ನು ಆಕ್ರಮಿಸಿಕೊಂಡಂತೆ ಮಳೆ ನೀರಿನ ಹರಿವು ಕೂಡ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಇದರಿಂದ ವಿಭಿನ್ನ ಹವಾಮಾನ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ರೂಪಿಸಲಾದ ವ್ಯವಸ್ಥೆಯನ್ನು ಮುಳುಗಿಸಿಬಿಡುತ್ತದೆ.
ಭಾರತದಲ್ಲಿ ನಗರದ ಮೂಲಸೌಕರ್ಯಗಳನ್ನು ಜಲಾನಯನ ಪ್ರಮಾಣದ ಡೈನಾಮಿಕ್ಸ್ ಜೊತೆಗೆ ಸಂಯೋಜಿಸಲು ಬೇಕಾದ ಏಕೀಕೃತ ಜಲವಿಜ್ಞಾನ ಪ್ರಾಧಿಕಾರವೇ ಇಲ್ಲ. ಭಾರತದ ನಗರ ಆಡಳಿತವು ‘ವ್ಯವಸ್ಥೆಗಳಿಗೆ ಬದಲಾಗಿ ಯೋಜನೆಗಳ’ ಸುತ್ತ ರಚನೆಯಾಗಿದೆ. ಒಂದು ವಿನ್ಯಾಸ ರೂಪಿಸಿದ ಅದು ಎಷ್ಟು ಗಟ್ಟಿಯಾಗಿ ಉಳಿಯುತ್ತದೆ ಎಂಬ ಯೋಚನೆಯನ್ನು ಅದರೊಳಗೇ ಸೇರಿಸಲಾಗಿಲ್ಲ. ಬದಲಾಗಿ ಅದು ನಂತರದ ಪರಿಣಾಮವಾಗಿದೆ ಎಂದು ಕೈಬಿಡಲಾಗುತ್ತಿದೆ ಎಂದು ವಿಶ್ವಬ್ಯಾಂಕ್ ಪದೇ ಪದೇ ಹೇಳಿದೆ.
ನಗರ ವ್ಯವಹಾರಗಳ ರಾಷ್ಟ್ರೀಯ ಸಂಸ್ಥೆಯ ಪ್ರಕಾರ ನಾನಾ ಸಂಸ್ಥೆಗಳು ಜಲವಿಜ್ಞಾನದ ಜಲಮೂಲದ ಪ್ರಮಾಣವನ್ನು ಹಂಚಿಕೊಳ್ಳದೇ ಒಂದಾದ ಮೇಲೆ ಒಂದರಂತೆ ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡುತ್ತಿವೆ.
ನೀರನ್ನು ಹೀರಿಕೊಳ್ಳದ ನಗರಗಳು
ಈಗಿನ ನಮ್ಮ ನಗರಗಳು ನೀರನ್ನು ಹೀರಿಕೊಳ್ಳುವ ಅಂತರ್ಗತ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿವೆ. ನಿಸರ್ಗದತ್ತವಾಗಿಯೇ ಇರುವ ಜೌಗು ಪ್ರದೇಶಗಳು, ಪ್ರವಾಹ ಬಯಲುಗಳು ಮತ್ತು ಜಲಮೂಲಗಳು ನಾಶವಾಗಿರುವ ಕಾರಣ ಪ್ರವಾಹದ ನೀರನ್ನು ತಗ್ಗಿಸಿ ಸಂಗ್ರಹಿಸುತ್ತಿದ್ದ ನೈಸರ್ಗಿಕ ವ್ಯವಸ್ಥೆಯೇ ಇಲ್ಲದಾಗಿದೆ. ಇದರಿಂದ ಸಾಂಪ್ರದಾಯಿಕ ಒಳಚರಂಡಿ ವ್ಯವಸ್ಥೆಯು ಅಸಮರ್ಪಕವಾಗಿದೆ.
ಉದಾಹರಣೆಗೆ ಮುಂಬಯಿ ನಗರದ ಒಳಚರಂಡಿ ವ್ಯವಸ್ಥೆಯು ಗಂಟೆಗೆ ಕೇವಲ 48 ಮಿ.ಮೀ.ನಷ್ಟು ಮಾತ್ರ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಹೊಂದಿದೆ. ನಗರು ಮೂರು ದಿನಗಳ ಅವಧಿಯಲ್ಲಿ 550 ಮಿ.ಮೀ. ತಲುಪುವ ಮಹಾಪ್ರವಾಹಕ್ಕೆ ತುತ್ತಾದಾಗ ಈ ಮಿತಿ ನಗಣ್ಯವಾಗುತ್ತದೆ. ಅದೇ ರೀತಿ ನವದೆಹಲಿಯ ಒಳಚರಂಡಿ ಜಾಲವನ್ನು ವಿನ್ಯಾಸಗೊಳಿಸಿದ್ದು 1976ರಲ್ಲಿ. ಅದು 50 ಮಿ.ಮೀ.ಗೆ ಸೀಮಿತವಾಗಿದೆ. ಇದರಿಂದಾಗಿ ಈಗಿನ ಹವಾಮಾನಕ್ಕೆ ತಕ್ಕಂತೆ ನಾವು ಮಾಡಿಕೊಳ್ಳುವ ಸಿದ್ಧತೆಯು ಏನೇನೂ ಸಾಕಾಗುವುದಿಲ್ಲ.
ವಾರಣಸಿ ಮತ್ತು ಪ್ರಯಾಗ್-ರಾಜ್ ನಂತಹ ಗಂಗಾ ಕಣಿವೆಯ ನಗರಗಳಿಗೆ ಪ್ರವಾಹವು ನದಿ ನೀರಿ ಹೊರಹರಿವಿನಿಂದ ಮಾತ್ರ ಬರುವುದಿಲ್ಲ. ಬದಲಾಗಿ ಮಳೆ ಸುರಿದು ಒಳಚರಂಡಿಗಳನ್ನು ತುಂಬಿ ಹರಿಯುವುದರಿಂದ ಕೂಡ ಸಂಭವಿಸುತ್ತದೆ. ಭವಿಷ್ಯದ ದಿನಗಳಲ್ಲಿ ಎಷ್ಟು ಮಳೆ ಸುರಿಯಬಹುದು ಎಂಬ ಅಂದಾಜು ಮಾಡಲು ವಿಫಲವಾದ ಮಾಸ್ಟರ್ ಪ್ಲಾನ್-ಗಳಿಂದಾಗಿ ಈ ಸಮಸ್ಯೆ ಮತ್ತಷ್ಟು ಹದಗೆಡುವಂತೆ ಮಾಡಿದೆ.
ಕಡಿಮೆ ಇಂಗಾಲದ ಹೊರಸೂಸುವಿಕೆ ಮತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ 2050ರ ವೇಳೆಗೆ 2.4 ಟ್ರಿಲಿಯನ್ ಡಾಲರ್ ಗೂ ಹೆಚ್ಚು ಹೂಡಿಕೆಯ ಅಗತ್ಯವಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ. ಆದರೂ ಪ್ರಸ್ತುತ ವಾರ್ಷಿಕ ವೆಚ್ಚವು ಕಡಿಮೆಯಾಗಿದೆ. ಜಿಡಿಪಿಯ ಶೇ.0.7ರಷ್ಟು ಮಾತ್ರ ಇದೆ. ಸ್ಮಾರ್ಟ್ ಸಿಟಿಗಳ ಅಭಿಯಾನ ಅಥವಾ ಅಮೃತ್ (AMRUT ಅಟಲ್ ಮಿಷನ್ ಫಾರ್ ರಿಜುವಿನೇಶನ್ ಆ್ಯಂಡ್ ಅರ್ಬನ್ ಟ್ರಾನ್ಸ್-ಫಾರ್ಮೇಶನ್) ಕಾರ್ಯಕ್ರಮಗಳ ಅಡಿಯಲ್ಲಿ ದೊಡ್ಡ ಮೊತ್ತಗಳು ರಸ್ತೆ, ಪ್ಲಾಜಾಗಳು ಮತ್ತು ಭೂಗತ ಡಕ್ಟ್ ಗಳ ತೀವ್ರ ಬಂಡವಾಳವನ್ನು ಬೇಡುವ ಕೆಲಸಗಳಿಗೆ ವಿನಿಯೋಗವಾಗುತ್ತವೆ. ಆದರೆ ನಿರ್ವಹಣೆ ಅಥವಾ ಪರಿಸರ ಮರುಸ್ಥಾಪನೆಗೆ ಸಂದಾಯವಾಗುವುದು ಅತ್ಯಲ್ಪ.
ಹಂಚಿಕೆ ಮಾಡಲಾದ ಹಣಕಾಸು ನಿಧಿಗೆ ಕೂಡ ಆಡಳಿತದ ವಿರೋಧಭಾಸವು ಅಡ್ಡಿಯಾಗಿದೆ. ಇತ್ತೀಚಿನ ಮೂರು ವರ್ಷಗಳ ಅವಧಿಯಲ್ಲಿ ಅತಿದೊಡ್ಡ ಹತ್ತು ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಒಟ್ಟು ಹಂಚಿಕೆಯಾದ ಮೂಲ ಬಜೆಟ್ಟಿನ ಮೂರನೇ ಎರಡರಷ್ಟು ಭಾಗವನ್ನು ಮಾತ್ರ ಖರ್ಚುಮಾಡಿವೆ. ಬಂಡವಾಳವನ್ನು ಬಳಸಿಕೊಳ್ಳುವಲ್ಲಿ ಅವು ಅಸಮರ್ಥವಾಗಿವೆ.
ಜಾರಿಗೆ ತರುವ ಸಾಮರ್ಥ್ಯವೇ ಇಲ್ಲ
ಈ ವೈಫಲ್ಯವು ರಚನಾತ್ಮಕವಾಗಿದ್ದು ಇದರ ಬೇರುಗಳು ಅನೇಕ ಪುರಸಭೆಗಳಲ್ಲಿನ ಸೀಮಿತ ಸಾಮರ್ಥ್ಯ, ನಿಧಾನಗತಿಯ ನಿಯಂತ್ರಕ ಅನುಮೋದನೆಗಳು ಮತ್ತು ನ್ಯೂನತೆಗಳನ್ನು ಹೊಂದಿರುವ ಲೆಕ್ಕಪರಿಶೋಧನಾ ಅಭ್ಯಾಸಗಳಲ್ಲಿ ಅಡಕವಾಗಿವೆ. ಪ್ರವಾಹದ ರಾಜಕೀಯ ಅರ್ಥ ವ್ಯವಸ್ಥೆ ಹೇಗಿದೆ ಎಂದರೆ ಭಾರೀ ಬಂಡವಾಳದ ಅಗತ್ಯಗಳನ್ನು ಸಮರ್ಪಕವಾಗಿ ಜಾರಿಗೆ ತರುವ ಸಾಮರ್ಥ್ಯವೇ ಇರುವುದಿಲ್ಲ.
ಇವೆಲ್ಲಕ್ಕೂ ಮಿಗಿಲಾಗಿ ರಾಜಕೀಯ ಉತ್ತೇಜಕಗಳು ಕಣ್ಣಿಗೆ ಕಾಣುವಂತಿರಬೇಕು. ಯೋಜನೆಗಳ ನಿರ್ವಹಣೆಗಳು ನಿರಂತರವಾಗಿರಬೇಕು ಎಂಬುದಕ್ಕಿಂತ ಹೆಚ್ಚಾಗಿ ಸರ್ಕಾರ ಆದ್ಯತೆ ನೀಡುವುದು ಸ್ವತ್ತುಗಳ ಫೋಟೊ ತೆಗೆಯುವುದಕ್ಕೆ. ಒಳಚರಂಡಿ ನಿರ್ಮಾಣ ಮಾಡಲಾಗುತ್ತದೆ, ನಂತರ ಅವು ಹೂಳುಗಳಿಂದ ಮುಚ್ಚಲು ಬಿಡಲಾಗುತ್ತದೆ, ಅಭಿವೃದ್ಧಿಯ ಹೆಸರು ಹೇಳಿಕೊಂಡು ಮತ್ತು ಕೆಲವೊಮ್ಮೆ ಅಧಿಕೃತ ಅನುಮೋದನೆಯೊಂದಿಗೇ ಹೂಳು ತುಂಬಿದ ನದಿಪಾತ್ರಗಳ ಅತಿಕ್ರಮಣ ಮಾಡಲಾಗುತ್ತದೆ.
ನೀರಿನ ನೈಸರ್ಗಿಕ ಸಂಗ್ರಹ ಸಾಧ್ಯವಾಗದೇ ಇದ್ದರೆ ಪ್ರವಾಹದ ತೀವ್ರತೆಯನ್ನು ಹೆಚ್ಚಿಸುತ್ತದೆ. ಸ್ಥಳಾಂತರದ ಹೊರೆ ಬೀಳುವುದು ಅನೌಪಚಾರಿಕ ವಸತಿ ಪ್ರದೇಶಗಳ ಮೇಲೆಯೇ ಹೊರತು ಇಂತಹ ಅತಿಕ್ರಮಣಕ್ಕೆ ಅನುಮತಿ ನೀಡುವ ಅಥವಾ ಅದರಿಂದ ಲಾಭ ಮಾಡಿಕೊಳ್ಳುವ ಸಾಂಸ್ಥಿಕ ನಟರ ಮೇಲೆ ಅಲ್ಲ. ಇವೆಲ್ಲದರಿಂದ ನಿಜಕ್ಕೂ ತೊಂದರೆ ಅನುಭವಿಸುವವರು ಬಡವರು ಮತ್ತು ದುರ್ಬಲರು.
ಭಾರತದ ನಗರ ಪ್ರವಾಹವನ್ನು ಕೇವಲ ಅಸಮರ್ಪಕ ವೆಚ್ಚ ಮಾತ್ರವಲ್ಲ ಅದು ದಾರಿ ತಪ್ಪಿದ ವೆಚ್ಚ ಕೂಡ ಹೌದು. ಯೋಜನೆಗಳು ಯಾವತ್ತೂ ನಿರ್ವಹಣೆಗಿಂತ ಹೆಚ್ಚಾಗಿ ಹೊಸ ನಿರ್ಮಾಣಕ್ಕೆ ಆದ್ಯತೆ ನೀಡುತ್ತವೆ. ಬಜೆಟ್ ತರ್ಕವು ಯಾವತ್ತೂ ಬಂಡವಾಳ ವೆಚ್ಚಕ್ಕೇ ಹೆಚ್ಚು ಒಲವು ತೋರುತ್ತದೆ. ಒಮ್ಮೆ ಒಳಚರಂಡಿ ನಿರ್ಮಾಣವಾಯಿತೆಂದರೆ ಅಲ್ಲಿಗೆ ವೆಚ್ಚ ಪೂರ್ಣಗೊಂಡಂತೆ ಎಂದು ಭಾವಿಸಲಾಗುತ್ತದೆ.
ಅಷ್ಟಾಗಿಯೂ ಒಳಚರಂಡಿ ಒಂದು ಜೀವಂತ ವ್ಯವಸ್ಥೆ ಕಾರ್ಯಾಚರಣೆಗಳಿಗೆ ನಿರ್ದಿಷ್ಟವಾಗಿ ಮೀಸಲಿಟ್ಟ ಹಂಚಿಕೆಗಳಿಲ್ಲದೆ ಸಾಮರ್ಥ್ಯವು ಪ್ರತಿ ಋತುವಿನಲ್ಲಿಯೂ ಕಡಿಮೆಯಾಗುತ್ತ ಹೋಗುತ್ತದೆ.
ಜೌಗು ಪ್ರದೇಶಗಳನ್ನು ಮರುಸ್ಥಾಪಿಸಲು, ನೀರನ್ನು ಸೆಳೆಯಬಲ್ಲ ಮೇಲ್ಮೈಗಳನ್ನು ಬಳಸಲು ಮತ್ತು ಮಳೆ ಉದ್ಯಾನಗಳನ್ನು ನಿರ್ಮಿಸಲು ಹಸಿರು ಮತ್ತು ನೀಲಿ ಮೂಲಸೌಕರ್ಯ ಮೇಲಿನ ಮಾದರಿ ಕಾಮಗಾರಿಗಳು ಇದರಿಂದ ನೀರನ್ನು ಹೀರಿಕೊಳ್ಳುವ, ಸಂಗ್ರಹಿಸುವ ಹಾಗೂ ಶೋಧಿಸುವ ನಗರದ ಸಾಮರ್ಥ್ಯ ಹೆಚ್ಚಿಸುತ್ತದೆ. ಚೆನ್ನೈ ಈ ವಿಧಾನವನ್ನು ಅಳವಡಿಸಿಕೊಂಡು 32 ಜಲಮೂಲಗಳನ್ನು ಮರುಸ್ಥಾಪಿಸಿದೆ. ಪುರಸಭೆಗಳು ಸಾಮಾನ್ಯವಾಗಿ ಬೃಹತ್ ಕಾಮಗಾರಿಗಳನ್ನು ಮಾತ್ರ ನಿರ್ಮಾಣ ಮಾಡುತ್ತವೆ. ಪುನರಾವರ್ತನೆಯ ಬಜೆಟ್ ಗಾತ್ರವನ್ನು ಕಿರಿದಾಗಿಸುತ್ತವೆ ಮತ್ತು ಇದರಿಂದ ವ್ಯವಸ್ಥೆ ಹಳ್ಳಹಿಡಿಯುತ್ತದೆ.
ಬೇಕಿರುವುದು ಕೌಶಲ್ಯಪೂರ್ಣ ಆಡಳಿತ
ಪರಿಹಾರ ಎಂದರೆ ಇನ್ನಷ್ಟು ಹಣವನ್ನು ಸುರಿಯುವುದಲ್ಲ, ಬದಲಾಗಿ ಕೌಶಲ್ಯಪೂರ್ಣ ಆಡಳಿತ. ಪ್ರತಿಯೊಂದು ನಗರ ಯೋಜನೆಗೂ ಜಲಮೂಲಕ್ಕೆ ಸಂಬಂಧಿಸಿದ ಹೈಡ್ರೊಲಾಜಿಕಲ್ ಅನುಮೋದನೆಯನ್ನು ಪಡೆದುಕೊಳ್ಳಬೇಕು. ಇದನ್ನು ಭವಿಷ್ಯದ ಮಳೆ ಸನ್ನಿವೇಶಗಳಿಗೆ ಅನುಗುಣವಾಗಿ ಪರೀಕ್ಷಿಸಬೇಕು. ಈ ಒಂದೇ ಒಂದು ಸುಧಾರಣೆಯನ್ನು ಪ್ರಾದೇಶಿಕ ಜಲ ವ್ಯವಸ್ಥೆಯೊಂದಿಗೆ ಸ್ಥಳೀಯ ಪ್ರಯತ್ನಗಳ ಮೂಲಕ ಮಾಡಬಹುದು.
ಹಣಕಾಸು ವ್ಯವಸ್ಥೆಗೆ ನಿರ್ವಹಣೆಯನ್ನು ಸೇರ್ಪಡೆಗೊಳಿಸುವುದು ಅಷ್ಟೇ ಮುಖ್ಯವಾದ ಸಂಗತಿ. ಪ್ರತಿಯೊಂದು ಬಂಡವಾಳ ಅನುದಾನವು ನಿರ್ವಹಣೆಗಾಗಿ ನಿಗದಿತ ವಾರ್ಷಿಕ ನಿಬಂಧನೆಗಳನ್ನು ಒಳಗೊಂಡಿರಬೇಕು. ಹೊಸ ನಿಧಿಗಳನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ಅದನ್ನು ಲೆಕ್ಕಪರಿಶೋಧನೆಗೆ ಒಳಪಡಿಸಬೇಕು.
‘ಸ್ಪಾಂಜ್ ಸಿಟಿ’ ಪರಿಕಲ್ಪನೆಯು ಸುಸ್ಥಿರವಾದ ಚೌಕಟ್ಟನ್ನು ಒದಗಿಸುತ್ತದೆ. ಈ ಮಾದರಿಯು ಜೌಗು ಪ್ರದೇಶಗಳಿಗೆ ಮರುಜೀವ ನೀಡುವ ಹಸಿರು ಮತ್ತು ನೀಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಇದರಿಂದ ನಗರದ ತೇವಾಂಶ ಹೀರಿಕೊಳ್ಳುವ, ಸಂಗ್ರಹಿಸುವ ಮತ್ತು ಶೋಧಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಚನ್ನೈನಂತಹ ನಗರಗಳಲ್ಲಿ ಇಂತಹ 32 ಜಲಮೂಲಗಳನ್ನು ಪುನಶ್ಚೇತನಗೊಳಿಸುವ ಮೂಲಕ ಯಶಸ್ಸು ಸಾಧಿಸಲಾಗಿದೆ.
ನಗರ ಕಾರ್ಯಕ್ಷಮತೆಯ ಮಾನದಂಡಗಳು ಗಳಿಕೆಯಿಂದ ಫಲಿತಾಂಶದತ್ತ ಬದಲಾಗಬೇಕು. ಅನುದಾನವನ್ನು ವಿತರಣೆ ಮಾಡುವಾಗ ನೀರಾವರಿಯ ಅವಧಿ ಅಥವಾ ಪೀಡಿತ ಪ್ರದೇಶದ ಕಡಿತದಂತಹ ಪರಿಶೀಲನೆಗೆ ಒಳಪಡಬಹುದಾದ ಸೂಚಕಗಳನ್ನು ಅವಲಂಬಿಸಿರಬೇಕು. ಸಿಎಜಿ ಕಾರ್ಯಕ್ಷಮತೆಯನ್ನು ಆಧರಿಸಿದ ಲೆಕ್ಕಪರಿಶೋಧನೆಗೆ ಶಿಫಾರಸು ಮಾಡಿದೆ. ಆದರೆ ಇದಕ್ಕೆ ಶಾಸನಬದ್ಧ ಬೆಂಬಲದ ಅಗತ್ಯವಿದೆ.
ಪ್ರಕೃತಿ ಆಧಾರಿತ ಪರಿಹಾರಗಳು ಪೂರ್ವಯೋಜಿತ ಅಭ್ಯಾಸವಾಗಬೇಕು. ತಂತ್ರಜ್ಞಾನವು ಕೇವಲ ಆಕರ್ಷಣೆಗೆ ಬದಲಾಗಿ ಪಾರದರ್ಶಕ ಪಾತ್ರವನ್ನು ನಿರ್ವಹಿಸಬೇಕು. ಡಿಜಿಟಲ್ ಮೂಲಸೌಕರ್ಯವನ್ನು ಮುಕ್ತ ಜಲವಿಜ್ಞಾನ ದತ್ತಾಂಶದ ಕಡೆಗೆ ಮರುರೂಪಿಸಿದರೆ ಸ್ಮಾರ್ಟ್ ಸಿಟಿಗಳ ಅಭಿಯಾನವು ಪರಿವರ್ತಕನ ಪಾತ್ರವನ್ನು ನಿರ್ವಹಿಸಬಹುದು. ಈ ಅಭಿಯಾನದ ಅಡಿಯಲ್ಲಿ 97 ನಗರಗಳಲ್ಲಿ ಮಳೆನೀರು ಚರಂಡಿ ವ್ಯವಸ್ಥೆಯನ್ನು ಸುಧಾರಿಸಲು 603 ಯೋಜನೆಗಳಿಗೆ ಚಾಲನೆ ನೀಡಿದೆ.
ಹಾಗಂತ ತಂತ್ರಜ್ಞಾನವು ಆಡಳಿತಕ್ಕೆ ಪರ್ಯಾಯವಲ್ಲ. ಇದು ಪಾರದರ್ಶಕತೆ ಮತ್ತು ಉತ್ತಮ ಯೋಜನೆಯನ್ನು ರೂಪಿಸಲು ಒಂದು ಸಾಧನ. ನಿಸರ್ಗದತ್ತವಾದ ಒಳಚರಂಡಿ ಕಾಲುವೆಗಳಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸುವ ಕಾನೂನು ಜಾರಿಗೆ ತರಬೇಕು. ಎಲ್ಲ ನಗರ ಯೋಜನೆಗಳಲ್ಲಿ ಭವಿಷ್ಯದ ಹವಾಮಾನ ಸಂಬಂಧಿ ಅಪಾಯದ ಬಗ್ಗೆ ಸಮಗ್ರ ನಿಲುವು ಅಗತ್ಯ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಗರಗಳಲ್ಲಿ ಯೋಜನೆಗಳನ್ನು ಜವಾಬ್ದಾರಿಯುತವಾಗಿ ಖರ್ಚುಮಾಡಲು, ನಿರ್ವಹಿಸಲು ಮತ್ತು ಕಾರ್ಯಗತಗೊಳಿಸಲು ಹಣಕಾಸು ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ರೂಪಿಸುವ ಕೆಲಸ ಆಗಬೇಕು.
ನಿಯೋಜಿಸಲಾಗುವ ತಂತ್ರಜ್ಞಾನಗಳ ಸಂಕೀರ್ಣತೆಗೆ ಸರಿಹೊಂದುವ ರೀತಿಯಲ್ಲಿ ನಗರ ಆಡಳಿತದ ಸ್ವರೂಪವನ್ನು ಅಳವಡಿಸಿಕೊಳ್ಳದೇ ಇದ್ದರೆ ಭಾರತದ ನಗರಗಳು ಮುಳುಗುತ್ತಲೇ ಇರುತ್ತವೆ.
ಸಾಂಸ್ಥಿಕ ಯಡವಟ್ಟುಗಳು
ಭಾರತದ ನಗರ ಪ್ರವಾಹಗಳು ಪ್ರಕೃತಿ ದುರಂತಗಳಲ್ಲ ಬದಲಾಗಿ ಸಾಂಸ್ಥಿಕ ಯಡವಟ್ಟುಗಳು. ಹವಾಮಾನ ಬದಲಾವಣೆಯು ಮಳೆಯ ಪ್ರಮಾಣವನ್ನು ಹೆಚ್ಚಿಸುತ್ತದೆ. ಆದರೆ ಹಾನಿ ಪ್ರಮಾಣ ಜಾಸ್ತಿಯಾಗುವುದು ನಗರಗಳ ನಿರ್ವಹಣೆ ಹೇಗೆ ನಡೆಯುತ್ತದೆ ಮತ್ತು ಬಂಡವಾಳವನ್ನು ಹೇಗೆ ಹಂಚಲಾಗುತ್ತದೆ ಎನ್ನುವುದರ ಮೇಲೆ. ವಾರ್ಷಿಕ ಪರಿಹಾರ ಮತ್ತು ಮರುನಿರ್ಮಾಣದ ಚಕ್ರವು ವೈಫಲ್ಯತೆಗೆ ಕೊಡುಗೆ ನೀಡುವ ಒಂದು ಹಣಕಾಸಿನ ಪ್ರತಿಕ್ರಿಯೆ. ಇವನ್ನೆಲ್ಲ ಸರಿಪಡಿಸಲು ಪ್ರವಾಹ ಪ್ರದೇಶಗಳನ್ನು ರಕ್ಷಿಸುವ ಕಾನೂನು ಮತ್ತು ಕಾರ್ಯಕ್ರಮತೆಯನ್ನು ಅಳೆಯುವ ಲೆಕ್ಕಪರಿಶೋಧನೆಗಳು ಬೇಕಾಗುತ್ತವೆ.
2050ರ ಹೊತ್ತಿಗೆ ದೇಶದ ನಗರ ಜನಸಂಖ್ಯೆಯು ದುಪ್ಪಟ್ಟಾಗುವ (95.1 ಕೋಟಿ) ಸಾಧ್ಯತೆ ಇರುವುದರಿಂದ ಅದನ್ನು ಸರಿದೂಗಿಸುವ ರೀತಿಯಲ್ಲಿ 14.4 ಕೋಟಿ ಮನೆಗಳನ್ನು 2027ರ ಹೊತ್ತಿಗೆ ಅಗತ್ಯವಿರುತ್ತದೆ. ಭಾರತದ ನಗರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರವಾಹಗಳು ಭವಿಷ್ಯ ಹತ್ತಿರದಲ್ಲೇ ಇದೆ ಎಂದು ಎಚ್ಚರಿಸುತ್ತಿವೆ.
ಈ ವಾಸ್ತವವನ್ನು ಅರ್ಥಮಾಡಿಕೊಂಡು ನಗರ ಭಾರತವು ನೀರನ್ನು ಹಿಮ್ಮೆಟ್ಟಿಸುವ ಜಿದ್ದಿಗೆ ಬೀಳದೆ ಅದನ್ನು ಹೀರಿಕೊಳ್ಳುವುದು ಹೇಗೆ ಎಂಬುದನ್ನು ತಾಳ್ಮೆಯಿಂದ ಕಲಿಯಬೇಕಾಗಿದೆ. ಚೈತನ್ಯಶೀಲ ನಗರವೆಂದರೆ ಒಣಗಿರುವ ನಗರವಲ್ಲ, ಆದರೆ ಮುಳುಗಿ ಹೋಗದೆ ಒದ್ದೆಯಾಗುವುದು ಹೇಗೆ ಎಂದು ಅರಿತಿರುವ ನಗರವಾಗಿದೆ.